ಬಿಜೆಪಿಯವರಿಗೆ ಮತ್ತು ಮೋದಿಯವರಿಗೆ ಒಂದು ಸತ್ಯ ತಿಳಿದಿದೆ. ಈ ದೇಶದ ಬಹುತೇಕ ರಾಜ್ಯಗಳಲ್ಲಿ ಬಿಜೆಪಿಗೆ ಪರ್ಯಾಯವಾಗಿರುವುದು ಕಾಂಗ್ರೆಸ್ ಪಕ್ಷ ಮಾತ್ರ ಹಾಗೂ ದೇಶದ ಬಹುತೇಕ ಲೋಕಸಭಾ ಕ್ಷೇತ್ರಗಳಲ್ಲಿ ಬಿಜೆಪಿ ಮತ್ತು ಕಾಂಗ್ರೆಸ್ ನಡುವೆ ಮಾತ್ರ ನೇರವಾಗಿ ಪೈಪೋಟಿ ಇರುವುದು ಇವರಿಗೆ ತಿಳಿದಿದೆ.
2014 ಮತ್ತು 2019ರಲ್ಲಿ ಬಿಜೆಪಿ ಮತ್ತು ಮೋದಿಯವರು ಕಾಂಗ್ರೆಸ್ ವಿರುದ್ಧ ಎಷ್ಟೇ ರೀತಿಯ ಅಪಪ್ರಚಾರವನ್ನು ಮತ್ತು ಕೀಳು ಮಟ್ಟದಲ್ಲಿ ಮಾತನಾಡಿದರು ಸಹ ಕಾಂಗ್ರೆಸ್ ಪಕ್ಷ ಸಂಪನ್ಮೂಲದ ಬಲವಿಲ್ಲದೆ ತನ್ನ ಸಂಘಟನೆಯ ಮೂಲಕವೇ ಶೇಕಡ 20ರಷ್ಟು ಮತಗಳನ್ನು ಲೋಕಸಭಾ ಚುನಾವಣೆಗಳಲ್ಲಿ ಗಳಿಸಿರುವುದು ಇವರು ಗಮನಿಸಿದ್ದಾರೆ.
ಅನೇಕ ರಾಜ್ಯಗಳಲ್ಲಿ ಚುನಾಯಿತ ಪ್ರತಿನಿಧಿಗಳನ್ನು ನೂರಾರು ಸಂಖ್ಯೆಯಲ್ಲಿ ಬೆದರಿಸಿ ಇಲ್ಲವೇ ಅನೇಕ ರೀತಿಯ ಆಸೆಗಳನ್ನು ತೋರಿಸಿ ಪಕ್ಷಾಂತರ ಮಾಡಿಸಿ ಸರ್ಕಾರಗಳನ್ನು ಉಳಿಸಿ ಸಂಘಟನೆಯನ್ನು ಬಲಹೀನ ಮಾಡಿದರು ಸಹ ಕಾಂಗ್ರೆಸ್ ಪಕ್ಷ ದೇಶದ ಲಕ್ಷಾಂತರ ಹಳ್ಳಿಗಳಲ್ಲಿ ಇನ್ನೂ ತನ್ನ ಸಂಘಟನೆಯನ್ನು ಉಳಿಸಿಕೊಂಡಿದೆ. ಇಷ್ಟೆಲ್ಲ ತೊಂದರೆಗಳ ನಡುವೆಯೂ ಹಲವಾರು ರಾಜ್ಯಗಳಲ್ಲಿ ವಿರೋಧಪಕ್ಷವಾಗಿ ಕೆಲವು ರಾಜ್ಯಗಳಲ್ಲಿ ಆಡಳಿತ ಪಕ್ಷವಾಗಿ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿರುವುದು ಬಿಜೆಪಿಯವರ ನಿದ್ದೆಯನ್ನ ಕೆಡಿಸಿದೆ.
ಕಾಂಗ್ರೆಸ್ ಪಕ್ಷ ಮುಳುಗುತ್ತಿರುವ ಹಡಗು ಅದಕ್ಕೆ ಭವಿಷ್ಯವಿಲ್ಲ ಎಂದೆಲ್ಲ ಮಾತನಾಡುವ ಬಿಜೆಪಿಯವರಿಗೆ ಕಾಂಗ್ರೆಸ್ ಬಗ್ಗೆ ಬೆದರಿಕೆಯಾದರು ಏಕೆ? ವೇದಿಕೆಯ ಮೇಲೆ ಏನೇ ಮಾತನಾಡಿದರು, ಮನಸ್ಸಿನಲ್ಲಿ ಇವರಿಗೆ ಕಾಂಗ್ರೆಸ್ ಪಕ್ಷದ ಬಗ್ಗೆ ಭಯವಿದೆ. ಆ ಕಾರಣದಿಂದಲೇ ನೆಹರೂರವರನ್ನ, ಇಂದಿರಾಗಾಂಧಿರವರನ್ನು, ರಾಜೀವ್ ಗಾಂಧಿ ಅವರನ್ನು ಡಾ. ಮನಮೋಹನ್ ಸಿಂಗ್ ರವರನ್ನು ಮತ್ತು ರಾಜ್ಯಗಳ ಮುಖ್ಯಮಂತ್ರಿಗಳನ್ನು ಸಿಕ್ಕಸಿಕ್ಕ ವೇದಿಕೆಗಳಲ್ಲಿ ತಮಗೆ ಸಂತೋಷವಾಗುವಷ್ಟು ರೀತಿಯಲ್ಲಿ ಸುಳ್ಳುಗಳ ಸರಮಾಲೆಯೊಂದಿಗೆ ಅಬ್ಬರಿಸುತ್ತ ಟೀಕಿಸುತ್ತ ಸಂತೋಷ ಪಡುತ್ತಿದ್ದಾರೆ. ಇದು ಸಹ ಕಾಂಗ್ರೆಸ್ ಬಗ್ಗೆ ಅವರಿಗಿರುವ ಪರೋಕ್ಷವಾದ ಹೆದರಿಕೆಗೆ ಹೌದು.
ಬಿಜೆಪಿಯವರು ಮತ್ತು ಅದರ ನಾಯಕರು ಎಷ್ಟೇ ಅಪಪ್ರಚಾರಗಳನ್ನ ಮಾಧ್ಯಮಗಳ ಮೂಲಕ, ಪತ್ರಿಕಾ ಮಾಧ್ಯಮಗಳ ಮೂಲಕ, ತಮ್ಮ ವಾಟ್ಸಪ್ ಯೂನಿವರ್ಸಿಟಿಗಳ ಮೂಲಕ, ಬಾಡಿಗೆ ಭಾಷಣಕಾರರ ಮೂಲಕ ಮಾತನಾಡಿಸಿದರೂ ಸಹ ಕಾಂಗ್ರೆಸ್ ಪಕ್ಷದ ಬಗ್ಗೆ ದೇಶದಲ್ಲಿ ಇನ್ನೂ ಬಹಳಷ್ಟು ಮಂದಿಗೆ ಪ್ರೀತಿ ಮತ್ತು ವಿಶ್ವಾಸವಿದೆ ಅದಕ್ಕೆ ಕಾರಣವೇನೆಂದರೆ: ಕಾಂಗ್ರೆಸ್ ಪಕ್ಷ ದೇಶದ ಸ್ವಾತಂತ್ರ್ಯಕ್ಕೆ ಹೋರಾಟ ಮಾಡಿದೆ. ಈ ಪಕ್ಷದ ನಾಯಕರು ವಿಶ್ವ ಮೆಚ್ಚಿದ ಶ್ರೇಷ್ಠ ನಾಯಕ ಮಹಾತ್ಮ ಗಾಂಧೀಜಿರವರು. ಕಾಂಗ್ರೆಸ್ ಪಕ್ಷ ಬಡಜನರ ಮತ್ತು ಎಲ್ಲ ವರ್ಗದವರ ಹಿತವನ್ನ ಕಾಪಾಡುವಂತಹ ವಿಚಾರಧಾರೆಯನ್ನು ಹೊಂದಿದೆ ಎಂಬುದು ಮತದಾರರಿಗೆ ತಿಳಿದಿದೆ.
ನೆಹರೂರವರು ಸ್ಥಾಪಿಸಿದ ಕೈಗಾರಿಕೆಗಳು ಅವರು ನಿರ್ಮಿಸಿದ ಅಣೆಕಟ್ಟುಗಳು ಅವರು ಸ್ಥಾಪಿಸಿದ ಸಂಶೋಧನಾ ಸಂಸ್ಥೆಗಳು ಅವರಿಂದಾಗಿ ಚಾಲನೆಯಾದ ವಿದ್ಯುತ್ ಸ್ಥಾವರಗಳು ಮತ್ತು ಆರೋಗ್ಯ ಸಂಸ್ಥೆಗಳು ಇವುಗಳ ಉಪಯೋಗವನ್ನು ಪಡೆದಂತಹ ಇವುಗಳ ಮೂಲಕ ತಮ್ಮ ಬದುಕನ್ನು ಕಟ್ಟಿಕೊಂಡಂತಹ ಕೋಟಿ ಕೋಟಿ ಭಾರತೀಯರ ಕುಟುಂಬದ ಅನೇಕ ಮಂದಿ ಇನ್ನು ಈ ಕಾರಣಕ್ಕಾಗಿ ಕಾಂಗ್ರೆಸ್ ಪಕ್ಷವನ್ನು ಇಷ್ಟಪಡುತ್ತಿದ್ದಾರೆ.
ಲಾಲ್ ಬಹದ್ದೂರ್ ಶಾಸ್ತ್ರಿರವರಂತಹ ಪ್ರಾಮಾಣಿಕವಾದ ಪ್ರಧಾನಿಯನ್ನು ಕಾಂಗ್ರೆಸ್ ನೀಡಿರುವ ಕಾರಣಕ್ಕೆ ಜನ ಕಾಂಗ್ರೆಸ್ ಪಕ್ಷವನ್ನ ಇನ್ನೂ ಪ್ರೀತಿಸುತ್ತಿದ್ದಾರೆ.
ಉಳುವವನಿಗೆ ಭೂಮಿಯನ್ನ ನೀಡಿ ಕೋಟ್ಯಾಂತರ ಬಡವರನ್ನ ಭೂ ಮಾಲೀಕರನ್ನಾಗಿಸಿದ, ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿದ, ಬಡವರಿಗಾಗಿ ಹತ್ತು ಹಲವರು ಕಾರ್ಯಕ್ರಮಗಳನ್ನ ನೀಡಿದ, ಪಾಕಿಸ್ತಾನದ ವಿರುದ್ಧ ಯುದ್ಧವನ್ನು ಮಾಡಿ ಆ ದೇಶವನ್ನು ಸೀಳಿ ಹಾಕಿ ಅವರ ಅಹಂಕಾರಕ್ಕೆ ಪೆಟ್ಟು ಕೊಟ್ಟಂತಹ ಕಾರಣಗಳಿಗಾಗಿ ಇಂದಿರಾ ಗಾಂಧಿ ರವರನ್ನ ಇಂದಿಗೂ ಜನ ಸ್ಮರಿಸಿಕೊಳ್ಳುತ್ತಾರೆ. ಅವರ ನಾಯಕತ್ವ ಅವರ ದಿಟ್ಟತನ ಅವರ ಸಾಹಸಮಯ ನಿರ್ಧಾರಗಳಿಗಾಗಿ ಅಭಿಮಾನವನ್ನು ಹೊಂದಿದ್ದಾರೆ. ಇವರುಗಳು ಕಾಂಗ್ರೆಸ್ ಪಕ್ಷದ ಬೆಂಬಲಿಗರಾಗಿ ಉಳಿದಿದ್ದಾರೆ.
ಮಾಹಿತಿ ತಂತ್ರಜ್ಞಾನದ ಮೂಲಕ ಯುವಜನರಲ್ಲಿ ಹೊಸ ಭರವಸೆಯನ್ನು ಮೂಡಿಸಿ ಅನೇಕ ಹೊಸ ವಿಚಾರಧಾರೆಗಳನ್ನು ಹುಟ್ಟು ಹಾಕಿ ಯುವಜನರ ಬದುಕಿಗೆ ಹೊಸ ದಾರಿಯನ್ನ ತೋರಿಸಿದ, ಟೆಲಿಫೋನ್ ಕ್ರಾಂತಿಯನ್ನ ಮಾಡಿದ ಯುವ ಜನರಿಗೆ ಮಾಹಿತಿ ತಂತ್ರಜ್ಞಾನದ ಅಭಿವೃದ್ಧಿಯ ಮೂಲಕ ಕೋಟಿ ಕೋಟಿ ಉದ್ಯೋಗವನ್ನು ಕಲ್ಪಿಸಿಕೊಟ್ಟ ನವ ಭಾರತದ ನಿರ್ಮಾಣಕ್ಕೆ ಅಡಿಗಲ್ಲು ಹಾಕಿದ ರಾಜೀವ್ ಗಾಂಧಿ ರವರ ವ್ಯಕ್ತಿತ್ವವನ್ನು ಮೆಚ್ಚಿಕೊಂಡ ಅಂತಹ ಜನ ಇನ್ನೂ ಇದ್ದಾರೆ ಅವರುಗಳು ಕಾಂಗ್ರೆಸ್ ಪರವಾಗಿದ್ದಾರೆ.
ಪಿ ವಿ ನರಸಿಂಹರಾಯರ ಆರ್ಥಿಕ ನೀತಿಗಳು ಮತ್ತು ವಿಶೇಷವಾಗಿ ಡಾ. ಮನಮೋಹನ್ ಸಿಂಗ್ ರವರು 1991ರಲ್ಲಿ ದೇಶವನ್ನು ಆರ್ಥಿಕ ಸಂಕಷ್ಟದಿಂದ ಪಾರು ಮಾಡುವ ಸಲುವಾಗಿ ಜಾರಿಗೆ ತಂದ ಕ್ರಾಂತಿಕಾರಿ ಯೋಜನೆಗಳು ಅವರು ಪ್ರಧಾನಿಯಾಗಿ ಜಾರಿಗೊಳಿಸಿದ ಆರ್ಥಿಕ ನೀತಿ, ಮಹಾತ್ಮ ಗಾಂಧಿ ಉದ್ಯೋಗ ಖಾತ್ರಿ ಯೋಜನೆ, ಉಚಿತ ಶಿಕ್ಷಣ, ಆಹಾರ ಭದ್ರತೆ ಕಾಯಿದೆ, ಆರೋಗ್ಯ ಭದ್ರತೆ ಕಾಯ್ದೆ, ಮಾಹಿತಿ ಹಕ್ಕು ಕಾಯ್ದೆ, ಅಣು ಒಪ್ಪಂದ ಮುಂತಾದವುಗಳು ದೇಶದ ಜನರಿಗೆ ಸಹಾಯವಾಗುವುದರ ಜೊತೆಗೆ ದೇಶದ ಆರ್ಥಿಕತೆಯ ಬಲಿಷ್ಠ ತೆಗೆ ವಾಯಿತು ವಿದೇಶಿ ಕಂಪನಿಗಳು ದೇಶದಲ್ಲಿ ಸ್ಥಾಪನೆಗಾಗಿ ಕೋಟಿ ಕೋಟಿ ಉದ್ಯೋಗಗಳು ದೊರೆಯುವಂತಾಯಿತು. ಇಂತಹ ವಿಚಾರಗಳಿಗಾಗಿ ಮನಮೋಹನ್ ಸಿಂಗ್ ರವರನ್ನು ಅತ್ಯಂತ ಗೌರವದಿಂದ ಅವರ ಪಾಂಡಿತ್ಯಕ್ಕಾಗಿ ಅವರ ವಿದ್ಯೆಗಾಗಿ ಅವರ ಸಜ್ಜನಿಕೆಗಾಗಿ ಪ್ರೀತಿಸುವ ಲಕ್ಷಾಂತರ ಮಂದಿ ಉಳಿದಿರುವ ಕಾರಣದಿಂದ ಕಾಂಗ್ರೆಸ್ ಪಕ್ಷ ತನ್ನ ಅಸ್ತಿತ್ವವನ್ನು ಕಾಯ್ದುಕೊಂಡಿದೆ.
ಕರ್ನಾಟಕ ರಾಜ್ಯದಲ್ಲಿ ಕೆಂಗಲ್ ಹನುಮಂತಯ್ಯ ನವರ ದಕ್ಷ ಆಡಳಿತ ವ್ಯವಸ್ಥೆ, ನಿಜಲಿಂಗಪ್ಪನವರ ಪ್ರಾಮಾಣಿಕವಾದ ಬದುಕು ಜೊತೆಗೆ ನೀರಾವರಿ ಮತ್ತು ವಿದ್ಯುತ್ ಯೋಜನೆಗಳಿಗೆ ಅವರು ನೀಡಿದಂತಹ ಉತ್ತೇಜನ ಅದಕ್ಕಾಗಿ ಅವರು ಶ್ರಮಿಸಿದ ರೀತಿ ಕಾಂಗ್ರೆಸ್ ಪಕ್ಷದ ಬಗ್ಗೆ ಇನ್ನೂ ಪ್ರೀತಿಯನ್ನು ಹೊಂದುವಂತೆ ಮಾಡಿದೆ.
ಗುಂಡೂರಾಯರು ಮುಖ್ಯಮಂತ್ರಿಯಾಗಿ ಸರ್ಕಾರಿ ನೌಕರರಿಗೆ ಸಂಬಳವನ್ನು ಹೆಚ್ಚಿಸಿದ್ದು ಪೊಲೀಸರಿಗೆ ಗೌರವದ ಸಮವಸ್ತ್ರವನ್ನ ನೀಡಿದ್ದು, ಅರ್ಚಕರಿಗೆ ಶಾಶ್ವತವಾದ ಯೋಜನೆಗಳನ್ನು ರೂಪಿಸಿಕೊಟ್ಟದ್ದು, ಉಪಾಧ್ಯಾಯರುಗಳಿಗೆ ಸಂಬಳವನ್ನು ಹೆಚ್ಚಿಸಿ ಕೊಟ್ಟಿದ್ದು, ಕೆಂಪೇಗೌಡ ಆಸ್ಪತ್ರೆಗೆ ಜಾಗವನ್ನು ಕೊಟ್ಟಿದ್ದು, ಅಂಬೇಡ್ಕರ್ ಅವರ ಹೆಸರಿನಲ್ಲಿ ಮೆಡಿಕಲ್ ಕಾಲೇಜ್ ಸ್ಥಾಪಿಸಿದ್ದು ಸುಭಾಷ್ ನಗರದ ಬಸ್ ನಿಲ್ದಾಣದ ಸ್ಥಾಪನೆ ಇವುಗಳು ಸಹ ಕಾಂಗ್ರೆಸ್ ಪಕ್ಷದ ಬೆಳವಣಿಗೆಗೆ ಸಹಕಾರಿಯಾಗಿದೆ.
ಬಂಗಾರಪ್ಪನವರು ಮುಖ್ಯಮಂತ್ರಿ ಆಗಿ ಜಾರಿಗೆ ತಂದಂತಹ ಆರಾಧನಾ ಆಶ್ರಯ ವಿಶ್ವ ಮುಂತಾದಂತಹ ಯೋಜನೆಗಳು ಹೆಚ್ಚು ಜನಪ್ರಿಯವಾಯಿತು. ವೀರಪ್ಪ ಮೊಯ್ಲಿರವರು ಜಾರಿಗೆ ತಂದಂತಹ ಸಾಮಾನ್ಯ ಪ್ರವೇಶ ಪರೀಕ್ಷೆಯ ನೀತಿಯಿಂದಾಗಿ ಬಡವರ ಮನೆಯ ಮಕ್ಕಳು ವೈದ್ಯರಾಗಲು ಮತ್ತು ಇಂಜಿನಿಯರ್ ಗಳಾಗಲು ಕಾರಣವಾಯಿತು ಎಂಬಂತಹ ವಿಚಾರವೂ ಜನರ ಮನಸ್ಸಿನಲ್ಲಿದೆ.
ವಿಶೇಷವಾಗಿ ಉಳುವವನಿಗೆ ಭೂಮಿ ಎಂಬ ಕಾನೂನಿನ ಮೂಲಕ ರಾಜ್ಯದ ಲಕ್ಷಾಂತರ ಬಡವರನ್ನ ಭೂ ಮಾಲೀಕರನ್ನಾಗಿಸಿದ ಈ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿದ ಧ್ವನಿ ಇಲ್ಲದಂತಹ ಸಣ್ಣಪುಟ್ಟ ಸಮಾಜದವರಿಗೆ ರಾಜಕೀಯ ಸ್ಥಾನಮಾನವನ್ನು ಕಲ್ಪಿಸಿಕೊಟ್ಟ, ಜೀತ ಪದ್ಧತಿಯನ್ನು ರದ್ದುಪಡಿಸಿದ, ಸಾಲಗಳಿಂದ ಋಣಮುಕ್ತಗೊಳಿಸಿದ ಸಾಮಾಜಿಕ ನ್ಯಾಯದ ಹರಿಕಾರ ದೇವರಾಜ್ ಅರಸುರವರ ಸೇವೆಯ ಕಾರಣದಿಂದ ಕಾಂಗ್ರೆಸ್ ಪಕ್ಷಕ್ಕೆ ಹಿಂದುಳಿದ ವರ್ಗದವರ ಮತ್ತು ಶೋಷಿತ ಸಮಾಜದವರ ಆಶೀರ್ವಾದ ಇಂದಿಗೂ ಉಳಿದುಕೊಂಡಿದೆ.
ಬೆಂಗಳೂರಿನ ಮಾಹಿತಿ ತಂತ್ರಜ್ಞಾನದ ವಿಶ್ವದ ರಾಜಧಾನಿಯನ್ನಾಗಿಸಿದ ಮತ್ತು ಮಾಹಿತಿ ತಂತ್ರಜ್ಞಾನದ ಮೂಲಕ ಸಾವಿರಾರು ಕಂಪನಿಗಳು ಬೆಂಗಳೂರಿನಲ್ಲಿ ಸ್ಥಾಪನೆಯಾಗಲು ಕಾರಣರಾದ ಬಿಸಿ ಊಟದ ಯೋಜನೆಯ ರೂವಾರಿ ಯಶಸ್ವಿನಿ ಯೋಜನೆಯ ರೂವಾರಿ ಸ್ತ್ರೀ ಶಕ್ತಿ ಸಂಘಟನೆಯ ರೂವಾರಿ, ಮಾಹಿತಿ ತಂತ್ರಜ್ಞಾನದ ಕರ್ನಾಟಕದ ರೂವಾರಿ ಎಸ್ಎಂ ಕೃಷ್ಣ ರವರ ಆಧುನಿಕ ಶೈಲಿಯ ಆಡಳಿತ ವ್ಯವಸ್ಥೆ ಕಾಂಗ್ರೆಸ್ ಪಕ್ಷಕ್ಕೆ ಶಕ್ತಿಯನ್ನು ನೀಡಿದೆ ಇದರ ಉಪಯೋಗವನ್ನು ಪಡೆದ ಜನತೆ ಇಂದಿಗೂ ಕಾಂಗ್ರೆಸ್ ಪಕ್ಷದೊಂದಿಗೆ ಇದ್ದಾರೆ.
ಅನ್ನಭಾಗ್ಯ ಯೋಜನೆ ಮೂಲಕ ಹಸಿವು ಮುಕ್ತ ಕರ್ನಾಟಕವನ್ನು ಕಟ್ಟುವಂತಹ ಪ್ರತಿಕ್ರಿಯೆಯನ್ನು ಮಾಡಿ ಆ ನಿಟ್ಟಿನಲ್ಲಿ ಬಹುದೂರ ಸಾಗಿ ಶಕ್ತಿ ಯೋಜನೆ, ಗೃಹಲಕ್ಷ್ಮಿ, ಗೃಹಜೋತಿ, ಯುವನಿಧಿ, ವಿದ್ಯಾಸಿರಿ, ಕೃಷಿ ಭಾಗ್ಯ, ಮನಸ್ವಿನಿ, ಮೈತ್ರಿ ಕ್ಷೀರಭಾಗ್ಯ ಹೀಗೆ ಪಟ್ಟಿ ಮಾಡುತ್ತಾ ಹೋದರೆ ಹತ್ತು ಹಲವಾರು ಕಾರ್ಯಕ್ರಮಗಳ ಮೂಲಕ ಪ್ರತಿಯೊಬ್ಬ ಕನ್ನಡಿಗರ ಮನೆಯ ಸಂತಸಕ್ಕೆ ಕಾರಣವಾಗಿರುವ ಸಿದ್ದರಾಮಯ್ಯನವರ ನೇತೃತ್ವದ ಸರ್ಕಾರ ಮತ್ತು ಪಕ್ಷದ ಅಧ್ಯಕ್ಷರಾಗಿ ಸಂಘಟನೆಯ ಮೂಲಕ ತಮ್ಮ ಚತುರತೆಯ ಮೂಲಕ ರಾಷ್ಟ್ರದ ಗಮನವನ್ನು ಸೆಳೆದಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ರವರ ಪರಿಶ್ರಮ, ಮಂತ್ರಿಮಂಡಲದ ಪ್ರತಿಯೊಬ್ಬ ಸದಸ್ಯರ ಜನಪರ ಕಾಳಜಿಯ ಕಾರ್ಯಕ್ರಮ ಪಕ್ಷದ ಕೋಟಿ ಕೋಟಿ ಕಾರ್ಯಕರ್ತರ ಬದ್ಧತೆ ಇಂದಿಗೂ ಸಹ ಕಾಂಗ್ರೆಸ್ ಪಕ್ಷ ಹಳ್ಳಿ ಹಳ್ಳಿಯಲ್ಲಿ ಮನೆ ಮನೆಗಳಲ್ಲಿ ಪ್ರತಿಯೊಬ್ಬರ ಮನದಲ್ಲಿ ತನ್ನ ಬೇರುಗಳನ್ನು ಬಿಡಲು ಸಾಧ್ಯವಾಗಿದೆ. ಈ ಎಲ್ಲ ಕಾರಣಗಳಿಂದಾಗಿ ಯಾರು ಏನೇ ಮಾಡಿದರು ಯಾರು ಎಷ್ಟೇ ಅಬ್ಬರಿಸಿದರು ಯಾವ ಮಾಧ್ಯಮದವರು ಎಷ್ಟೇ ಕುಚೇಷ್ಠೆಗಳನ್ನ ಮಾಡಿದರು ಕಾಂಗ್ರೆಸ್ ಪಕ್ಷವನ್ನು ಮುಗಿಸಲು ಸಾಧ್ಯವಿಲ್ಲ ಅಳಿಸಲು ಸಾಧ್ಯವಿಲ್ಲ ಇದರ ಶಕ್ತಿಯನ್ನು ಹೊಂದಿಸಲು ಸಾಧ್ಯವಿಲ್ಲ.
– ಕೆ ಎಸ್ ನಾಗರಾಜ್, ಬೆಂಗಳೂರು




