ಕಂಬಾಲಪಲ್ಲಿ ಘಟನೆ ಕುರಿತು ತೀಕ್ಷ್ಣವಾಗಿ ಮಾತನಾಡಬಾರದಿತ್ತು ಪ್ರಸಾದ್ ಎಂದಿದ್ದ ಮಲ್ಲಿಕಾರ್ಜುನ ಖರ್ಗೆ

5 years ago

ಅದು ಇಪ್ಪತ್ತನೇ ಶತಮಾನದ ಪ್ರಾರಂಭದ ದಿನಗಳು ಮಾರ್ಚ್-11-2000 ಇಸವಿಯಲ್ಲಿ ಕೋಲಾರ ಜಿಲ್ಲೆಯ ಕಂಬಾಲಪಲ್ಲಿ ಎಂಬ ಹಳ್ಳಿಯಲ್ಲಿ ರೆಡ್ಡಿ ಸಮುದಾಯದ ಜನರು ದಲಿತ ಕುಟುಂಬ ವಾಸವಿದ್ದ ಮನೆಗಳಿಗೆ ಬೆಂಕಿಯಿಡುವ ಮೂಲಕ 7 ಜನ ಅಮಾಯಕರನ್ನು ಬಹಳ ವ್ಯವಸ್ಥಿತವಾಗಿ ಸಂಚು ರೂಪಿಸಿ ಸಜೀವವಾಗಿ ಸುಡಲಾಗಿತ್ತು.

ಯಾವುದೇ ತಪ್ಪು ಮಾಡದೆ ಸ್ವಾಭಿಮಾನದಿಂದ ಬದುಕು ನಡೆಸುತ್ತಿದ್ದ ದಲಿತ ಕುಟುಂಬಗಳು ಮತ್ತು ಘಟನೆಯ ಹಿನ್ನೆಲೆ ಬಹುದೊಡ್ಡದಿದೆ.  ಘಟನೆಯ ನಂತರ ದೊಡ್ಡಮಟ್ಟದ ಹೋರಾಟ ನಡೆಸಿದರೂ ಸಹ ಈ ಪ್ರಕರಣಕ್ಕೆ ನ್ಯಾಯ ಸಿಗಲೇ ಇಲ್ಲ. ಪ್ರಪ್ರಥಮವಾಗಿ ಇಲ್ಲಿಯೇ ‘ದಲಿತ ಚಳುವಳಿ ಮತ್ತು ದಲಿತ ರಾಜಕಾರಣ’ ಸೋತಿದ್ದು.

ಘಟನೆಯ ಸಂದರ್ಭದಲ್ಲಿ ಕಾಂಗ್ರೆಸ್ ನೇತ್ವೃತ್ವದ ರಾಜ್ಯ ಸರ್ಕಾರದಲ್ಲಿ ಹಿರಿಯ ದಲಿತ ರಾಜಕಾರಣಿ ‘ಡಾ.ಮಲ್ಲಿಕಾರ್ಜುನ ಖರ್ಗೆ೯’ಯವರು ಗೃಹಮಂತ್ರಿ ಆಗಿದ್ದರು. ಹಲವು ದಿನಗಳ ನಂತರ ಘಟನೆಯ ಸ್ಥಳಕ್ಕೆ ಕೇಂದ್ರ ಸಚಿವರಾಗಿದ್ದ ವಿ.ಶ್ರೀನಿವಾಸ ಪ್ರಸಾದ್ ಸೇರಿದಂತೆ ಹಲವು ದಲಿತ ರಾಜಕಾರಣಿಗಳು, ಹೋರಾಟಗಾರರು, ಚಿಂತಕರು ಎಲ್ಲರೂ ಭೇಟಿ ನೀಡಿದ್ದರು. ಅಲ್ಲಿ ನಡೆದ ಕಾರ್ಯಕ್ರಮದಲ್ಲಿ  ‘ಈ ಘಟನೆಯನ್ನು ಸಿಬಿಐ ತನಿಖೆಗೆ ಒಪ್ಪಿಸಬೇಕು ಎಂದು ಮೊದಲಿಗೆ ಮಾತು ಆರಂಭಿಸಿದ ವಿ.ಶ್ರೀನಿವಾಸ ಪ್ರಸಾದ್ ಅವರು ತಪ್ಪಿತಸ್ಥರಿಗೆ ಕಠಿಣ ಶಿಕ್ಷೆಯಾಗಲೇಬೇಕೆಂದು ಆಗ್ರಹಿಸಿ ಮುಂದುವರೆದು ದಲಿತರು ವಾಪಸ್ ತಿರುಗಿ ಬೀಳುವವರೆಗೂ ಈ ರೀತಿ ದೌರ್ಜನ್ಯ, ದಬ್ಬಾಳಿಕೆಗಳು ನಡೆಯುತ್ತಲೇ ಇರುತ್ತವೆ. ನಾವು ನ್ಯಾಯಕ್ಕಾಗಿ ಕೋರ್ಟ್ ಗೆ ಅಲೆಯುತ್ತಲೇ ಇರಬೇಕಾಗುತ್ತದೆ! ನಾವೆಲ್ಲರೂ ಒಗ್ಗಟ್ಟಿನಿಂದ ನಿಂತು ಇಂತಹ ಘಟನೆಗಳನ್ನು ಹಿಮ್ಮಟ್ಟಿಸಬೇಕಿದೆ. ನಾವು ಬಡತನ ಸಹಿಸಿಕೊಳ್ಳಬಹುದು. ಆದರೆ ಅಸ್ಪೃಶ್ಯತೆ ಸಹಿಸಲು ಸಾಧ್ಯವಿಲ್ಲ. ಇದಕ್ಕೊಂದು ಅಂತ್ಯ ಹಾಡಬೇಕಿದೆ’ ಎಂದು ಸುಮಾರು ಅರ್ಧ ಗಂಟೆ  ತೀಕ್ಷ್ಣವಾಗಿ ಭಾಷಣ ಮಾಡಿ ದಲಿತ ಸಮುದಾಯಕ್ಕೆ ಧೈರ್ಯ ತುಂಬುತ್ತಾರೆ.

ಕೋಲಾರದ ಪ್ರವಾಸಿ ಮಂದಿರದಲ್ಲಿ ಮಧ್ಯಾಹ್ನ ಊಟಕ್ಕೆ ಕುಳಿತಾಗ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆಯವರು ಪ್ರಸಾದ್ ‘ನೀವು ಆ ರೀತಿ  ಕಠೋಠವಾಗಿ ಭಾಷಣ ಮಾಡಬಾರದಿತ್ತು. ನಾವುಗಳೇ ಜನರನ್ನು ಕೆರಳಿಸಿದರೆ ಹೇಗೆ?’ ಎಂದಿದ್ದರಂತೆ! ಆಗ ಪ್ರಸಾದ್ ಅವರು ‘ಖರ್ಗೆಯವರೇ ನಾನು ಇಂತಹ ಘಟನೆಗಳನ್ನ ಎಂದಿಗೂ ಸಹಿಸುವುದಿಲ್ಲ; ನನ್ನದು ನೇರ ನುಡಿ, ನಿಜವಾಗಿಯೂ ನಾವು ವಾಪಸ್ ತಿರುಗಿ ಬೀಳುವವರೆಗೆ ನಮಗೆ ಉಳಿಗಾಲವಿಲ್ಲ; ನ್ಯಾಯ ದಕ್ಕುವುದೂ ಇಲ್ಲ; ಗೃಹಮಂತ್ರಿಯಾಗಿ ಈ ರೀತಿ ಹಿಂಜರಿಕೆಯ ಮಾತು ಹೇಳಬಾರದು ನೀವು ಪಡೆದಿರುವ ಖಾತೆ ‘ಹುಲಿಯ ಮೇಲೆ ಸವಾರಿ ಮಾಡಿದಂತೆ’ ಎಂದು ಎಚ್ಚರಿಸಿದ್ದರಂತೆ!

– ಪ್ರಜ್ವಲ್ ಶಶಿ ತಗಡೂರು

Leave a Reply