ಗಾಂಧಿನಗರ: ಕಾಂಗ್ರೆಸ್ ಬಿಜೆಪಿ ಜೆಡಿಎಸ್ ಮತ್ತು ಆಮ್ ಆದ್ಮಿ ಪಕ್ಷದ ರಾಜ್ಯ ಘಟಕಗಳ ಕೇಂದ್ರ ಕಚೇರಿಗಳನ್ನು ಹೊಂದಿರುವ ಗಾಂಧಿನಗರ ವಿಧಾನಸಭಾ ಕ್ಷೇತ್ರ ಬೆಂಗಳೂರಿನ ಹೃದಯ ಭಾಗದ ಕ್ಷೇತ್ರ. ಇಲ್ಲಿ ಅತಿ ಹೆಚ್ಚಿನ ವಾಣಿಜ್ಯ ಚಟುವಟಿಕೆಗಳು, ಆಡಳಿತದ ಪ್ರಮುಖ ಕೇಂದ್ರ ಕಚೇರಿಗಳು ಇರುವ ಹಾಗೆಯೇ ನಾಗರಿಕ ಸೌಲಭ್ಯಗಳಿಗಾಗಿ ಪರದಾಡುವ ಲಕ್ಷ್ಮಣಪುರಿ, ಓಕಳಿಪುರಂ, ವಿ ವಿ ಗಿರಿ ಕಾಲೋನಿಯಂತಹ ಕೊಳಗೇರಿಗಳೂ ಇವೆ.
ಈ ಕ್ಷೇತ್ರದಿಂದ ಕಾಂಗ್ರೆಸ್ ಹಿರಿಯ ನಾಯಕ ದಿನೇಶ್ ಗುಂಡೂರಾವ್ ಸತತವಾಗಿ ಆಯ್ಕೆಯಾಗುತ್ತಾ ಬಂದಿದ್ದಾರೆ. ಈ ಕ್ಷೇತ್ರದಲ್ಲಿ ಬಿಜೆಪಿ ಹಿರಿಯ ನಾಯಕ ಅನಂತ ಕುಮಾರ್, ಸಂಸದ ಪಿ ಸಿ ಮೋಹನ್ ಅವರು ದಿನೇಶ್ ಗುಂಡೂರಾವ್ ಅವರೊಂದಿಗೆ ಒಳ ಒಪ್ಪಂದ ಮಾಡಿಕೊಳ್ಳುತ್ತಾರೆ ಎಂಬ ಆರೋಪಗಳು ಮಾಮೂಲು. ಆದರೆ ಇದೇ ಮೊದಲ ಬಾರಿಗೆ ಇಂತಹ ಒಪ್ಪಂದದ ಮಾತು ಕೇಳಿ ಬರುತ್ತಿಲ್ಲ.
ಬಿಜೆಪಿಯಿಂದ ಹಿರಿಯ ನಾಯಕ ರಾಮಚಂದ್ರಗೌಡ ಅವರ ಪುತ್ರ ಸಪ್ತಗಿರಿ ಗೌಡ ಎರಡನೇ ಬಾರಿಗೆ ಅದೃಷ್ಟ ಪರೀಕ್ಷೆಗೆ ಇಳಿದಿದ್ದಾರೆ. ಅದೇ ರೀತಿ ಜೆಡಿಎಸ್ ನಿಂದ ಉದ್ಯಮಿ ಸರ್ವೋದಯ ನಾರಾಯಣಸ್ವಾಮಿ ಕೂಡ ಎರಡನೇ ಬಾರಿ ಕಾಂಗ್ರೆಸ್ ಗೆ ಸವಾಲೊಡ್ಡಿದ್ದಾರೆ.
ಚುನಾವಣೆಗೂ ಒಂದು ವರ್ಷ ಮೊದಲೇ ಬಿಜೆಪಿ ಟಿಕೆಟ್ ನಿರೀಕ್ಷೆಯಲ್ಲಿ ಕ್ಷೇತ್ರಾದ್ಯಂತ ಬಿರುಸಿನ ಪ್ರಚಾರ ಮಾಡುತ್ತಾ ಉಚಿತ ಕ್ಯಾಂಟೀನ್ ಆರಂಭ ಸೇರಿದಂತೆ ಹಲವಾರು ಜನಪರ ಚಟುವಟಿಕೆಯಲ್ಲಿ ತೊಡಗಿದ್ದ ಮಾಜಿ ಸಚಿವ ಮಾಲೂರು ಎಸ್.ಎನ್.ಕೃಷ್ಣಯ್ಯಶೆಟ್ಟಿ ಬಿಜೆಪಿ ಟಿಕೆಟ್ ವಂಚಿತರಾದರೂ ಧೃತಿಗೆಡದೆ ಬಂಡಾಯದ ಬಾವುಟ ಆರಿಸಿ ಪಕ್ಷೇತರರಾಗಿ ಕಣಕ್ಕಿಳಿದಿದ್ದಾರೆ. ಇವರಿಗೆ ಬಿ ಎಸ್ ಪಿ ಸೇರಿದಂತೆ ಹಲವು ಪಕ್ಷಗಳು ಬೆಂಬಲ ಘೋಷಿಸಿವೆ.
ಕಳೆದ ವಿಧಾನಸಭೆ ಚುನಾವಣೆಯಲ್ಲಿ ಆಯ್ಕೆಯಾದ ದಿನೇಶ್ ಗುಂಡೂರಾವ್ 47,000 ಮತ ಗಳಿಸಿದರೆ, ಎರಡನೇ ಸ್ಥಾನದಲ್ಲಿದ್ದ ಬಿಜೆಪಿಯ ಸಪ್ತಗಿರಿಗೌಡ 37,000 ಜೆಡಿಎಸ್ ನ ನಾರಾಯಣಸ್ವಾಮಿ 35,000 ಮತಗಳಿಸಿದ್ದರು. ಹೀಗಾಗಿ ಈ ಮೂವರಿಗೂ ಗಾಂಧಿನಗರ ವಿಧಾನಸಭಾ ಕ್ಷೇತ್ರದಲ್ಲಿ ತಮ್ಮದೇ ಆದ ಹಿಡಿತವಿದೆ. ಇಲ್ಲಿ ಇದೀಗ ಹೊಸದಾಗಿ ಕೃಷ್ಣಯ್ಯ ಶೆಟ್ಟಿ ಕೂಡ ಪ್ರಾಬಲ್ಯ ಗಳಿಸಿದ್ದಾರೆ. ನಾಲ್ವರೂ ತಮ್ಮದೇ ಆದ ಪರ ಮತ್ತು ವಿರೋಧದ ವಾತಾವರಣ ಎದುರಿಸುತ್ತಿದ್ದಾರೆ. ಹೀಗಾಗಿ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಚತುಷ್ಕೋನ ಸ್ಪರ್ಧೆ ಏರ್ಪಟ್ಟಿದ್ದು ಯಾರೇ ಗೆಲುವು ಸಾಧಿಸಿದರು ಅವರ ಅಂತರ ಅತ್ಯಂತ ಕಡಿಮೆ ಇರಲಿದೆ.



