ಬಿಜೆಪಿ ಸರ್ಕಾರದ ಹಲವು ಭ್ರಷ್ಟಚಾರಗಳು ಪ್ರತಿದಿನ ಹೊರ ಬರುತ್ತಿವೆ: ಡಿಕೆಶಿ

3 years ago

ಬೆಂಗಳೂರು: ವಿಧಾನಸಭೆ ಚುನಾವಣೆಗೆ ರಂಗ ಸಜ್ಜಾಗುತ್ತಿರುವ ಬೆನ್ನಲ್ಲೇ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಎರಡು ಕಡೆ ಸ್ಪರ್ಧೆ ಮಾಡಲಿದ್ದಾರೆಂಬ ಚರ್ಚೆ ಆರಂಭವಾಗಿದೆ. ಇದಕ್ಕೆ ತೆರೆ ಎಳೆದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕಾಂಗ್ರೆಸ್ನಲ್ಲಿ ಒಬ್ಬರಿಗೆ ಒಂದೇ ಕ್ಷೇತ್ರ ಎರಡೆರಡು ಕಡೆ ಸ್ಪರ್ಧಿಸಲು ಯಾರಿಗೂ ಅವಕಾಶವಿಲ್ಲ ಎಂದು ಸ್ಪಷ್ಟ ಪಡಿಸಿದ್ದಾರೆ.

ನೆಲಮಂಗಲ ನಗರಸಭೆಯ ಹಲವು ಪ್ರಮುಖ ಜೆಡಿಎಸ್ ನಾಯಕರನ್ನು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎರಡು ಕ್ಷೇತ್ರಗಳಲ್ಲಿ ಟಿಕೆಟ್ ನೀಡುವಂತೆ ಯಾರೂ ಅರ್ಜಿ ಹಾಕಿಲ್ಲ. ಐದಾರು ಮಂದಿ ಯಾವ ಕ್ಷೇತ್ರದಲ್ಲಾದರೂ ಅವಕಾಶ ಕೊಡಿ ಎಂದು ಕೇಳಿದ್ದಾರೆ. ಅರ್ಜಿ ಹಾಕಿರುವವರು ಒಂದು ಕ್ಷೇತ್ರಕ್ಕಷ್ಟೆ ಎರಡು ಲಕ್ಷ ರೂಪಾಯಿಗಳ ಬಾಂಡ್ ಸಲ್ಲಿಸಿದ್ದಾರೆ. ಕಾಂಗ್ರೆಸ್ನಲ್ಲಿ ಯಾರಿಗೂ ಎರಡು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಲು ಅವಕಾಶ ಇಲ್ಲ ಎಂದು ಹೇಳಿದರು.

ಟಿಕೆಟ್ ಹಂಚಿಕೆಯಲ್ಲಿ ನಮ್ಮಲ್ಲಿ ಯಾವ ಗೊಂದಲವೂ ಇಲ್ಲ. ಫೆಬ್ರವರಿ 2ರಂದು ಸಭೆ ರಾಜ್ಯ ಚುನಾವಣಾ ಸಮಿತಿ ಸಭೆ ನಡೆಯಲಿದೆ, ನಂತರ ಪರಿಶೀಲನಾ ಸಮಿತಿ ಸಭೆ ನಡೆದು ಕೆಲ ಕ್ಷೇತ್ರಗಳ ಅಭ್ಯರ್ಥಿಗಳನ್ನು ಶೀಘ್ರವೇ ಘೋಷಣೆ ಮಾಡುತ್ತೇವೆ. ಇನ್ನೂ ಕೆಲವು ಕ್ಷೇತ್ರಗಳ ಮುಖಂಡರಿಗೆ ಕಿವಿಯಲ್ಲಿ ಹೇಳಿ ಕಳುಹಿಸುತ್ತೇವೆ ಎಂದರು.

ಚುನಾವಣೆ ಸಮೀಪಿಸುತ್ತಿರುವಂತೆ ಬಿಜೆಪಿ ಸರ್ಕಾರದ ಹಲವು ಭ್ರಷ್ಟಚಾರಗಳು ಪ್ರತಿದಿನ ಹೊರ ಬರುತ್ತಿವೆ. ಅದರಿಂದ ಬೇಸತ್ತ ಜನ ಕಾಂಗ್ರೆಸ್ ಪಕ್ಷಕ್ಕೆ ಭವಿಷ್ಯ ಇದೆ ಎಂದು ಸೇರ್ಪಡೆಯಾಗುತ್ತಿದ್ದಾರೆ. ಎಲ್ಲರೂ ಬೇಷರತ್ ಆಗಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದರು.

ಜೆಡಿಎಸ್-ಬಿಜೆಪಿಯಿಂದ ಹಲವು ಮಂದಿ ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ. ನೆಲಮಂಗಲದಲ್ಲಿ ಈ ಬಾರಿ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲಲಿದ್ದಾರೆ. ಬಿಜೆಪಿಯ ವಿಧಾನಪರಿಷತ್ ಸದಸ್ಯ ಎಚ್.ವಿಶ್ವನಾಥ್ ಕಾಂಗ್ರೆಸ್ ಸೇರ್ಪಡೆಗೆ ದಿನಾಂಕ ನಿಗದಿಯಾಗಿದೆ ಎಂದು ತಿಳಿಸಿದರು.

ಬಿಜೆಪಿ ಸರ್ಕಾರದಲ್ಲಿ ಕೊರೊನಾ ಕಾಲಘಟ್ಟದಲ್ಲಿ ಹಾಸಿಗೆ ಹಗರಣ ನಡೆಸಿದರು. ಹೆಣದ ಮೇಲೆ ಹಣ ತಿಂದರು. ಚಿತ್ರದುರ್ಗದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಲಂಚ ಪಡೆಯುವ ವಿಡಿಯೋ ಬಹಿರಂಗವಾಗಿದೆ. ಗುತ್ತಿಗೆದಾರರು ಲಂಚ ಕೊಡಲಾಗದೆ ದಯಾಮರಣ ಕೇಳಿರುವುದು, ಪಿಎಸ್ಐ ನೇಮಕಾತಿ ಹಗರಣ, ಉಪಕುಲಪತಿ ಹುದ್ದೆ ಗಿಟ್ಟಿಸಲು ನಾಲ್ಕು ಕೋಟಿ ಕೊಡಬೇಕಿದೆ ಎಂದು ಬಿಜೆಪಿ ಸಂಸದ ಪ್ರತಾಪ್ ಸಿಂಹ ಹೇಳಿರುವುದು ಸೇರಿದಂತೆ ಸಾಧನೆಗಳನ್ನು ಬಿಜೆಪಿ ಮಾಡಿದೆ ಎಂದು ಲೇವಡಿ ಮಾಡಿದರು.

ಬಿಜೆಪಿ ಸರ್ಕಾರ ಪಂಚಮಸಾಲಿ, ಒಕ್ಕಲಿಗರೂ, ಪರಿಶಿಷ್ಟ ಜಾತಿ ಮತ್ತು ಪಂಗಡದ ಸೇರಿದಂತೆ ಎಲ್ಲಾ ಸಮುದಾಯಗಳ ಮೀಸಲಾತಿ ವಿಷಯದಲ್ಲಿ ಮೋಸ ಮಾಡುತ್ತಿದೆ. ಸುಪ್ರೀಂಕೋರ್ಟ್ ತೀರ್ಪಿನ ಪ್ರಕಾರ ಸರ್ಕಾರ ಹೇಳುವ ಮಾದರಿಯಲ್ಲಿ ಮೀಸಲಾತಿ ನೀಡಲು ಸಾಧ್ಯವಿಲ್ಲ. ಸುಪ್ರೀಂಕೋರ್ಟ್ ತೀರ್ಪು ಮತ್ತು ಕಾನೂನು ಎಲ್ಲರಿಗೂ ಗೋತ್ತಿದೆ. ಮುಖ್ಯಮಂತ್ರಿಗೂ ಇದು ಗೊತ್ತು. ಅದಕ್ಕಾಗಿಯೇ ಒಕ್ಕಲಿಗರಿಗೆ ಮೀಸಲಾತಿ ಘೋಷಣೆ ಮಾಡುವ ದಿನ ಖುದ್ದು ಮುಖ್ಯಮಂತ್ರಿಯವರು ಬರಲಿಲ್ಲ. ಬಲದಾಗಿ ಪ್ರಮುಖ ಘೋಷಣೆಯನ್ನು ಕಾನೂನು ಸಚಿವರ ಮೂಲಕ ಹೇಳಿಸಿದರು. ಅದರ ಅರ್ಥ ಮೀಸಲಾತಿ ನೀಡಲು ಸಾಧ್ಯವಿಲ್ಲ ಎಂಬುದು ಸ್ಪಷ್ಟ. ಬಿಜೆಪಿ ಅನಗತ್ಯವಾಗಿ ಎಲ್ಲಾ ಕಡೆ ಸುಳ್ಳು ಹೇಳಿಕೊಂಡು, ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಆಪಾದಿಸಿದರು.

Leave a Reply