ಟಿಪ್ಪುಸುಲ್ತಾನ್ ಕುರಿತಂತೆ ಇನ್ನಿಲ್ಲದಂತೆ ವಿಷ ಕಾರುತ್ತಿರುವ ಇತಿಹಾಸದ ಅರಿವಿಲ್ಲದವರು ಮೊದಲು ಅರಿಯಬೇಕಾದದ್ದು ಯುದ್ಧ ಎನ್ನುವುದು ಮನುಕುಲದ ಕ್ರೌರ್ಯ ಎಂಬ ಸತ್ಯವನ್ನು. ಮೈಸೂರು ಸಂಸ್ಥಾನದ ಇತಿಹಾಸದಲ್ಲಿ ವಿಶೇಷವಾಗಿ ಒಡೆಯರ್ ವಂಶಸ್ಥರ ಆಳ್ವಿಕೆಯಲ್ಲಿಯೂ ಕೂಡ ಅನೇಕ ಹಿಂಸಾತ್ಮಕ ಘಟನೆಗಳು ಜರುಗಿವೆ. ಹದಿನೇಳನೆಯ ಶತಮಾನದಲ್ಲಿ ಮೈಸೂರನ್ನು ಆಳುವುದರ ಜೊತೆಗೆ ಸಂಸ್ಥಾನದ ಸಾಮ್ರಾಜ್ಯವನ್ನು ವಿಸ್ತರಿಸಿದ ಚಿಕ್ಕದೇವರಾಯ ಒಡೆಯರ್ ( ರಣಧೀರ ಕಂಠೀರವನ ತಂದೆ) ಇಲ್ಲಿನ ರೈತರಿಗೆ ಎಸೆಗಿದ ದ್ರೋಹ ಮತ್ತು ನಾಲ್ಕನೂರು ಲಿಂಗಾಯುತ ಸಮುದಾಯದ ಗುರುಗಳನ್ನು ಹತ್ಯೆ ಮಾಡಿದ ಇತಿಹಾಸ ಚರಿತ್ರೆಯ ಪುಟಗಳಲ್ಲಿ ದಾಖಲಾಗಿದ್ದರೂ ಸಹ ಯಾವೋಬ್ಬ ದೇಶಭಕ್ತ ಈ ಕುರಿತು ಮಾತನಾಡಲು ಅಥವಾ ನಾಟಕ ಬರೆಯಲು ಸಿದ್ಧನಿಲ್ಲ. ಏಕೆಂದರೆ ಅವನು ತೊಟ್ಟಿರುವ ಚೆಡ್ಡಿಯಲ್ಲಿ ಬೋಡಾ, ಸಾಂಬಾರ್ ಚೆಲ್ಲಾಡುವುದು ಖಚಿತ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಇಲ್ಲಿ ನಾನಾಗಲಿ ಅಥವಾ ನನ್ನ ಸಮಾನ ಮನಸ್ಕ ಮಿತ್ರರಾಗಲಿ ಟಿಪ್ಪು ಸುಲ್ತಾನ್ ರಾಮ ಅಥವಾ ಹರಿಶ್ಚಂದ್ರ ಎಂದು ಹೊಗಳಲು ಹೊರಟಿಲ್ಲ. ಒಂದು ಸಂಸ್ಥಾನದ ದೊರೆಯಾಗಿ ಯುದ್ಧ ಮತ್ತು ಆಡಳಿತಕ್ಕೆ ಸಂಬಂಧಪಟ್ಟಂತೆ ಅನೇಕ ಕಠಣ ನಿಯಮಗಳನ್ನು ಜಾರಿಗೆ ತಂದಿರುವುದನ್ನು ನಿರಾಕರಿಸುವುದಿಲ್ಲ. ನನ್ನ ಹಿರಿಯ ಮಿತ್ರರಾದ ಡಾ,ಹನೂರು ಕೃಷ್ಣಮೂರ್ತಿಯವರು ಬರೆದಿರುವ ‘ ಅಜ್ಞಾತನೊಬ್ಬನ ಆತ್ಮಚರಿತ್ರೆ ಎಂಬ ಕಾದಂಬರಿಯು ನನ್ನ ದೃಷ್ಟಿಯಲ್ಲಿ ಕುವೆಂಪುರವರ ಮಲೆಗಳಲ್ಲಿ ಮದುಮಗಳು, ಶಿವರಾಮಕಾರಂತರ ಬೆಟ್ಟದ ಜೀವ, ಕೃಷ್ಣ ಆಲನಹಳ್ಳಿಯವರ ಬುಜಂಗಯ್ಯನ ದಶಾವತಾರಗಳು ಮತ್ತು ಅನಂತಮೂರ್ತಿಯವರ ಸಂಸ್ಕಾರ ಇಂತಹ ಶ್ರೇಷ್ಠ ಕಾದಂಬರಿಗಳ ಸಾಲಿನಲ್ಲಿ ನಿಲ್ಲುವಂತಹದ್ದು. ಇಡೀ ಕಾದಂಬರಿಯ ವಸ್ತು, ಟಿಪ್ಪುವಿನ ಆಳ್ವಿಕೆಯ ಕಾಲದ ಓರ್ವ ದಳವಾಯಿಯ ಆತ್ಮಕಥನವಾಗಿದೆ. ಸೈನಿಕರು ಯುದ್ಧಕ್ಕೆ ಹೋಗುವಾಗ ತಾವು ಸಾಗುತ್ತಿರುವ ಮಾರ್ಗದಲ್ಲಿ ಸಿಗುವ ಗ್ರಾಮಗಳ ಮೇಲೆ ದಾಳಿ ಮಾಡಿ ಧವಸ, ಧಾನ್ಯ, ಕುರಿ, ಮೇಕೆಗಳಿಂದ ಹಿಡಿದು ಮಹಿಳೆಯರನ್ನು ಎಳೆದೊಯ್ದು ಯುದ್ಧರಂಗದಲ್ಲಿ ತಮ್ಮ ಲೈಂಗಿಕ ತೃಷೆಗೆ ಬಳಸಿಕೊಂಡ ವಿಷಯ ಓದುಗರಲ್ಲಿ ತಲ್ಲಣವನ್ನುಂಟು ಮಾಡುತ್ತದೆ. ಇದು ಕೇವಲ ಟಿಪ್ಪುಸುಲ್ತಾನ್ ಸೈನಿಕರ ಕಥೆಯಲ್ಲ, ಇಡೀ ಭಾರತದಲ್ಲಿನ ಸಾಮ್ರಾಟರ ಕಥನವೂ ಕೂಡ ಹೌದು.
1673 ರಿಂದ 1704 ರವರೆಗೆ ಮೈಸೂರು ಸಂಸ್ಥಾನವನ್ನು ಆಳಿದ ಚಿಕ್ಕದೇವರಾಯ ಒಡೆಯರ್ ರೈತರ ಮೇಲೆ ಕೃಷಿ ತೆರಿಗೆ ಹಾಕಿದಾಗ ಇದನ್ನು ನಂಜನಗೂಡು ಮತ್ತು ಗುಂಡ್ಲುಪೇಟೆ ಪ್ರದೇಶದ ರೈತರು ಪ್ರತಿಭಟಿಸಿದರು. ಭೂಮಿತಾಯಿ ಮತ್ತು ದೇವೇಂದ್ರನ ಕೃಪೆಯಿಂದ ನಾವು ಬೆಳೆಯನ್ನು ಬೆಳೆಯುತ್ತಿದ್ದೀವಿ. ದೊರೆಗೆ ತೆರಿಗೆ ಏಕೆ ನೀಡಬೇಕು ಎಂದು ಪ್ರತಿಭಟಿಸಿದ ಸಾವಿರಾರು ರೈತರ ಕಿವಿ ಮತ್ತು ಮೂಗು ಕತ್ತರಿಸಿದ ಘಟನೆ ಇತಿಹಾಸದಲ್ಲಿ ದಾಖಲಾಗಿದೆ. ರೈತರನ್ನು ಪ್ರಚೋದಿಸಿದ ಆಪಾದನೆಯ ಮೇಲೆ ನಾಲ್ಕನೂರು ಲಿಂಗಾಯುತ ಗುರುಗಳಿಗೆ ನಂಜನಗೂಡಿನಲ್ಲಿ ಔತಣಕೂಟದ ಆಹ್ವಾನ ನೀಡಿ ಎಲ್ಲರನ್ನು ಅರಮನೆಯ ಪೈಲ್ವಾನರ ಮೂಲಕ ಹತ್ಯೆಗೈದ ಇತಿಹಾಸವೂ ಕೂಡ ದಾಖಲಾಗಿದೆ. ನನ್ನ ಹಿರಿಯ ಮಿತ್ರರಾಗಿದ್ದ ಹಾಗೂ ಅಗ್ರಹಾರ ಕೃಷ್ಣಮೂರ್ತಿಯವರ ಮೂಲಕ ಪರಿಚಯವಾಗಿ ಆತ್ಮೀಯರಾಗಿದ್ದ ಡಾ.ಡಿ.ಆರ್. ನಾಗರಾಜ್ ಅವರು ಸಂಪಾದಕರಾಗಿ 2003 ರಲ್ಲಿ ಅಮೇರಿಕಾದ ಕ್ಯಾಲಿಪೋರ್ನಿಯಾ ವಿಶ್ವ ವಿದ್ಯಾನಿಲಯದಿಂದ ಪ್ರಕಟರಾಗಿರುವ ‘ ಕ್ಟಿಟಿಕಲ್ ಟೆನ್ಸನ್ ಇನ್ ದ ಹಿಸ್ಟರಿ ಆಫ್ ಕನ್ನಡ ಲಿಟರೇಚರ್’ ಎಂಬ ಕೃತಿಯಲ್ಲಿ ಈ ವಿಷಯ ಉಲ್ಲೇಖವಾಗಿದೆ. ಅಷ್ಟು ಮಾತ್ರವಲ್ಲದೆ, ಮೈಸೂರು ಗೆಜೆಟಿಯರ್ ನ ಪ್ರಾಚೀನ ಕೃತಿಗಳಲ್ಲಿಯೂ ಈ ವಿಷಯ ದಾಖಲಾಗಿದೆ.
ಚಿಕ್ಕದೇವರಾಯನು ತಂಜಾವೂರನ್ನು ಆಳುತ್ತಿದ್ದ ಮರಾಠಿ ದೊರೆ ಶರ್ಪೋಜಿ ಎಂಬಾತನಿಂದ ಬೆಂಗಳೂರು ನಗರವನ್ನು ಮೂರು ಲಕ್ಷ ರೂಪಾಯಿಗೆ ಖರೀದಿಸಿ ತನ್ನ ವಶಕ್ಕೆ ಪಡೆದುಕೊಳ್ಳಲು ಒಪ್ಪಂಧ ಪತ್ರ ಮಾಡಿಕೊಂಡಾಗ, ಔರಂಗಜೇಬನು ತನ್ನ ದಂಡನಾಯಕ ದಿವಾನ್ ಖಾಸಿಂ ಖಾನ್ ಮೂಲಕ ಬೆಂಗಳೂರನ್ನು ವಶಪಡಿಸಿಕೊಂಡನು. ನಂತರ ಚಿಕ್ಕದೇವರಾಯ ಆತನೊಂದಿಗೆ ವ್ಯವಹರಿಸಿ ಕಪ್ಪ ಕಾಣಿಕೆಯನ್ನು ನೀಡಿ, ಔರಂಗಜೇಬನು ಉಡುಗೊರೆಯಾಗಿ ನೀಡಿದ ಚಿನ್ನದ ಕತ್ತಿಯೊಂದಿಗೆ ಆಳ್ವಿಕೆ ಮಾಡಿದ ಚಿಕ್ಕದೇವರಾಯನ ಕುರಿತು ಏಕೆ ಯಾರೊಬ್ಬರು ಮಾತನಾಡುವುದಿಲ್ಲ? ಈಗ ಹೈಕೋರ್ಟ್ ಕಚೇರಿ ಇರುವ ಕಟ್ಟಡವು ಚಿಕ್ಕದೇವರಾಯನ ಕಾಲದಲ್ಲಿ ಹಠಾರ ಕಚೇರಿ ( ಹದಿನೆಂಟು ಕಚೇರಿ) ಎಂದು ಹೆಸರಾಗಿತ್ತು. ಇದಕ್ಕೆ ಪ್ರೇರಣೆ ಮೊಗಲರು. ಇತಿಹಾಸದಲ್ಲಿ ತಮ್ಮ ನೆಲ, ಸಾಮ್ರಾಜ್ಯದ ಉಳಿವು ಮತ್ತು ಒಳಿತಿಗಾಗಿ ಎಲ್ಲಾ ದೊರೆಗಳು ಒಳಿತು ಮತ್ತು ಕೆಡುಕು ಇವುಗಳ ಹಂಗಿಲ್ಲದೆ ವ್ಯವಹರಿಸಿದ್ದಾರೆ ಮತ್ತು ಯುದ್ಧ ಮಾಡಿದ್ದಾರೆ. ಹಾಗಾಗಿ ಯಾವೊಬ್ಬ ದೊರೆಯನ್ನು ನಾವು ಕ್ರೂರಿ ಎಂತಲೂ, ಅಪ್ರತಿಮ ಹೋರಾಟಗಾರ ಎಂತಲೂ ಬಣ್ಣಿಸಲು ಸಾಧ್ಯವಿಲ್ಲ.
.
ಇಡೀ ಭಾರತ ಮಾತ್ರವಲ್ಲ, ಜಗತ್ತಿನ ಇತಿಹಾಸದಲ್ಲಿ ಯುದ್ಧವೆಂಬುದು ಕ್ರೌರ್ಯ ಎಂದು ಮನಗಂಡ ಏಕೈಕ ಚಕ್ರವರ್ತಿ ಅಶೋಕ ಮಾತ್ರ. ಕಳಿಂಗ ಯುದ್ಧದಲ್ಲಿ ಇದನ್ನು ಮನಗಂಡ ಆ ಮಹಾಪುರುಷ ಬೌದ್ಧದರ್ಮಕ್ಕೆ ಮತಾಂತರಗೊಂಡು ಬುದ್ಧನ ಅನುಯಾಯಿಯಾಗಿ ಶಾಂತಿಯ ಇತಿಹಾಸವನ್ನು ಜಗತ್ತಿಗೆ ಪ್ರಸರಿಸಿದನು. ಅಶೋಕನ ಸಾಲಿನಲ್ಲಿ ನಾವ್ಯಾರೂ ಟಿಪ್ಪು ಅಥವಾ ಚಿಕ್ಕದೇವರಾಯ ಒಡೆಯರ್ ಇಂತಹವರನ್ನು ನಿಲ್ಲಿಸಲು ಸಾಧ್ಯವಿಲ್ಲ. ಇದು ನಮಗಿರಬೇಕಾದ ಇತಿಹಾಸದ ಕನಿಷ್ಠ ಪ್ರಜ್ಞೆ ಅಷ್ಟೇ.
– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು



