ತಮಿಳುನಾಡಿನ ದ್ರಾವಿಡ ಮಾದರಿ ಯಾಕೆ ದಲಿತರಿಗೆ ಅನುಮಾನ ಹುಟ್ಟಿಸುತ್ತದೆ ಎಂದರೆ ಅಲ್ಲಿನ ಬ್ರಾಹ್ಮಣ ವಿರೋಧಿ ರಾಜಕೀಯದ ಒಳಗೆ ಅಡಗಿರುವ ಶೂದ್ರ ಜಾತಿಗಳ ದಲಿತ ವಿರೋಧಿತನದಿಂದಾಗಿ. ಇದಕ್ಕಿಗ ಇನ್ನೊಂದು ತಾಜಾ ಉದಾಹರಣೆ ಸಿಕ್ಕಿದೆ.
ಕಳೆದ ತಿಂಗಳು ಬಿಡುಗಡೆಯಾಗಿದ್ದ ಮಾರಿ ಸೆಲ್ವರಾಜ್ ನಿರ್ದೇಶನದ ‘ಮಾಮಣ್ಣನ್’ ಸಿನಿಮಾ ಹಲವು ಓರೆಕೋರೆಗಳ ನಡುವೆಯೂ ಜಾತಿ ಕುರಿತ ಕಥನಗಳಲ್ಲಿ ಬಹಳ ಮುಖ್ಯವಾದ ಸಿನಿಮಾ. ಈ ಸಿನಿಮಾ ಕಳೆದ ವಾರ ಓಟಿಟಿಯಲ್ಲಿ ಬಿಡುಗಡೆಯಾಗಿ Trending ಆಗಿದೆ.
ಜಾತಿವ್ಯವಸ್ಥೆಗೆ ಸವಾಲು ಹಾಕುವ ತಮ್ಮ ಸಿನಿಮಾಗಳ ರಾಜಕೀಯದ ಕಾರಣಕ್ಕಾಗಿ ಪ.ರಂಜಿತ್ ಮತ್ತು ಮಾರಿ ಸೆಲ್ವರಾಜ್ ಮೇಲು ಜಾತಿಗಳ ವಿರೋಧವನ್ನು ಎದುರಿಸುತ್ತಲೇ ಬಂದಿದ್ದಾರೆ.
‘ಮಾಮಣ್ಣನ್’ ಸಿನಿಮಾದಲ್ಲಿ ದಲಿತ ಸಮುದಾಯದ ರಾಜಕಾರಣಿ ಮಾಮಣ್ಣನ್ ಪಾತ್ರ ಜಾತಿ ಕಾರಣಕ್ಕಾಗಿ ಮೇಲು ಜಾತಿಯ ರಾಜಕೀಯ ನಾಯಕ ರತ್ನವೇಲು ಪಾತ್ರದ ವಿರುದ್ಧ ಸೆಣೆಸಿ ಗೆಲ್ಲುವ ಕಥನವನ್ನು ಹೊಂದಿದ್ದು ಜಾತಿವ್ಯವಸ್ಥೆಯ ಕಾರಣಕ್ಕೆ ದಲಿತ ರಾಜಕಾರಣಿಗಳು ಎದುರಿಸುವ ಹಲಬಗೆಯ ಸವಾಲುಗಳನ್ನು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದೆ.
ಸಿನಿಮಾದಲ್ಲಿ ಮೇಲುಜಾತಿಗಳ ಪ್ರಾಬಲ್ಯಕ್ಕೆ ಸೆಡ್ಡು ಹೊಡೆದು ಗೆಲ್ಲುವ ದಲಿತ ಮಾಮಣ್ಣನ್ ಎದುರು ರತ್ನವೇಲು ಸೋಲುತ್ತಾನೆ. ಕೇವಲ Submissive ದಲಿತ ಪಾತ್ರಗಳನ್ನು ಮಾತ್ರವೇ ನೋಡಿ ಅಭ್ಯಾಸವಿರುವ ಪ್ರೇಕ್ಷಕರಿಗೆ ಮಾಮಣ್ಣನ್ ತರದ ಪಾತ್ರ ಕಸಿವಿಸಿ ಉಂಟುಮಾಡುತ್ತದೆ.
ಸಿನಿಮಾದಲ್ಲಿ ವಡಿವೇಲು ನಟಿಸಿರುವ ಮಾಮಣ್ಣನ್ ಪಾತ್ರದ ಜಾತಿ ಅಸ್ಪೃಶ್ಯ ಹಂದಿಜೋಗಿ ಸಮುದಾಯದ್ದು.
ಈ ಕಾರಣಕ್ಕಾಗಿಯೇ ಸಿನಿಮಾ ಬಿಡುಗಡೆಯಾದ ನಂತರ ದಲಿತ-ಬಹುಜನರು ಮಾಮಣ್ಣನ್ ಪಾತ್ರವನ್ನು celebrate ಮಾಡಿದ್ದರು.
ಆದರೆ ಇಡಿ ಸಿನಿಮಾದಲ್ಲಿ ರತ್ನವೇಲು ಪಾತ್ರ ಮೇಲು ಜಾತಿಯದ್ದಾದರೂ ಇಂತದ್ದೇ ಜಾತಿ ಎನ್ನುವ ಐಡೆಂಟಿಟಿಯನ್ನು ಬಹಿರಂಗಪಡಿಸಿಲ್ಲ. ಆದರೂ ರತ್ನವೇಲು ಪಾತ್ರವನ್ನು ತಮ್ಮ ಜಾತಿಯ ಜೊತೆಗೆ ಗುರುತಿಸಿಕೊಳ್ಳುತ್ತಿರುವ ಮೇಲು ಜಾತಿಗಳ ಜನ ಸಾಮಾಜಿಕ ಮಾಧ್ಯಮಗಳಲ್ಲಿ ರತ್ನವೇಲು ಪಾತ್ರದ ದೃಶ್ಯಗಳನ್ನು ಹಂಚಿಕೊಂಡು ಸಂಭ್ರಮಿಸುತ್ತಿದ್ದಾರೆ. ಫೇಸ್ಬುಕ್, ಇನ್ಸ್ಟಾಗ್ರಾಂ, ಯೂಟ್ಯೂಬ್ ರೀಲ್ಸ್ಗಳಲ್ಲಿ ಫಹಾದ ನಟನೆಯ ವಿವಿಧ shadeಗಳ ದೃಶ್ಯಗಳು ಮೇಲ್ಜಾತಿಯ ಮೇಲರಿಮೆಯನ್ನು ಎತ್ತಿಹಿಡಿಯುತ್ತಿರುವಂತೆ ಬಿಂಬಿಸುವುದರ ಮೂಲಕ ಮಾರಿಸೆಲ್ವರಾಜ್ ಅವರನ್ನ ಹಿಯ್ಯಾಳಿಸಲಾಗುತ್ತಿದೆ.
ಸಿನಿಮಾದ Antagonist ರತ್ನವೇಲು ಪಾತ್ರವನ್ನು celebrate ಮಾಡುವ ಮೂಲಕ ತಮಿಳುನಾಡಿನ ಮೇಲು ಜಾತಿಗಳು ತಮ್ಮ ಜಾತಿ ಅಸಹನೆಯನ್ನು ಹೊರಹಾಕುತ್ತದ್ದಾರೆ.
ರತ್ನವೇಲು ಪಾತ್ರದಲ್ಲಿ ನಟಿಸಿರುವ ಫಹಾದ್ ಫಾಸಿಲ್ರ ಅಧ್ಬುತವಾದ ನಟನೆಯಿಂದಾಗಿ ಸಿನಿಮಾದ ಬೇರೆ ಪಾತ್ರಗಳು ಮಂಕಾಗಿ ಕಾಣುವುದು ನಿಜ. ಇದಕ್ಕೆ ಸಿನಿಮಾದಲ್ಲಿ ರತ್ನವೇಲು ಪಾತ್ರಕ್ಕೆ ಸಿಕ್ಕಿರುವ space ಕೂಡ ಕಾರಣ. ಆದರೆ ಫಹಾದ್ ಪಾತ್ರದ ವಿಜೃಂಭಣೆಯ ಹಿಂದೆ ಇಡೀ ಸಿನಿಮಾದ ರಾಜಕೀಯಕ್ಕೆ ವ್ಯತಿರಿಕ್ತವಾದ ನೆರೆಟೀವ್ ಕಟ್ಟಲು ಪ್ರಯತ್ನಿಸುತ್ತಿರುವುದು ಆಘಾತಕಾರಿ.
ಸಿನಿಮಾ ಬಿಡುಗಡೆಗೂ ಮುಂಚೆ ಕಮಲ್ ಹಾಸನ್ ನಟನೆಯ ‘ತೇವರ್ ಮಗನ್’ ಸಿನಿಮಾದ ಬಗ್ಗೆ ಮಾರಿಸೆಲ್ವರಾಜ್ ಆಡಿದ್ದ ಮಾತುಗಳಿಂದಾಗಿ ‘ಮಾಮಣ್ಣನ್’ ‘ತೇವರ್ ಮಗನ್’ ಸಿನಿಮಾಸ antithesis ಆಗಬಹುದೆಂದು ಹಲವರು ಅಂದಾಜಿಸಿದ್ದರು. ಅದಕ್ಕೆ ಪುಷ್ಟಿ ಕೊಡುವಂತೆ ಸಿನಿಮಾದ ಹಲವು ದೃಶ್ಯಗಳು ಮತ್ತು ಇಮೇಜುಗಳು ‘ತೇವರ್ ಮಗನ್’ ಸಿನಿಮಾಗೆ counter ಮಾಡುತ್ತವೆ. ಈ ಕಾರಣಕ್ಕಾಗಿ ತೇವರ್ ಸಮುದಾಯ ಮತ್ತು ಇನ್ನೊಂದು ಪ್ರಬಲ ಸಮುದಾಯವಾಗಿರುವ ಗೌಂಡರ್ ಸಮುದಾಯ ರತ್ನವೇಲು ಪಾತ್ರವನ್ನು celebrate ಮಾಡುತ್ತಿವೆ. ಮಾಮಣ್ಣನ್ಗೆ ಎದುರಾಗಿ ಸವಾಲಾಕುವ ರತ್ನವೇಲು ಪಾತ್ರದಲ್ಲಿ ತಮ್ಮ Caste Prideಅನ್ನು ಹುಡುಕುತ್ತಿವೆ.
ಜಾತಿವ್ಯವಸ್ಥೆಯನ್ನು ಪ್ರಶ್ನೆ ಮಾಡುವ ಈ ಸಿನಿಮಾ ಮೇಲುಜಾತಿಗಳಲ್ಲಿ ಹುಟ್ಟಿಸಬೇಕಿದ್ದ reflectivity ಗೆ ಬದಲು ಜಾತಿ ಅಹಂ ಅನ್ನು ಕೆರಳಿಸಿರುವುದು ಒಂದು ಕಡೆ ಸಿನಿಮಾದ ಐಡಿಯಾಲಜಿಗೆ ಸವಾಲಾದರೆ ಇನ್ನೊಂದು ಕಡೆ ಸಿನಿಮಾ ಯಾರನ್ನು ಮುಟ್ಟಬೇಕಿತ್ತೊ ಅವರನ್ನು ಮುಟ್ಟಿ ನಿದ್ದೆಗೆಡಿಸಿದೆ ಅನ್ನಿಸುತ್ತದೆ.
“Art should comfort the disturbed and disturb the comfortable” ಎನ್ನುವ ಮಾತನ್ನು ನಿಜ ಮಾಡಿದ ಮಾರಿ ಸೆಲ್ವರಾಜ್ಗೆ ಜೈ ಭೀಮ್
– ವಿ.ಎಲ್.ನರಸಿಂಮಮೂರ್ತಿ, ಸಾಮಾಜಿಕ ಹೋರಾಟಗಾರರು




