ಕಾನೂನು ಬಾಹಿರ ಕೃತ್ಯಗಳು ನಡೆಯದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮ

3 years ago

ಬೆಂಗಳೂರು: ರಾಜ್ಯ ವಿಧಾನಸಭಾ ಚುನಾವಣೆಗೆ ದಿನಗಣನೆ ಆರಂಭಗೊಂಡ ಬೆನ್ನಲ್ಲೇ ಕಾನೂನು ಬಾಹಿರ ಕೃತ್ಯಗಳು ನಡೆಯದಂತೆ ಎಲ್ಲಾ ರೀತಿಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿರುವ ಬೆಂಗಳೂರು ಪೊಲೀಸರು ಅಪರಾಧ ಹಿನ್ನೆಲೆಯುಳ್ಳ ವ್ಯಕ್ತಿಗಳ ಚಟುವಟಿಕೆಗಳ ಮೇಲೆ ‌ನಿಗಾ ವಹಿಸಿದ್ದಾರೆ. ಈ ಸಂಬಂಧ ಬೆಂಗಳೂರಿನ 500ಕ್ಕೂ ಹೆಚ್ಚು ರೌಡಿಶೀಟರ್ಗಳ ಮನೆ ಮೇಲೆ ದಾಳಿ ನಡೆಸಿದ್ದಾರೆ.

ನಗರದ ಕೇಂದ್ರ, ದಕ್ಷಿಣ, ಪಶ್ಚಿಮ ಹಾಗೂ ಉತ್ತರ ವಿಭಾಗದಲ್ಲಿ ಏಕಕಾಲದಲ್ಲಿ ದಾಳಿ ನಡೆಸಿರುವ ಪೊಲೀಸರು 500ಕ್ಕೂ ಹೆಚ್ಚು ರೌಡಿಶೀಟರ್ಗಳ ಮನೆಗಳ ಮೇಲೆ ದಾಳಿ ನಡೆಸಿ ಪರಿಶೀಲನೆ ಕೈಗೊಂಡಿದ್ದಾರೆ.

ರೌಡಿ ಶೀಟರ್ಗಳ ಮನೆ ಮೇಲೆ ದಾಳಿ ವೇಳೆ ವಾರಂಟ್ ಪೆಂಡಿಂಗ್ ಇದ್ದ ಕೆಲ ರೌಡಿಗಳ ಮನೆಯಲ್ಲಿ ಮಚ್ಚು, ಲಾಂಗ್ ಇನ್ನಿತರ ಮಾರಕಾಸ್ತ್ರಗಳು ಪತ್ತೆಯಾಗಿದ್ದು ಅವುಗಳನ್ನು ಜಪ್ತಿ ಮಾಡಿ ವಿಚಾರಣೆ ನಡೆಸಲಾಗಿದೆ.

ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಸೂಚನೆ ಮೇರೆಗೆ ಕೇಂದ್ರ ವಿಭಾಗ, ದಕ್ಷಿಣ ವಿಭಾಗ, ಪಶ್ಚಿಮ ವಿಭಾಗ ಮತ್ತು ಉತ್ತರ ವಿಭಾಗದ ಡಿಸಿಪಿಗಳ‌ ನೇತೃತ್ವದಲ್ಲಿ ಸುಮಾರು ಐನೂರಕ್ಕೂ ಹೆಚ್ಚು ರೌಡಿಗಳ ನಿವಾಸದ ಮೇಲೆ ದಾಳಿ ನಡೆಸಿ ಮಾರಕಾಸ್ತ್ರ ಇಟ್ಟುಕೊಂಡಿದ್ದ ರೌಡಿಗಳನ್ನು ವಶಕ್ಕೆ ಪಡೆಯಲಾಗಿದೆ.

ರೌಡಿಗಳಿಗೆ ಚುನಾವಣಾ ಸಮಯದಲ್ಲಿ ಯಾವ ಪಕ್ಷದ ಪರ ಹೋಗಿ ಗಲಾಟೆ, ರೌಡಿ ಚಟುವಟಿಕೆಗಳು ನಡೆಸದಂತೆ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗದಂತೆ ಎಚ್ಚರಿಕೆ ನೀಡಲಾಗಿದೆ.
ಸುಮಾರು 1500ಕ್ಕೂ ಹೆಚ್ಚು ಪೊಲೀಸ್ ಅಧಿಕಾರಿಗಳು ಸಿಬ್ಬಂದಿಗಳಿಂದ ದಾಳಿ ನಡೆಸಿ ರೌಡಿಗಳ ಉದ್ಯೋಗ,ಸಂಬಂಧಿಕರ ಮಾಹಿತಿ ಬಳಸುತ್ತಿರುವ ಮೊಬೈಲ್ ಸಂಖ್ಯೆಗಳನ್ನು ಪಡೆಯಲಾಗಿದೆ.

ನಗರದಲ್ಲಿ ಗಂಭೀರ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿದ್ದ 12 ರೌಡಿಗಳನ್ನು ಈಗಾಗಲೇ ಗಡಿಪಾರು ಮಾಡಲಾಗಿದ್ದು,ಮತ್ತೆ 45 ಕ್ಕೂ ಹೆಚ್ಚು ರೌಡಿಗಳನ್ನು ಗಡಿಪಾರು ಮಾಡಲು ಸಿದ್ಧತೆ ನಡೆಸಲಾಗಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply