ಸಾಯಗಂಟ ಹಾಡ್ತೀನಿ ಸ್ವಾಮೆ

5 years ago

ಈತನ ಹೆಸರು ನಾಗಪ್ಪ. ಇವರು ಮೂಲತಃ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಆಂದ್ರದ ಗಡಿಗೆ ಅಂಟಿಕೂಂಡಿರುವ ಬಟ್ಲಪಲ್ಲಿನವರು. ವೆಂಕಟಪ್ಪ ಮತ್ತು ವೆಂಕಟಮ್ಮ ಎಂಬುವವರಿಗೆ ಜನಿಸಿದವರು. ಕಡು ದಲಿತ ಕುಟುಂಬದಲ್ಲಿ ಹುಟ್ಟಿದ ಇವರು ಐದು ವರ್ಷದ ಮಗುವಾಗಿದ್ದಾಗ ಪೋಲಿಯೋ ಕಾಯಿಲೆಗೆ ತುತ್ತಾಗಿ, ಇದ್ದ ಎರಡೂ ಕಣ್ಣನ್ನು ಕಳೆದು ಕೂಂಡರು.

ಇವರ ಕುಟುಂಬದವರು ಈ ಕಾಯಿಲೆಯನ್ನು “ಅಮ್ಮ ಹಟ್ಟಿದೆ” ಅಂತಲೇ ನಂಬಿ ಮೋಸ ಹೋಗಿದ್ದರು. ಕಣ್ಣಿಲ್ಲದ ಮಗುವೆಂಬ ಕನಿಕರ ಕೇರಿ ಜನರಿಗೆ. ಸಮಾಜದ ಕಣ್ಣಲ್ಲಿ ತಬ್ಬಲಿಯೆಂಬ ಕೂರಗು ಮನೆಯವರಿಗೆ. ಅಂತೂ ಎಲ್ಲರ ಮನೆ ತುತ್ತಿನಿಂದ ನಾಗಪ್ಪ ಬೆಳೆದ. ಜನ ಕರುಣೆಯಿಂದ ಕೊಟ್ಟ ಕಾಸು ನಾಗಪ್ಫನ ಕಣ್ಣಲ್ಲಿ ನೀರು ತರಿಸುತಿತ್ತು.

ಊರ ಜನರ ಕರುಣೆಯ ಮಾತುಗಳು ನಾಗಪ್ಪನ ಕನಸುಗಳನ್ನು ಕೊಲ್ಲುವಂತಿದ್ದವು. ಮುಂದೆ ಏನೆಂಬ ಚಿಂತೆ ನಾಗಪ್ಪನನ್ನು ಕಾಡಲಿಕ್ಕೆ ಶುರುವಾಯಿತು. ಇರುವ ದಾರಿಯೂಂದೇ ಬೀದಿ ಬದಿ ತಿರುಪೆ ಎತ್ತುವುದು. ಗುಡಿಮುಂದೆ ಕೈ ಚಾಚುವುದು. ಯಾವುದೇ ಪ್ರತಿಫಲಾಪೇಕ್ಷೆಗಳಿಲ್ಲದೆ ಬರುವ ಕಾಸು ಪಾಶಾಣಕ್ಕೆ ಸಮವೆಂದು ನೊಂದುಕೊಂಡರು.

ನಾಗಪ್ಪನಿಗ್ಯಾಕೋ ಇದು ಸರಿ ಕಾಣಲಿಲ್ಲ. ದಿಕ್ಕು ತೋಚದಂತಾಯಿತು. ಕಣ್ಣಿಲ್ಲದಿದ್ದರು ತನ್ನ ನಾಲಿಗೆಯಲ್ಲಿ ಅಡಗಿದ್ದ ನೆಲಪದಗಳ ಸೊಗಡು ತನ್ನನ್ನು ಅನಾಥನನ್ನಾಗಿ ಮಾಡಲು ಬಿಟ್ಟುಕೊಡಲಿಲ್ಲ. ಒಂದು ಸರ್ತಿ ಇವರ ಊರಲ್ಲಿ ತೆಲುಗಿನ “ಸಾಸ್ಯಲ ಚಿನ್ನಮ್ಮ” ನಾಟಕ ಏರ್ಪಡಿಸಿದ್ದರು.

ನಾಗಪ್ಪ ಆ ನಾಟಕ ನೋಡಲೆಂದು ಅಲ್ಲಿಗೆ ಜನರ ಗುಂಪಿನ ಹೆಜ್ಜೆಗಳ ಜಾಡು ಹಿಡಿದು ಹೋದರು. ಈ ನಾಟಕ ಶುದ್ಧ ತೆಲುಗಿನ ಗೇಯಕಥೆ. ಭಾಷೆ ತೆಲುಗಿನದು. ಹೆಣ್ಣಿನ ಪಾತ್ರ ಮಾಡುವವರೆಲ್ಲಾ ಗಂಡಸರೆ. ಈ ನಾಟಕದಲ್ಲಿ ಅಂದು ಅಭಿನಯಿಸಿದವರೆಲ್ಲಾ ಬಹುತೇಕ ದಲಿತರೇ ಆಗಿದ್ದರು. ಈ ನಾಟಕಕ್ಕೆ ಹಾರ್ಮೊನಿಯಂ ಸಾಥ್ ನೀಡಿದವರು ಬಾಗೇಪಲ್ಲಿ ತಾಲೂಕಿನ ಜಂಗಾರ್ಲಾಪಲ್ಲಿಯ ಮೋಹನರೆಡ್ಡಿ ಎಂಬ ಹಿರಿಯರು. ಇವರು ಒಕ್ಕಲಿಗ ಸಮುದಾಯಕ್ಕ ಸೇರಿದವರಾಗಿದ್ದರು. ಇವರ ಹಾರ್ಮೋನಿಯಂಗೆ ಸಹಾಯಕ್ಕಿಟ್ಟುಕೊಂಡಿದ್ದ ಹುಡುಗ ಆ ದಿನ ಯಾವುದೋ ನೆಪವೂಡ್ಡಿ ತಪ್ಪಿಸಿಕೂಂಡಿದ್ದ. ಅವರಿಗೆ ದಿಕ್ಕುತೋಚದಂತಾಯಿತು. ನಾಟಕ ಶುರುವಾಯಿತು.

ಇವರ ಪಕ್ಕದಲ್ಲೇ ಕೂತು ಆಕಾಶದ ಕಡೆ ಕತ್ತೆತ್ತಿ ನೋಡ್ತೀದ್ದ ಹುಡುಗನನ್ನು ಕರೆದು “ಸ್ವಲ್ಪ ಹಾರ್ಮೊನಿಯಂನ್ನು ಒತ್ತಬೇಕು ಒತ್ತುತೀಯ? ಎರಡು ರೂಪಾಯಿ ಕೂಡ್ತೀನೆಂದರು. ಹುಡುಗ ಥಟ್ಟನೆ ಮೂಗು ಜೀವದಂತೆ ತಲೆ ಅಲ್ಲಾಡಿಸಿದ. ನಾಟ್ಕ ಮುಗಿಯುವಷ್ಟರಲ್ಲಿ ಬೆಳಕರಿಯಿತು. ಹುಡುಗ ಹಾರ್ಮೊನಿಯಂನ್ನು ಒತ್ತುವುದನ್ನು ನಿಲ್ಲಿಸಲಿಲ್ಲ. ಮೋಹನಪ್ಪ ಆ ಹುಡುಗನ ಬೆರಳಿನಲ್ಲಿದ್ದ ಭಯಾಭಕ್ತಿ ನೋಡಿ ಕರಳು ಚುರ್ರಂತು. ಅವನಿಗೆ ಕಣ್ಣಿಲ್ಲವೆಂಬುದು ಗೂತ್ತಾಗಿದ್ದು ಆಗಲೇ, ಮೋಹನಪ್ಪ ರಾತ್ರಿ ಸ್ವಲ್ಪ ಹೆಚ್ಚಿಗೆ ಕುಡಿದಿದ್ದರು.

ಮೋಹನಪ್ಪ ಅವನ ಪೂರ್ವಾಪರ ವಿಚಾರಿಸಿಕೂಂಡರು. ಅವರ ಮನೆಯವರನ್ನು ಒಪ್ಪಿಸಿ “ಹಾರ್ಮೋನಿಯಂನ್ನು ಕಲಿಸಿ ಅವನಿಗೂಂದು ದಾರಿ ಹುಡುಕಿ ಕೂಡುವೆನೆಂದು” ಜತೆಯಲ್ಲಿ ಕರೆದುಕೂಂಡು ಹೋದರು. ನಾಗಪ್ಪನಿಗೂ ಇಂಥವರೇ ಬೇಕಾಗಿತ್ತು. ಮೋಹನಪ್ಪನು ಹೋಗುತ್ತಿದ್ದ ನಾಟಕ, ಕೇಳಿಕೆ, ಬುರ್ರಕಥೆ, ತತ್ವಪದ, ಯಾಲಪದ ಗಂಗೇ ಗೌರಿ ಹಾಡು, ಗೂಬ್ಬೀಯಾಳು, ಸಾವಿನ ಭಜನೆಯಂಥಹ ಕಾರ್ಯಕ್ರಮಗಳಲ್ಲಿ ನಾಗಪ್ಪ ಮೋಹನಪ್ಪನ ಹಾರ್ಮೋನಿಯಂ ಪೆಟ್ಟಿಗೆಯನ್ನು ಹೆಗಲ ಮೇಲಿಟ್ಟುಕೊಂಡು ನೆರಳಿನಂತೆ ಇರ್ತಿದ್ದ.

ಮೋಹನಪ್ಪನ ಸಹವಾಸದಿಂದ ಸಾಸ್ಯಾಲು ಚಿನ್ನಮ್ಮ, ಕೇಳಿಕೆ ಹಾಡು, ಬುರ್ರಕತೆಯ ದರುವುಗಳನ್ನು ನಾಲಿಗೆಗೆ ಜೋಪಾನವಾಗಿ ಇಳಿಸಿಕೂಂಡ. ಹೀಗೆ… ಒಂದು ದಿನ ಮೋಹನಪ್ಪ ತಮ್ಮ ಕುಟುಂಬ ಕಲಹಗಳಿಂದಾಗಿ ಆತ್ಮಹತ್ಯೆ ಮಾಡಿಕೂಂಡರು. ನಾಗಪ್ಪ ಅಂದಿನಿಂದ ತಾಯಿ ಕಳೆದು ಕೂಂಡ ಕರುವಿನಂತಾದ. ಅನಾಥನಾಗಿ ಬೀದಿಗೆ ಬಿದ್ದ. ಆದರೇನಂತೆ ಗುರುಗಳು ಹಾಡುತ್ತಿದ್ದ ಹಾಡುಗಳು ತನ್ನ ನಾಲಿಗೆಯಲ್ಲಿ ಇನ್ನೂ ಬದುಕಿವೆಯಲ್ಲ! ಹಾಡಿ ಬದುಕಿದರಾಯಿತು ಎಂದುಕೂಂಡರು. ಹೇಗೋ ಹತ್ತು ವರ್ಷಗಳು ಗುರುವಿನ ಜೂತೆಯಿದ್ದುದರಿಂದ ಊರಿನ ಹಿರಿಯರು ಮೋಹನಪ್ಪನವರ ಹಾರ್ಮೋನಿಯಂನ್ನು ದಾನವಾಗಿ ಕೊಡಿಸಿದ್ದರು.

ತನಗಂಟಿ ಬಂದಿದ್ದ ಕುರುಡಿನ ಅವಮಾನವನ್ನು ದಾಟಲು ಆತನ ಬೆರಳಿನಲ್ಲಿದ್ದ ಕಲೆ ಮೋಸ ಮಾಡಲಿಲ್ಲ. ಬದುಕಿನ ಬರವಸೆ ಹುಡುಕಿ ಹೊರಟ. ಹೀಗೆ ಹಾಡಿನ ಪಯಣ ಆರಂಭವಾಯಿತು. ಮತ್ತೆ ಜನರ ಮಡಿಲಿಗೆ ಬಿದ್ದ.  ನನ್ನ ಸಂಶೋಧನಾ ವಿಷಯಕ್ಕೆಂದು ಚಿತ್ತೂರು ಜಿಲ್ಲೆಯ ಪುಂಗನೂರಿನ ಸಿಂಗರಿಗುಂಟ ಎಂಬ ಹಳ್ಳಿಗೆ ಹೋಗಿದ್ದೆ.

ಮತ್ತೆ ವಾಪಸ್ಸಾಗುವಾಗ ಈತ ಮುಳಬಾಗಿಲಿನ ಬೈರಪಲ್ಲಿಯ ರಸ್ತೆ ಬದಿ ಕಂಡ. ಆತನ ಹಾಡು ನನ್ನ ಬಸ್ಸಿನಿಂದ ಇಳಿಯುವಂತೆ ಮಾಡಿತ್ತು. ಸುಮ್ಮನೆ ಮಾತಿಗೆ ಸಿಗುವ ಅಸಾಮಿ ಇವರಲ್ಲವೆಂದು ಐವತ್ತು ರೂಪಾಯಿ ಕೈಗಿಟ್ಟೆ. ಪಕ್ಕದಲ್ಲಿ ನಿಂತಿದ್ದವರಿಂದ ಹಣದ ಮೌಲ್ಯವನ್ನು ಖುಚಿತ ಪಡಿಸಿಕೂಂಡರು. ನಾನು ಆತನನ್ನು ರಚ್ಚೆಮೇಲೆ ಕೂರಿಸಿಕೂಂಡೆ. ಆತನ ಪೂರ್ವ ಪರ, ಅತನಬದುಕಿನ ಕಠೋರ ಕಥನಗಳನ್ನು ಕೆದಕಿದೆ. ಎಲ್ಲವನ್ನು ತಣ್ಣಗೆ ಹೇಳಿದ. ಆತನ ಮಾತೆಲ್ಲಾ ತೆಲುಗಿನದಾಗಿತ್ತು.

ಕಡೆಯಲ್ಲಿ ಆತ “ಸ್ವಾಮೆ ಸಾಯಗಂಟ ಹಾಡ್ತೀನಿ ಸ್ವಾಮೆ” ನನ್ನ ಹಾಡು ಸ್ವರ್ಗದಲ್ಲಿರೊ ಆ ನಮ್ಮ ಮೋಹನಪ್ಪಸ್ವಾಮಿ ಕಿವಿಗೆ ಸೇರ್ಬೇಕು” ಎಂದು ಮುಖ ನೆಲಕ್ಕಿಟ್ಟ. ಹೆಗಲಲ್ಲಿದ್ದ ಟವಲ್ಲಿನಿಂದ ಕಣ್ಣೂರೆಸಿಕೂಂಡ. ಊರಿಗೆ ಬಸ್ ಹತ್ತಿದೆ. ಬರುವಾಗ ಯಾಕೋ  ನಾಗಪ್ಪ ಕಣ್ಣುತುಂಬಿಕೂಂಡ.

– ಗಂಗಪ್ಪ ತಳವಾರ್, ಕವಿಗಳು

Leave a Reply