ವಿವೇಕಾನಂದರ ತತ್ವಾದರ್ಶಗಳು ವಿಶ್ವಕ್ಕೆ ಮಾದರಿ

2 years ago

ಬಳ್ಳಾರಿ: ಮಹಾನ್ ಮೇಧಾವಿ ಸ್ವಾಮಿ ವಿವೇಕಾನಂದರಿಗೆ ಅವರೇ ಸ್ಪೂರ್ತಿ. ಯುವಕರಿಗೆ ಅವರು ನೀಡಿದ ತತ್ವಗಳು ಭಾರತ ಮಾತ್ರವಲ್ಲದೆ ಹಲವಾರು ಪಾಶ್ಚಿಮಾತ್ಯ ರಾಷ್ಟ್ರಗಳಿಗೂ ಮಾದರಿಯಾಗಿವೆ ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಗೋಪಾಲ.ಎನ್‌. ಹೇಳಿದರು.

ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ಡಾ.ಬಿ.ಆರ್.ಅಂಬೇಡ್ಕರ್ ಸಭಾಂಗಣದಲ್ಲಿ ಸ್ವಾಮಿ ವಿವೇಕಾನಂದರ 161ನೇ ಜನ್ಮ ದಿನಾಚಾರಣೆಯ ಪ್ರಯುಕ್ತ ವಿದ್ಯಾರ್ಥಿ ಕಲ್ಯಾಣ ಘಟಕ ಹಾಗೂ ಬಳ್ಳಾರಿಯ ನೆಹರು ಯುವ ಕೇಂದ್ರದ ವತಿಯಿಂದ ಶುಕ್ರವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಅವರು, ಕಾಣದ ದೇವರ ಹುಡುಕಾಟಕ್ಕಾಗಿ ಪ್ರಪಂಚ ಪರ್ಯಟನೆ ಮಾಡುತ್ತ ತಮ್ಮ ಗುರುಗಳಾದ ರಾಮಕೃಷ್ಣ ಪರಮಹಂಸರನ್ನು ಕಂಡುಕೊಂಡರು. ಭಾರತೀಯ ಯೋಗ ಮತ್ತು ಆಧ್ಯಾತ್ಮವನ್ನು ಜಗತ್ತಿಗೆ ಪರಿಚಯಿಸಿದರು. ಯುವಜನತೆಯಲ್ಲಿ ರಾಷ್ಟ್ರಾಭಿಮಾನ ಮೂಡಿಸಿದ ಕೀರ್ತಿ ವಿವೇಕಾನಂದರಿಗೆ ಸಲ್ಲುತ್ತದೆ. ತಮ್ಮ ವಿಚಾರಧಾರೆಗಳಿಂದ ವಿವೇಕಾನಂದರು ಅಲ್ಪಸಮಯದಲ್ಲಿ ಪ್ರಪಂಚಕ್ಕೆ ಪರಿಚಿತರಾದವರು ಎಂದರು.

ಸನಾತನ ಧರ್ಮದ ತತ್ವಗಳನ್ನು ಜಗತ್ತಿಗೆ ಪರಿಚಯಿಸಿದ ಮಹಾನ್‍ ವ್ಯಕ್ತಿ ವಿವೇಕಾನಂದರು. ರಾಷ್ಟ್ರ, ಜನಾಂಗ, ಧರ್ಮಕ್ಕೆ ಸೀಮಿತವಾಗದೆ ಸಾಧನೆಯೆ ಪ್ರತಿ ಮನುಷ್ಯನ ಗುರುತು ಎಂದು ಸಾರಿದರು. ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಯುವಕರ ಸಕ್ರೀಯ ಪಾಲುದಾರಿಕೆ ಮುಖ್ಯ ಎಂಬುದು ವಿವೇಕಾನಂದರ ನಂಬಿಕೆಯಾಗಿತ್ತು. ಈ ನಿಟ್ಟಿನಲ್ಲಿ ಇಂದಿನ ಯುವಕರು ತಮ್ಮ ಸಮಯವನ್ನು ಒಳ್ಳೆಯ ವಿಚಾರಗಳಿಗಾಗಿ ಮೀಸಲಿಡಿ ಎಂದು ಕರೆ ನೀಡಿದರು.

ನೆಹರು ಯುವ ಕೇಂದ್ರ, ಬಳ್ಳಾರಿ ಶಾಖೆಯ ಯುವ ಅಧಿಕಾರಿ ಮೊಂಟು ಪತಾರ್ ಅವರು ಮಾತನಾಡಿ, ‘ಏಳು, ಎದ್ದೇಳು, ನಿನ್ನಲ್ಲಿರುವ ಸಾಮರ್ಥ್ಯ ಅರಿತುಕೊಳ್ಳು’ ಎನ್ನುವುದು ಈ ವರ್ಷದ ರಾಷ್ಟ್ರೀಯ ಯುವ ದಿನದ ಘೋಷವಾಕ್ಯವಾಗಿದೆ. ಪ್ರಪಂಚದಲ್ಲಿ ಅತಿಹೆಚ್ಚು ಯುವಕರನ್ನು ಹೊಂದಿರುವ ದೇಶ ನಮ್ಮದು. ಭಾರತದ ಯುವಕರು ಅಭಿವೃದ್ಧಿ ಪಥದಲ್ಲಿ ಸಾಗಬೇಕು ಆಗ ಮಾತ್ರ ಭಾರತ ಅಭಿವೃದ್ದಿ ಹೊಂದಲು ಸಾಧ್ಯ ಎಂದರು.

ವಿಶ್ವವಿದ್ಯಾಲಯದ ಕುಲಸಚಿವ ರುದ್ರೇಶ.ಎಸ್.ಎನ್ ಮಾತನಾಡಿ, ವಿವೇಕಾನಂದರ ತತ್ವ ಆದರ್ಶಗಳು ಇಂದಿಗೂ ಪ್ರಪಂಚದಾದ್ಯಂತ ಪ್ರಸ್ತುತವಾಗಿವೆ. ಯುವಕರು ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಯಶಸ್ವಿ ವ್ಯಕ್ತಿಯಾಗಬಹುದು. ಯುವಕರು ಜಾತಿ, ಧರ್ಮ ಮೀರಿ ಬೆಳೆಯಬೇಕು. ರಾಷ್ಟ್ರೀಯತೆಯ ಮೂಲಕ ದೇಶಿಯ ಸಂಸ್ಕøತಿಯನ್ನು ಪಾಲನೆ ಮಾಡಿ ಎಂದರು.

ವಿಶ್ವ ವಿದ್ಯಾಲಯದ ಕುಲಪತಿ ಪ್ರೊ.ಅನಂತ ಎಲ್ ಝಂಡೇಕರ್ ಮಾತನಾಡಿ, ನಿಷ್ಕಲ್ಮಶ ಹೃದಯವಿದ್ದಲ್ಲಿ ಅಲ್ಲಿ ದೇವರು ಇರುತ್ತಾನೆ ಎಂದು ವಿವೇಕಾನಂದರ ಮಾತನ್ನು ಸ್ಮರಿಸಿದರು. ಯುವ ಜನತೆಗೆ ನೀಡಿದ ಅವರ ತತ್ವಗಳು ಎಂದೆಂದಿಗೂ ಯುವಕರಿಗೆ ಸ್ಫೂತಿಯಾಗಿವೆ ಎಂದರು.

ಈ ಸಂದರ್ಭದಲ್ಲಿ ವಿಶ್ವವಿದ್ಯಾಲಯದ ವಿದ್ಯಾರ್ಥಿ ಕಲ್ಯಾಣ ಘಟಕದ ನಿರ್ದೇಶಕ ಡಾ.ಶಶಿಕಾಂತ್ ಎಚ್ ಮಜಗಿ, ಮೌಲ್ಯಮಾಪನ ಕುಲಸಚಿವ ಪ್ರೊ.ರಮೇಶ ಓ ಓಲೇಕಾರ್, ಹಣಕಾಸು ಅಧಿಕಾರಿಗಳಾದ ಪ್ರೊ.ಸದ್ಯೋಜಾತಪ್ಪ, ದೈಹಿಕ ಶಿಕ್ಷಣ ಅಧ್ಯಯನ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಶಶಿಧರ ಕೆಲ್ಲೂರ್ ಸೇರಿದಂತೆ ವಿವಿಧ ನಿಕಾಯಗಳ ಡೀನರು, ವಿವಿಧ ವಿಭಾಗಗಳ ಮುಖ್ಯಸ್ಥರು, ಸಂಯೋಜಕರು, ಬೋಧಕರು, ಸಂಶೋಧನಾ ವಿದ್ಯಾರ್ಥಿಗಳು, ಬೋಧಕೇತರ ಸಿಬ್ಬಂದಿ ಮತ್ತು ವಿದ್ಯಾರ್ಥಿಗಳು ಹಾಜರಿದ್ದರು.

Leave a Reply