ವಸಿಷ್ಟ ಸಹಕಾರಿ ಬ್ಯಾಂಕ್ ಬಿಜೆಪಿಯ ಐಎಂಎ ಹಗರಣ: ದರ್ಶನ್ ಜೈನ್

5 years ago

ಬಿಜೆಪಿ ಶಾಸಕ ರವಿಸುಬ್ರಹ್ಮಣ್ಯ ನೇರ ಚಿತಾವಣೆ ಎಂದ ಆಪ್

ಬೆಂಗಳೂರು: ಬಸವನಗುಡಿಯ ವಸಿಷ್ಟ ಸಹಕಾರ ಬ್ಯಾಂಕ್ ಕಳೆದ 8 ತಿಂಗಳಿಂದ ಠೇವಣಿದಾರರಿಗೆ ಬಡ್ಡಿ ಹಣ ಹಾಗೂ ಡಿವಿಡೆಂಡ್ ಗಳನ್ನು ನೀಡದೇ ಗ್ರಾಹಕರನ್ನು ಅಲೆದಾಡಿಸುತ್ತಿದೆ. 24 ವರ್ಷ ಹಳೆಯ ವಸಿಷ್ಟ ಸಹಕಾರಿ  ಬ್ಯಾಂಕ್ ಸಂಪೂರ್ಣ ಮುಳುಗುವ ಹಂತದಲ್ಲಿ ಇದ್ದು ಆಡಳಿತ ಮಂಡಳಿಯ ನಿರ್ದೇಶಕರ ಅಕ್ರಮ ಚಟುವಟಿಕೆಗಳೇ ಕಾರಣವಾಗಿದ್ದು ಸ್ಥಳೀಯ ಬಸವನಗುಡಿ ಬಿಜೆಪಿ ಶಾಸಕ ರವಿಸುಬ್ರಹ್ಮಣ್ಯ ನೇರ ಚಿತಾವಣೆ ಇದೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಜಂಟಿ ಕಾರ್ಯದರ್ಶಿ ದರ್ಶನ್ ಜೈನ್ ಆರೋಪಿಸಿದರು.

ಸಾವಿರಾರು ಹಿರಿಯ ನಾಗರಿಕರು ನಿವೃತ್ತಿ ನಂತರದ ಹಣವನ್ನು ತಮ್ಮ ಮಕ್ಕಳ ಮದುವೆ, ವಿದ್ಯಾಭ್ಯಾಸ ಇನ್ನಿತರ ಕಾರಣಗಳಿಗಾಗಿ ಠೇವಣಿ ಇಟ್ಟರೆ ಬ್ಯಾಂಕಿನ ಆಡಳಿತ ಮಂಡಳಿಯ ಪ್ರಮುಖ ನಿರ್ದೇಶಕ ಕೆ.ಎನ್.ವೆಂಕಟನಾರಾಯಣ  ಸ್ವಜನಪಕ್ಷಪಾತ, ಅಧಿಕಾರ ದುರ್ಬಳಕೆ ಮಾಡುವುದರ ಮೂಲಕ ತಮ್ಮವರಿಗೆ ಕೋಟ್ಯಂತರ ರೂಪಾಯಿಗಳ ಸಾಲವನ್ನು ನೀಡಿ, ವಸೂಲಿ ಮಾಡದೆ  ಠೇವಣಿದಾರರಿಗೆ ಮೋಸ ಮಾಡುತ್ತಿದ್ದಾರೆ. ಈತನ ಅಕ್ರಮಗಳ ಹಿಂದೆ ಸ್ಥಳೀಯ ಶಾಸಕ ರವಿಸುಬ್ರಹ್ಮಣ್ಯ  ಬೆಂಬಲ ಪ್ರಮುಖ ಕಾರಣ ಎಂದು ಆರೋಪಿಸಿದರು.

ಶಾಸಕರು ತಮ್ಮ ಕ್ಷೇತ್ರದ ಠೇವಣಿದಾರರ ಹಿತವನ್ನು ಕಾಯದೆ ಬ್ಯಾಂಕಿನ ಪರ ಧೋರಣೆಯನ್ನು ಹೊಂದಿರುವುದು ನಿಜಕ್ಕೂ ದುರದೃಷ್ಟಕರ. ಇದು ಬಿಜೆಪಿಗರ ಮತ್ತೊಂದು ಐಎಂಎ ಹಗರಣ ಎಂದು ಕಿಡಿಕಾರಿದರು.

ಈ ಹಿಂದೆ ಗುರು ಸಾರ್ವಭೌಮ ಸಹಕಾರಿ ಬ್ಯಾಂಕ್ ನಲ್ಲೂ ಸಹ ಇದೇ ರೀತಿಯ ಸಾವಿರಾರು ಕೋಟಿ ರೂ.ಗಳ ಹಗರಣದಲ್ಲಿಯೂ ಸಹ ಶಾಸಕರ ಹಸ್ತಕ್ಷೇಪದ ಆರೋಪ ಕೇಳಿಬಂದಿತ್ತು . ಇವರ ಯಾವುದೇ ವಿಚಾರಣೆಯೂ ಇದುವರೆಗೂ  ಸಹ ಆಗಿಲ್ಲ. ಈ ಪ್ರಕರಣದಲ್ಲಿ ಠೇವಣಿದಾರರಿಗೆ ಇದುವರೆವಿಗೂ ನಯಾಪೈಸೆಯೂ ಬಂದಿಲ್ಲ ಇದಕ್ಕೆಲ್ಲ ಬಿಜೆಪಿ ನಾಯಕರ ಕುಮ್ಮಕ್ಕೇ ಕಾರಣ ಎಂದು  ಆರೋಪಿಸಿದರು.

ಠೇವಣಿದಾರರ  ಹಣವನ್ನು ಬ್ಯಾಂಕಿನ ನಿರ್ದೇಶಕ ಕೆ.ಎನ್.ವೆಂಕಟನಾರಾಯಣ  ರಿಯಲ್ ಎಸ್ಟೇಟ್, ಷೇರು ಮಾರುಕಟ್ಟೆ ಚಲನಚಿತ್ರರಂಗ ಇನ್ನಿತರ ಕ್ಷೇತ್ರಗಳಲ್ಲಿ ಲಾಭ ಮಾಡುವ ದುರುದ್ದೇಶದಿಂದ ತೊಡಗಿಸಿತುವುದೇ ಈ ಅನಾಹುತಕ್ಕೆ ಪ್ರಮುಖ ಕಾರಣ. ಈ ಅಕ್ರಮಗಳ ಹಿಂದಿರುವ ಶಾಸಕರು ಹಾಗೂ ಪ್ರಭಾವಿಗಳ ವಿರುದ್ಧ  ತನಿಖೆಯನ್ನು ಕೇವಲ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸುವ ಮೂಲಕ ತಿಪ್ಪೆ ಸಾರಿಸುವ ಕೆಲಸ ಆಗುತ್ತಿದೆ. ಈ ಕೂಡಲೇ  ಪ್ರಭಾವಿಗಳ ವಿರುದ್ಧ  ಸಮಗ್ರ  ನ್ಯಾಯಾಂಗ ತನಿಖೆ ಆಗಲೇಬೇಕಿದೆ ಎಂದು ಪಕ್ಷದ ಮುಖ್ಯ ವಕ್ತಾರ ಶರತ್ ಖಾದ್ರಿ ಒತ್ತಾಯಿಸಿದರು.

ಈ ಅಕ್ರಮಗಳ ಹಿಂದೆ ಸಹಕಾರ ಇಲಾಖೆಯ ಅಧಿಕಾರಿಗಳ ಪಾತ್ರವನ್ನು ಸಹ  ತನಿಖೆಗೊಳಪಡಿಸಿ  ಠೇವಣಿದಾರರಿಗೆ ಸರ್ಕಾರವು ನ್ಯಾಯ ದೊರಕಿಸಿಕೊಡಬೇಕೆಂದು ಆಗ್ರಹಿಸಿದರು.

Leave a Reply