ಲಿಂಗಾಯಿತರು ಸಿಎಂ ಅಭ್ಯರ್ಥಿ ಘೋಷಣೆ ಬಗ್ಗೆ ತೀರ್ಮಾನ ಆಗಿಲ್ಲ: ಬಸವರಾಜ ಬೊಮ್ಮಾಯಿ

3 years ago

ಬೆಂಗಳೂರು: ವಿಧಾನಸಭೆ ಚುನಾವಣೆಗೆ ಮುನ್ನ ಲಿಂಗಾಯತ ಸಮುದಾಯಕ್ಕೆ ಸೇರಿದವರನ್ನು ಮುಖ್ಯಮಂತ್ರಿ ಅಭ್ಯರ್ಥಿ ಎಂದು ಘೋಷಣೆ ಬಗ್ಗೆ ಬಿಜೆಪಿ ಯಾವುದೇ ತೀರ್ಮಾನ ತೆಗೆದುಕೊಂಡಿಲ್ಲ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ

ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಕಳೆದ ರಾತ್ರಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಲಿಂಗಾಯತ ನಾಯಕರ ಸಭೆಯಲ್ಲಿ ಈ ಕುರಿತಂತೆ ಬಿಜೆಪಿ ನಾಯಕರನ್ನು ಒತ್ತಾಯಿಸುವ ನಿರ್ಣಯ ಕೈಗೊಂಡಿಲ್ಲ ಎಂದು ಸ್ಪಷ್ಟ ಪಡಿಸಿದರು.

ಈ ಸಭೆಯಲ್ಲಿ ಸದ್ಯದ ರಾಜಕೀಯ ಸ್ಥಿತಿಗತಿಗಳ ಬಗ್ಗೆ ಮತ್ತು ಕಾಂಗ್ರೆಸ್‌ನವರ ಅಪಪ್ರಚಾರಕ್ಕೆ ಹೇಗೆ ಪ್ರತ್ತುತ್ತರ ನೀಡಬೇಕು ಎಂಬ ಬಗ್ಗೆ ಚರ್ಚೆ ನಡೆದಿದೆ. ಲಿಂಗಾಯತ ಮುಖ್ಯಮಂತ್ರಿ ಬಗ್ಗೆಯೂ ಕೆಲವರು ಸಲಹೆ ಕೊಟ್ಟಿದ್ದಾರೆ. ಸಭೆಯಲ್ಲಿ ಧರ್ಮೇಂದ್ರ ಪ್ರಧಾನ್ ಕೂಡಾ ಇದ್ದರು. ಸಭೆಯಲ್ಲಿ ವ್ಯಕ್ತವಾಗಿರುವ ಭಾವನೆಗಳನ್ನು ವರಿಷ್ಠರಿಗೆ ತಿಳಿಸುವುದಾಗಿ ಅವರು ಹೇಳಿದ್ದಾರೆ ಎಂದರು.

ಕಾಂಗ್ರೆಸ್ ಲಿಂಗಾಯತ ವಿರೋಧಿ ಧೋರಣೆ ಅನುಸರಿಸಿಕೊಂಡು ಬಂದಿದೆ. 1967ರಿಂದ ಈವರೆಗೆ 50 ವರ್ಷದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಒಬ್ಬನೇ ಒಬ್ಬ ಲಿಂಗಾಯಿತ ಮುಖ್ಯಮಂತ್ರಿಯನ್ನು ಮಾಡಲು ಸಾಧ್ಯವಾಗಲಿಲ್ಲ. ಈಗ ಚುನಾವಣಾ ಸಂದರ್ಭದಲ್ಲಿ ಆ ಸಮುದಾಯದ ಬಗ್ಗೆ ಅವರಿಗೆ ವಿಪರೀತ ಪ್ರೀತಿ ಹುಟ್ಟಿಕೊಂಡಿದೆ ಎಂದು ವ್ಯಂಗ್ಯವಾಡಿದರು.

ವೀರೇಂದ್ರ ಪಾಟೀಲ್ ಅವರನ್ನು ಕೇವಲ 9 ತಿಂಗಳು ಮುಖ್ಯಮಂತ್ರಿಗಳನ್ನಾಗಿ ಮಾಡಿ ಯಾವುದೇ ಆರೋಪಗಳಿಲ್ಲದಿದ್ದರೂ ವಿಮಾನ ನಿಲ್ದಾಣದಲ್ಲಿ ರಾಜೀನಾಮೆ ಕೊಡುವಂತೆ ಒತ್ತಡ ಹಾಕಲಾಯಿತು. ರಾಜಶೇಖರ್ ಮೂರ್ತಿಯನ್ನು ಕೂಡ ಅದೇ ರೀತಿ ನಡೆಸಿಕೊಳ್ಳಲಾಯಿತು. ಇಂಥವರು ಲಿಂಗಾಯಿತರ ಬಗ್ಗೆ ಮಾತನಾಡುವುದೇ ದುರ್ದೈವ ಎಂದು ಕುಹಕವಾಡಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ಅವಧಿಯಲ್ಲಿ ಲಿಂಗಾಯಿತ ಧರ್ಮವನ್ನು ಒಡೆದು ಪ್ರತ್ಯೇಕ ಧರ್ಮ ಮಾಡಲು ಹೊರಟಿದ್ದರು. ಜನ ಇದನ್ನು ಮರೆತುಬಿಟ್ಟಿದ್ದಾರೆ ಎಂದು ತಿಳಿದುಕೊಂಡಿದ್ದಾರೆ. ಇದರ ಪರಿಣಾಮವೇ ಕಾಂಗ್ರೆಸ್‍ಗೆ ತಕ್ಕ ಪಾಠ ಕಲಿಸಿದರು ಎಂದರು.

ಲಿಂಗಾಯತ ಮಾತ್ರವಲ್ಲದೆ ದಲಿತರು, ಹಿಂದುಳಿದವರು ಸೇರಿದಂತೆ ಪ್ರತಿಯೊಂದು ಸಮುದಾಯಕ್ಕೂ ಕಾಂಗ್ರೆಸ್ ಅನ್ಯಾಯ ಮಾಡಿಕೊಂಡೇ ಬಂದಿದೆ. ಒಂದಿಬ್ಬರನ್ನು ಈಗ ಪಕ್ಷಕ್ಕೆ ಸೇರ್ಪಡೆ ಮಾಡಿಕೊಂಡು ಬಿಜೆಪಿ ಅನ್ಯಾಯ ಮಾಡುತ್ತಿದೆ ಎಂದು ಹೇಳುತ್ತಿರುವುದು ದುರದೃಷ್ಟಕರ ಎಂದು ಹೇಳಿದರು.

ಹಲವಾರು ಕಾರಣದಿಂದಾಗಿ ಪಕ್ಷ ಬಿಟ್ಟು ಹೋಗಿರುವವರನ್ನು ಕರೆತರುವ ಪ್ರಯತ್ನ ಮುಂದುವರೆದಿದೆ. ಹೋಬಳಿ ಮಟ್ಟದಿಂದ ಹಿಡಿದು ಜಿಲ್ಲಾ ಹಂತದವರೆಗೂ ವಾಪಸ್ ಬನ್ನಿ ಎಂದು ಮನವಿ ಮಾಡಲಾಗಿದೆ ಎಂದು ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಮ್ಮ ಗೆಲುವಿಗಾಗಿ ವರುಣಾದಲ್ಲಿ ಜೆಡಿಎಸ್ ಜೊತೆ ಒಳ ಒಪ್ಪಂದ ಮಾಡಿಕೊಳ್ಳಬೇಕಾದ ದುಸ್ಥಿತಿ ಬಂದಿದೆ. 2018ರ ಫಲಿತಾಂಶ ಬರುತ್ತಿದ್ದಂತೆ ಯಾರು? ಯಾರ ಮನೆಗೆ ಹೋದರು ಎಂದು ಪ್ರಶ್ನಿಸಿದರು.

ಮತಕ್ಷೇತ್ರವಾದ ಶಿಗ್ಗಾವಿಯಲ್ಲೇ ಕಾಂಗ್ರೆಸ್-ಜೆಡಿಎಸ್ ಒಪ್ಪಂದ ಮಾಡಿಕೊಂಡಿವೆ. ಇದು ಎಲ್ಲರಿಗೂ ಗೊತ್ತಿರುವ ಸತ್ಯ. ಅನೇಕ ಕಡೆ ಇಂಥ ಒಳ ಒಪ್ಪಂದಗಳು ನಡೆದಿವೆ. ಇದನ್ನು ಸಿದ್ದರಾಮಯ್ಯ ಮರೆತುಬಿಟ್ಟಿದ್ದಾರಾ ಎಂದು ಪ್ರಶ್ನೆ ಮಾಡಿದರು.
ಎಲ್ಲ ಅಭ್ಯರ್ಥಿಗಳೂ ತಾವೇ ಗೆಲ್ಲಬೇಕೆಂದು ಎಂದು ಚುನಾವಣೆಯಲ್ಲಿ ನಿಲ್ಲುತ್ತಾರೆ. ಸಿದ್ದರಾಮಯ್ಯನವರಿಗೆ ಭಯ ಹುಟ್ಟಿಕೊಂಡಿದೆ. ಒಳ ಮೈತ್ರಿನಾ, ಹೊರ ಮೈತ್ರಿನಾ ಎಂದು ಮಾತನಾಡುತ್ತಿದ್ದಾರೆ. ಅಲ್ಲಿ ಎಲ್ಲ ಪಕ್ಷಗಳಿಂದಲೂ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಅವರಿಗೆ ಭಯ ಬಂದಿದೆ ಎಂದು ಟೀಕಿಸಿದರು.

Leave a Reply