ಬೆಂಗಳೂರು: ಬಿಜೆಪಿ ನಾಯಕರು ತಮಗೆ ಮೋಸ ಮಾಡಿದ್ದಾರೆ, ತಮ್ಮ ಗೌರವಕ್ಕೆ ಧಕ್ಕೆ ಬಂದಿದೆ ಎಂದು ಬೇಸರಗೊಂಡು ಪಕ್ಷಕ್ಕೆ ರಾಜೀನಾಮೆ ನೀಡಿದ ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್ ಗೆ ಸೇರ್ಪಡೆ ಮಾಡಿಕೊಂಡು ಗೌರವದಿಂದ ನಡೆಸಿಕೊಳ್ಳಲಾಗಿದೆ. ಆದರೆ ಶೆಟ್ಟರ್ ಅವರು ಮರಳಿ ಬಿಜೆಪಿಗೆ ಹೋಗುವ ಮೂಲಕ ವಿಶ್ವಾಸದ್ರೋಹ ಮಾಡಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅಸಮಾಧಾನ ವ್ಯಕ್ತಪಡಿಸಿದರು.
ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆಯಾದ ಕುರಿತು ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಕಾಂಗ್ರೆಸ್ ನಲ್ಲಿ ಶೆಟ್ಟರ್ ಅವರನ್ನು ಅತ್ಯಂತ ಗೌರವದಿಂದ ನೋಡಿಕೊಳ್ಳಲಾಗಿತ್ತು. ವಿಧಾನಸಭೆ ಚುನಾವಣೆಯಲ್ಲಿ ಸೋತ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ನೇಮಕ ಮಾಡುವ ಮೂಲಕ ಅವರ ನಾಯಕತ್ವಕ್ಕೆ ಗೌರವ ನೀಡಿತು ಎಂದರು.
ಕಾಂಗ್ರೆಸ್ ಪಕ್ಷ ಅವರಿಗೆ ನೀಡಿದ ಗೌರವ ಮತ್ತು ಸ್ಥಾನಮಾನಗಳಿಗೆ ಕೊಟ್ಟುಬಿದ್ದು ಅವರು ಪಕ್ಷದಲ್ಲಿಯೇ ಇರುತ್ತಾರೆ ಎಂದು ಎಲ್ಲರೂ ಬಲವಾಗಿ ನಂಬಿದ್ದೆವು. ಜಗದೀಶ್ ಶೆಟ್ಟರ್ ಅವರು ಇತರ ರಾಜಕಾರಣಿಗಳಂತೆ ಅಲ್ಲ ಎಂದು ಭಾವಿಸಿದ್ದೆವು. ಹೀಗಾಗಿ ಅವರು ಪಕ್ಷ ತೊರೆಯುವುದಿಲ್ಲ ಎಂಬ ವಿಶ್ವಾಸ ಇತ್ತು ಎಂದರು.
ಶೆಟ್ಟರ್ ಅವರು ನಿನ್ನೆ ಕೂಡ ಬಿಜೆಪಿಗೆ ಹೋಗುವುದಿಲ್ಲ ಎಂದಿದ್ದರು. ಇಂದು ಯಾಕೆ ಬಿಜೆಪಿ ಸೇರಿದ್ದಾರೋ, ಅವರಿಗೆ ಯಾವ ಒತ್ತಡವಿತ್ತೋ ಗೊತ್ತಿಲ್ಲ. ಇದು ಅವರ ಆತ್ಮಸಾಕ್ಷಿಗೆ ಬಿಟ್ಟ ವಿಚಾರ ಎಂದರು.
ಬಿಜೆಪಿಗೆ ವಾಪಸ್ ಬರುವಂತೆ ನನ್ನ ಕ್ಷೇತ್ರದ ನಾಯಕರು, ಕಾರ್ಯಕರ್ತರ ಮೂಲಕ ಆಹ್ವಾನಿಸಲಾಗುತ್ತಿದೆ ಎಂದು ಶೆಟ್ಟರ್ ಅವರು ನಿನ್ನೆ ನನಗೆ ಮಾಹಿತಿ ನೀಡಿದ್ದರು. ಆದರೆ, ಕಾಂಗ್ರೆಸ್ ಪಕ್ಷ ನನಗೆ ರಾಜಕೀಯವಾಗಿ ಮರುಜೀವ ಕೊಟ್ಟಿದೆ. ಹೀಗಾಗಿ ಬಿಜೆಪಿಗೆ ಹೋಗುವುದಿಲ್ಲ ಎಂದಿದ್ದರು. ಅವರ ಮಾತಿನ ಮೇಲೆ ವಿಶ್ವಾಸ ಇಟ್ಟಿದ್ದೆ, ಆದರೆ ಯಾವ ಒತ್ತಡಕ್ಕೆ ಕಟ್ಟುಬಿದ್ದರೋ ಗೊತ್ತಿಲ್ಲ ಎಂದರು.
ಕಳೆದ ವಿಧಾನಸಭೆ ಚುನಾವಣೆ ಸಮಯದಲ್ಲಿ ಶೆಟ್ಟರ್ ಅವರಿಗೆ ಬಿಜೆಪಿ ಟಿಕೆಟ್ ತಪ್ಪಿದಾಗ ದೇಶದ ಹಿತಾಸಕ್ತಿ ಗೊತ್ತಿರಲಿಲ್ಲವೇ? ಕಾಂಗ್ರೆಸ್ ಪಕ್ಷ ಅವರನ್ನು ಗೌರವದಿಂದ ವಿಧಾನ ಪರಿಷತ್ ಸದಸ್ಯರನ್ನಾಗಿ ನಾಮನಿರ್ದೇಶನ ಮಾಡಿದಾಗ ದೇಶದ ಹಿತ ಗೊತ್ತಿರಲಿಲ್ಲವೇ ಎಂದರು.
ಈ ಕುರಿತು ಮಡಿಕೇರಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ವಿಧಾನಸಭಾ ಚುನಾವಣೆಯಲ್ಲಿ ಟಿಕೆಟ್ ನೀಡದೆ ಬಿಜೆಪಿ ವಂಚಿಸಿದೆ ಎಂದು ಹೇಳಿ ಅವರು ಕಾಂಗ್ರೆಸ್‌ಗೆ ಬಂದರು. ಪಕ್ಷವು ಅವರಿಗೆ ಟಿಕೆಟ್ ನೀಡಿತು. ಸ್ವ ಕ್ಷೇತ್ರದಲ್ಲೇ ಅವರು ಸೋತರು. ಆದರೂ ಅವರಿಗೆ ವಿಧಾನಪರಿಷತ್ ಸದಸ್ಯ ಸ್ಥಾನ ನೀಡಲಾಯಿತು. ಕಾಂಗ್ರೆಸ್ ಪಕ್ಷದಿಂದ ಅವರಿಗೆ ಯಾವುದೇ ಅನ್ಯಾಯ ಆಗಿಲ್ಲ ಎಂದರು.
ನಿನ್ನೆಯವರೆಗೆ ಕಾಂಗ್ರೆಸ್ ಬಿಡುವುದಿಲ್ಲ ಎನ್ನುತ್ತಿದ್ದರು ಇದೀಗ ಏಕಾಏಕಿ ಬಿಜೆಪಿ ಸೇರಿದ್ದಾರೆ. ಕೆಲ ದಿನಗಳ ಹಿಂದೆ ಕಾಂಗ್ರೆಸ್ ಕಚೇರಿಯಲ್ಲಿ ನಡೆದಿದ್ದ ಪಕ್ಷದ ಸಭೆಯಲ್ಲಿ ಜಗದೀಶ್ ಶೆಟ್ಟರ್ ಭಾಗವಹಿಸಿದ್ದರು. ಆ ವೇಳೆ ತಮ್ಮೊಂದಿಗೆ ಮಾತನಾಡಿದ್ದರು. ಮತ್ತೆ ಆ ಪಕ್ಷಕ್ಕೆ ವಾಪಸ್ ಹೋಗುವುದಿಲ್ಲ ಎಂದು ತಮ್ಮ ಜೊತೆ ಜಗದೀಶ್ ಶೆಟ್ಟರ್ ಹೇಳಿದ್ದರು. ಅನಂತರ ಯಾವ ಬೆಳವಣಿಗೆಗಳಾಗಿವೆ ಎಂದು ನನಗೆ ಗೊತ್ತಿಲ್ಲ ಎಂದರು.




