ಕಾಂಗ್ರೆಸ್ ಶತೃಗಳು ಎಲ್ಲಿದ್ದಾರೆ???

2 years ago

ಬೆಂಗಳೂರಿನಿಂದ ಹೊರಗೆ ಒಂದೆರಡು ಶಿಬಿರಗಳಲ್ಲಿ ಭಾಗವಹಿಸಿದ ನಂತರ ಗ್ರಹಿಕೆಗೆ ನಿಲುಕಿದ್ದು

1. ಸಿದ್ದರಾಮಯ್ಯ ಮತ್ತು ಬೆರಳೆಣಿಕೆಯಷ್ಟು ಸಚಿವರ ಹೊರತು ಮಿಕ್ಕ ಮಂತ್ರಿಗಳು, ಕಾಂಗ್ರೆಸ್ ಮುಖಂಡರು, ಬಹುತೇಕ ಸ್ಥಳೀಯ ಕಾರ್ಯಕರ್ತರು ಗ್ಯಾರಂಟಿಗಳ ಕುರಿತು ಮಾತನಾಡುತ್ತಿಲ್ಲ. ಈ ಕಲ್ಯಾಣ ಯೋಜನೆಗಳು ಬಡ ಕುಟುಂಬಗಳಲ್ಲಿ ತರುವ ಬದಲಾವಣೆ ಕುರಿತು ಚರ್ಚಿಸುತ್ತಿಲ್ಲ. ಬದಲಿಗೆ ಈ ಗ್ಯಾರಂಟಿಗಳಿಂದಾಗಿ ನಮ್ಮ ಕ್ಷೇತ್ರಗಳ ಅಭಿವೃದ್ಧಿ ಆಗುತ್ತಿಲ್ಲ ಎಂದು ಸ್ವತಃ ತಮ್ಮ ಸರ್ಕಾರದ ಸಿಗ್ನೇಚರ್ ಯೋಜನೆಗಳ ಕುರಿತು ಅಪಪ್ರಚಾರ ಮಾಡುತ್ತಿದ್ದಾರೆ. ಇಂತಹ ವಿಘ್ನ ಸಂತೋಷಿಗಳನ್ನು ಒಳಗೊಂಡ ಕಾಂಗ್ರೆಸ್ ಪಕ್ಷವನ್ನು ಸೋಲಿಸಲು ವಿರೋಧ ಪಕ್ಷಗಳು ಬೆವರು ಸುರಿಸಬೇಕಾಗಿಲ್ಲ.

2.  ಪ್ರಸಕ್ತ 2023-24ರ ಹಣಕಾಸು ವರ್ಷದಲ್ಲಿ ಗ್ಯಾರಂಟಿಗಳಿಗಾಗಿ ಅಂದಾಜು 30,000 ಕೋಟಿ ತಗಲುತ್ತದೆ. ಇದನ್ನು ಹಣಕಾಸು ಇಲಾಖೆ ಖಚಿತಪಡಿಸಿದೆ.

ಸಿದ್ದರಾಮಯ್ಯ ಮಂಡಿಸಿದ ಬಜೆಟ್ ವೆಚ್ಚ 3.29 ಲಕ್ಷ ಕೋಟಿ. ಇದರಲ್ಲಿ 30,000 ಕೋಟಿ ಗ್ಯಾರಂಟಿಗಳಿಗಾಗಿ ವೆಚ್ಚವಾದರೆ ಉಳಿಯುವುದು 2.99 ಲಕ್ಷ ಕೋಟಿ. ಈ ಬಾರಿ 90,000 ಕೋಟಿ ಸಾಲ ಮಾಡುವ ಅಂದಾಜಿದೆ. ಅದನ್ನು ಕಳೆದರೆ ಉಳಿಯುವುದು 2.1 ಲಕ್ಷ ಕೋಟಿ ವೆಚ್ಚ. ಇದರಲ್ಲಿ 32,000 ಕೋಟಿ ಅಬ್ಕಾರಿ ತೆರಿಗೆಯಿಂದ ರೆವಿನ್ಯೂ ಸಂಗ್ರಹವಾಗುತ್ತದೆ. ಇದನ್ನು ಕಳೆದರೆ 1.28  ಲಕ್ಷ ಕೋಟಿ.

ಕರ್ನಾಟಕ 4 ಲಕ್ಷ ಕೋಟಿ ತೆರಿಗೆ ಸಂಗ್ರಹಿಸಿ ಕೊಡುತ್ತದೆ. ಆದರೆ ನಮಗೆ  ಸಿಗುತ್ತಿರುವುದು ಕೇವಲ 50,000 ಕೋಟಿ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

ಅಂದರೆ ಉಳಿದ 3.5 ಲಕ್ಷ ಕೋಟಿ ಅಥವಾ ಅದರ ಅರ್ಧದಷ್ಟು 1.75 ಲಕ್ಷ ಕೋಟಿ ಕೊಟ್ಟಿದ್ದರೆ 1.28 ಲಕ್ಷ ಕೋಟಿ ವೆಚ್ಚ ಕಳೆದು 50,000 ಕೋಟಿ ಇವರ ಕ್ಷೇತ್ರದ ಸಣ್ಣಪುಟ್ಟ ಅಭಿವೃದ್ಧಿಗೆ ಬಳಸಬಹುದಾಗಿತ್ತು.

ಇಂತಹ ಸಂದರ್ಭದಲ್ಲಿ ನಮಗೆ ಕರ್ನಾಟಕದ ಪಾಲಿನ ಮೊತ್ತ ಕೊಡಬೇಕು ಎಂದು ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರು ಹಕ್ಕೊತ್ತಾಯ ಮಾಡಬೇಕಾಗಿತ್ತು. ದಿನನಿತ್ಯ ಕೇಂದ್ರದ ಕಚೇರಿಗಳ ಮುಂದೆ ಶಾಂತಿಯುತ ಮುಷ್ಕರ ನಡೆಸಬೇಕಿತ್ತು. ಸಾಮಾಜಿಕ ಜಾಲತಾಣಗಳಲ್ಲಿ ಅಭಿಯಾನ ಮಾಡಬೇಕಿತ್ತು. ಏನೆಲ್ಲ ಮಾಡಬಹುದಿತ್ತು? ಆದರೆ ಇವರು ಮಾಡುತ್ತಿರುವುದೇನು?

ತಮ್ಮ ಊಟದ ತಟ್ಟೆಗೆ ತೂತು ಹಾಕುತ್ತಿದ್ದಾರೆಯೇ? ದುಷ್ಮನ್ ಕಿದರ್ ಹೈ??

– ಬಿ. ಶ್ರೀಪಾದ ಭಟ್, ಸಾಮಾಜಿಕ ಹೋರಾಟಗಾರರು

Leave a Reply