ವಿದ್ಯಾರ್ಥಿ ವೇತನ ಬಿಡುಗಡೆಗೆ ಆಗ್ರಹಿಸಿ ರಾಜ್ಯದ್ಯಾಂತ ಕಟ್ಟಡ ಕಾರ್ಮಿಕರ ಮಕ್ಕಳ ಪ್ರತಿಭಟನೆ
ಬೆಂಗಳೂರು: ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿಯು ಕೂಡಲೇ ವಿದ್ಯಾರ್ಥಿ ವೇತನ ಅರ್ಜಿಯ ಆನ್ ಲೈನ್ ಪೋರ್ಟಲ್ ಆರಂಭಿಸಬೇಕೆಂದು ಆಗ್ರಹಿಸಿ ರಾಜ್ಯಾದ್ಯಂತ ಕಟ್ಟಡ ನಿರ್ಮಾಣ ಕಾರ್ಮಿಕರು ಹಾಗೂ ಅವರ ಮಕ್ಕಳು ಕಾರ್ಮಿಕ ಕಚೇರಿಗಳು ಹಾಗೂ ಬೆಂಗಳೂರಿನ ಕಲ್ಯಾಣ ಮಂಡಳಿ ಮುಂದೆ ಪ್ರತಿಭಟನೆ ನಡೆಸಿ ಕಟ್ಟಡ ಕಾರ್ಮಿಕ ಕಲ್ಯಾಣ ಮಂಡಳಿ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿಗಳಿಗೆ ಮನವಿ ಸಲ್ಲಿಸಿದರು
ರಾಜ್ಯದ ಬೆಂಗಳೂರು, ಕೋಲಾರ, ತುಮಕೂರು, ದಾವಣಗೆರೆ, ಕಲಬುರಗಿ, ಮೈಸೂರು, ಬೆಳಗಾವಿ, ರಾಯಚೂರು, ವಿಜಯನಗರ, ಬಳ್ಳಾರಿ, ಕೊಪ್ಪಳ, ಚಾಮರಾಜನಗರ ಹಾಗೂ ಮೈಸೂರು ಜಿಲ್ಲಾ ಕೇಂದ್ರ ಹಾಗೂ ವಿವಿಧ ತಾಲೂಕುಗಳ ಕಾರ್ಮಿಕ ಕಚೇರಿಗಳ ಮುಂಭಾಗದಲ್ಲಿ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ (ರಿ) ಹಾಗೂ ಭಾರತ ವಿದ್ಯಾರ್ಥಿ ಫೆಡರೇಶನ್(SFI) ಆಯೋಜಿಸಲಾಗಿತ್ತು.
ಪ್ರತಿಭಟನಾ ಪ್ರದರ್ಶನ ನಡೆಸಿದ ಕಾರ್ಮಿಕರು ಹಾಗೂ ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸಲ್ಲಿಸಬೇಕಾದ ಮಕ್ಕಳು ಕೂಡಲೇ 2022 ನೇ ಸಾಲಿನ ವಿದ್ಯಾರ್ಥಿ ವೇತನ ಆನ್ ಲೈನ್ ಅರ್ಜಿ ಬಿಡುಗಡೆ ಮಾಡಬೇಕು, ಬಾಕಿ ಇರುವ ಕಳೆದ ವರ್ಷ ಅರ್ಜಿಗಳಿಗೆ ಕೂಡಲೇ ಧನಸಹಾಯ ನೀಡಬೇಕು ಹಾಗೂ ನಕಲಿ ನೋಂದಣಿ ಮಾಡಿಸಿ ಮಂಡಳಿ ಹಣ ದೋಚಿರುವ ಮತ್ತು ಅದಕ್ಕೆ ಕಾರಣವಾದ ನಕಲಿ ಫಲಾನುಭವಿಗಳು ಹಾಗೂ ಕಾರ್ಮಿಕ ಇಲಾಖೆಯ ಸಿಬ್ಬಂದಿ ಗಳ ಮೇಲೆ ಕ್ರಿಮಿನಲ್ ಮೊಕದ್ದಮೆ ಹೂಡಬೇಕು ಎಂದು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.
ಬೆಂಗಳೂರಿನ ಕಲ್ಯಾಣ ಮಂಡಳಿಯ ಎದುರು ನಡೆದ ಪ್ರತಿಭಟನೆ ತರುವಾಯ, ಕಲ್ಯಾಣ ಮಂಡಳಿಯ ಜಂಟಿ ಕಾರ್ಯದರ್ಶಿ ಶ್ರೀ ಶಿವಪುತ್ರ ಬಾಬುರಾವ್ ಅವರನ್ನು CWFI ರಾಜ್ಯ ಖಜಾಂಚಿ ಲಿಂಗರಾಜ್ ನೇತೃತ್ವದ ನಿಯೋಗ ಭೇಟಿ ಮಾಡಲಾಯಿತು.
ನಿಯೋಗದ ಜತೆ ಮಾತನಾಡಿದ ಜಂಟಿ ಕಾರ್ಯದರ್ಶಿಗಳು ಎಂಟರಿಂದ ಹತ್ತು ದಿನಗಳ ಒಳಗಾಗಿ ಕಲಿಕಾ ಭಾಗ್ಯ 2022-23ನೇ ಸಾಲಿನ ಶೈಕ್ಷಣಿಕ ಧನಸಹಾಯಕ್ಕೆ ಅರ್ಜಿ ಆಹ್ವಾನಿಸಲಾಗುವುದು ಎಂದು ತಿಳಿಸಿದರು.
‘ಎಸ್.ಎಸ್.ಪಿ ಪೋರ್ಟಲ್ ನಲ್ಲಿನ ತಾಂತ್ರಿಕ ತೊಂದರೆಗಳು ಹಾಗೂ ಬೋಗಸ್ ಕಾರ್ಡುಗಳ ನಿಯಂತ್ರಣದ ಸಂಬಂಧ ತಡೆ ಹಿಡಿಯಲಾಗಿದೆ. ಈ ಪ್ರಕ್ರಿಯೆ ಅಂತಿಮ ಹಂತದಲ್ಲಿದ್ದು, ಇದು ಬಹುತೇಕ ಬಗೆಹರಿಯಲಿದೆ’ ಎಂದು ಅವರು ತಿಳಿಸಿದ್ದಾರೆ. ಜತೆಗೆ 2021-22 ನೇ ಸಾಲಿನ ಬಾಕಿ ಪಾವತಿಗೆ ಕ್ರಮಕೈಗೊಳ್ಳಲಾಗುವುದು ಎಂದರು.
ರಾಜ್ಯಾದ್ಯಂತ ಹೋರಾಟ ಯಶಸ್ವಿಗೊಳಿಸಿದ ಎಲ್ಲರಿಗೂ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಫೆಡರೇಶನ್ (ರಿ) ವತಿಯಿಂದ CWFI ಕರ್ನಾಟಕ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ್ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.




