ಸಿದ್ರಾಮಯ್ಯನವರಿಗೆ ವರುಣಾದಲ್ಲಿ ಜಯವಾಗಲಿ: ಪುರುಷೋತ್ತಮ ಬಿಳಿಮಲೆ

3 years ago

ಕಳೆದ ೨೫ ವರ್ಷಗಳಿಂದ ದೆಹಲಿಯಲ್ಲಿ ಇರುವುದರಿಂದ ನನಗೆ ಕರ್ನಾಟಕ ರಾಜಕಾರಣಿಗಳ ಒಡನಾಟವೇ ಇಲ್ಲ. ಅವರ ಜೊತೆ ನಿಂತು ಒಂದು ಫೋಟೋ ತೆಗಿಸಿಕೊಳ್ಳುವ ಸಣ್ಣ ಅವಕಾಶವೂ ನನಗೆ ದೊರೆತಿಲ್ಲ. ಈ ನಡುವೆ ದೆಹಲಿ ಕರ್ನಾಟಕ ಸಂಘದ ಅಧ್ಯಕ್ಷನಾಗಿದ್ದಾಗ ಧನ ಸಹಾಯಕ್ಕಾಗಿ ಆಗ ಉಪಮುಖ್ಯ ಮಂತ್ರಿಯಾಗಿದ್ದ ಸಿದ್ರಾಮಯ್ಯನವರನ್ನು ಅವರ ಮನೆಯಲ್ಲಿ ಭೇಟಿ ಆಗಿದ್ದೆ. ʼ ಎಲ್ಲಿದೇರಿ ದುಡ್ಡು? ಇಲ್ಲʼ ಅಂತ ಒಂದೇ ಮಾತಿನಲ್ಲಿ ನಮ್ಮನ್ನು ಹೊರಹಾಕಿದರು. ಮುಂದೆ ಏನೇನೋ ಆಯಿತು, ಕಟ್ಟಡ ಉದ್ಘಾಟನೆಗೆ ಅವರನ್ನು ಕರೆದಿದ್ದೆವು. ಬಂದು ನಾಲ್ಕು ಚೆಂದದ  ಮಾತು ಹೇಳಿದ್ದರು. ಆದರೂ  ಅವರೊಡನೆ ಮಾತಾಡುವ ಅವಕಾಶ ಸಿಕ್ಕಿರಲಿಲ್ಲ. ಸಂಘದ ಅಧ್ಯಕ್ಷನಾಗಿದ್ದ ನನ್ನನ್ನು ಅಂಚಿಗೆ ಸರಿಸಿ ಅವರೊಡನೆ ಹರಟಿದವರೇ ಹೆಚ್ಚು.

ಈ ಚುನಾವಣೆಯಲ್ಲಿ ಸಿದ್ರಾಮಯ್ಯನವರಿಗೆ ಒಂದು ಬಗೆಯ ತಾರಾ ಮೌಲ್ಯ ಪ್ರಾಪ್ತಿಸಿರುವುದನ್ನು ದೂರದಿಂದಲೇ  ಕಾಣುತ್ತಿದ್ದೇನೆ. ರಾಜಕಾರಣಿಯೊಬ್ಬ ಈ ರೀತಿಯಲ್ಲಿ  ಸೆಲೆಬ್ರಿಟಿ ಆಗುವ ಬಗೆ ಬಹಳ ವಿಶೇಷವಾದುದು. ಅವರ ಸುತ್ತ ಜನವೇ ಜನ! ಜಾತ್ರೆಯ ಸಂಭ್ರಮ. ಇವರೂ ಅಷ್ಟೇ. ಯಾವ ಕೃತಕತೆಯೂ ಇಲ್ಲದೆ, ಏಯ್‌, ಹೋಯ್‌, ಸುಮ್ಕಿರು, ಯಾವನಯ್ಯಾ ನೀನು? ಅಂತೆಲ್ಲ ಮಾತಾಡುತ್ತಾ, ಛೇಡಿಸುತ್ತಾ ಜನಗಳಿಗೆ ಹತ್ತಿರವಾಗುತ್ತಲೇ ಹೋಗ್ತಾರೆ.  ಅಗತ್ಯ ಬಿದ್ದರೆ ಪಂಚೆ ಎತ್ತಿಕಟ್ಟಿ ಜನಗಳೊಡನೆ ವೀರ ಕುಣಿತ ಮಾಡ್ತಾರೆ ಅಂದರೆ ಸಾಕಲ್ಲ!

ಕುಳಿತಲ್ಲಿಂದ ಎದ್ದು ಅವರು ಮಾತಿಗೆ ನಿಂತರೆ ಅಪಾರ ಸ್ಪಷ್ಟತೆ. ಸುತ್ತಲಿರುವವರನ್ನೆಲ್ಲ ಒಳಗೊಳ್ಳುವ ಕಣ್ಣೋಟ ಮತ್ತು ದೇಹ ಭಾಷೆ. ಅನೇಕ  ಬಜೆಟ್‌ ಮಂಡಿಸಿದ ಅನುಭವದ ಮೇಲಿಂದ ಅಂಕಿ ಅಂಶಗಳ ನಿಖರ ಮಂಡನೆ,  ಎದುರಾಳಿಯ ಬಗ್ಗೆ ದ್ವೇಷವಿಲ್ಲದ ರೀತಿಯ ಖಂಡನೆ, ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಗಳ ಬಗೆಗೆ ಅಪಾರ ತಿಳಿವಳಿಕೆ, ಕರ್ನಾಟಕದ ಕುರಿತ ಅನನ್ಯ ಪ್ರೇಮ, ಎಲ್ಲಕ್ಕೂ ಮಿಗಿಲಾಗಿ ಓದು ಮತ್ತು ಅನುಭವದ ಆಧಾರದಿಂದ ಹೇಳಬೇಕಾದ್ದನ್ನು  ಧೈರ್ಯವಾಗಿ ಹೇಳುವ ಎದೆಗಾರಿಕೆ, ಇವೆಲ್ಲವೂ ಅವರಿಗೆ ರಾಜಕಾರಣದಲ್ಲಿ ಮಹತ್ವದ ಸ್ಥಾನವೊಂದನ್ನು ಕಲ್ಪಿಸಿಕೊಟ್ಟಿದೆ.

ಆಕಾಶದಲ್ಲಿ ನಿಂತು ಭೂಮಿಯ ಮೇಲೆ ಹೂವು ಚೆಲ್ಲುವ ನಮ್ಮ ದೇವತೆಗಳಂತಲ್ಲ ಸಿದ್ರಾಮಯ್ಯ.  ಅವರದೇನಿದ್ದರೂ ಅಟ್ಟಕ್ಕೆ ಒದ್ದು ಆಗಸಕ್ಕೆ ಚಿಮ್ಮುವ ಬಯಲಾಟದ ಶೈಲಿ. ವರುಣಾದಲ್ಲಿ ಅವರಿಗೆ ಜಯಸಿಗಲಿ.

-ಪುರುಷೋತ್ತಮ ಬಿಳಿಮಲೆ, ವಿಮರ್ಶಕರು

Leave a Reply