ಜನರ ಎಲ್ಲಾ ವ್ಯವಹಾರಗಳಿಗೂ ಕಾನೂನಿನ ರಕ್ಷಣೆ
ನೋಂದಣಿ ರಹಿತ ವ್ಯವಹಾರಗಳ ಮೇಲೆ ಮಾತ್ರ ಸ್ಟಾಂಪ್ ಡ್ಯೂಟಿ
ಹತ್ತಾರು ವರ್ಷಗಳಿಂದ ಪರಿಷ್ಕರಣೆಯಾಗದ ಸ್ಟಾಂಪ್ ಡ್ಯೂಟಿ
ಆದಾಯ ಗಳಿಕೆಯೊಂದೇ ಈ ವಿಧೇಯಕದ ಉದ್ದೇಶವಲ್ಲ
ಪ್ರಸ್ತುತ 1,000 ಕೋಟಿ ಆದಾಯ ಇದ್ದು, ಶೇ.10 ರಷ್ಟು ಹೆಚ್ಚಬಹುದು
ಆದಾಯ ಸೋರಿಕೆ ತಡೆಗಾಗಿ ಜನವರಿಯಲ್ಲಿ ಆಕ್ಷನ್ ಪ್ಲ್ಯಾನ್
ಬೆಳಗಾವಿ: ಜನ ಸಾಮಾನ್ಯರ ನೋಂದಣಿ (ರಿಜಿಸ್ಟ್ರೇಷನ್) ರಹಿತ ವ್ಯವಹಾರಗಳಿಗೂ ಕಾನೂನಿನ ರಕ್ಷಣೆ ನೀಡುವ ಸಲುವಾಗಿ ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ-2023 ಮಂಡಿಸಲಾಗಿದೆ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
ವಿಧಾನ ಪರಿಷತ್ ನಲ್ಲಿ ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ-2023 ಮಂಡಿಸಿ ಮಾತನಾಡಿದ ಅವರು, ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದಲೂ ಸ್ಟಾಂಪ್ ಡ್ಯೂಟಿ ಪರಿಷ್ಕರಣೆಯಾಗಿಲ್ಲ. ಆದರೆ, ಅದೊಂದೇ ಕಾರಣಕ್ಕೆ ನಮ್ಮ ಸರ್ಕಾರ ಸ್ಟಾಂಪ್ ಡ್ಯೂಟಿ ಪರಿಷ್ಕರಣೆಗೆ ಮುಂದಾಗಿಲ್ಲ. ಬದಲಾಗಿ ಜನಸಾಮಾನ್ಯರ ಎಲ್ಲಾ ವ್ಯವಹಾರಗಳಿಗೂ ಕಾನೂನಿನ ಭದ್ರತೆ ಮತ್ತು ರಕ್ಷಣೆ ನೀಡುವ ಸಲುವಾಗಿಯೇ ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ-2023 ಮಂಡಿಸಲಾಗಿದೆ ಎಂದರು.
ಆಸ್ತಿ ನೋಂದಣಿ (ರಿಜಿಸ್ಟ್ರೇಷನ್) ಪ್ರಕ್ರಿಯೆಯಲ್ಲಿ ಎಲ್ಲರೂ ಸರ್ಕಾರಕ್ಕೆ ಶುಲ್ಕ ಪಾವತಿಸುತ್ತಾರೆ. ಇಂತಹ ಎಲ್ಲಾ ವ್ಯವಹಾರಗಳಿಗೆ ಕಾನೂನಿನ ರಕ್ಷಣೆ ಇದೆ. ಆದರೆ, ನೋಂದಣಿ ಹೊರತಾಗಿಯೂ ಜನ ಸಮಾನ್ಯರ ಅನೇಕ ವ್ಯವಹಾರಗಳಿಗೆ ಸ್ಟಾಂಪ್ ಅಗತ್ಯವಿದೆ. ಸಾಂಸ್ಥಿಕ ಬ್ಯಾಂಕ್ ವ್ಯವಹಾರ, ಸರ್ವೀಸ್ ಕಾಂಟ್ರಾಕ್ಟ್, ದೊಡ್ಡ ಕಂಪೆನಿಗಳು ಹಾಗೂ ಬ್ಯಾಂಕ್ ಗಳು ಸರ್ಕಾರದ ಜೊತೆಗೆ ನಡೆಸುವ ವಹಿವಾಟು, ಚಾರಿಟಬಲ್ ಟ್ರಸ್ಟ್, ಸೇಲ್ ಅಗ್ರಿಮೆಂಟ್, ಅಫಿಡವಿಟ್, ಎನ್ರೋಲ್ ಮೆಂಟ್ ಸೇರಿದಂತೆ ಎಲ್ಲದಕ್ಕೂ ನಮ್ಮಲ್ಲಿ ಸ್ಟಾಂಪ್ ಡ್ಯೂಟಿ ಇದೆ. ಆದರೆ, ಜನ ಪಾವತಿ ಮಾಡುತ್ತಿಲ್ಲ. ಹೀಗಾಗಿ ನಾಳೆ ಅವರಿಗೆ ಏನೇ ಸಮಸ್ಯೆಯಾದರೂ ಕಾನೂನಿನ ನೆರವು ಲಭ್ಯವಾಗುವುದಿಲ್ಲ ಎಂದರು.
ಇಷ್ಟೇ ಏಕೆ ಟೋಲ್ ಗೇಟ್ ನವರೂ ಸರ್ಕಾರಕ್ಕೆ ಸ್ಟಾಂಪ್ ಡ್ಯೂಟಿ ಕಟ್ಟಬೇಕು. ಆದರೆ, ಅವರೂ ಸಹ ಕಟ್ತಾ ಇಲ್ಲ. ಇದರಿಂದ ಸರ್ಕಾರಕ್ಕೆ ಹಣ ಸೋರಿಕೆಯೂ ಆಗುತ್ತಿದೆ. ದೊಡ್ಡ ದೊಡ್ಡ ಸಾಂಸ್ಥಿಕ ಸಂಸ್ಥೆಗಳೂ ಸಹ ಸ್ಟಾಂಪ್ ಡ್ಯೂಟಿ ಕಟ್ಟದಿರುವುದು ಸೋರಿಕೆಗೆ ಕಾರಣವಾಗಿದೆ. ಹೀಗಾಗಿ ಜನರ ವ್ಯವಹಾರಗಳಿಗೆ ಕಾನೂನಿನ ರಕ್ಷಣೆ ನೀಡುವ ಮತ್ತು ಸೋರಿಕೆ ತಡೆಗಟ್ಟುವ ನಿಟ್ಟಿನಲ್ಲಿ ಕರ್ನಾಟಕ ಸ್ಟಾಂಪ್ (ತಿದ್ದುಪಡಿ) ವಿಧೇಯಕ-2023 ಜಾರಿಗೆ ತರಲು ಸರ್ಕಾರ ಚಿಂತಿಸಿದೆ ಎಂದು ವಿವರಿಸಿದರು.
ರಾಜ್ಯದಲ್ಲಿ ಕಳೆದ ಮೂರು ದಶಕಗಳಿಂದ ಸ್ಟಾಂಪ್ ಡ್ಯೂಟಿ ಪರಿಷ್ಕರಣೆ ಮಾಡಲಾಗಿಲ್ಲ. ಅಫಿಡವಿಟ್ ಗೆ 2000 ದಲ್ಲಿ 20 ರೂ ಇತ್ತು. ಅದಾದ ಮೇಲೆ ಈ ದರವನ್ನು ಪರಿಷ್ಕರಿಸಿಲ್ಲ. ಅದೇ ರೀತಿ ಸೇಲ್ ಅಗ್ರಿಮೆಂಟ್ ಗೆ 1995ರಲ್ಲಿ 1000 ರೂ ಇತ್ತು. ಎನ್ರೋಲ್ಮೆಂಟ್ ಸರ್ಟಿಫಿಕೇಟ್ ಗೆ 2003ರಲ್ಲಿ 500 ರೂ. ಕ್ಯಾನ್ಸಲೇಷನ್ ಆಪ್ ಇನ್ಸ್ಟ್ರುಮೆಂಟ್ ಗೆ 2006 ರಲ್ಲಿ 100 ರೂ. ಲೆಟರ್ ಆಪ್ ಅಲಾಟ್ಮೆಂಟ್ ಗೆ 2003 ರಲ್ಲಿ 1 ರೂ. ಪಾರ್ಟಿಷನ್ ಗೆ 1999ರಲ್ಲಿ 250 ರೂ. ನಿಗದಿ ಮಾಡಲಾಗಿತ್ತು. ಆದರೆ, ಈ ಯಾವ ದರಗಳನ್ನೂ ಈವರೆವಿಗೂ ಪರಿಷ್ಕರಿಸಲಾಗಿಲ್ಲ ಎಂದು ಹೇಳಿದರು.
ಹೀಗಾಗಿ ನೆರೆಯ ರಾಜ್ಯಗಳಾದ ತಮಿಳುನಾಡು, ಕೇರಳ, ತೆಲಂಗಾಣ, ಆಂಧ್ರಪ್ರದೇಶ, ಗೋವಾ ಹಾಗೂ ಮಹಾರಾಷ್ಟ್ರಗಳಲ್ಲಿ ಈ ಎಲ್ಲಾ ಸೇವೆಗಳಿಗೆ ಎಷ್ಟರ ಮಟ್ಟಿಗೆ ಸ್ಟಾಂಪ್ ಡ್ಯೂಟಿ ವಿಧಿಸಲಾಗುತ್ತಿದೆ? ಎಂಬ ಬಗ್ಗೆ ಅಧಿಕಾರಿಗಳ ಜೊತೆಗೆ ಕೂಲಂಕುಷವಾಗಿ ಚರ್ಚಿಸಿ ದರಗಳನ್ನು ಪರಿಷ್ಕರಿಸಲಾಗಿದೆ. ಅಲ್ಲದೆ, 55 ಆರ್ಟಿಕಲ್ 181 ಸಬ್ ಆರ್ಟಿಕಲ್ ಇದ್ದು, ಈ ಪೈಕಿ ಕೇವಲ 30 ಆರ್ಟಿಕಲ್ ಗಳ ದರಗಳನ್ನು ಮಾತ್ರ ಪರಿಷ್ಕರಿಸಲಾಗಿದೆ. ಸ್ಟಾಂಪ್ ಡ್ಯೂಟಿಯಿಂದ ರಾಜ್ಯ ಸರ್ಕಾರಕ್ಕೆ ವಾರ್ಷಿಕ 1,000 ಕೋಟಿ ರೂ. ಆದಾಯ ಲಭ್ಯವಾಗುತ್ತಿದ್ದು, ಈ ತಿದ್ದುಪಡಿ ವಿಧೇಯಕದಿಂದ ಶೇ.10 ರಷ್ಟು ಆದಾಯ ಹೆಚ್ಚುವ ಸಾಧ್ಯತೆ ಇದೆ. ಆದರೆ, ಇದರಲ್ಲಿ ಆದಾಯ ಸೋರಿಕೆಯನ್ನು ತಡೆದು ದೊಡ್ಡ ದೊಡ್ಡ ಸಾಂಸ್ಥಿಕ ಸಂಸ್ಥೆಗಳನ್ನೂ ಸಹ ಸ್ಟಾಂಪ್ ಡ್ಯೂಟಿ ಅಡಿಗೆ ತರಲು ಮುಂದಿನ ಜನವರಿಯಲ್ಲಿ ಹೊಸ ಆಕ್ಷನ್ ಪ್ಲ್ಯಾನ್ ಸಿದ್ದಪಡಿಸಲಾಗವುದು ಎಂದು ಹೇಳಿದರು.




