ಬರದ ನಾಡು ಸಮೃದ್ಧ ನಾಡಾದೀತೆ? ಕನಸು ನನಸಾದೀತೆ? ಬಸವನ ಕೀರ್ತಿ ಎಲ್ಲಲ್ಲೂ ಹಬ್ಬೀತೆ?

3 years ago

#Wasteland #richland #Dream #come #true #Basavann #fame #spreading #everywhere

ವಿಜಾಪುರದ ವಿಮಾನ ನಿಲ್ದಾಣದ ಚಿತ್ರಗಳು ಮೂಡುತ್ತಿದ್ದವು ಮೀಡಿಯಾ ಪರದೆಯ ಮೇಲೆ. ಬಿಟ್ಟ ಕಣ್ಣು ಬಿಟ್ಟಂತೆ ನೋಡುತ್ತಿದ್ದೆ. ನನ್ನೂರಿಗೆ ವಿಮಾನ ! ಘಂಟೆಯಲ್ಲಿ ನಾನು ನನ್ನ ಹುಟ್ಟಿದೂರಿನಲ್ಲಿರಬಹುದು!!

ಹದಿನಾರು ಘಂಟೆಗಳ ಕಾಲ ಕೆಂಪು ಬಸ್ಸಿನಲ್ಲಿ ಕುಳಿತು ಬೆಂಗಳೂರನ್ನು ಮುಟ್ಟಿದವ ನಾನು. ಒಂದೆ ಘಂಟೆಯಲ್ಲಿ ವಿಜಾಪುರ ಮುಟ್ಟಬಹುದು! ಇದೇನು ಕನಸಾ? ಹೌದು, ನನ್ನಂತವರ ಕನಸುಗಳು ನನಸಾಗುತ್ತಿವೆ. ವಿಜಾಪುರಕ್ಕೆ ವಿಮಾನಗಳು ಇನ್ನಾರು ತಿಂಗಳಲ್ಲಿ ಬರಲಿವೆ. ನನ್ನವರ ದ್ರಾಕ್ಷಿ, ದಾಳಿಂಬೆ, ನಿಂಬೆ, ಗಜ್ಜರಿ, ಸವತೆ, ಉಳ್ಳಾಗಡ್ಡಿ ದೇಹಲಿ ತಲುಪಲಿವೆ. ಅಷ್ಟೇಕೆ ನನ್ನ ಮಗ ನೆಲೆಸಿರುವ ಅಮೇರಿಕೆಯನ್ನೂ ತಲುಪಬಹುದು. ನಮ್ಮ ದೊಡ್ಡಪ್ಪನ ಹೊಲದಲ್ಲಿ ಬೆಳೆದದ್ದು ಎಂದು ನನ್ನ ಮಗ ಬಾಯಿ ಚಪ್ಪರಸಿ ತಿನ್ನಬಹುದು.

ನನ್ನಂತಹವರ ಕನಸನ್ನು  ಸಾಕಾರಗೊಳಿಸುತ್ತಿದ್ದಾರೆ ಜಿಲ್ಲೆಯ ಕ್ರಿಯಾಶೀಲ ನಾಯಕರು. ಚಿತ್ರದಲ್ಲಿ ಮೂಲಭೂತ ಸೌಲಭ್ಯ ಒದಗಿಸುವ ಮಂತ್ರಿ ಕಾಣುತ್ತಲಿದ್ದರು. “ಐವತ್ತು ಕೋಟಿ ಹಣ ಬಿಡುಗಡೆ” ಮಾಡಿದ್ದೇನೆ ಎಂದರು. ಹಿಡಿದಿದ್ದನ್ನು ಸಾಧಿಸುವ ಛಲಗಾರಿಕೆ ಅವರ ಕಣ್ಣಲ್ಲಿ. ಅವರನ್ನು ನೋಡುತ್ತಿದ್ದಂತೆ ಹಿಂದಿನ ಚಿತ್ರಗಳು ಮನಃಪಟಲದ ಮೇಲೆ.

ಬರಪೀಡಿತ ವಿಜಾಪೂರ ಜಿಲ್ಲೆಗಾಗಿ ಏನಾದರೂ ಮಾಡುವ ತುಡಿತವಿರುವ ಎಂ. ಬಿ. ಪಾಟೀಲರು ಮೂರನೆಯ ಬಾರಿ ಶಾಸಕರಾಗಿ ಆಯ್ಕೆ ಆಗಿದ್ದರು. ಆಗ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರಲಿಲ್ಲ. ಇವರಾಗಿದ್ದರು ವಿರೋಧ ಪಕ್ಷದ ಶಾಸಕರು.

ಆಲಮಟ್ಟಿ ಆಣೆಕಟ್ಟು ಕಟ್ಟಿದ್ದು  ವಿಜಾಪೂರದಲ್ಲಿ. ಆಣೆಕಟ್ಟು ಮಾತ್ರ ಜಿಲ್ಲೆಯಲ್ಲಿ, ಆದರೆ ಬರದ ನಾಡಿಗೆ ಹನಿ ನೀರನ್ನು ಕೊಡದೆ ನೀರಿನ ಕಾಲುವೆಗಳು  ಮುಂದೆ ಸಾಗುತ್ತಿದ್ದವು ಕಲಬುರ್ಗಿ, ರಾಯಚೂರಿನತ್ತ. ಬಾಗಲಕೋಟೆ ವಿಜಾಪುರದ ರೈತರು ಆಣೇಕಟ್ಟಿನ ಹಿನ್ನೀರನ್ನು ಹಿಡಿದಿಟ್ಟುಕೊಳ್ಳಲು ಭೂಮಿ ಕಳೆದುಕೊಂಡು ಕಂಗಾಲಾಗಿದ್ದರು. ಜಿಲ್ಲೆಯಲ್ಲಿ  ಪಂಚನದಿಗಳು ಹರಿದರು ಕುಡಿಯಲು ನೀರಿಲ್ಲ. “ಕುಡಿಯಲು ನೀರು ಕೊಡಿ” ಎಂದರೆ ಸರಕಾರಗಳು ಸಬೂಬು ಹೇಳುತ್ತ ಕಾಲಹರಣ ಮಾಡುತ್ತಿದ್ದವು.

ಸಿವಿಲ್ ಇಂಜಿನಿಯರ್ ಪಾಟೀಲರಿಗೆ ಆಲಮಟ್ಟಿ ಜಲಾಶಯದ ನೀರಿನ ಹಂಚಿಕೆ ಅಸಮರ್ಪಕ ಎನಿಸುತ್ತಿತ್ತು. ಆದರೆ ಅಸಹಾಯಕ. ಇತ್ತ ಆಂಧ್ರ ಹಾಗು ಕರ್ನಾಟಕ  ಸರಕಾರಗಳು ಡ್ಯಾಮಿನ ಎತ್ತರಕ್ಕಾಗಿ ಕ್ಯಾತೆ ತೆಗೆದು ಸರ್ವೋಚ್ಚ ನ್ಯಾಯಾಲಯದ ಬಾಗಿಲು ತಟ್ಟಿದ್ದವು. ಕೋರ್ಟು ಮುದ್ದತ್ತಿನ ಮೇಲೆ ಮುದ್ದತ್ತು ಕೊಡುತ್ತಲಿತ್ತು. ಮಳೆಗಾಲದಲ್ಲಿ ಮೈದುಂಬಿ ಹರಿದು ಕೃಷ್ಣ ಸಮುದ್ರ ಸೇರುತ್ತಿದ್ದ.

‘ಕೃಷ್ಣಾ ನದಿಯನ್ನು ಕಣ್ಣಿರಿನ ನದಿ’ ಎಂದು ಹೆಸರಿಸಿವೆ ಪುರಾತನ ಗ್ರಂಥಗಳು. ಮಳೆಗಾಲದಲ್ಲಿ ಮೈತುಂಬಿ ಪ್ರವಾಹವಾಗಿ ಹರಿಯುವ ನದಿ ಬೇಸಿಗೆಯಲ್ಲಿ ಬತ್ತುವುದು. ಈ ನದಿಯ ನೀರನ್ನು ಸಮರ್ಪಕವಾಗಿ ಬಳಸಲು ಅನೇಕ ಆಣೆಕಟ್ಟುಗಳು ಬೇಕು. ಈಗಿರುವ ಆಲಮಟ್ಟಿ ಆಣೆಕಟ್ಟಿನ ಅಡಿಗಲ್ಲು ಹಾಕಿದ್ದು ಲಾಲ್ ಬಹಾದ್ದೂರ್ ಶಾಸ್ತ್ರೀಯವರು. ೧೯೬೦ರಲ್ಲಿ ಪ್ರಾರಂಭವಾದ ಯೋಜನೆ ಇಂದಿಗೂ ಅಪೂರ್ಣ.

ಆಮೆಗತಿಯಲ್ಲಿ ಸಾಗುತ್ತಿರುವ ಅಣೆಕಟ್ಟೆಗೆ ಅಡಿಗೊಂದು ತಕರಾರು. ಬಿರಿದು ನಿಂತಿರುವ ಬರಡು ಭೂಮಿಗೆ ನೀರಿಲ್ಲ. ಉತ್ತರ ಕೊಡಬೇಕಾದವರು ಊಂಡು ದುಂಡಗಾಗುತ್ತಿದ್ದಾರೆ. ಉತ್ತರ ಕಂಡುಕೊಂಡರು ಯುವಕ ಎಂ.ಬಿ.ಪಾಟೀಲರು. ಅವರ ಹೊಸ ಯೋಚನೆ ಯೋಜನೆಯನ್ನಾಗಿ ಮಾರ್ಪಡಿಸಲು ಚಿಂತಿಸಿದರು. ಈ ಪೋಲಾಗುವ ನೀರನ್ನು ಕೆರೆಗಳಿಗೆ ತುಂಬಿಸಿಕೊಂಡರೆ ಹೇಗೆ? ಅನೇಕ ನಗರಗಳಿಗೆ ಕುಡಿಯಲು ನೀರನ್ನೂ ಕೊಡಬಹುದು. ಕಾಲುವೆಗಳು ಹರಿದು ಹೋಗುವಾಗ ಪಂಪಿನಿಂದ ನೀರೆತ್ತಿ ಬೆಳೆಗಳಿಗೂ ಉಣಿಸಬಹುದು.  ಅಲ್ಲದೆ ಕೆರೆಗಳು ನೀರಿನಿಂದ ತುಂಬಿದರೆ  ಅಂತರ್ಜಲ ಹೆಚ್ಚಾಗಿ ಭಾವಿಗಳಲ್ಲಿ ನೀರು ಬರುವುದೆಂದು  ತಿಳಿಯದವರೆನಲ್ಲ ಅವರು. ತಡಮಾಡದೆ ತಮ್ಮ ಕನಸಿನ ಯೋಜನೆಯನ್ನು ಸರಕಾರದ  ಮುಂದಿಟ್ಟಾಗ ಜಿಲ್ಲೆಯ ಶಾಸಕರೆಲ್ಲ ಬೆಂಬಲಿಸುವ ಬದಲು ನಗಾಡಿದರು. “ಇದಾವ ಸೀಮೆಯ ಯೋಜನೆ” ಎಂದರು. ಪ್ರಯತ್ನ ನೆನಗುದಿಗೆ ಬಿತ್ತು.

೨೦೧೩ರಲ್ಲಿ ಎಂ.ಬಿ. ಪಾಟೀಲರು ಆಳುವ ಪಕ್ಷದ ಶಾಸಕರಾಗಿ ನಾಲ್ಕನೆಯ ಬಾರಿ ಆಯ್ಕೆಯಾದರು. ಕಾಂಗ್ರೆಸ್ ಪಕ್ಷ ಬಹುಮತ ಗಳಿಸಿತ್ತು. ಕಾಂಗ್ರೆಸ್ ಹೈ ಕಮಾಂಡ್ ಪಾಟೀಲರಿಗೆ ಹೆಚ್ಚಿನ  ಜವಾಬ್ದಾರಿ ನೀಡಲು ನಿರ್ಧರಿಸಿತ್ತು. ಮುಖ್ಯಮಂತ್ರಿಯಾಗಿ ಶ್ರೀ ಸಿದ್ಧರಾಮಯ್ಯನವರು ನಿಯೋಜಿತರಾದರು. ಉಳಿದಂತೆ ಸಚಿವರುಗಳಿಗೆ ಖಾತೆಗಳನ್ನು ಹಾಯ್ ಕಮಾಂಡ ನಿರ್ಧಾರ ಮಾಡಿತ್ತು.  ಐವತ್ತರ ಎಂ.ಬಿ.ಪಾಟೀಲರಿಗೆ ಬೃಹತ್ ಹಾಗು ಮಧ್ಯಮ ನಿರಾವರಿ ಖಾತೆ ಸಿಕ್ಕಿತ್ತು.

ದೊಡ್ಡ ಖಾತೆಯನ್ನು ಸಮರ್ಥವಾಗಿ  ನಿಭಾಯಿಸಬಲ್ಲರೆ ಅನನುಭವಿ ಪಾಟೀಲರು? ಸ್ವಚ್ಛ ಹಾಗು ಕ್ರಿಯಾಶೀಲ ಆಡಳಿತ ನೀಡುವ ಹಂಬಲ ಹೊಂದಿದ್ದರು ಮುಖ್ಯಮಂತ್ರಿಗಳು. ಪಾಟೀಲರನ್ನು ಹತ್ತಿರ ಕರೆದು “ಎಂ. ಬಿ. ನಿನಗೆ ಅನುಭವ ಕಡಿಮೆ, ಇದು ದೊಡ್ಡ ಖಾತೆ, ಯಾರಾದರೂ ಸೀನಿಯರ್ಸ್ ಗೆ ಈ ಖಾತೆಯ ಜವಾಬ್ದಾರಿ ವಹಿಸಿದರೆ ಹೇಗೆ?” ಎಂದರಂತೆ. ಆಗ ಪಾಟೀಲರು “ಹಾಗಿದ್ದರೆ ಸರ್ ನೀವೆ ಅದನ್ನು ವಹಿಸಿಕೊಳ್ಳಿ, ನಿಮಗಿಂತ ಅನುಭವಸ್ಥರು ನನಗೆ ಬೇರಾರು ಕಾಣುತ್ತಿಲ್ಲ. ಬೆರೆಯವರು ನಿಭಾಯಿಸಬಲ್ಲರಾದರೆ ನಾನೂ ಕೂಡ ನಿಭಾಯಿಸಬಲ್ಲೆ, ನಂಬುಗೆ ಇಡಿ ನಾನು ನಿಮಗೆ ಹೂ ತರುವೆನೆ ಹೊರತು ಹುಲ್ಲು ತರುವವನಲ್ಲ” ಎಂದರಂತೆ. ಸಂತೃಪ್ತರಾದ ಮುಖ್ಯಮಂತ್ರಿ “ಆಯಿತಪ್ಪ” ಎಂದು ಬೆನ್ನು ತಟ್ಟಿದರಂತೆ. ಆ ಐದು ವರ್ಷಗಳಲ್ಲಿ ಪಾಟೀಲರ ಸಾಧನೆ ಕರ್ನಾಟಕ ಸರಕಾರದ ಸಾಧನೆಯ ಒಟ್ಟು ಸಾದನೆಯ ಅರ್ಧದಷ್ಟಿತ್ತು. ಅದೀಗ ಇತಿಹಾಸ.

ಅಧಿಕಾರ ವಹಿಸಿಕೊಂಡ ನೀರಾವರಿ ಸಚಿವರು ತಮ್ಮ  ಕನಸಿನ ಯೊಜನೆಯನ್ನು ಕಾರ್ಯರೂಪಕ್ಕೆ ತಂದರು. ಮುಂದೆ ಆದದ್ದೆಲ್ಲ ಇತಿಹಾಸ. ಹಿಂದೆ ನಗಾಡಿದ್ದ ಸ್ಥಳೀಯ ಶಾಸಕರು ನೀರಾವರಿ ಸಚಿವರಲ್ಲಿ ಮನವಿಮಾಡಿ ತಮ್ಮ ಕ್ಷೇತ್ರಕ್ಕೂ ಆದ್ಯತೆಯ ಮೇಲೆ ಕೆರೆ ತುಂಬಿಸಿ ಅಂದರು. ನೀರು ತುಂಬಿಸಿಕೊಂಡರು. ಇಂದು ವಿಜಾಪುರ ಬರದ ನಾಡೆಂಬ ಕುಖ್ಯಾತಿಯನ್ನು ಕಳೆದುಕೊಳ್ಳುವ ಹಂತದಲ್ಲಿದೆ.

ಆದರೆ ೨೦೧೮ ರಿಂದ ಇಂದಿನವರೆಗೂ ದುರ್ದೈವಶಾತ್ ನೀರಾವರಿ ಕೆಲಸಗಳಲ್ಲಿ ಎಳ್ಳಷ್ಟೂ ಪ್ರಗತಿ ಕಾಣುತ್ತಿಲ್ಲ. ಪಾಟೀಲರ ಕಾಲದಲ್ಲಿ ಆದ ಕೆಲಸಗಳು ಎಲ್ಲಿದ್ದವೋ ಅಲ್ಲೆ ಇವೆ.

ನೂತನ ಸಚಿವ ಎಂ.ಬಿ.ಪಾಟೀಲರು ಹೊಸ ಸರಕಾರದಲ್ಲಿ ಇನ್ಫಾಸ್ಟ್ಕ್ಚರ್  ಖಾತೆಯ ಸಚಿವರು ಹೌದು. ಅವರ ಖಾತೆಯಲ್ಲಿ ವಿಮಾನ ನಿಲ್ದಾಣಗಳ ಅಭಿವೃದ್ಧಿಯು ಬರುವುದು.

ಅವರು ನನ್ನೂರಿನ (ವಿಜಾಪುರ) ವಿಮಾನ ನಿಲ್ದಾಣಕ್ಕೆ ಬೆಟ್ಟಿ ಕೊಟ್ಟಿರುವ ಚಿತ್ರಗಳು ತೆರೆಯಮೇಲೆ. ಚಾಲುಕ್ಯ ಶೈಲಿಯಲ್ಲಿರುವ ಕಟ್ಟಡವನ್ನು  ಕಲ್ಲಿನಿಂದ ಕಟ್ಟಿದಂತಿದೆ. ಅದಕ್ಕೆ “ವಿಶ್ವಗುರು ಬಸವಣ್ಣ ವಿಮಾನ ನಿಲ್ದಾಣ” ಎಂದು ನಾಮಕರಣ ವಾಗಬೇಕಿದೆ. ಬಾಕಿಯಿರುವ ಕೆಲಸಕ್ಕೆ ೫೦ ಕೋಟಿ ಹಣ ಬಿಡುಗಡೆ ಮಾಡಿದರಂತೆ ಸಚಿವರು.

ಹಿಂದುಳಿದ ಬರದ ನಾಡಿನ ಸ್ಥಳೀಯ ಶಾಸಕರು ಬೃಹತ್ ಹಾಗೂ ಮಧ್ಯಮ  ಕೈಗಾರಿಕಾ ಸಚಿವರಾಗಿದ್ದಾರೆ. ಬಯಸಿದರೆ ವಿಜಾಪುರವನ್ನು ಕೈಗಾರಿಕಾ ಕೇಂದ್ರ ಮಾಡಬಹುದು. ಸ್ಥಳೀಯವಾಗಿ  ಹೆಕ್ಟೇರುಗಟ್ಟಲೆ ಖರಾಬ್ ಜಮೀನಿದೆ. ಕೆಲಸಕ್ಕಾಗಿ ನಿರುದ್ಯೋಗಿ ಯುವಕರು ಕಾಯುತ್ತಿದ್ದಾರೆ. ನೀರಿಗಾಗಿ ಪಕ್ಕದಲ್ಲಿ ಕೃಷ್ಣಾ ನದಿಯಿದೆ. ವಿದ್ಯುತ್ ಗಾಗಿ ಜಿಲ್ಲೆಯ ಕೂಡಿಗಿಯಲ್ಲಿ ಉಷ್ಣ ಸ್ಥಾವರವಿದೆ. ಇದನ್ನೆಲ್ಲ ಒದಗಿಸುವ ಛಲಗಾರಿಕೆಯ ಮಂತ್ರಿಗಳಿಗಿದೆ. ಉದ್ದಿಮೆ ಸ್ಥಾಪಿಸಲು ಇನ್ನೇನು ಬೇಕು?

ನನ್ನ ಬರದ ನಾಡು ಸಮೃದ್ಧ ನಾಡಾದೀತೆ? ನನ್ನಂತಹವರ ಕನಸು ನನಸಾದೀತೆ? ಬಸವನ ಕೀರ್ತಿ ಎಲ್ಲಲ್ಲೂ ಹಬ್ಬೀತೆ? ನಾನು ಕನಸು ಕಟ್ಟುತ್ತಿರುವೆನೆ?

– ಜಿ.ಬಿ.ಪಾಟೀಲ್, ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ, ಜಾಗತಿಕ ಲಿಂಗಾಯತ ಮಹಾಸಭಾ

Leave a Reply