ತಪ್ಪು ಮಾಹಿತಿ ಬೇರೂರುವ ಬಗೆ
ನನ್ನ ಮಗನ ಕನ್ನಡ ನೋಟ್ ಬುಕ್ ಚೆಕ್ ಮಾಡುತ್ತಿದ್ದೆ. ಅದರಲ್ಲಿ ಕಿಟ್ಟೆಲ್ ರಚಿಸಿದ ನಿಘಂಟಿನ ಹೆಸರೇನು? ಎಂಬ ಪ್ರಶ್ನೆ ಇತ್ತು. ಅದಕ್ಕೆ ಉತ್ತರ ಇಂಗ್ಲಿಷ್ ಕನ್ನಡ ನಿಘಂಟು ಎಂದಿತ್ತು. ತಕ್ಷಣ ಅದನ್ನು ಬರೆಸಿದ ಮೇಷ್ಟರ ಬಗ್ಗೆ ಸಿಟ್ಟು ಬಂತು. ನಂತರ ಪಠ್ಯ ಪುಸ್ತಕ ತೆರೆದು ನೋಡಿದೆ. ಅಲ್ಲಿ ಕೂಡ ಇಂಗ್ಲಿಷ್ ಕನ್ನಡ ನಿಘಂಟು ಎಂದೇ ಇತ್ತು. ಅಂದರೆ ಪಠ್ಯ ಪುಸ್ತಕದಲ್ಲಿ ಕೂಡ ಹಾಗೆ ಇತ್ತು.

ಈ ಪಠ್ಯ ಪುಸ್ತಕ ರಚಿಸಿದ ಪರಿಷ್ಕರಣೆ ಮಾಡಿದ ಜನರು ಇಂತಹ ತಪ್ಪು ಮಾಹಿತಿ ನುಸುಳದಂತೆ ನೋಡಿಕೊಳ್ಳಬೇಕು. ಅಲ್ಲಿನ ಎಚ್ಚರ ತಪ್ಪುವಿಕೆ ಮೇಷ್ಟರನ್ನು ದಿಕ್ಕು ತಪ್ಪಿಸಿದೆ. ನಿಜ ಎಂದರೆ ಇದನ್ನು ಮಕ್ಕಳಿಗೆ ಬರೆಸಿದ ಮೇಸ್ಟ್ರು ತಿದ್ದಿ ಸರಿಯಾಗಿ ಬರೆಸಬೇಕಿತ್ತು. ಅದನ್ನು ಅವರೂ ಸರಿ ಮಾಡಿಲ್ಲ. ಅಂದ್ರೆ ಅವರಿಗೂ ಅದು ಗೊತ್ತಿಲ್ಲ! ಪರಿಣಾಮ ಮಕ್ಕಳು ತಪ್ಪು ಮಾಹಿತಿಯೇ ಸರಿ ಎಂದು ಕಲಿಯುತ್ತಿದ್ದಾರೆ. ಮಗನಿಗೆ ಅದು ಇಂಗ್ಲಿಷ್ ಕನ್ನಡ ನಿಘಂಟು ಅಲ್ಲ; “ಕನ್ನಡ ಇಂಗ್ಲಿಷ್ ನಿಘಂಟು” ಎಂದೆ. ನಂಬಲಿಲ್ಲ. ಕೊನೆಗೆ ಪುಸ್ತಕ ತೆಗೆದು ಮುಂದಿಟ್ಟು ತೋರಿಸಿದ ನಂತರ ಅಷ್ಟೇ ಒಪ್ಪಿಕೊಂಡ.

ಕಿಟ್ಟೆಲ್ ಕೃತಿ ಮುಟ್ಟಿ ಅದರ ಚರಿತ್ರೆ ಮಹತ್ವ ಕೇಳಿ ರೋಮಾಂಚನಗೊಂಡು ಕೆಲವು ಪುಟ ಓದಿದ.
ಕೊನೆಗೆ ತಪ್ಪು ಅರಿವಾಗಿ ನೋಟ್ ಪುಸ್ತಕದ ತಪ್ಪು ಸರಿ ಪಡಿಸಿಕೊಂಡ
ಉಳಿದ ಲಕ್ಷಾಂತರ ಮಕ್ಕಳ ಕತೆ?

ಈ ಸರಿ ಮಾಹಿತಿ ಯಾಕೆ ಮುಖ್ಯ ಎಂದರೆ ಈ ಪ್ರಶ್ನೆಯನ್ನು ಅನೇಕ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳುತ್ತಾರೆ. ತಪ್ಪು ಮಾಹಿತಿಯನ್ನು ನಿಜ ಎಂದು ಕಲಿತವರ ಕತೆ ಏನು?
ಹಾಗಾಗಿ ಶಾಲೆಗಳಲ್ಲಿ ಮಕ್ಕಳಿಗೆ ಕನ್ನಡ ಕಲಿಸುವವರು ಈ ದೋಷವನ್ನು ಸರಿಪಡಿಸಿಕೊಂಡು ಕಲಿಸುವುದು ಒಳಿತು.
- ಡಾ.ರಂಗನಾಥ ಕಂಟನಕುಂಟೆ, ಪ್ರಾಧ್ಯಾಪಕರು




