ಕೊರೊನಾ ನಿಯಂತ್ರಣ ಹೆಸರಿನಲ್ಲಿ ತುಘಲಕ್ ದರ್ಬಾರ್: ಸಿದ್ದರಾಮಯ್ಯ

5 years ago

ಬೆಂಗಳೂರು: ರಾಜ್ಯದ ಬಿಜೆಪಿ ಸರ್ಕಾರ ನಗರಗಳಲ್ಲಿ ರಾತ್ರಿ ಕರ್ಪ್ಯೂ ಹೇರಲು ಕೈಗೊಂಡಿರುವ ಕ್ರಮ, ಕೊರೊನಾ ಓಡಿಸಲು ತಟ್ಟೆ ಬಡಿಯಲು ಪ್ರಧಾನಿ  ನರೇಂದ್ರ ಮೋದಿಯವರು ನೀಡಿದ್ದ ಕರೆಯಷ್ಟೇ  ಬಾಲಿಶ ಕ್ರಮ. ದೆಹಲಿಯಲ್ಲೊಬ್ಬರು ಪಾಳೆಯಗಾರ, ಕರ್ನಾಟಕದಲ್ಲೊಬ್ಬರು ಮಾಂಡಲಿಕ, ಭಲೇ  ಜೋಡಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕುಟುಕಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಕೊರೊನಾ ಎರಡನೇ ಅಲೆ ತಡೆಯುವ ನಿಟ್ಟಿನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ರಾಜ್ಯಗಳ ಸಿಎಂ ಜೊತೆ ಸಭೆ ನಡೆಸಿದ್ದರು. ಕ್ರಮ ಕೈಗೊಳ್ಳುವಂತೆ ಸಲಹೆ ನೀಡಿ, ಕೊರೊನಾ ಕರ್ಫ್ಯೂ ವಿಧಿಸಲು ಸಲಹೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಸಿದ್ದರಾಮಯ್ಯ, ರಾತ್ರಿ ತೆರೆದಿರುವ ಹೊಟೇಲ್, ಚಿತ್ರಮಂದಿರ ಮತ್ತು ಅಂಗಡಿಮುಂಗಟ್ಟುಗಳನ್ನು ಮುಚ್ಚಿದರೆ ಸಾಲದೇ?  ಕೊರೊನಾ ನಿಯಂತ್ರಣಕ್ಕೆ ಯಾವ ರೀತಿಯಲ್ಲಿಯೂ ಉಪಯೋಗವಾಗದ ಆಯ್ದ ನಗರಗಳಲ್ಲಿ ರಾತ್ರಿ ಕರ್ಪ್ಯೂವಿನ ನಾಟಕ ಯಾಕೆ? ಎಂದು ಪ್ರಶ್ನಿಸಿದ್ದಾರೆ.

ಕೊರೊನಾ ನಿಯಂತ್ರಿಸುವ ಪ್ರಾಮಾಣಿಕ ಇಚ್ಛೆ ಮುಖ್ಯಮಂತ್ರಿಗಳು ಹೊಂದಿದ್ದರೆ, ಮೊದಲು ಸುರಕ್ಷತಾ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಲು ಕ್ರಮಕೈಗೊಳ್ಳಬೇಕು, ಕೋವಿಡ್ ಪರೀಕ್ಷೆ ಹೆಚ್ಚಿಸಬೇಕು, ಸೋಂಕಿತರಿಗೆ ತಕ್ಷಣ ಚಿಕಿತ್ಸೆ ಲಭ್ಯವಿರುವಂತೆ ನೋಡಿಕೊಳ್ಳಬೇಕು ಎಂದು ಸಲಹೆ ನೀಡಿದ್ದಾರೆ.

ಕೋವಿಡ್ ವ್ಯಾಕ್ಸಿನ್ ಪ್ರಾರಂಭಿಸಿ 80 ದಿನಗಳು ಕಳೆದರೂ ಕೇವಲ ಶೇಕಡಾ ಒಂದರಷ್ಟು ಜನಸಂಖ್ಯೆಗೆ ಮಾತ್ರ ನೀಡಲು ಸಾಧ್ಯವಾಗಿದೆ. ರಾಜ್ಯದಲ್ಲಿ ಈಗಾಗಲೇ ವ್ಯಾಕ್ಸಿನ್ ಕೊರತೆಯ ದೂರು ಕೇಳಿಬರತೊಡಗಿದೆ. ಗಿಮಿಕ್‌ಗಳನ್ನು ಬಿಟ್ಟು ಈ ಕಡೆ ಗಮನಹರಿಸಿ ಎಂದಿದ್ದಾರೆ.

ದೇಶದ ಪ್ರಧಾನಿಯ ಅಂಧಾ ದರ್ಬಾರ್‌ನಿಂದ ರಾಜ್ಯದ ಮುಖ್ಯಮಂತ್ರಿಗಳು ಸ್ಪೂರ್ತಿ ಪಡೆದರೆ, ಮುಖ್ಯಮಂತ್ರಿಗಳಿಂದ ಪ್ರೇರಣೆ ಪಡೆದು ಕೆಲವು ಜಿಲ್ಲಾಧಿಕಾರಿಗಳು ಕೊರೊನಾ ನಿಯಂತ್ರಣದ ಹೆಸರಲ್ಲಿ ತುಘಲಕ್ ದರ್ಬಾರ್ ನಡೆಸುತ್ತಿದ್ದಾರೆ. ಮುಖ್ಯಮಂತ್ರಿಗಳೇ, ನೀವು ಸ್ವಲ್ಪ ಬುದ್ದಿ ಕಲಿಯಿರಿ, ಅವರಿಗೂ ಸ್ವಲ್ಪ‌ ಬುದ್ದಿ ಹೇಳಿ ಎಂದು ಅವರು ಕಿಡಿಕಾರಿದ್ದಾರೆ.

Leave a Reply