ಪುನೀತ್ ರಾಜ್ ಕುಮಾರ್ ಯೋಜನೆಗೆ ಸಿಎಂ, ಆರೋಗ್ಯ ಸಚಿವರಿಗೆ ಪತ್ರ

4 years ago

ಬೆಂಗಳೂರು: ರಾಜ್ಯ ಸರ್ಕಾರದಿಂದ ಪುನೀತ್ ರಾಜ್ ಕುಮಾರ್ ಅವರ ಹೆಸರಿನಲ್ಲಿ ಶಾಶ್ವತ ಯೋಜನೆಯೊಂದನ್ನು ಜಾರಿಗೊಳಿಸಬೇಕೆಂದು ಸಿಎಂ ಬಸವರಾಜ ಬೊಮ್ಮಾಯಿ ಮತ್ತು  ಆರೋಗ್ಯ ಸಚಿವ ಸುಧಾಕರ್ ಅವರಿಗೆ ಪತ್ರ ಮುಖೇನ ಮನವಿಯನ್ನು ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ರಮೇಶ್ ಎನ್. ಆರ್. ಸಲ್ಲಿಸಿದ್ದಾರೆ.

ಪುನೀತ್ ಅವರಿಗೆ ಸ್ವಲ್ಪ ಎದೆ ನೋವು ಕಾಣಿಸಿಕೊಂಡ ನಂತರ ಅವರ ಕುಟುಂಬದ ವೈದ್ಯರ ಸಲಹೆಯಂತೆ, ಸದಾಶಿವನಗರದ ಮನೆಗೆ ಕೇವಲ 1.5 ಕಿ. ಮೀ. ದೂರದಲ್ಲೇ ಇದ್ದಂತಹ ವಿಕ್ರಂ ಆಸ್ಪತ್ರೆಗೆ ತಲುಪಲು ಸುಮಾರು 45 ನಿಮಿಷಗಳಷ್ಟು ಕಾಲಾವಕಾಶ ಹಿಡಿದಿರುತ್ತದೆ. ಅದಕ್ಕೂ 10 ನಿಮಿಷಗಳ ಮುಂಚಿತವಾಗಿ ಅವರು ವಿಕ್ರಂ ಆಸ್ಪತ್ರೆಯನ್ನು ತಲುಪಲು ಸಾಧ್ಯವಾಗಿದ್ದಿದ್ದರೆ ಖಂಡಿತವಾಗಿಯೂ ಅವರ ಜೀವ ಉಳಿಯುತ್ತಿತ್ತು ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಅವರು ಹೇಳಿದ್ದಾರೆ.

ಮುಂದೆ ಕರ್ನಾಟಕ ರಾಜ್ಯದಲ್ಲಿ ಸಂಚಾರ ದಟ್ಟಣೆಯಿಂದ ಇಂತಹ ಯಾವುದೇ ದುರ್ಘಟನೆಗಳು ನಡೆಯಬಾರದೆಂಬ ಉದ್ದೇಶದಿಂದ ರಾಜ್ಯ ಸರ್ಕಾರದ ಆರೋಗ್ಯ ಇಲಾಖೆಯ ಅಧೀನದಲ್ಲಿರುವ ಎಲ್ಲಾ 108 ಆಂಬ್ಯುಲೆನ್ಸ್ ಗಳು ಮತ್ತು ಖಾಸಗಿ ಆಸ್ಪತ್ರೆಗಳ ಆಂಬ್ಯುಲೆನ್ಸ್ ಗಳಿಗೆ ರೋಗಿಯ ಮನೆಯಿಂದ ರೋಗಿಯು ತಲುಪಬೇಕಾದ ಆಸ್ಪತ್ರೆಯ ಮಾರ್ಗದ ಬಗ್ಗೆ ಆಯಾ ಆಂಬ್ಯುಲೆಸ್ಸ್ ಗಳಲ್ಲಿ LED ಪರದೆಗಳಲ್ಲಿ ಮೂಡುವ ಹಾಗೆ ಮತ್ತು ಆಂಬ್ಯುಲೆನ್ಸ್ ನ ಧ್ವನಿವರ್ಧಕಗಳಲ್ಲಿ ತಾವು ತಲುಪಬೇಕಿರುವ ಆಸ್ಪತ್ರೆಯ ಬಗ್ಗೆ ಮತ್ತು ರೋಗಿಯ ಆರೋಗ್ಯ ಸ್ಥಿತಿಯ ಬಗ್ಗೆ ತಿಳಿಸುವಂತಹ ವ್ಯವಸ್ಥೆಯನ್ನು ಮಾಡಬೇಕಿರುವುದು ನಿಜಕ್ಕೂ ಅನಿವಾರ್ಯವಾಗಿರುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಈ ನಿಟ್ಟಿನಲ್ಲಿ ಕೆಲವೇ ಲಕ್ಷಗಳ ಖರ್ಚಿನಲ್ಲಿ ಮಾಡಬಹುದಾದ ಈ ಕಾರ್ಯವನ್ನು ನಟ ಪುನೀತ್ ರಾಜ್ ಕುಮಾರ್ ರವರ ಹೆಸರಿನಲ್ಲಿ ಮಾಡಿದರೆ, ರಾಜ್ಯ ಸರ್ಕಾರಕ್ಕೂ ಶಾಶ್ವತವಾದಂತಹ ಒಳ್ಳೆಯ ಹೆಸರು ಲಭಿಸುತ್ತದೆ ಹಾಗೂ ಗಂಭೀರ ಆರೋಗ್ಯ ಸ್ಥಿತಿಯಿಂದ ನರಳುತ್ತಿರುವ ರೋಗಿಗಳು ಸಕಾಲದಲ್ಲಿ ಅವರು ತಲುಪಬೇಕಾದ ಆಸ್ಪತ್ರೆಯನ್ನು ತಲುಪಲು ಅವಕಾಶ ಮಾಡಿಕೊಟ್ಟಂತಾಗುತ್ತದೆ ಎಂದು ಅವರು ಹೇಳಿದ್ದಾರೆ.

ಈ ನಿಟ್ಟಿನಲ್ಲಿ ಆದಷ್ಟೂ ಕೂಡಲೇ ಆರೋಗ್ಯ ಇಲಾಖೆ ವತಿಯಿಂದ ಈ ಯೋಜನೆಯನ್ನು ಪ್ರಾರಂಭಿಸಬೇಕೆಂದು ಹಾಗೂ ಸದರಿ ಯೋಜನೆಗೆ “ಪುನೀತ್ ರಾಜ್ ಕುಮಾರ್ ಯೋಜನೆ”ಎಂದು ಹೆಸರಿಡುವ ಬಗ್ಗೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕೆಂದು ಮುಖ್ಯಮಂತ್ರಿಗಳನ್ನು ಹಾಗೂ ಆರೋಗ್ಯ ಸಚಿವರನ್ನು ವಿನಂತಿಸಿಕೊಂಡಿದ್ದಾರೆ.

Leave a Reply