ಬರ ಪರಿಹಾರ ₹17,000 ಕೋಟಿ ಹಣ ಬಿಡುಗಡೆ ಮಾಡುವಂತೆ ಮನವಿ ಮಾಡಿದ್ದೇವೆ: ಪ್ರಿಯಾಂಕ್ ಖರ್ಗೆ

2 years ago

#requested #release #crore #drought #relief #PriyankKharge

ಕಲಬುರ್ಗಿ: ಬರ ಪರಿಹಾರವಾಗಿ ಸುಮಾರು ₹17,000 ಕೋಟಿ ಹಣ ಬಿಡುಗಡೆ ಮಾಡುವಂತೆ ಕೇಂದ್ರ ಗೃಹ ಕಾರ್ಯದರ್ಶಿ ಹಾಗೂ ಕೃಷಿ‌ ಇಲಾಖೆ ಕಾರ್ಯದರ್ಶಿಗಳನ್ನು ಇತ್ತೀಚೆಗೆ ದೆಹಲಿಯಲ್ಲಿ ಭೇಟಿ ಮಾಡಿ ಮನವಿ ಮಾಡಿ ಬಂದಿದ್ದೇವೆ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.

ಕಲಬುರಗಿ ಜಿಲ್ಲಾಧಿಕಾರಿ ಕಚೇರಿಯಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರಸ್ತುತ NDRF ನಿಯಮದ ಪ್ರಕಾರ ಪರಿಹಾರ ಬಿಡುಗಡೆ ಮಾಡಿದರೆ ಹೆಚ್ಚಿನ ಪರಿಹಾರ ಲಭಿಸುವುದಿಲ್ಲ. ಹಾಗಾಗಿ NDRF ನಿಯಮಾವಳಿಗಳಲ್ಲಿ ಅಗತ್ಯ ಬದಲಾವಣೆ ತರುವಂತೆ ಒತ್ತಾಯಿಸಿ ಈಗಾಗಲೇ ಸಿಎಂ ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಇದರ ಹೊರತಾಗಿ ನಮ್ಮ ರಾಜ್ಯ ಸರ್ಕಾರವು NDRF ನಿಯಮದ ಅನುಸಾರ ಬರ ಪರಿಹಾರ ಬಿಡುಗಡೆ ಮಾಡಲಿದೆ ಎಂದು ಹೇಳಿದರು.

ಕೇಂದ್ರದಿಂದ ನರೇಗಾ ಯೋಜನೆಯಡಿಯಲ್ಲಿ ರಾಜ್ಯಕ್ಕೆ ಬರಬೇಕಾದ ಬಾಕಿ ಮೊತ್ತ  ₹ 700 ಕೋಟಿ ಬಿಡುಗಡೆ ಮಾಡುವಂತೆ ಈಗಾಗಲೇ ಪತ್ರ ಬರೆಯಲಾಗಿದೆ. ಅದಲ್ಲದೇ ಈಗಿರುವ 100 ದಿನಗಳ ಮಾನವ ದಿನಗಳನ್ನು 150 ಕ್ಕೇರಿಸಲು ಬೇಡಿಕೆ ಇದೆ. ಇದನ್ನು ಕೇಂದ್ರ ಸರ್ಕಾರವೇ ಮಾಡಬೇಕು. ರಾಜ್ಯದ ವಾರ್ಷಿಕ ಮಿತಿ 13 ಕೋಟಿ ಮಾನವದಿನಗಳಿದ್ದು ಈಗಾಗಲೇ 10 ಕೋಟಿ ಮಾನವ ದಿನ ಸೃಜನೆಯಾಗಿದೆ ಎಂದು ಹೇಳಿದರು.

ಬರಗಾಲವಿರುವುದರಿಂದ 13 ಕೋಟಿಗೆ ಬದಲು 18 ಕೋಟಿ ಮಾನವ ದಿನ ಹೆಚ್ಚಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ. ಆದರೆ ಕೇಂದ್ರದಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ವಾರ್ಷಿಕ ರೂ ₹75,000 ಕೋಟಿ ಬಜೆಟ್ ಬದಲಿಗೆ ರೂ ₹60,000 ಕೋಟಿಗೆ ಇಳಿಸಲಾಗಿದೆ.‌ ಹೀಗಾದರೆ ಬಡವರು ಹೇಗೆ ಬದುಕಬೇಕು ಎಂದು ಪ್ರಶ್ನಿಸಿದರು.

ಕಲಬುರಗಿ ನಗರದಲ್ಲಿ ಕುಡಿಯುವ ನೀರು ಒದಗಿಸುವ ಯೋಜನೆಯ ಗುತ್ತಿಗೆಯನ್ನು ಎಲ್ ಅಂಡ್ ಟಿ ಕಂಪನಿಗೆ ವಹಿಸಲಾಗಿದ್ದು, ಕಂಪನಿ ಕಳಪೆ ಗುಣಮಟ್ಟದ ಪೈಪ್ ಗಳನ್ನು ಬಳಸುತ್ತಿರುವುದರ ಬಗ್ಗೆ ಗಮನಕ್ಕೆ ಬಂದಿದ್ದು, ಅನುಮೋದಿತ ಪೈಪ್ ಗಳನ್ನು ಬಳಕೆ ಮಾಡಲು ಸೂಚಿಸಲಾಗಿದೆ. ಅವಶ್ಯವೆನಿಸಿದರೆ ಖಾಸಗಿ ಸಂಸ್ಥೆಗಳಿಂದ ಪರಿಶೀಲನೆ ನಡೆಸಲಾಗುವುದು ಎಂದು ಹೇಳಿದರು.

ರಾಜ್ಯದಲ್ಲಿ ಈ ಹಿಂದಿನ ಸರ್ಕಾರ ವಿದ್ಯುತ್ ಉತ್ಪಾದನೆಗೆ ಒತ್ತುಕೊಡದೆ ಇರುವುದರಿಂದ ಈಗ ಕೊರತೆ ಉಂಟಾಗಿದೆ. ಹಾಗಾಗಿ ಉತ್ತರಪ್ರದೇಶ ಹಾಗೂ ಪಂಜಾಬ್ ನಿಂದ ವಿದ್ಯುತ್ ಖರೀದಿ ಹಾಗೂ ಛತ್ತಿಸ್ ಗಡ್ ನಿಂದ ಕಲ್ಲಿದ್ದಲು ಖರೀದಿ ಮಾಡಲು ಸರ್ಕಾರ ಮುಂದಾಗಿದೆ ಎಂದರು.

Leave a Reply