ಕರ್ನಾಟಕ ಚುನಾವಣೆಯಲ್ಲಿ ಬಿಜೆಪಿಯನ್ನು ನಿರ್ಣಾಯಕವಾಗಿ ಸೋಲಿಸುವಲ್ಲಿ ಮುಸ್ಲಿಮರ ಪಾತ್ರ ದೊಡ್ಡದು. ಒಂದು ಸಮುದಾಯವಾಗಿ ಆ ಮಟ್ಟಿಗಿನ ಬೆಂಬಲ ಕಾಂಗ್ರೆಸ್ ಗೆ ಯಾವ ಜಾತಿಯಿಂದಲೂ ಸಿಕ್ಕಿಲ್ಲ. ಬಿಜೆಪಿ ಆಡಳಿತದಲ್ಲಿ ಅವರು ಅನುಭವಿಸಿದ ಯಾತನೆ ಪದಗಳಿಗೆ ನಿಲುಕಲಾರದು. ಅಕ್ಷರಶಃ ಎರಡನೇ ದರ್ಜೆಯ ಪ್ರಜೆಗಳಂತೆ ಮುಸ್ಲಿಮರನ್ನು ಬಿಜೆಪಿ ಸರಕಾರ ನಡೆಸಿಕೊಂಡಿತು.
ಮುಸ್ಲಿಮರ ಮತವನ್ನು ಪೂರ್ತಿಯಾಗಿ ಪಡೆದ ಕಾಂಗ್ರೆಸ್ ತನ್ನ ಆಡಳಿತದಲ್ಲಿ ಒಂದಿಷ್ಟು ಸಾಂತ್ವನ, ಪರಿಹಾರವನ್ನು ಮುಸ್ಲಿಂ ಸಮುದಾಯಕ್ಕೆ ಪ್ರಾಮಾಣಿಕವಾಗಿ ಒದಗಿಸಬೇಕು. ಮುಸ್ಲಿಮರೆಂಬ ಏಕೈಕ ಕಾರಣಕ್ಕೆ ಮತಾಂಧರಿಂದ ಕೊಲೆಗೀಡಾದ, ಅದೇ ಕಾರಣಕ್ಕೆ ಬಿಜೆಪಿ ಸರಕಾರದಿಂದ ಅಮಾನವೀಯವಾಗಿ ಪರಿಹಾರ ಧನ ನಿರಾಕರಿಸಲ್ಪಟ್ಟ ಫಾಝಿಲ್, ಜಲೀಲ್, ಶಮೀರ್ ನರಗುಂದ ಕುಟುಂಬಕ್ಕೆ ಕಾಂಗ್ರೆಸ್ ಸರಕಾರ ನಿಯಮ ಪ್ರಕಾರ ಪರಿಹಾರ ಒದಗಿಸಬೇಕು. ಕೋಮು ಹಿಂಸೆ ನಿಗ್ರಹಕ್ಕೆ ಕಠಿಣ ನಿಯಮಗಳನ್ನು ರೂಪಿಸಬೇಕು. ಕೋಮು ಪ್ರಚೋದನೆ ಎಸಗುವ ಮಾಧ್ಯಮಗಳ ಮೇಲೂ ನಿಯಂತ್ರಣ ಹೇರಬೇಕು.
ಹಾಗೆಯೆ, ಸಾಚಾರ್ ವರದಿಯ ಆಧಾರದಲ್ಲಿ ಬಡ ಮುಸ್ಲಿಮರ ಶೈಕ್ಷಣಿಕೆ, ಆರ್ಥಿಕ ಅಭಿವೃದ್ದಿಗೆ ಯೋಜನಾ ಬದ್ದ ಕಾರ್ಯಕ್ರಮ ರೂಪಿಸಬೇಕು. (ಓಲೈಕೆಯ ಕಾರ್ಯಕ್ರಮಗಳು ಬೇಡ) ಸಚಿವ ಸಂಪುಟದಲ್ಲಿ ಮುಸ್ಲಿಮರಿಗೆ ಗೌರವಯುತ ಪ್ರಾತಿನಿಧ್ಯ ಒದಗಿಸಬೇಕು. ದಕ್ಷಿಣ ಕನ್ನಡ, ಉಡುಪಿಯಂತಹ ಕೋಮುವಾದದ ಪ್ರಯೋಗ ಶಾಲೆ ಜಿಲ್ಲೆಗಳಿಗೆ ಸೈದ್ದಾಂತಿಕ ಸ್ಪಷ್ಟತೆಯುಳ್ಳ ಸಚಿವರುಗಳನ್ನು (ಉದಾ. ಬಿ ಕೆ ಹರಿಪ್ರಸಾದ್) ಉಸ್ತುವಾರಿ ಸಚಿವರುಗಳನ್ನಾಗಿ ನೇಮಿಸಬೇಕು. ಕರಾವಳಿ, ಮಲೆನಾಡು ಭಾಗಗಳಲ್ಲಿ ಕೋಮು ಹಿಂಸೆ ಮರುಕಳಿಸದಂತೆ ತಡೆಯಲು ವಿಶೇಷ ಗಮನ ಹರಿಸಬೇಕು. ಹಿಂದು, ಮುಸ್ಲಿಂ ದ್ವೇಷದ ಪ್ರಮಾಣ ಇಳಿಸಲು ಯೋಜನಾ ಬದ್ದ ಕೆಲಸ ಮಾಡಬೇಕು. ಜಾತ್ಯಾತೀತತೆಗೆ ನಿಷ್ಟರಾಗಿರುವ ಕರಾವಳಿ ಭಾಗದ ಸಾಹಿತಿ, ಕಲಾವಿದರನ್ನು, ಜನ ಚಳುವಳಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮತೀಯ ಭಾವನೆ ತಗ್ಗಿಸಲು ಕಾರ್ಯಕ್ರಮ ರೂಪಿಸಬೇಕು.
– ಮುನೀರ್ ಕಾಟಿಪಳ್ಳ




