ಬೆಂಗಳೂರು: ಕೃಷಿ ವಿರೋಧಿ ಕಾಯ್ದೆಗಳ ಮೂಲಕ ರೈತರ ಬದುಕನ್ನು ಶಾಶ್ವತವಾಗಿ ಘಾಸಿಮಾಡಿರುವ ಕೇಂದ್ರದ ಬಿಜೆಪಿ ಸರ್ಕಾರ ಇದೀಗ ರಸಗೊಬ್ಬರದ ಬೆಲೆ ಏರಿಸಿ ಅವರ ಗಾಯದ ಮೇಲೆ ಬರೆ ಎಳೆದಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.
ರಸಗೊಬ್ಬರಗಳ ಬೆಲೆ ಏರಿಕೆಯನ್ನು ವಿರೋಧಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಅವರು, ಕೇಂದ್ರದ ರೈತ ಶತ್ರು ನರೇಂದ್ರ ಮೋದಿ ಸರ್ಕಾರ ರಸಗೊಬ್ಬರದ ಬೆಲೆಗಳನ್ನು ಶೇ. 60ರಷ್ಟು ಹೆಚ್ಚಿಸಿದೆ. ಡಿ.ಎ.ಪಿ ಗೊಬ್ಬರ ಏಪ್ರಿಲ್ 1ರಿಂದ ಒಂದು ಕ್ವಿಂಟಾಲಿಗೆ 1400 ಗಳಷ್ಟು ಬೆಲೆ ಜಾಸ್ತಿಯಾಗುತ್ತಿದೆ. ಇದುವರೆಗೆ 2400 ರೂಪಾಯಿಗಳಿದ್ದ ಬೆಲೆ ಈಗ 3800 ರೂ.ಗಳಾಗುತ್ತಿದೆ ಎಂದಿದ್ದಾರೆ.
ಸಾರಜನಕ, ರಂಜಕ ಮತ್ತು ಪೊಟ್ಯಾಷ್‌ಗಳ ಮೇಲಿನ ಬೆಲೆ ಕ್ವಿಂಟಾಲ್ ಗೆ ರೂ.1250 ಹೆಚ್ಚಿಸಿದ್ದಾರೆ. ರೂ. 2350ಗೆ ಸಿಗುತ್ತಿದ್ದ ಗೊಬ್ಬರ ಈಗ ರೂ. 3600ರಷ್ಟಾಗಿದ್ದು ರೈತರು ನಿಸ್ಸಂಶಯವಾಗಿ ದಿವಾಳಿಯಾಗಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಅಂತರರಾಷ್ಟ್ರೀಯ ಮಟ್ಟದಲ್ಲಿ ಬೆಲೆ ಜಾಸ್ತಿಯಾಗಿದೆ, ಅದಕ್ಕೆ ಬೆಲೆ ಜಾಸ್ತಿ ಮಾಡಿದ್ದೇವೆ ಎಂಬ ಕೇಂದ್ರ ಸರ್ಕಾರದ ಸಬೂಬು ಶುದ್ಧ ಸುಳ್ಳು. ಕಳೆದ ವರ್ಷ ರೂ.1,33,947 ಕೋಟಿ ರಸಗೊಬ್ಬರಕ್ಕಾಗಿ ಸಬ್ಸಿಡಿ ನೀಡಲಾಗಿತ್ತು. ಈಗ ಅದು ರೂ. 79,530 ಕೋಟಿಗೆ ಇಳಿಸಿದ್ದಾರೆ. ಆದ್ದರಿಂದಲೇ ಏಪ್ರಿಲ್ 1 ರಿಂದ ಬೆಲೆ ಹೆಚ್ಚಾಗಿದೆ ಎಂದು ಅವರು ವಿವರಗಳನ್ನು ಹಂಚಿಕೊಂಡಿದ್ದಾರೆ.
ಕೇಂದ್ರ ಸರ್ಕಾರದ ರೈತ ವಿರೋಧಿ ನೀತಿಯನ್ನು ಪ್ರಶ್ನಿಸದ ರಾಜ್ಯ ಸರ್ಕಾರ ಮತ್ತು ರಾಜ್ಯವನ್ನು ಪ್ರತಿನಿಧಿಸುವ ಬಿ.ಜೆ.ಪಿ ಎಂ.ಪಿಗಳ ಗುಲಾಮಿ ಮನಸ್ಥಿತಿ ಕರ್ನಾಟಕವನ್ನು ಸರ್ವನಾಶ ಮಾಡಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.



