ಲಿಂಗಾಯತರು ಕಾಂಗ್ರೆಸ್ ಗೆ ಯಾಕೆ ಮತ ಹಾಕಬೇಕು?

2 years ago

ನಿನ್ನೆ ವಿಜಯನಗರದಲ್ಲೊಂದು ಸಭೆ. ನಗರದ ಪ್ರತಿಷ್ಠಿತ ಲಿಂಗಾಯತರ ಸಮಾವೇಶ. ಸ್ಥಳೀಯ ಶಾಸಕರು ಮಾಜಿ ಮಂತ್ರಿಗಳೂ ಆದ ಶ್ರೀ ಕೃಷ್ಣಪ್ಪನವರು ಸಭೆಯ ಅಧ್ಯಕ್ಷರು, ಮಾಜಿ ಮೇಯರ್ ಶ್ರೀಮತಿ ಗಂಗಾಂಬಿಕೆ ಹಾಗು ಮಾಜಿ ಉಪಮೇಯರ್ ಗೆಳೆಯ ಪುಟ್ಟರಾಜು ಹಾಗೂ ಹಲವಾರು ಕಾರ್ಪೋರೆಟರಗಳು ಮತ್ತು ವೀರಶೈವ ಮಹಾಸಭೆಯ ಪದಾದಿಕಾರಿಗಳು ಸಭೆಯಲ್ಲಿ.

ದೇಶದ ತುಂಬೆಲ್ಲ ರಾಜಕೀಯ ಕಾವು ಇರುವ ಸಮಯದಲ್ಲಿ ಸಭೆಯ ವಾತಾವರಣವೂ ರಾಜಕೀಯದತ್ತ ಹೊರಳುವುದು ಸಾಮಾನ್ಯ. ಮಾತುಗಳು ರಾಜಕೀಯದತ್ತ ತಿರುಗಿದವು. ಸಭೆಯಲ್ಲಿದ್ದ ಒಂದಿಬ್ಬರು ಲೊಚಗುಟ್ಟಿದರು.

ವೇದಿಕೆಯಲ್ಲಿದ್ದ ಮತ್ತೊಬ್ಬ ಹಿರಿಯ ಶಾಸಕ ಮೋಹನ ಕೊಂಡಜ್ಜಿಯವರು ಸಭಿಕರ ಸೆಂಟಿಮೆಂಟ್ ಗ್ರಹಿಸಿ ಸಭೆಯನ್ನು ಕಂಟ್ರೋಲಿಗೆ ತನ್ನಿ ಎಂದು ತಮ್ಮ ಕರ್ತವ್ಯ ನನ್ನ ಹೆಗಲಿಗೇರಿಸಿದರು. ‘ಸರಿ’ ಎಂದೆ. ಮನವಿಯ ನಂತರ ಸಭೆ ಶಾಂತವಾಯಿತು, ಯಶಸ್ವಿ ಸಭೆಯಾಗಿ ಕೊನೆಗೊಂಡಿತು.

ಹೊರಬರುತ್ತಿದ್ದಂತೆ ಗೆಳೆಯರೊಬ್ಬರು ಲಿಂಗಾಯತರೇಕೆ ಕಾಂಗ್ರೆಸ್ ಬೆಂಬಲಿಸಬೇಕು? ಎಂದರು. ಕಡಿಮೆ ಸಮಯವಾಗಿದ್ದರಿಂದ ಕೇವಲ ನಾಲ್ಕಾರು ಕಾರಣ ನೀಡಿದೆ.

೧)  ಒಕ್ಕೂಟ ಭಾರತದ  ಚುನಾಯಿತ ಸರಕಾರವೊಂದು ಲಿಂಗಾಯತ ಧರ್ಮವು ಭಾರತದಲ್ಲಿರುವ ಅಲ್ಪಸಂಖ್ಯಾತ ಧರ್ಮಗಳಲ್ಲೊಂದು ಎಂದ್ಹೇಳಿ, ಸಾಂವಿಧಾನಿಕ ಮಾನ್ಯತೆಗಾಗಿ, ಕಾನೂನು ಬದ್ಧ ದಾಖಲೆಯನ್ನು ಎಪ್ಪತೈದು ವರ್ಷಗಳಲ್ಲಿ ಮೊದಲಬಾರಿಗೆ ಪಡೆದದ್ದು  ಕಾಂಗ್ರೆಸ್ ಸರಕಾರದ ಅವಧಿಯಲ್ಲಿ. (ಜಸ್ಟಿಸ್.ನಾಗಮೋಹನದಾಸ ವರದಿ).

೨) ಶರಣೆ ಅಕ್ಕಮಹಾದೇವಿಯ ಹೆಸರನ್ನು ಮಹಿಳಾ ವಿಶ್ವವಿದ್ಯಾಲಯಕ್ಕೆ ನಾಮಕರಣಗೊಳಿಸಿದ್ದು ಕಾಂಗ್ರೆಸ್ ಸರಕಾರ.

೩) ಬಸವಣ್ಣನವರ ಭಾವಚಿತ್ರವನ್ನು ಸರಕಾರಿ ಕಚೇರಿಗಳಲ್ಲಿ ಅಳವಡಿಸಬೇಕು ಎಂದಿದ್ದು ಕಾಂಗ್ರೆಸ್ ಸರಕಾರ.

೪) ಬಸವಣ್ಣನವರು ಕರ್ನಾಟಕದ ಸಾಂಸ್ಕೃತಿಕ ನಾಯಕ ಎಂದು ಘೋಷಣೆ ಮಾಡಿದ್ದು ಕಾಂಗ್ರೆಸ್ ಸರಕಾರ.

೫ ) ಹನ್ನೆರಡನೆಯ ಶತಮಾನದಲ್ಲಿ ಹೆಣ್ಣು ಗಂಡಿನ ಸಮಾನಳು ಎಂದಿದ್ದು ಅಂದಿನ ಬಸವಣ್ಣನವರ ಸರಕಾರ. ಅದೆ ಆಧಾರದಲ್ಲಿ ಹೆಣ್ಣು ಸ್ವಾವಲಂಬಿ, ಅವಳಿಗೂ ಸ್ವತಂತ್ರವಾಗಿ (ಚಲಿಸುವ) ಜಂಗಮವಾಗುವ ಹಕ್ಕಿದೆ ಎಂದದ್ದು ಕಾಂಗ್ರೆಸ್ ಸರಕಾರ.

೬) ದಾಸೋಹದ ಮಾದರಿಯಲ್ಲಿ ಅನ್ನ ಭಾಗ್ಯ, ಅಕ್ಷರ ಭಾಗ್ಯ,ಇಂದಿರಾ ಕ್ಯಾಂಟಿನ್ ಗಳನ್ನು ನೀಡಿದ್ದು ಇದೇ ಸಿದ್ದರಾಮಯ್ಯನವರ ಕಾಂಗ್ರೆಸ್ ಸರಕಾರ.

ಹತ್ತು ಜನ ಲಿಂಗಾಯತ ಮುಖ್ಯಮಂತ್ರಿಗಳು ಸಾಧಿಸಲಾಗದ ಲಿಂಗಾಯತರ ಅಸ್ಮಿತೆಯನ್ನು ಎತ್ತಿ ಹಿಡಿದದ್ದು ಇದೆ ಕಾಂಗ್ರೆಸ್ ಸರಕಾರದ ಮುಖ್ಯಮಂತ್ರಿ ಸಿದ್ದರಾಮಯ್ಯನವರು. ಅವರೊಬ್ಬ ನಿಜಜಂಗಮರಲ್ಲವೆ?

ಕರ್ನಾಟಕವನ್ನು ಬಸವನಾಡನ್ನಾಗಿಸವುದು ಪ್ರತಿಯೊಬ್ಬ ಲಿಂಗಾಯತನ ಕನಸು. ಅದನ್ನು ನನಸು ಮಾಡಲು ಹೊರಟಿರುವ ನಿಜ ಜಂಗಮ ಸಿದ್ದರಾಮಯ್ಯರನ್ನು ಬೆಂಬಲಿಸುವುದು ಲಿಂಗಾಯತನ ಕರ್ತವ್ಯ ಅಲ್ಲವೆ? ಸಹಾಯ ಮಾಡಿದವರಿಗೆ ಕೃತಜ್ಞತೆ ಸಲ್ಲಿಸುವುದು ಶರಣ ಸಂಪ್ರದಾಯವಲ್ಲವೆ?

ಸ್ನೇಹಿತ ಹೌದಲ್ಲ, ಎಂದ. ನೀವು?

– ಜಿ.ಬಿ.ಪಾಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

Leave a Reply