ಚಿತ್ರದುರ್ಗ: ಆಪರೇಷನ್ ಕಮಲಕ್ಕೆ ಸಾವಿರಾರು ಕೋಟಿ ಎಲ್ಲಿಂದ ಬಂತು ಮಿಸ್ಟರ್ ಮೋದಿಯವರೇ? ಎಂದು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಚಿತ್ರದುರ್ಗ ಲೋಕಸಭಾ ಅಭ್ಯರ್ಥಿ ಚಂದ್ರಪ್ಪ ಪರವಾಗಿ ಆಯೋಜಿಸಿದ್ದ ಬೃಹತ್ ಬಹಿರಂಗ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಾಂಗ್ರೆಸ್ ಮತ್ತು ಬೇರೆ ಪಕ್ಷದ ಶಾಸಕರುಗಳಿಗೆ ಕೋಟಿ ಕೋಟಿ ಕೊಡುವುದಕ್ಕೆ ಸಾವಿರಾರು ಕೋಟಿ ಹಣ ಎಲ್ಲಿಂದ ಬಂತು? ಅದು ಕಪ್ಪು ಹಣ ಅಲ್ಲವೇ? ದೇಶದ ಜನಕ್ಕೆ ಉತ್ತರಿಸಿ ಎಂದು ವಾಗ್ದಾಳಿ ನಡೆಸಿದರು.
ವಿದೇಶದಿಂದ ಕಪ್ಪು ಹಣ ತಂದು ಪ್ರತಿಯೊಬ್ಬ ಭಾರತೀಯನ ಕುಟುಂಬಕ್ಕೆ 15 ಲಕ್ಷ ರೂಪಾಯಿ ಕೊಡ್ತೀವಿ ಅಂದ್ರಲ್ಲಾ ಕೊಟ್ರಾ? ರೈತರ ಆದಾಯ ದುಪ್ಪಟ್ಟು ಮಾಡ್ತೀವಿ ಅಂತ ಭಾಷಣ ಮಾಡಿದ್ರು. ಆದಾಯ ಒಂದು ರೂಪಾಯಿ ಕೂಡ ಹೆಚ್ಚಾಗಲಿಲ್ಲ. ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ ಮಾಡ್ತೀವಿ ಅಂದ್ರಲ್ಲಾ? ಮಾಡಿದ್ರಾ ಮೋದಿಯವರೇ ಎಂದು ಪ್ರಶ್ನಿಸಿದರು.
ಪೆಟ್ರೋಲ್, ಡೀಸೆಲ್, ಅಡುಗೆ ಗ್ಯಾಸ್, ರಸಗೊಬ್ಬರ, ಎಣ್ಣೆ, ಕಾಳು ಬೇಳೆ ಎಲ್ಲವೂ ಅತ್ಯಂತ ಕಡಿಮೆ ಬೆಲೆಗೆ ಸಿಗುವಂತೆ ಮಾಡ್ತೀನಿ ಅಂದಿದ್ರಲ್ಲಾ ಮಾಡಿದ್ರಾ ಮಿಸ್ಟರ್ ಮೋದಿ? ನಿಮ್ಮ ಕಾಲದಲ್ಲಿ ಆದ ಬೆಲೆ ಏರಿಕೆಯಿಂದ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬಗಳಿಗೆ ಕೊಂಚ ನೆಮ್ಮದಿ ನೀಡಬೇಕು ಎನ್ನುವ ಕಾರಣದಿಂದ ಐದು ಗ್ಯಾರಂಟಿ ಜಾರಿ ಮಾಡಿದೆವು ಎಂದರು.
ಪ್ರತೀ ಕುಟುಂಬಕ್ಕೆ 4 ರಿಂದ 6 ಸಾವಿರ ರೂಪಾಯಿ ಉಳಿತಾಯವಾಗಿ ನನ್ನ ಜನರ ಕೊಳ್ಳುವ ಶಕ್ತಿ ಹೆಚ್ಚಾಯಿತು. ಇದು ಸಾಧ್ಯವಾಗಿದ್ದು ನಮ್ಮ ಕಾಂಗ್ರೆಸ್ ಸರ್ಕಾರದಿಂದ ಮಿಸ್ಟರ್ ಮೋದಿಯವರೇ ಎಂದು ಅಬ್ಬರಿಸಿದರು.
ಈ ದೇಶದ ಶೇ. 95ರಷ್ಟು ಬಹುಸಂಖ್ಯಾತ ಜನ ಸಮುದಾಯಕ್ಕೆ ಸಾಮಾಜಿಕ ನ್ಯಾಯ ಮತ್ತು ಸಮಾನ ಅವಕಾಶಗಳನ್ನು ಒದಗಿಸುತ್ತಿರುವುದು ನಮ್ಮ ಸಂವಿಧಾನ. ಈ ಸಂವಿಧಾನವನ್ನು ಬದಲಾಯಿಸುತ್ತೀವಿ ಎನ್ನುವುದು ಬಿಜೆಪಿಯ ಅಜೆಂಡಾ. ಇದನ್ನು ಬಿಜೆಪಿ ಕೇಂದ್ರ ಸಚಿವರಾಗಿದ್ದವರೇ ಬಹಿರಂಗವಾಗಿ ಹೇಳಿದ್ದಾರೆ. ಆದ್ದರಿಂದ ದೇಶದ ಸಂವಿಧಾನವನ್ನು ಬದಲಾಯಿಸಿ ಮನುಸ್ಮೃತಿ ಜಾರಿಗೆ ತರಲು ಅವಕಾಶ ಕೊಡಬೇಡಿ ಎಂದರು.
ಅಧಿಕಾರದಲ್ಲಿದ್ದಾಗ ಹಣ ಲೂಟಿ ಮಾಡೋದು, ಆಮೇಲೆ ಜನರನ್ನು ಭಾವನಾತ್ಮಕವಾಗಿ ಕೆರಳಿಸಿ ಬಕ್ರಾ ಮಾಡೋದು ಅವರ ಉದ್ಯೋಗ. ಚಿತ್ರದುರ್ಗದ ಬಿಜೆಪಿ ಅಭ್ಯರ್ಥಿ ಕಾರಜೋಳ ಅವರು ಇಲ್ಲಿಯವರಲ್ಲ. ಕಾಂಗ್ರೆಸ್ ಚಂದ್ರಪ್ಪ ಅವರು ಸೋತಾಗಲೂ ಜನರ ನಡುವೆ ಇದ್ದು ತಪಸ್ಸಿನಂತೆ ಜನರ ಸಮಸ್ಯೆಗಳಿಗೆ ಸ್ಪಂದಿಸಿದ್ದಾರೆ ಎಂದರು.
ಸಮಾಜ ಕಲ್ಯಾಣ ಸಚಿವರಾಗಿ ಕಾರಜೋಳ ಅವರು ಹಿಂದುಳಿದವರು, ದಲಿತರು, ಶ್ರಮಿಕರು, ದುಡಿಯುವ ವರ್ಗಗಳಿಗೆ ಏನೇನೂ ಮಾಡಿಲ್ಲ. ಕಾರಜೋಳ ಅವರ ಬಳಿ ಸಿಕ್ಕಾಪಟ್ಟೆ ಹಣ ಇರಬಹುದು. ಆದರೆ ಚಂದ್ರಪ್ಪ ಅವರಲ್ಲಿ ಜನಸೇವೆ ಮಾಡುವ ಸಜ್ಜನಿಕೆ, ಕಾಳಜಿ ಇದೆ. ಆದ್ದರಿಂದ ಚಿತ್ರದುರ್ಗದ ಜನತೆ ಮಿಸ್ಟರ್ ಕಾರಜೋಳ್ ಪ್ಲೀಸ್ ಗೋ ಬ್ಯಾಕ್ ಎಂದು ಒಕ್ಕೋರಲಿನಿಂದ ಹೇಳಬೇಕು ಎಂದು ಕರೆ ನೀಡಿದರು.
ಇವತ್ತಿನವರೆಗೂ ಬಿಜೆಪಿ ರಾಜ್ಯದಲ್ಲಿ ಸ್ವಂತ ಶಕ್ತಿಯಿಂದ ಅಧಿಕಾರಕ್ಕೆ ಬಂದಿಲ್ಲ. ಎರಡೂ ಬಾರಿ ಹಿಂಬಾಗಿಲಿನಿಂದಲೇ ಅಧಿಕಾರಕ್ಕೆ ಬಂದಿದ್ದಾರೆ. ವಾಮ ಮಾರ್ಗದ ಬಿಜೆಪಿಗೆ ನಾಡಿನ ಜನತೆ ತಕ್ಕ ಪಾಠ ಕಲಿಸಿದ್ದಾರೆ ಎಂದರು.
ಬಿಜೆಪಿ ರಾಜ್ಯಕ್ಕೆ ಮಾಡಿದ ದ್ರೋಹ ಒಂದೆರಡಲ್ಲ. ರಾಜ್ಯಕ್ಕೆ ಪ್ರವಾಹ ಬಂದಾಗ, ಬರಗಾಲ ಬಂದಾಗ ರಾಜ್ಯದ ಜನರ ಕಡೆ ತಿರುಗಿ ಕೂಡ ನೋಡಲಿಲ್ಲ. ರಾಜ್ಯದ ಪಾಲಿನ ಬರಗಾಲದ ಅನುದಾನವನ್ನು ಒಂದು ರೂಪಾಯಿ ಕೂಡ ಕೊಡಲಿಲ್ಲ. ರಾಜ್ಯಕ್ಕೆ ಆದ ಅನ್ಯಾಯವನ್ನು ಬಿಜೆಪಿ ಸಂಸದರು ನೆಪಕ್ಕೂ ಪ್ರಶ್ನಿಸಲಿಲ್ಲ. ರಾಜ್ಯದ ನೀರಾವರಿಗೆ ಹಣ ಕೊಡ್ತೀವಿ ಅಂತ ಕೇಂದ್ರ ಬಜೆಟ್ ನಲ್ಲೂ ಘೋಷಿಸಿದರು. ಅದರಲ್ಲಿ ಒಂದು ರೂಪಾಯಿಯನ್ನೂ ನಮ್ಮ ರಾಜ್ಯಕ್ಕೆ ಕೊಡಲಿಲ್ಲ. ಮೇಲಿಂದ ಮೇಲೆ ರಾಜ್ಯಕ್ಕೆ ದ್ರೋಹ ಮಾಡುತ್ತಿರುವ ತಕ್ಕ ಪಾಠ ಕಲಿಸಿ ಎಂದು ಮತದಾರರಿಗೆ ಕರೆನೀಡಿದರು.



