ವಾಷಿಂಗ್ಟನ್: ಆಫ್ಘಾನಿಸ್ತಾನದಲ್ಲಿ ನಡೆಸುತ್ತಿರುವ ಯುದ್ಧವನ್ನು ತಲೆಮಾರುಗಳಿಗೆ ವಿಸ್ತರಿಸಬಾರದು ಎಂದು ಅಮೆರಿಕ ಅಧ್ಯಕ್ಷ ಜೋ ಬಿಡನ್ ಹೇಳಿದ್ದಾರೆ. ನಮ್ಮ ಮೇಲೆ ದಾಳಿ ನಡೆದಿತ್ತು. ನಮ್ಮ ಗುರಿ ತಲುಪಲು ನಾವು ಯುದ್ಧಕ್ಕೆ ಹೋಗಿದ್ದೆವು. ನಮ್ಮ ಉದ್ದೇಶಗಳನ್ನು ನಾವು ಈಡೇರಿಸಿದ್ದೇವೆ ಎಂದಿದ್ದಾರೆ.
ಸೆಪ್ಟಂಬರ್ 11ರ ದಾಳಿಯ 20ನೇ ವರ್ಷಾಚರಣೆಯ ವೇಳೆಗೆ ಆಫ್ಘಾನಿಸ್ತಾನದಲ್ಲಿ ನಿಯೋಜಿಸಲಾಗಿದ್ದ ಅಮೆರಿಕ ಸೇನೆಯನ್ನು ವಾಪಸ್ ಕರೆಸಿಕೊಳ್ಳುವುದಾಗಿ ಹೇಳಿದ್ದಾರೆ. ಸೇನೆ ವಾಪಸಾತಿ ಪ್ರಕ್ರಿಯೆ ಮೇ 1ರಂದು ಆರಂಭವಾಗಲಿದೆ ಎಂದು ಅವರು ಹೇಳಿದ್ದಾರೆ.
ಈ ಮೂಲಕ ದಶಕಗಳಿಂದ ಆಫ್ಘಾನಿಸ್ತಾನದಲ್ಲಿ ನಿಯೋಜಿಸಲಾಗಿದ್ದ ಅಮೆರಿಕ ಸೇನೆ ತನ್ನ ಹಿಡಿತವನ್ನು ಹಿಂತೆಗೆದುಕೊಳ್ಳಲು ಮನಸು ಮಾಡಿದಂತಾಗಿದೆ. ಸೇನೆಯ ಬಿಗಿಹಿಡಿತದಲ್ಲಿದ್ದ ಆಫ್ಘಾನಿಸ್ತಾನ ತುಸು ನಿರಾಳತೆ ಅನುಭವಿಸಿದೆ. ಆದರೆ, ಮುಂದಿನ ದಿನಗಳಲ್ಲಿ ತಾಲಿಬಾನಿ ಉಗ್ರರು ಯಾವ ನಡೆ ಇಡುತ್ತಾರೆ ಎಂಬುದನ್ನು ಕಾದುನೋಡಬೇಕಿದೆ.




