ಬಸವನಗುಡಿ: ಕಳೆದ ಎರಡು ದಶಕಗಳಿಂದ ಬಿಜೆಪಿಯ ಭದ್ರಕೋಟೆಯಾಗಿರುವ ಬಸವನಗುಡಿ ವಿಧಾನಸಭಾ ಕ್ಷೇತ್ರವನ್ನು ತನ್ನ ಕೈವಶ ಮಾಡಿಕೊಳ್ಳಬೇಕೆಂದು ಕಾಂಗ್ರೆಸ್ ಬ್ರಾಹ್ಮಣ ಸಮುದಾಯಕ್ಕೆ ಸೇರಿದ ಪ್ರಭಾವಿ ನಾಯಕ ಯು.ಬಿ.ವೆಂಕಟೇಶ್ ಅವರನ್ನು ಕಣಕ್ಕಿಳಿಸುವ ಮೂಲಕ ರಣತಂತ್ರ ರೂಪಿಸಿದೆ. ಕಳೆದ ಒಂದೂವರೆ ವರ್ಷದಿಂದ ಯು ಬಿ ವೆಂಕಟೇಶ್ ಅವರು ಬಸವನಗುಡಿಯಲ್ಲಿ ಹಲವಾರು ಸಾಮಾಜಿಕ ಚಟುವಟಿಕೆಗಳ ಮೂಲಕ ಗಮನ ಸೆಳೆಯುತ್ತಿದ್ದಾರೆ. ಅಂದಿನಿಂದಲೇ ವಿಧಾನಸಭೆ ಚುನಾವಣೆಗೆ ತಯಾರಾಗಿದ್ದ ಇವರು ನಾಲ್ಕನೇ ಬಾರಿಗೆ ಆಯ್ಕೆ ಬಯಸಿರುವ ಬಿಜೆಪಿಯ ರವಿ ಸುಬ್ರಮಣ್ಯ ಅವರಿಗೆ ತೀವ್ರ ಪೈಪೋಟಿ ನೀಡುತ್ತಿದ್ದಾರೆ.
ಬಿಜೆಪಿಯಲ್ಲಿ ಕೆಲವು ಕ್ಷೇತ್ರಗಳಿಗೆ ಸೀಮಿತವಾಗಿ ಒಂದು ಮನೆಗೆ ಒಂದೇ ಟಿಕೆಟ್ ಎಂಬ ತತ್ವವಿದೆ. ಹೀಗಾಗಿ ರವಿ ಸುಬ್ರಮಣ್ಯ ಅವರಿಗೆ ಈ ಬಾರಿ ಟಿಕೆಟ್ ಸಿಗುವುದಿಲ್ಲ ಅವರ ಅಣ್ಣನ ಮಗ ತೇಜಸ್ವಿ ಸೂರ್ಯ ಸಂಸದರಾಗಿರುವ ಹಿನ್ನೆಲೆಯಲ್ಲಿ ಬಸವನಗುಡಿ ವಿಧಾನಸಭಾ ಕ್ಷೇತ್ರಕ್ಕೆ ಅನಂತಕುಮಾರ್ ಅವರ ಪತ್ನಿ ತೇಜಸ್ವಿನಿ ಅನಂತ ಕುಮಾರ್ ಅವರಿಗೆ ಟಿಕೆಟ್ ನೀಡಲಾಗುತ್ತದೆ ಎಂಬ ಸುದ್ದಿಗಳು ದಟ್ಟವಾಗಿದ್ದವು. ಆದರೆ ಹೈಕಮಾಂಡ್ ಮಟ್ಟದಲ್ಲಿ ತಮಗಿರುವ ಪ್ರಭಾವ ಬಳಸಿದ ತೇಜಸ್ವಿ ಸೂರ್ಯ ತಮ್ಮ ಚಿಕ್ಕಪ್ಪನಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಬಿಜೆಪಿಯ ಹಲವು ಟಿಕೆಟ್ ಆಕಾಂಕ್ಷಿಗಳು ಬೇಸರಗೊಂಡರು ಎಂಬ ಕಾರಣಕ್ಕೆ ಅಭ್ಯರ್ಥಿ ಪರ ಕೆಲಸ ಮಾಡುತ್ತಿದ್ದಾರೆ. ಆದರೆ ತೇಜಸ್ವಿನಿ ಅನಂತಕುಮಾರ್ ತಟ್ಟಸ್ಥರಾಗಿರುವುದು ಗಮನ ಸೆಳೆಯುತ್ತಿದೆ.
ಒಕ್ಕಲಿಗ ಸಮುದಾಯದ ಮತಗಳು ಗಣನೀಯ ಸಂಖ್ಯೆಯಲ್ಲಿರುವ ಇಲ್ಲಿಂದ ಜೆಡಿಎಸ್ ಇದೇ ಸಮುದಾಯಕ್ಕೆ ಸೇರಿದ ಸ್ಥಳೀಯ ಅರಮನೆ ಶಂಕರ್ ಅವರನ್ನ ಕಣಕ್ಕಿಳಿಸಿದ್ದು ಅವರು ಕೂಡ ಕಳೆದ ಒಂದೂವರೆ ವರ್ಷದಿಂದ ಚುನಾವಣೆಗಾಗಿ ತಯಾರಿ ನಡೆಸಿದ್ದರು. ಹೀಗಾಗಿ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆ ಏರ್ಪಟ್ಟಿದ್ದು ಬಿಜೆಪಿ ಮೊದಲ ಬಾರಿಗೆ ಭಾರಿ ಪ್ರತಿರೋಧ ಎದುರಿಸುತ್ತಿದೆ.



