ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಕುರಿತು ಮಾತನಾಡುವ ಬಹುತೇಕರು ಅವರು ಹೇಳಿರುವ Educate, Unite ಮತ್ತು Agitate ಪದಗಳನ್ನು ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ವಿವರಿಸಿದ್ದಾರೆ. ಆರಂಭದಲ್ಲಿ ಅಂಬೇಡ್ಕರ್ ಅವರ ಚಿಂತನೆಯನ್ನು ಸೂತ್ರ ರೂಪದಲ್ಲಿ ಸರಳವಾಗಿ ವಿವರಿಸುವ ಸಲುವಾಗಿ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಅರ್ಥವನ್ನು ಬಳಸಲಾಗುತ್ತಿದೆ. ಆದರೆ ವಾಸ್ತವದಲ್ಲಿ ಇದರ ಅರ್ಥವನ್ನು ವಿಸ್ತರಿಸಬೇಕಿದೆ. ಜೊತೆಗೆ ಇದರ ನಿಜವಾದ ಅರ್ಥವನ್ನು ವಿವರಿಸಬೇಕಿದೆ.
ದಿನಾಂಕ 20.07.1942ರಂದು ಬಾಬಾಸಾಹೇಬ್ ಅಂಬೇಡ್ಕರ್ ಅವರಿಗೆ ಅಖಿಲ ಭಾರತ ನಿಮ್ನ ವರ್ಗಗಳವರ ಸಮ್ಮೇಳನದ ಸ್ವಾಗತ ಸಮಿತಿಯವರು ಒಂದು ಬಿನ್ನವತ್ತಳೆಯನ್ನು ಅರ್ಪಿಸಿದರು. ಬಾಬಾಸಾಹೇಬರಿಗೆ 50 ವರ್ಷಗಳು ತುಂಬಿದ ಸಮಯದಲ್ಲಿ ನಿಮ್ನ ವರ್ಗಗಳಿಗಾಗಿ ತಮ್ಮ ಜೀವನವನ್ನು ಮುಡಿಪಾಗಿಟ್ಟ ವಿಷಯವನ್ನು ಈ ಬಿನ್ನವತ್ತಳೆಯಲ್ಲಿ ಅಭಿಮಾನ ಪೂರ್ವಕವಾಗಿ ದಾಖಲಿಸಲಾಗಿದೆ. ನಿಮ್ನ ವರ್ಗದವರ, ದಲಿತರ ಪರವಾಗಿ ಅಂಬೇಡ್ಕರ್ ಅವರು ತಳೆದ ನಿಲುವಿನಿಂದಾಗಿ ಮೇಲ್ಜಾತಿಯವರ ಪರವಾಗಿ ವಾದ ಮಾಡುವ ಅವಕಾಶದಿಂದ ವಂಚಿತವಾಗಬೇಕಾದ ಸಂದರ್ಭದಲ್ಲಿ ಕೂಡ ತಳಸಮುದಾಯಗಳು, ಶೋಷಿತರ ದನಿಯಾಗಿ ಅಂಬೇಡ್ಕರ್ ಅವರು ಧೃಡವಾಗಿ ನಿಂತ ಸಂಗತಿಯನ್ನು ಇದೇ ಬಿನ್ನವತ್ತಳೆಯಲ್ಲಿ ಸಮರ್ಥವಾಗಿ ವಿವರಿಸಲಾಗಿದೆ. ದಲಿತರ, ದಮನಿತರ, ಶೋಷಿತರ, ನಿಮ್ನ ವರ್ಗದವರ ಪರವಾಗಿ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಸಮರ್ಪಣ ಭಾವನೆಯಿಂದ ಅವಿಶ್ರಾಂತವಾಗಿ ದುಡಿದ ಸಂಗತಿಯನ್ನು ಮುಕ್ತಕಂಠದಿಂದ ಶ್ಲಾಘಿಸಲಾಗಿದೆ.
ಈ ಬಿನ್ನವತ್ತಳೆಯನ್ನು ಸ್ವೀಕರಿಸಿ ಮಾತಾಡಿದ ಬಾಬಾಸಾಹೇಬರು, “ನಿಮಗೆ ನನ್ನ ಅಂತಿಮವಾದ ಬುದ್ಧಿವಾದ ಏನೆಂದರೆ ನೀವು ವಿದ್ಯಾವಂತರಾಗಬೇಕು, ಚಳುವಳಿ ಮಾಡಬೇಕು ಮತ್ತು ಸಂಘಟಿತರಾಗಬೇಕು; ನಿಮ್ಮಲ್ಲಿ ನಿಮಗೆ ನಂಬಿಕೆ ಇರಲಿ. ನಿರಾಶರಾಗಬೇಡಿ. ನೀವು ನನ್ನೊಟ್ಟಿಗೆ ಇರುವ ಹಾಗೆಯೇ, ನಾನೂ ಯಾವಾಗಲೂ ನಿಮ್ಮೊಟ್ಟಿಗೆ ಇರುತ್ತೇನೆ” (ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರ ಸಮಗ್ರ ಬರೆಹಗಳು ಮತ್ತು ಭಾಷಣಗಳು, ಸಂಪುಟ 18, ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರ, ಬೆಂಗಳೂರು -560056, 2018, ಪು. 492) ಎಂದು ಭರವಸೆ ನೀಡಿದ್ದಾರೆ. “ವಿದ್ಯಾವಂತರಾಗಿ, ಚಳುವವಳಿ ಮಾಡಿ, ಸಂಘಟಿತರಾಗಿ, ನಂಬಿಕೆ ಇಟ್ಟುಕೊಳ್ಳಿ ಮತ್ತು ನಿರಾಸೆ ಹೊಂದದಿರಿ” ಎಂಬ ಲೇಖನದಲ್ಲಿ ಈ ವಿಷಯವನ್ನು ನೀವು ಗಮನಿಸಬಹುದು.
ಬಾಬಾಸಾಹೇಬರು ಹೇಳಿದ “ನೀವು ವಿದ್ಯಾವಂತರಾಗಬೇಕು, ಚಳುವಳಿ ಮಾಡಬೇಕು ಮತ್ತು ಸಂಘಟಿತರಾಗಬೇಕು” ಎಂಬುದನ್ನು ಸೂತ್ರರೂಪದಲ್ಲಿ ಮಂಡಿಸುವ ಸಮಯದಲ್ಲಿ ಇಂಗ್ಲಿಷ್ ನಲ್ಲಿ Educate, Unite ಮತ್ತು Agitateಗಳನ್ನು ಬಳಸಲಾಗುತ್ತಿದೆ. ಇದನ್ನು ಇಂಗ್ಲಿಷ್ ನಿಂದ ಕನ್ನಡ ಅಥವಾ ಬೇರಾವುದೇ ಭಾಷೆಗೆ ಅನುವಾದಿಸಿದರೆ Educate = ಶಿಕ್ಷಣ ನೀಡಿ, Unite = ಸಂಘಟನೆ ಮಾಡಿ ಮತ್ತು Agitate = ಹೋರಾಟ ಮಾಡಿ ಎಂದಾಗುತ್ತದೆ. ಆದರೆ, ಇದರ ಬದಲಾಗಿ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂದು ಮಾತ್ರ ಬಳಸಲಾಗುತ್ತಿದೆ. ಇದೇ ರೀತಿಯಲ್ಲಿ ಈ ಪರಿಭಾಷೆಗಳನ್ನು ಬಳಸುವುದು ಬಹುತೇಕ ರೂಢಿಯಲ್ಲಿದೆ. ಯಾವುದೇ ಸಭೆ, ಸಮಾರಂಭಗಳು ಮತ್ತು ಬ್ಯಾನರ್ ಮೊದಲಾದವುಗಳಲ್ಲಿ ಇದೇ ರೀತಿಯಲ್ಲಿ ಶಿಕ್ಷಣ, ಸಂಘಟನೆ, ಹೋರಾಟ ಪದಗಳನ್ನೇ ಅದೇ ಅರ್ಥದಲ್ಲಿ ಬಳಸಲಾಗುತ್ತಿದೆ. ಆದರೆ ನಿಜಕ್ಕೂ ಭಾರತರತ್ನ ಡಾ.ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿರುವುದು ಈ ಅರ್ಥದಲ್ಲಲ್ಲ; ಬದಲಾಗಿ ಶಿಕ್ಷಣವನ್ನು ನೀಡಿ, ಸಂಘಟಿತರಾಗಿ ಮತ್ತು ಹೋರಾಡಿ ಎಂಬರ್ಥದಲ್ಲಿ ಅವರು 20.07.1942ರಂದು ಮಾತುಗಳನ್ನು ಆಡಿದ್ದಾರೆ.
Educate, Unite ಮತ್ತು Agitateಗಳನ್ನು ‘ಕ್ರಿಯಾಪದ’ (adjective)ಗಳಾಗಿ ಅನುವಾದಿಸಿಕೊಳ್ಳುವುದು ಇಂದು ಎಲ್ಲ ವರ್ಗಗಳಿಗೂ ಅನಿವಾರ್ಯವಾಗಿದೆ. ಏಕೆಂದರೆ, ಇವುಗಳ ವ್ಯಾಪಕಾರ್ಥವನ್ನು ನಾವು ಕ್ರಿಯಾಶೀಲವಾಗಿ ಜಾರಿಗೆ ತರಲು ಅನೇಕ ಅಡೆತಡೆಗಳಿವೆ. ವಿಶೇಷವಾಗಿ ಸಂವಿಧಾನದತ್ತವಾಗಿ ಸಿಗಬೇಕಾದ ಸೌಲಭ್ಯಗಳಿಂದ ಬಹುಸಂಖ್ಯಾತರು ವಂಚಿತರಾಗುತ್ತಿದ್ದಾರೆ. ಸಂವಿಧಾನದ ಅಡಿಯಲ್ಲಿ ಅಧಿಕಾರಕ್ಕೆ ಬರುವ ಆಡಳಿತಾರೂಢ ಪಕ್ಷ, ರಾಜಕಾರಣಿ ಮತ್ತು ಸರ್ಕಾರಗಳು ಸಂವಿಧಾನವನ್ನು ಬದಲಿಸುವ ಹೇಳಿಕೆ ನೀಡುತ್ತವೆ ಮತ್ತು ಸಂವಿಧಾನಕ್ಕೆ ವಿರುದ್ಧವಾದ ನಡೆಯನ್ನು ನಿರಂತರವಾಗಿ ಅನುಸರಿಸುತ್ತಿವೆ. ಇಂತಹ ಬಿಕ್ಕಟ್ಟಿನ ಸಮಯದಲ್ಲಿ ಅಂಬೇಡ್ಕರ್ ಅವರ ಪದಗಳ ಬಳಕೆಯನ್ನು ಸಂದರ್ಭಸಹಿತ ಅರ್ಥಮಾಡಿಕೊಳ್ಳಬೇಕಾದ ಅಗತ್ಯ ಹಿಂದೆಂದಿಗಿಂತ ಇಂದು ಅತ್ಯಂತ ತುರ್ತಾಗಿ ಆಗಬೇಕಿದೆ.
ಇಂಗ್ಲಿಷ್ ಡಿಕ್ಷನರಿಯಲ್ಲಿ ಕೂಡ Educate, Unite ಮತ್ತು Agitate ಈ ಪದಗಳಿಗೆ ಶಿಕ್ಷಣ, ಸಂಘಟನೆ ಮತ್ತು ಹೋರಾಟ ಎಂಬ ಸೀಮಿತಾರ್ಥವಿಲ್ಲ. Educate = ಶಿಕ್ಷಣ ನೀಡಿ, Unite = ಸಂಘಟಿತರಾಗಿ ಮತ್ತು Agitate = ಹೋರಾಟ ಮಾಡಿ ಎಂಬರ್ಥವಿದೆ.
Oxford dictionaryಯಲ್ಲಿ
educate, v.= transitive. To teach (a child) a programme of various academic and non- academic subjects, typically at a school; to provide with a formal education.
educate, adj. = educated, adj. A.1a. Also with modifying adverb.
unite, v.= transitive. To combine or join (something) with (also to) another; to bring or put together to form a single entity; to cause to be one.
agitate, v. = transitive. To disturb, perturb, or stir up (the mind, emotions, etc.).
agitate, adj. = Moved backwards and forwards repeatedly; shaken. ಎಂಬ ಅರ್ಥಗಳನ್ನು ನೀಡಲಾಗಿದೆ.
ಇಲ್ಲಿ ಒಂದು ಪ್ರಶ್ನೆ ಎದುರಾಗುತ್ತದೆ. ಯಾರಿಗೆ ಶಿಕ್ಷಣ ಕೊಡಬೇಕು, ಯಾರು ಸಂಘಟಿತರಾಗಬೇಕು ಮತ್ತು ಯಾರು ಹೋರಾಟ ಮಾಡಬೇಕು? ಈ ಪ್ರಶ್ನೆಗೆ ಉತ್ತರವನ್ನು ನಾವೆಲ್ಲ ಕಂಡುಕೊಳ್ಳಬೇಕಿದೆ.
Educate – ವಿದ್ಯಾವಂತರಾಗಿ (ಶಿಕ್ಷಣ)
ಇಲ್ಲಿ Educate – ಎಂಬ ಪದವನ್ನು ಶಿಕ್ಷಣ ಎಂಬುದರ ಬದಲಾಗಿ ವಿದ್ಯಾವಂತರಾಗಿ ಎಂದೇ ಗ್ರಹಿಸಬೇಕಿದೆ. ಅಂಬೇಡ್ಕರ್ ಅವರ ದೃಷ್ಟಿಯಲ್ಲಿ ಶಿಕ್ಷಣ ನೀಡಬೇಕಿರುವುದು ಸಾವಿರಾರು ವರ್ಷಗಳಿಂದ ಶಿಕ್ಷಣದಿಂದ ವಂಚಿತ ಸಮುದಾಯಗಳಿಗೆ ಎಂಬುದು ಸ್ಪಷ್ಟ. ಮನುಸ್ಮೃತಿಯ ಪ್ರಕಾರ, ದೇಶದಲ್ಲಿ ಅಸ್ತಿತ್ವದಲ್ಲಿರುವ ಶೇ.85ರಷ್ಟು ಪ್ರಮಾಣದಲ್ಲಿರುವ ಶೂದ್ರರು, ಮಹಿಳೆಯರು, ದಲಿತರು, ಆದಿವಾಸಿಗಳಿಗೆ ಶಿಕ್ಷಣ ಕೊಡುವಂತಿಲ್ಲ. ಮನುಧರ್ಮಶಾಸ್ತ್ರ ಯಾರಿಗೆ ಶಿಕ್ಷಣವನ್ನು ನಿರಾಕರಿಸಿತ್ತೋ ಅವರಿಗೆ ಶಿಕ್ಷಣವನ್ನು ನೀಡಿ ಎಂಬುದು ಅಂಬೇಡ್ಕರ್ ಅವರು ಹೇಳಿರುವ ಅರ್ಥ.
Unite – ಸಂಘಟಿತರಾಗಿ (ಸಂಘಟನೆ)
ಇಲ್ಲಿ Unite – ಎಂಬ ಪದವನ್ನು ಸಂಘಟನೆ ಎಂಬುದರ ಬದಲಾಗಿ ಸಂಘಟಿತರಾಗಿ ಎಂದೇ ಗ್ರಹಿಸಬೇಕಿದೆ. ಸಂಘಟನೆ ಎಂಬುದು ಕೂಡ ಸೀಮಿತಾರ್ಥದಲ್ಲಿ ಬಳಕೆಯಾಗುತ್ತಿದೆ. ಇಲ್ಲಿ ಸಂಘಟಿತರಾಗಿ ಎಂಬುದರಲ್ಲಿ ಯಾರು ಸಂಘಟಿತರಾಗಬೇಕು? ಎಂಬ ಪ್ರಶ್ನೆ ಮುಖ್ಯವಾದುದು. ಏಕೆಂದರೆ, ಭಾರತದಲ್ಲಿ ಶಿಕ್ಷಣದಿಂದ ವಂಚಿತ ಸಮುದಾಯಗಳಾದ ಶೂದ್ರರು, ಮಹಿಳೆಯರು, ದಲಿತರು, ಆದಿವಾಸಿಗಳು ಸಂಘಟನೆಯಾಗಬೇಕು ಎಂಬುದು ಬಾಬಾಸಾಹೇಬರ ಸೂಚಿತಾರ್ಥ.
Agitate – ಚಳುವಳಿ ಮಾಡಿ (ಹೋರಾಟ)
Agitate – ಎಂದರೆ ‘ಹೋರಾಟ’ ಮಾತ್ರವಲ್ಲ; ಬದಲಿಗೆ ಚಳುವಳಿ ಮಾಡಿ ಎಂದೇ ಗ್ರಹಿಸಬೇಕಿದೆ. ಇಲ್ಲಿ ಚಳುವಳಿ ಮಾಡಬೇಕಿರುವವರು ಯಾರು? ಎಂಬ ಪ್ರಶ್ನೆ ಮುಖ್ಯವಾಗಿದೆ. ಏಕೆಂದರೆ ಸಾವಿರಾರು ವರ್ಷಗಳಿಂದ ಮನುಧರ್ಮಶಾಸ್ತ್ರದ ಆಧಾರದಲ್ಲಿ ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಸಮುದಾಯ ಆಸ್ತಿ, ಉದ್ಯೋಗ, ವ್ಯವಹಾರ, ಅಧಿಕಾರ ಮೊದಲಾದವುಗಳನ್ನು ತಮ್ಮ ಕೈವಶಮಾಡಿಕೊಂಡಿವೆ. ಇವುಗಳಿಂದ ವಂಚಿತವಾದ ಶೂದ್ರರು, ಮಹಿಳೆಯರು, ದಲಿತರು ಮತ್ತು ಆದಿವಾಸಿಗಳು ಚಳುವಳಿಯನ್ನು ಮಾಡಿಯೇ ತಮ್ಮ ಹಕ್ಕುಗಳನ್ನು ಪಡೆಯಬೇಕಿದೆ.
ಮನುಸ್ಮೃತಿಯಲ್ಲಿ “ಶೂದ್ರನಿಗೆ ವಿದ್ಯೆ ಕಲಿಸಬಾರದು. ಯಜ್ಞದ ಹವಿಸ್ಸಿನ ಶೇಷವನ್ನು ಕೊಡಬಾರದು. ಧರ್ಮೋಪದೇಶ ಮಾಡಬಾರದು. ವ್ರತಾಚರಣೆ ಹೇಳಿಕೊಡಬಾರದು” (ಅ- 4:80) ಎಂದು ಶಾಸನ ವಿಧಿಸಲಾಗಿದೆ.
ಜೊತೆಗೆ, “ಹಂದಿಯು ಮೂಸುವುದರಿಂದ, ಕೋಳಿಯ ರೆಕ್ಕೆಯ ಗಾಳಿ ತಾಕುವುದರಿಂದ, ನಾಯಿ ನೋಡುವುದರಿಂದ ಹಾಗೂ ಶೂದ್ರನ ಸ್ಪರ್ಶದಿಂದ ಬ್ರಾಹ್ಮಣ ಭೋಜನವು ನಾಶವಾಗಿ ಹೋಗುತ್ತದೆ” (ಅ- 3:241) ಎನ್ನುವ ಮೂಲಕ ಶೂದ್ರರು ಹಂದಿ, ಕೋಳಿ, ನಾಯಿ ಸಮಾನ ಎಂದು ಹೇಳಲಾಗಿದೆ.
ಇನ್ನು ಮಹಿಳೆಯರಿಗೆ ಮನುಸ್ಮೃತಿಯಲ್ಲಿ ಕೊಟ್ಟಿರುವ ಗೌರವವೆಂದರೆ; “ಸ್ತ್ರೀಯರಿಗೆ ಮಂತ್ರಪೂರ್ವಕವಾದ ಧರ್ಮ ಸಂಸ್ಕಾರಗಳಿಲ್ಲ ಎಂದು ಶಾಸ್ತ್ರ ಹೇಳುತ್ತದೆ. ಇಂದ್ರಿಯಗಳನ್ನು ನಿಗ್ರಹಿಸಲು ಮಂತ್ರಸಾಧನಗಳು ಸ್ತ್ರೀಯರಿಗೆ ಹೇಳಲ್ಪಟ್ಟಿಲ್ಲವಾದ್ದರಿಂದ ಅವರು ಸದಾ ಅಶುದ್ಧರಾಗಿಯೇ ಇರುತ್ತಾರೆ ಎಂಬುದು ಧರ್ಮದ ವಿಚಾರವಾಗಿದೆ” (ಅ: 9:19) ಎಂಬುದಾಗಿದೆ.
ಈ ಎಲ್ಲ ಕಾರಣಗಳಿಂದ ಶೂದ್ರರು (ಬ್ರಾಹ್ಮಣ, ಕ್ಷತ್ರಿಯ, ವೈಶ್ಯರನ್ನು ಹೊರತುಪಡಿಸಿ ದೈಹಿಕ ಶ್ರಮವನ್ನು ಆಧರಿಸಿ ಜೀವನ ನಡೆಸುವವರು ಶೂದ್ರರು. ಲಿಂಗಾಯತರು, ಒಕ್ಕಲಿಗರು, ಕುರುಬರು ಮತ್ತು ಇತರ ದೈಹಿಕ ಶ್ರಮ ಆಧರಿಸಿ ದುಡಿಯುವವರೆಲ್ಲರನ್ನೂ ಈ ವರ್ಗಕ್ಕೆ ಸೇರಿಸಲಾಗಿದೆ.), ಮಹಿಳೆಯರು, ದಲಿತರು, ಆದಿವಾಸಿಗಳು ಅಕ್ಷರ ಕಲಿಯುವಂತಿಲ್ಲ, ಆಸ್ತಿಯನ್ನು ಹೊಂದುವಂತಿಲ್ಲ, ಅಧಿಕಾರವನ್ನು ಗಳಿಸುವಂತಿಲ್ಲ, ಧನಸಂಗ್ರಹವನ್ನು ಮಾಡುವಂತಿಲ್ಲ, ಒಳ್ಳೆಯ ಬಟ್ಟೆಗಳನ್ನು ಮತ್ತು ಬಂಗಾರ, ಬೆಳ್ಳಿ ಆಭರಣಗಳನ್ನು ಧರಿಸುವಂತಿಲ್ಲ ಎಂಬ ನಿಯಮಗಳನ್ನು ಜಾರಿಗೆ ತರಲಾಗಿತ್ತು. ಇವೆಲ್ಲವನ್ನೂ ಚಾಚೂ ತಪ್ಪದೇ ಜಾರಿಗೆ ತರಬೇಕು ಎಂದರೆ ಇವರಿಗೆ ಅಕ್ಷರ ಜ್ಞಾನ ಸಿಗಬಾರದು. ಇದೇ ಕಾರಣದಿಂದಾಗಿಯೇ ಅವರಿಗೆ ಅಕ್ಷರವನ್ನು ಕಿವಿಯಲ್ಲಿ ಕೇಳಿದರೆ ಕಾಯ್ದ ಸೀಸವನ್ನು ಸುರಿಯುವ; ಈ ನಿಯಮ ಮೀರಿ ಅಕ್ಷರ ಕಲಿತು ಬಾಯಿಯಲ್ಲಿ ಹೇಳಿದರೆ ನಾಲಿಗೆಯನ್ನು ಕತ್ತರಿಸುವ; ಈ ನಿಯಮವನ್ನೂ ಮೀರಿ ಅಕ್ಷರವನ್ನು ಮನನ ಮಾಡಿಕೊಂಡರೆ ತಲೆಯನ್ನೇ ಕತ್ತರಿಸುವಂತಹ ಕ್ರೂರ ಶಿಕ್ಷೆಗಳನ್ನು ಶೂದ್ರರಿಗೆ ವಿಧಿಸಲಾಗುತ್ತಿತ್ತು. ಉದಾಹರಣೆಗೆ ಶಂಬೂಕ ವಧಾ ಪ್ರಸಂಗವನ್ನು ನೆನಪಿಸಿಕೊಳ್ಳಬಹುದು. ಈ ಎಲ್ಲ ಹಿನ್ನೆಲೆಯಿಂದ ಬಾಬಾಸಾಹೇಬ್ ಅಂಬೇಡ್ಕರ್ ಅವರು ಹೇಳಿರುವ Educate, Unite, Agitate ಪದಗಳನ್ನು ಅರ್ಥಮಾಡಿಕೊಳ್ಳಬೇಕಿದೆ.
ಶತಮಾನಗಳಿಂದ ತಮ್ಮ ಕೈವಶದಲ್ಲಿರುವ ಆಸ್ತಿ, ಉದ್ಯೋಗ, ವ್ಯವಹಾರ, ಅಧಿಕಾರ ಮೊದಲಾದವುಗಳನ್ನು ಬ್ರಾಹ್ಮಣ, ಕ್ಷತ್ರಿಯ ಮತ್ತು ವೈಶ್ಯ ಸಮುದಾಯಗಳು ಸಲೀಸಾಗಿ ಬಿಟ್ಟುಕೊಡುವುದಿಲ್ಲ. ಇದಕ್ಕಾಗಿಯೇ ಶೂದ್ರರು, ಮಹಿಳೆಯರು, ದಲಿತರು ಮತ್ತು ಆದಿವಾಸಿಗಳು ಶಿಕ್ಷಣವನ್ನು ಪಡೆದು ಮತ್ತು ತಮ್ಮ ಸಮುದಾಯಗಳಿಗೆ ನೀಡಬೇಕು, ಅನಂತರ ಸಂಘಟಿತರಾಗಬೇಕು, ಕಡೆಯದಾಗಿ ತಮ್ಮ ಹಕ್ಕುಗಳಿಗಾಗಿ ಚಳುವಳಿ ಮಾಡಬೇಕು ಎಂಬುದು ಅಂಬೇಡ್ಕರ್ ಅವರ ಮಾತುಗಳ ನಿಜವಾದ ಆಶಯವಾಗಿದೆ.
– ಡಾ.ಪ್ರದೀಪ್ ಮಾಲ್ಗುಡಿ, ಸಂಶೋಧಕ




