ಬೆಂಗಳೂರು: 2024ರ ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನ ಗೆಲ್ಲುವ ಗುರಿಯೊಂದಿಗೆ ಕಾಂಗ್ರೆಸ್ ರಣತಂತ್ರ ರೂಪಿಸುತ್ತಿರುವ ಬೆನ್ನಲ್ಲೇ, ತಾವೂ ಸೇರಿದಂತೆ ತಮ್ಮ ಕುಟುಂಬದ ಯಾವುದೇ ಸದಸ್ಯರು ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೆಳಗಾವಿ ಮತ್ತು ಚಿಕ್ಕೋಡಿ ಕ್ಷೇತ್ರದಿಂದ ತಮ್ಮನ್ನು ಕಣಕ್ಕಿಳಿಯುವಂತೆ ಕೇಳುತ್ತಿದ್ದಾರೆ. ತಾವು ಮಾಡದೆ ಹೋದರೆ ತಮ್ಮ ಮಗ ಅಥವಾ ಮಗಳು ಸ್ಪರ್ಧೆ ಮಾಡಬೇಕು ಎಂದು ಒತ್ತಡ ಹೇರುತ್ತಿದ್ದಾರೆ. ಆದರೆ ನಾವ್ಯಾರೂ ಸ್ಪರ್ಧೆ ಮಾಡುವುದಿಲ್ಲ. ಪಕ್ಷದ ಕಾರ್ಯಕರ್ತರು ಈ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತಾರೆ ಎಂದು ಸ್ಪಷ್ಟಪಡಿಸಿದರು.
ಅಭ್ಯರ್ಥಿಗಳ ಆಯ್ಕೆ ಕುರಿತಾಗಿ ದೆಹಲಿಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗುತ್ತದೆ. ಅದನ್ನು ಕಾದುನೋಡುತ್ತಿದ್ದೇವೆ. ಸಚಿವರು ಸ್ಪರ್ಧೆ ಮಾಡಬೇಕು ಎಂದಾದರೆ ಪಕ್ಷದ ಆದೇಶವನ್ನು ಪಾಲನೆ ಮಾಡುತ್ತೇವೆ ಎಂದರು.




