‘ಬಾಬಾ ಸಾಹೇಬ್ ಅಂಬೇಡ್ಕರ್ ಕೊನೆಯ ದಿನಗಳು’ ಶೀರ್ಷಿಕೆ ಅನಾವರಣ

1 hour ago

ಡಾ. ಬಿ.ಆರ್. ಅಂಬೇಡ್ಕರ್ ಕುರಿತು ಮತ್ತೊಂದು ಮಹತ್ವದ ಸಿನಿಮಾ

ಬೆಂಗಳೂರು: ಭಾರತೀಯ ಸಂವಿಧಾನದ ಶಿಲ್ಪಿ, ಮಹಾನ್ ಮಾನವತಾವಾದಿ ಡಾ. ಬಿ.ಆರ್. ಅಂಬೇಡ್ಕರ್ ಅವರ ಜೀವನದ ಅಂತಿಮ ಘಟ್ಟ ಹಾಗೂ ಇಲ್ಲಿಯವರೆಗೂ ಬೆಳಕಿಗೆ ಬಾರದ ಮಹತ್ವದ ಸಂಗತಿಗಳನ್ನು ಒಳಗೊಂಡ “ಬಾಬಾ ಸಾಹೇಬ್ ಅಂಬೇಡ್ಕರ್ ಕೊನೆಯ ದಿನಗಳು” ಸಿನಿಮಾದ ಶೀರ್ಷಿಕೆಯನ್ನು ಸಂವಿಧಾನ ಸಮರ್ಪಣಾ ದಿನದ ಅಂಗವಾಗಿ ಅನಾವರಣಗೊಳಿಸಲಾಗಿದೆ.

ವಿಧಾನಸೌಧದ ಮುಂಭಾಗದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಅವರ ಪ್ರತಿಮೆಯ ಎದುರು ಅತ್ಯಂತ ಗೌರವಪೂರ್ವಕವಾಗಿ ಚಿತ್ರದ ಶೀರ್ಷಿಕೆಯನ್ನು ಬಿಡುಗಡೆ ಮಾಡಲಾಯಿತು. ‘ಸಂವಿಧಾನ ಸಿನಿ ಕಂಬೈನ್ಸ್’ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಎರಡನೇ ಸಿನಿಮಾ ಇದಾಗಿದ್ದು, ಕನ್ನಡ, ಇಂಗ್ಲಿಷ್, ಹಿಂದಿ ಮತ್ತು ತಮಿಳು ಸೇರಿದಂತೆ ನಾಲ್ಕು ಭಾಷೆಗಳಲ್ಲಿ ಮೂಡಿಬರಲಿದೆ.

ಚಿತ್ರದ ಕಥಾವಸ್ತು ಮತ್ತು ವಿಶೇಷತೆಗಳು:
• ಸಂವಿಧಾನ ರಚನೆಯ ಸಂದರ್ಭದಲ್ಲಿ ಬಾಬಾಸಾಹೇಬರು ಅನುಭವಿಸಿದ ನೋವು ಮತ್ತು ಪಟ್ಟಭದ್ರ ಹಿತಾಸಕ್ತಿಗಳ ಕುತಂತ್ರಗಳನ್ನು ಈ ಚಿತ್ರದಲ್ಲಿ ಅನಾವರಣಗೊಳಿಸಲಾಗುತ್ತಿದೆ.
• ಜಾತಿರಹಿತ, ಸಮಾನತೆಯುಳ್ಳ ಪ್ರಬುದ್ಧ ಭಾರತವನ್ನು ನಿರ್ಮಿಸುವ ಅವರ ಮಹಾನ್ ಕನಸನ್ನು ತೆರೆಯ ಮೇಲೆ ಕಟ್ಟಿಕೊಡುವ ಪ್ರಯತ್ನ ಇದಾಗಿದೆ.
• ತಮ್ಮ ಜೀವನದ ಕೊನೆಯ ಕ್ಷಣಗಳಲ್ಲಿ ಕತ್ತಲೆಯಲ್ಲಿ ಕೊಳೆಯುತ್ತಿರುವ ಕೋಟ್ಯಂತರ ಬಡ ಹಾಗೂ ಶೋಷಿತ ಜನರ ಭವಿಷ್ಯ ಏನಾಗುವುದೋ ಎಂಬ ಚಿಂತೆಯಲ್ಲಿ ಬಾಬಾಸಾಹೇಬರು ಕಣ್ಣೀರಿಟ್ಟ ಭಾವುಕ ಕ್ಷಣಗಳು ಹಾಗೂ ಇಲ್ಲಿಯವರೆಗೂ ಯಾರೂ ಹೇಳದ ಐತಿಹಾಸಿಕ ಸಂಗತಿಗಳನ್ನು ಸಿನಿಮಾದಲ್ಲಿ ತೋರಿಸಲಾಗುತ್ತಿದೆ.
ತಾರಾಗಣ ಮತ್ತು ತಾಂತ್ರಿಕ ವರ್ಗ: ಹಿರಿಯ ಕಲಾವಿದರಾದ ಮುಖ್ಯಮಂತ್ರಿ ಚಂದ್ರು, ಡಾ.ಹ.ರಾ.ಮಹೇಶ್, ವಿನಯಾ ಪ್ರಸಾದ್, ತಾರಾ ಹಾಗೂ ಸುಚೇಂದ್ರ ಪ್ರಸಾದ್ ಚಿತ್ರದ ಪ್ರಮುಖ ತಾರಾಗಣದಲ್ಲಿದ್ದಾರೆ.
ಟೈಗರ್ ನಾಗ್ ಅವರು ಕಥೆ, ಚಿತ್ರಕಥೆ ಬರೆದು ಈ ಚಿತ್ರವನ್ನು ನಿರ್ಮಿಸುತ್ತಿದ್ದು, ನೀನಾಸಂ ಮಂಜು ಆಕ್ಷನ್ ಕಟ್ ಹೇಳುತ್ತಿದ್ದಾರೆ. ಹಿರಿಯ ಸಂಗೀತ ನಿರ್ದೇಶಕ ವಿ.ಮನೋಹರ್ ಸಂಗೀತದ ಜೊತೆಗೆ ಕ್ರಿಯೇಟಿವ್ ಹೆಡ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಡಾ.ಹ.ರಾ.ಮಹೇಶ್ ಸಂಭಾಷಣೆ, ವಿಪಿನ್ ವಿರಾಜ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ಈ ಮಹಾನ್ ಚರಿತ್ರೆಯನ್ನು ಜನರಿಗೆ ತಲುಪಿಸುವ ಪ್ರಯತ್ನಕ್ಕೆ ಸಮಸ್ತ ಜನತೆಯ ಪ್ರೀತಿ, ಹಾರೈಕೆ ಮತ್ತು ಬೆಂಬಲ ಇರಲಿ ಎಂದು ಚಿತ್ರತಂಡ ಕೋರಿದೆ.

Leave a Reply