ಬೆಂಗಳೂರು: ಜೆಡಿಎಸ್ ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡ ಪರಿಣಾಮ ರಾಜ್ಯದ ಅನೇಕ ನಾಯಕರು ಅಸಮಾಧಾನ ಹೊಂದಿದ್ದಾರೆ. ಇವರಲ್ಲಿ ಕಾಂಗ್ರೆಸ್ ತತ್ವ, ಸಿದ್ಧಾಂತದಲ್ಲಿ ನಂಬಿಕೆಯಿಟ್ಟು ಬರುವವರಿಗೆ ಸ್ವಾಗತವಿದೆ ಎಂದು ಕೆಪಿಸಿಸಿ ಅಧ್ಯಕ್ಷ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಮೈತ್ರಿ ವಿರೋಧಿಸಿ ಜೆಡಿಎಸ್ ಗೆ ಗುಡ್ ಬೈ ಹೇಳಿದ ಮಾಜಿ ಶಾಸಕ ಶಫಿ ಅಹಮದ್, ಶಿವಮೊಗ್ಗದ ಎಂ.ಶ್ರೀಕಾಂತ್ ಸೇರಿದಂತೆ ಹಲವರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಮಾತನಾಡಿದ ಅವರು, ಇದೊಂದು ವಿಶೇಷವಾದ ಸಂದರ್ಭ. ವಿಜಯದಶಮಿಯಂದು ಜನತಾದಳದಿಂದ ಸಾವಿರಾರು ಕಾರ್ಯಕರ್ತರು ಹಾಗೂ ನಾಯಕರು ಕಾಂಗ್ರೆಸ್ ಪಕ್ಷ ಸೇರ್ಪಡೆಗೊಳ್ಳುತ್ತಿರುವುದು ಸಂತಸದ ಸಂಗತಿ ಎಂದರು.
‘ಪಕ್ಷಕ್ಕೆ ಮರಳಿರುವ ತುಮಕೂರಿನ ಶಫಿ ಅಹ್ಮದ್ ಅವರು ಈ ಹಿಂದೆ ದುಡುಕಿನ ನಿರ್ಧಾರ ಯಾಕೆ ತೆಗೆದುಕೊಂಡಿದ್ದರೊ ಗೊತ್ತಿಲ್ಲ, ಮತ್ತೆ ಅವರನ್ನು ಪಕ್ಷಕ್ಕೆ ಆಹ್ವಾನ ಮಾಡುತ್ತಿದ್ದೇವೆ. ಶಫಿ ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲು ಖುದ್ದಾಗಿ ಪರಮೇಶ್ವರ ಅವರೇ ಬರುತ್ತೇನೆ ಎಂದು ಹೇಳಿದ್ದರು. ದಸರಾಗೆ ದುಡಿದ ಪೊಲೀಸರಿಗೆ ಅಭಿನಂದನಾ ಸಮಾರಂಭ ಇದ್ದ ಕಾರಣ ಬರಲಾಗಲಿಲ್ಲ. ಮುಖ್ಯಮಂತ್ರಿ ಕೂಡಾ ಈ ಕಾರ್ಯಕ್ರಮಕ್ಕೆ ಬರಬೇಕಾಗಿತ್ತು, ಕೊನೆ ಕ್ಷಣದಲ್ಲಿ ಬೇರೆ ಕಾರ್ಯಕ್ರಮ ನಿಗದಿಯಾದ ಕಾರಣ ಬರಲಾಗಲಿಲ್ಲ. ಎಂದರು.
ಎಂ.ಶ್ರೀಕಾಂತ್ ನನ್ನ ಗೆಳೆಯ ಹಾಗೂ ಸಂಘಟನಾಗಾರ. ನಾಯಕರನ್ನು ಸೃಷ್ಟಿ ಮಾಡುವ ಶಕ್ತಿ ಅವರಲ್ಲಿದೆ. ಕಾಂಗ್ರೆಸ್ ಪಕ್ಷದಲ್ಲಿ ಇಂತಹ ನಾಯಕ ಅಗತ್ಯವಿದೆ. ಶಿವಮೊಗ್ಗ ಜಿಲ್ಲೆಯ ನಾಯಕರು ಹಾಗೂ ಯಶವಂತಪುರ ಕ್ಷೇತ್ರದ ನಾಯಕರು ಪಕ್ಷ ಸೇರ್ಪಡೆ ಬಲವರ್ಧನೆಗೆ ಅನುಕೂಲವಾಗುತ್ತದೆ ಎಂದರು.
ಕಾಂಗ್ರೆಸ್ ಶಕ್ತಿ, ದೇಶದ ಶಕ್ತಿ. ಕಾಂಗ್ರೆಸ್ ಇತಿಹಾಸವೇ ದೇಶದ ಇತಿಹಾಸ ಎಂದು ಬಣ್ಣಿಸಿ, ಇಂದು ಪಕ್ಷ ಸೇರ್ಪಡೆಯಾಗಿರುವ ಪ್ರತಿಯೊಬ್ಬ ಮುಖಂಡರೂ ಕನಿಷ್ಠ ಹತ್ತು ಕಾರ್ಯಕರ್ತರನ್ನು ಪಕ್ಷಕ್ಕೆ ಸೇರ್ಪಡೆ ಮಾಡಿ ತಮ್ಮ ನಾಯಕತ್ವವನ್ನು ಪ್ರದರ್ಶಿಸಬೇಕು ಎಂದು ಕರೆ ನೀಡಿದರು.
ಅನ್ಯ ಪಕ್ಷದ ಕಾರ್ಯಕರ್ತರನ್ನು ಕಾಂಗ್ರೆಸ್‌ಗೆ ಸೇರ್ಪಡೆ ಮಾಡಬೇಕು. ಇದು ನಾನು ಪಕ್ಷ ಸೇರಿರುವ ನಾಯಕರಿಗೆ ನೀಡುತ್ತಿರುವ ಟಾಸ್ಕ್ ಎಂದರು.
ರಾಜ್ಯದ ಗ್ಯಾರಂಟಿ ಯೋಜನೆಗಳು ಇಡೀ ದೇಶಕ್ಕೆ ಮಾದರಿಯಾಗಿವೆ. ಹಲವು ರಾಜ್ಯಗಳಲ್ಲಿ ಈಗ ಈ ಯೋಜನೆಗಳನ್ನು ಜಾರಿ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ಅವರು ಈ ಯೋಜನೆಗಳನ್ನು ನೋಡಿ ಹಲವು ಕಾರ್ಯಕ್ರಮಗಳನ್ನು ಜಾರಿ ಮಾಡಲು ಮುಂದಾಗಿದ್ದಾರೆ ಎಂದು ಹೇಳಿದರು.
ಎಲ್ಲಿ ಶ್ರಮ ಇದೆಯೋ ಅಲ್ಲಿ ಫಲ ಇದೆ, ಎಲ್ಲಿ ಮನಸ್ಸಿದೆಯೋ ಅಲ್ಲಿ ಮಾರ್ಗ ಇದೆ. ಎಲ್ಲಿ ಭಕ್ತಿ ಇದೆಯೋ ಅಲ್ಲಿ ದೇವರಿದ್ದಾರೆ. ಯಾವುದೂ ಶಾಶ್ವತವಲ್ಲ, ಇದನ್ನು ಎಲ್ಲರೂ ಅರಿತುಕೊಳ್ಳಬೇಕು. ಜನರೇ ನಮ್ಮ ದೇವರು ಎಂದರು.
ಪಕ್ಷ ಸೇರ್ಪಡೆಯಾಗಿರುವ ಎಲ್ಲ ನಾಯಕರು ಹಳೆಯದನ್ನು ಮರೆತು ಕಾಂಗ್ರೆಸ್ ಪಕ್ಷವನ್ನು ಗಟ್ಟಿಗೊಳಿಸುವ ಕೆಲಸ ಮಾಡಲಿ. ಎಲ್ಲರೂ ನಾಡಿನ ಅಭಿವೃದ್ಧಿಗೆ ಕೆಲಸ ಮಾಡೋಣ ಎಂದು ಕರೆ ನೀಡಿದರು.




