ಮತದಾರರ ಗುರುತಿನ ಚೀಟಿ ಮೊದಲಾದ ಅಕ್ರಮ: ಸಿಬಿಐ ಅಥವಾ ಎನ್‍ಐಎ ತನಿಖೆಗೆ ಬಿಜೆಪಿ ಆಗ್ರಹ

2 years ago

#VoterID #irregularities #BJP #demands #CBI #NIA #probe #BairathiSuresh

ಬೆಂಗಳೂರು: ನಗರಾಭಿವೃದ್ಧಿ ಮಂತ್ರಿ ಬೈರತಿ ಸುರೇಶ್ ಆಪ್ತ ಮೌನೇಶ್ ಕುಮಾರ್ ಮತ್ತವರ ತಂಡ ನಡೆಸಿದ ಆಧಾರ್ ಕಾರ್ಡ್, ಮತದಾರರ ಗುರುತಿನ ಚೀಟಿ ಮೊದಲಾದ ಅಕ್ರಮ ಗುರುತು ಚೀಟಿ ಸೃಷ್ಟಿ ಪ್ರಕರಣವನ್ನು ಸಿಬಿಐ ಅಥವಾ ಎನ್‍ಐಎ ತನಿಖೆಗೆ ವಹಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.

ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಮಾಜಿ ಸಚಿವ ಎಸ್.ಸುರೇಶ್ ಕುಮಾರ್, ಹೆಬ್ಬಾಳದ ಎಂಎಸ್‍ಎಲ್ ಟೆಕ್ನೊ ಸೊಲ್ಯೂಶನ್ಸ್‍ನಲ್ಲಿ ಸಿದ್ಧಪಡಿಸಿದ ನಕಲಿ ಆಧಾರ್ ಕಾರ್ಡ್‍ಗಳನ್ನು ರದ್ದುಪಡಿಸಬೇಕು. ಅಪರಾಧಿಗಳು ತಪ್ಪಿಸಿಕೊಳ್ಳಲು ಬಿಡಬಾರದು. ಇದು ಕೇವಲ ರಾಜಕೀಯದ ಪ್ರಶ್ನೆಯಲ್ಲ; ಸಮಾಜದ ಅಳಿವು ಉಳಿವಿನ ಪ್ರಶ್ನೆ ಎಂದು ಹೇಳಿದರು.

ಜನ್ಮ ದೃಢೀಕರಣ ಪತ್ರವನ್ನೂ ನೀಡದೆ ಆಧಾರ್ ಕಾರ್ಡ್ ಮಾಡಲಾಗಿದೆ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ರಾಜ್ಯದ ಮುಖ್ಯಮಂತ್ರಿಗಳು ಈ ವಿಚಾರದಲ್ಲಿ ತಮ್ಮ ಗಾಂಭೀರ್ಯತೆ ತೋರಿಸಲಿ ಎಂದು ಆಗ್ರಹಿಸಿದರು.

ಇದನ್ನು ಚುನಾವಣೆ ಗೆಲುವಿಗಾಗಿ ಮಾಡಿಸಿದ್ದಾರೆ ಎಂಬ ಮಾಹಿತಿ ಇದೆ ಹೀಗಾಗಿ ಇದರ ಕುರಿತು ಚುನಾವಣಾ ಆಯೋಗಕ್ಕೂ ದೂರು ಕೊಡಲಿದ್ದೇವೆ ಎಂದು ತಿಳಿಸಿದರು.

ಹೆಬ್ಬಾಳ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ  ಎಫ್‍ಐಆರ್ ಪ್ರಕಾರ ಆರ್‍.ಟಿ. ನಗರದ ಸುಲ್ತಾನ ಪಾಳ್ಯ ಬನಶಂಕರಿ ಕಾಂಪ್ಲೆಕ್ಸ್ ನ ಎಂಎಸ್‍ಎಲ್ ಟೆಕ್ನೊ ಸೊಲ್ಯೂಶನ್ಸ್‍ನಲ್ಲಿ ಗುರುತಿನ ಚೀಟಿಗಳನ್ನು ಸಿದ್ಧಪಡಿಸಲಾಗುತ್ತಿತ್ತು ಎಂದು ಉಲ್ಲೇಖಿಸಲಾಗಿದೆ. ಇವರು ಆಧಾರ್ ಕಾರ್ಡ್, ಚುನಾವಣಾ ಗುರುತಿನ ಚೀಟಿ, ಪಾನ್ ಕಾರ್ಡ್ ಮತ್ತಿತರ ದಾಖಲಾತಿಗಳನ್ನು ತಮ್ಮ ಅಂಗಡಿಯ ಕಂಪ್ಯೂಟರ್‌ನಲ್ಲಿ  ಸೃಷ್ಟಿ ಮಾಡಿ ತಮ್ಮ ಸ್ವಂತ ಲಾಭಕ್ಕಾಗಿ ಸಾರ್ವಜನಿಕರಿಗೆ ನೀಡುವ ಮೂಲಕ ಕಾನೂನುಬಾಹಿರ ಕೃತ್ಯಗಳಲ್ಲಿ ಭಾಗಿಯಾದವರಿಗೆ ಸಹಕರಿಸುತ್ತಿದ್ದರು. ನಿಜವಾದ ಗುರುತಿನ ಚೀಟಿಗಳೆಂದು ಹೆಚ್ಚಿನ ಹಣಕ್ಕೆ ನೀಡಿ ಸರಕಾರ ಮತ್ತು ಸಾರ್ವಜನಿಕರಿಗೆ ಮೋಸ ಮಾಡುತ್ತಿದ್ದರು.

ಈ ಹಿನ್ನೆಲೆಯಲ್ಲಿ ಎಂಎಸ್‍ಎಲ್ ಟೆಕ್ನೊ ಸೊಲ್ಯೂಶನ್ಸ್ ಮಾಲೀಕ ಮೌನೇಶ್ ಕುಮಾರ್ ಹಾಗೂ ಈತನ ಕೃತ್ಯಕ್ಕೆ ಸಹಕರಿಸಿದ ಭಗತ್, ರಾಘವೇಂದ್ರ ವಿರುದ್ಧ ಕಾನೂನು ಕ್ರಮ ಜರುಗಿಸಲು ಕೋರಲಾಗಿತ್ತು ಎಂದು ವಿವರಿಸಲಾಗಿದೆ.

ಈ ಅಪರಾಧವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದೆ. ಆಧಾರ್ ಕಾರ್ಡ್ ನಕಲಿ ಸೃಷ್ಟಿಯು ರಾಷ್ಟ್ರೀಯ ಭದ್ರತೆ ದೃಷ್ಟಿಯಿಂದ ಮಹಾನ್ ಅಪರಾಧ. ಆರೋಪಿಗಳು ಸಚಿವ ಬೈರತಿ ಸುರೇಶ್ ಅವರು ನಿಕಟವರ್ತಿಗಳು ಎಂದು ಆರೋಪಿ ಮೌನೇಶ್ ಸಚಿಬ ಬೈರತಿ ಸುರೇಶ್ ಅವರೊಂದಿಗೆ ಇರುವ  ಫೋಟೋವನ್ನು ಪ್ರದರ್ಶಿಸಿದರು.

ಈ ವೇಳೆ ಉಪಸ್ಥಿತರಿದ್ದ ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಹಾಗೂ ರಾಜ್ಯ ಕಾರ್ಯಕಾರಿಣಿ ಸದಸ್ಯ ವಿವೇಕ್ ರೆಡ್ಡಿ  ಮಾತನಾಡಿ, ಭಾರತದಲ್ಲಿ ಪೌರತ್ವ ಗುರುತುಚೀಟಿ ಇಲ್ಲ; ಅದಕ್ಕೆ ಹತ್ತಿರದ ಹೋಲಿಕೆಯ ಕಾರ್ಡ್ ಆಧಾರ್ ಕಾರ್ಡ್. ಇದರ ಮೂಲಕ ಹಲವಾರು ಸೌಲಭ್ಯ ಪಡೆಯಬಹುದು ಇಂತಹ ಗುರುತಿನ ಚೀಟಿ ಸೃಷ್ಟಿಸುವುದು ಅಕ್ಷಮ್ಯ ಅಪರಾಧ ಎಂದು ವಿವರಿಸಿದರು.

ಈ ಕೇಂದ್ರದಲ್ಲಿ ಬಾಂಗ್ಲಾದೇಶದ ವಲಸಿಗರಿಗೂ ನಕಲಿ‌ ಆಧಾರ್ ಕಾರ್ಡ್ ಕೊಟ್ಟಿರುವ ಸಾಧ್ಯತೆಯಿದೆ.

ಭಾರತೀಯ ನಿವಾಸಿಗಳು ಕೆಲವು ಸಂದರ್ಭಗಳಲ್ಲಿ ಕೋರ್ಟಿಗೆ ಹೋಗಿ, ಪುರಾವೆ ನೀಡಿ ಅತ್ಯಂತ ಕಷ್ಟದಿಂದ ಆಧಾರ್ ಕಾರ್ಡ್ ಮಾಡಿಸುತ್ತಾರೆ. ಆದರೆ, ಇಲ್ಲಿ ಬೇರೆ ದೇಶದವರು ಸಲೀಸಾಗಿ ನಕಲಿ ಆಧಾರ್ ಕಾರ್ಡ್ ಮಾಡಿಸುತ್ತಿದ್ದಾರೆ. ಪೊಲೀಸರು ಇದನ್ನು ಗಂಭೀರವಾಗಿ ಪರಿಗಣಿಸಬೇಕು ಎಂದು ಆಗ್ರಹಿಸಿದರು.

ಸರಕಾರ ಇದರ ಹಿಂದಿನ ಜಾಲವನ್ನು ಭೇದಿಸಿ ಪೂರ್ಣ ಜಾಲವನ್ನು ಬಂಧಿಸಲು ಸೂಚಿಸಬೇಕು. ಚುನಾವಣಾ ಆಯೋಗವು ಇಂಥ ಮತದಾರರ ನಕಲಿ ಗುರುತುಚೀಟಿ ಕುರಿತಂತೆ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

Leave a Reply