ನಗರದಲ್ಲಿ ನಿವೇಶನ / ಮನೆ / ಅಪಾರ್ಟ್ ಮೆಂಟ್ ಸ್ಥಿರಾಸ್ತಿ ಖರೀದಿಸುವವರು ಗಮನಿಸಬೇಕಾದ ಅಂಶಗಳೇನು?

2 years ago

1.ಖರೀದಿದಾರನ ಆರ್ಥಿಕ ಶಕ್ತಿಗೆ ಅನುಗುಣವಾಗಿ ಮಕ್ಕಳ ಶಾಲಾ ಕಾಲೇಜು, ಆಸ್ಪತ್ರೆಗೆ, ತಮ್ಮ ಉದ್ಯೋಗಕ್ಕೆ ಹತ್ತಿರವಿರುವ ವಿದ್ಯುತ್ತು ಮತ್ತು ನೀರು  ಸರಬರಾಜು ಒಳಚರಂಡಿ ವ್ಯವಸ್ಥೆ ಇರುವ, ಪರಿಸರ ಮಾಲಿನ್ಯ ಕಡಿಮೆ ಇರುವ ಸ್ಥಳದಲ್ಲಿ ನಿವೇಶನ / ಮನೆ / ಅಪಾರ್ಟ್ಮೆಂಟ್ ಖರೀದಿಸುವುದು ಒಳ್ಳೆಯದು.

2. ದಲ್ಲಾಳಿಗಳು ನೀಡುವ ವಿವರಗಳನ್ನು ಒರೆಗೆ ಹಚ್ಚಿ ಪರೀಕ್ಷಿಸಬೇಕು.

3. ನಿವೇಶನ ಅಥವಾ ವಸತಿ ಕಟ್ಟಡ / ಮನೆ, ವಸತಿಗಾಗಿ ಪರಿವರ್ತನೆ ಹೊಂದಿದೆಯೇ ಎಂಬುದರ ಕುರಿತು ದಾಖಲೆ ಪರಿಶೀಲನೆ ಮಾಡಬೇಕು ಮತ್ತು ಸಕ್ಷಮ ಪ್ರಾಧಿಕಾರದ ಅನುಮೋದನೆ ಪಡೆದಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

4. ಖರೀದಿಸಲಿಚ್ಚಿಸಿರುವ ನಿವೇಶನ ಅಥವಾ ಮನೆ ರಾಜ್ಯ ಸರ್ಕಾರದ ಭೂಸ್ವಾಧೀನಕ್ಕಾಗಿ ಉದ್ದೇಶಿಸಿದ ವ್ಯಾಪ್ತಿಯೊಳಗೆ ಇಲ್ಲದಿರುವುದನ್ನು ಖಚಿತಪಡಿಸಿಕೊಳ್ಳಬೇಕು.

5. ಖರೀದಿಸಚ್ಚಿಸಿರುವ ನಿವೇಶನ ಅಥವಾ ಮನೆಯ ಕುರಿತು ಯಾವುದೇ ನ್ಯಾಯಾಲಯ / ಅರೆ ನ್ಯಾಯಾಲಯದಲ್ಲಿ ವ್ಯಾಜ್ಯ ಇಲ್ಲವೆಂಬುದನ್ನು ಖಚಿತ ಪಡಿಸಿಕೊಳ್ಳಬೇಕು.

6. ಖರೀದಿಸಲಿಚ್ಛಿಸಿರುವ ನಿವೇಶನ ಅಥವಾ ಮನೆಯನ್ನು ಅಳತೆ ಮಾಡಿ ಅದರ ವಿಸ್ತೀರ್ಣವನ್ನು ಖಚಿತಪಡಿಸಿಕೊಳ್ಳಬೇಕು.

7. ಖರೀದಿಸಲಿಚ್ಚಿಸಿರುವ ಬಡಾವಣೆಗೆ ಸಂಬಂಧಿಸಿದಂತೆ ಸಕ್ಷಮ ಪ್ರಾಧಿಕಾರಗಳ ಅನುಮತಿ ಪತ್ರಗಳು, ಅಗತ್ಯ ಶುಲ್ಕ ಪಾವತಿಸಿದ ದಾಖಲೆಗಳನ್ನು ಪರಿಶೀಲಿಸುವುದು ಅತ್ಯಗತ್ಯ.

8. ಖರೀದಿಸಚ್ಚಿಸಿರುವ ಸ್ಥಿರಾಸ್ತಿಯ ನೈಜ ಮಾಲೀಕರು ಮತ್ತದರ ವಾರಸುದಾರರ ಹಕ್ಕುಗಳ ಕುರಿತು ದಾಖಲಾತಿ ಪಡೆಯುವುದು ಅತ್ಯಗತ್ಯ.

9.ಮಾರಾಟಗಾರನ ವಂಶ ವೃಕ್ಷವನ್ನು ಪರಿಶೀಲಿಸಬೇಕು.

10.ಸ್ಥಿರಾಸ್ತಿಯ ಮೂಲ ಪತ್ರ,ಮಾಲೀಕತ್ವ ದೃಢೀಕರಿಸುವ ದಾಖಲೆಗಳಾದ ಕ್ರಯಪತ್ರ,ದಾನ ಪತ್ರ,ವಿಭಾಗ ಪಟ್ಟಿ ಇತ್ಯಾದಿಗಳನ್ನು ಪರಿಶೀಲಿಸಬೇಕು.

11. ಸ್ಥಳೀಯ ಪ್ರಾಧಿಕಾರಗಳಾದ ಪಂಚಾಯಿತಿ / ಪುರಸಭೆ / ನಗರ ಸಭೆ ನೀಡಿರುವ ಖಾತಾ ಪತ್ರದ ಸಾಚಾತನವನ್ನು ಪರೀಕ್ಷಿಸಬೇಕು.

12.ಋಣಭಾರ ರಾಹಿತ್ಯ ಪತ್ರವನ್ನು ಸಂಬಂಧಿಸಿದ ಉಪ ನೋಂದಣಾಧಿಕಾರಿ ಕಛೇರಿಯಿಂದ (ಕನಿಷ್ಠ ಮೂವತ್ತು ವರ್ಷಗಳ ಅವಧಿಯದ್ದು) ಪಡೆದು ಪರೀಕ್ಷಿಸಬೇಕು.

13. ಸ್ಥಿರಾಸ್ತಿ ತೆರಿಗೆ ಪಾವತಿಸಿದ್ದರ ಸತ್ಯಾಸತ್ಯತೆ ಪರಿಶೀಲನೆ ಮಾಡಬೇಕು.

14. ಖರೀದಿಸಲು ಇಚ್ಚಿಸಿರುವ ಸ್ಥಿರಾಸ್ತಿಯ ಮೇಲೆ ಒಬ್ಬರಿಗಿಂತ ಹೆಚ್ಚು ಜನರಿಗೆ ಹಕ್ಕು ಇದ್ದರೆ, ಅವರ ಕಡೆಯಿಂದ ನೋಂದಾಯಿತ ಬಿಡುಗಡೆ ಯಾ ರಿಲೀಸ್ ಡೀಡ್ ಪಡೆದಿರಬೇಕು.

15.ಜಿ ಪಿ ಎ ಹೋಲ್ಡರಿಂದ ಸ್ಥಿರಾಸ್ತಿ ಖರೀದಿಸುವಾಗ ದಾಖಲೆಗಳನ್ನು ಮತ್ತಷ್ಟು ಎಚ್ಚರಿಕೆಯಿಂದ ಪರಿಶೀಲಿಸಬೇಕು ಮತ್ತು  ಮೂಲ ಮಾಲೀಕರಿಂದ ಒಪ್ಪಿಗೆ ಸಾಕ್ಷಿ ಪಡೆಯುವುದು ಒಳ್ಳೆಯದು.

16. ಖರೀದಿಸಲಿಚ್ಛಿಸಿರುವ ಮನೆ / ಅಪಾರ್ಟ್ ಮೆಂಟ್ ಗೆ ಸಂಬಂಧಿಸಿದಂತೆ ಕಟ್ಟಡದ ನೀಲಿ ನಕ್ಷೆ, ಕಟ್ಟಡ ನಿರ್ಮಾಣ ಅನುಮತಿ ಪತ್ರವನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಬೇಕು.

17. ಬಡಾವಣೆ ನಿರ್ಮಾಣದ ಕುರಿತಾದ ನೀಲಿ ನಕ್ಷೆಯನ್ನು ಸಕ್ಷಮ ಪ್ರಾಧಿಕಾರದಿಂದ ಪಡೆದಿರುವುದನ್ನು ಖಚಿತಪಡಿಸಿಕೊಳ್ಳಬೇಕು.

18. ಖರೀದಿಸಲು ಇಚ್ಚಿಸಿರುವ ಮನೆ / ನಿವೇಶನದ ಮೇಲೆ ಖಾಸಗಿ ವ್ಯಕ್ತಿಗಳಿಂದ ಅಥವಾ ಬ್ಯಾಂಕುಗಳಿಂದ ಸಾಲ ಪಡೆದಿದ್ದರೆ ಅದನ್ನು ಪರೀಕ್ಷಿಸಬೇಕು.

19. ಖರೀದಿಸಲಿಚ್ಚಿಸಿರುವ ಮನೆ ಅಥವಾ ನಿವೇಶನವನ್ನು ಖಾಸಗಿ ವ್ಯಕ್ತಿಗಳಿಗೆ ಭೋಗ್ಯ ಅಥವಾ ಅಡಮಾನ ಮಾಡಿದ್ದರೆ ಈ ಕುರಿತು ದಾಖಲೆಗಳನ್ನು ಪರಿಶೀಲಿಸಬೇಕು.

20. ಖರೀದಿಸಲು ಇಚ್ಚಿಸಿರುವ ಮನೆ ಸುತ್ತಲೂ ಬಿಡಬೇಕಾದ ಖಾಲಿ ಜಾಗ (ಸೆಟ್ ಬ್ಯಾಕ್) ಸರಿಯಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಬೇಕು.

21. ಖರೀದಿಸಚ್ಚಿಸಿರುವ ನಿವೇಶನ ಪ.ಜಾತಿ ಮತ್ತು ಪಂಗಡದವರಿಗೆ ಮಂಜೂರಾದ ಭೂಮಿಯೇ ಎಂದು ಪರಿಶೀಲಿಸಬೇಕು.

22. ಖರೀದಿಸಲಿಚ್ಚಿಸಿರುವ ನಿವೇಶನ ಅಥವಾ ಮನೆಯ ಸಂಪೂರ್ಣ ದಾಖಲಾತಿಗಳನ್ನು ನುರಿತ ವಕೀಲರಿಂದ ಪರಿಶೀಲಿಸಿ ಖರೀದಿಸುವುದು ಸರಿಯಾದ ನಡೆ / ಕ್ರಮ.

– ಜಿ ಟಿ ನರೇಂದ್ರ ಕುಮಾರ್

ವಕೀಲರು ಮತ್ತು ಕಾನೂನು ಸಲಹೆಗಾರರು,
ನಂ.611, ಚಂದ್ರ ಪ್ಲಾಜಾ,
ಅವೆನ್ಯೂ ರಸ್ತೆ,
ಬೆಂಗಳೂರು – 560 002
ಮೊಬೈಲ್ ಸಂಖ್ಯೆ : 94487 30727

Leave a Reply