ಬ್ರಾಹ್ಮಣ್ಯದ ಬೇರುಗಳನ್ನು ಅರಸುತ್ತಾ…

3 years ago

#Tracing #roots #Brahmanism #jagadishkoppa

ವಿಭಜನೆಯ ದುರಂತ ಮತ್ತು ಏಕಾಂಗಿ ಮಹಾತ್ಮ  ಎಂಬ ಹೆಸರಿನಲ್ಲಿ ಗಾಂಧಿಜಿಯವರ ಕೊನೆಯ ದಿನಗಳ ಅಸಹಾಯಕತೆ ಮತ್ತು ಮೌನವನ್ನು  ಕೃತಿಯ ಮೂಲಕ ದಾಖಲಿಸುವ ನಿಟ್ಟಿನಲ್ಲಿ ಕಳೆದ ಎಂಟತ್ತು ವರ್ಷಗಳಿಂದ ಸಂಗ್ರಹಿಸಿದ್ದ ಕೃತಿಗಳನ್ನು  ಜನವರಿ ತಿಂಗಳಿನಿಂದ ನಿರಂತರವಾಗಿ  ಓದುತ್ತಾ ಬಂದೆ. ಜೊತೆಗೆ ದೇವದಾಸಿಯರ ಅಧ್ಯಯನಕ್ಕಾಗಿ ನಾಲ್ಕು ವರ್ಷಗಳ ಹಿಂದೆ ದೆಹಲಿ, ಕಾನ್ಪುರ, ಲಕ್ನೋ, ಅಲಹಬಾದ್ ನಗರಗಳಲ್ಲಿ ಸುತ್ತಾಡುವಾಗ 1857 ರ ಸಿಪಾಯಿ ದಂಗೆ ಕುರಿತಾದ ಇತಿಹಾಸ  ಮತ್ತು  ಮಾಹಿತಿಗಳನ್ನು ಸಂಗ್ರಹಿಸಿ ಅವುಗಳನ್ನು ನೋಡುವಾಗ  ಅಕ್ಷರಶಃ ನಾನು ತಲ್ಲಣಿಸಿ ಹೋಗಿದ್ದೆ.

ಹದಿನೆಂಟನೆಯ ಶತಮಾನದಲ್ಲಿ ಅಂದರೆ, 1757 ರ ಜೂನ್ ತಿಂಗಳಲ್ಲಿ ಈಗಿನ ಪಶ್ಚಿಮ ಬಂಗಾಳದ ಕೃಷ್ಣ ನಗರ್ ಜಿಲ್ಲಾ ಕೇಂದ್ರದ ಬಳಿ ಇರುವ  ಪ್ಲಾಸಿ ಎಂಬ ಸ್ಥಳದಲ್ಲಿ ಅಂದಿನ ಬಂಗಾಳದ ನವಾಬ  ಸಿರಾಜುದ್ದೀನ್ ದೌಲ ಮತ್ತು ಈಸ್ಟ್ ಇಂಡಿಯಾ ಕಂಪನಿ ನಡುವೆ ನಡೆದ ಯುದ್ಧದಲ್ಲಿ ರಾಬರ್ಟ್ ಕ್ಲೈವ್ ನವಾಬನ ನಂಬಿಕಸ್ಥ ಸೇನಾಧಿಕಾರಿಗೆ  ( ಮೀರ್ ಜಾಫರ್) ಆಮಿಷ ತೋರಿಸಿ, ಯುದ್ಧ ಗೆಲ್ಲುವುದರ ಮೂಲಕ  ವ್ಯಾಪಾರಕ್ಕಾಗಿ ಭಾರತಕ್ಕೆ ಆಗಮಿಸಿದ ಈಸ್ಟ್ ಇಂಡಿಯಾ ಕಂಪನಿಗೆ ಭಾರತವನ್ನು ವಶಪಡಿಸಿಕೊಂಡು ಆಳುವ ಮಾರ್ಗವನ್ನು ತೋರಿಸಿಕೊಟ್ಟನು.( 1799 ರ ಮೇ ತಿಂಗಳಿನಲ್ಲಿ ಶ್ರೀರಂಗಪಟ್ಟಣದಲ್ಲಿ ನಡೆದ ಯುದ್ಧದಲ್ಲಿ ಟಿಪ್ಪುವಿನ ಸೇನಾಧಿಕಾರಿ ಮೀರ್ ಸಾದಕ್ ನಿಗೂ ಸಹ ಇದೇ ರೀತಿ ಆಮಿಷ ತೋರಿಸಿ ಟಿಪ್ಪುಸುಲ್ತಾನನ್ನು ಮಣಿಸಿದ ಇತಿಹಾಸ ನಮ್ಮದೆರು ಇದೆ)

ಕರಾರುವಕ್ಕಾಗಿ ಈ ಘಟನೆ ನಡೆದ ಒಂದು ಶತಮಾನದ ನಂತರ ಅಂದರೆ, 1857 ರ ಮೇ ಮತ್ತು ಜೂನ್ ತಿಂಗಳಿನಲ್ಲಿ ಇದೇ ಭಾರತದಲ್ಲಿ  ಅವಧ್ ಎಂದು ಕರೆಸಿಕೊಳ್ಳುತ್ತಿದ್ದ ಲಕ್ನೋದಲ್ಲಿ  ಬೇಗಂ ಹಜರತ್, ಝಾನ್ಸಿಯಲ್ಲಿ ರಾಣಿ ಲಕ್ಷ್ಮಿ ಬಾಯಿ, ಕಾನ್ಪುರದಲ್ಲಿ ತಾತ್ಯಾಟೋಪಿ ನೇತೃತ್ವದಲ್ಲಿ ಪೇಶ್ವೆ ನಾನಾ ಸಾಹೇಬ, ದೆಹಲಿಯಲ್ಲಿ  ಕೊನೆಯ ದೊರೆ ಬಹದ್ದೂರ್ ಶಾ ಹಾಗೂ ಮೀರತ್ ಮತ್ತು ಆಗ್ರಾಗಳಲ್ಲಿ ಸ್ಥಳೀಯ ನವಾಬರು ಬ್ರಿಟಿಷರ ವಿರುದ್ಧ ತಿರುಗಿ ಬಿದ್ದರು.

ಆ ಕಾಲಘಟ್ಟದಲ್ಲಿ ಭಾರತದ ಸಾಮಂತರ ಬಳಿ ಇದ್ದುದ್ದು  ಅಶ್ವದಳ ಎಂದು ಕರೆಯಲಾಗುತ್ತಿದ್ದ ಕುದುರೆ ಮೇಲೆ ಕುಳಿತು ಹೋರಾಡುತ್ತಿದ್ದ ಸೈನಿಕರು ಮತ್ತು ಗಜಪಡೆ ಎಂಬ  ಆನೆಗಳ ದಳ ಹಾಗೂ ಕತ್ತಿ, ಗುರಾಣಿ ಹಿಡಿದ  ಕಾಲಾಳುಗಳೆಂಬ ಸೈನಿಕರು ಮಾತ್ರ.  ಇದಕ್ಕೆ ಪರ್ಯಾಯವಾಗಿ ಬ್ರಿಟಿಷರ ಬಳಿ ಆಧುನಿಕ ಬಂದೂಕಗಳು ಮತ್ತು ಯುದ್ಧ ರಂಗದಲ್ಲಿ  ಆಗತಾನೆ ಬಳಕೆಗೆ  ಬಂದಿದ್ದ ಪರಿಣಾಮಕಾರಿ ಫಿರಂಗಿಗಳು ಇದ್ದವು. ಇವುಗಳ ಮುಂದೆ ಭಾರತದ ಸ್ಥಳೀಯ ಸಂಸ್ಥಾನಗಳ ದೊರೆಗಳು ಅಸಹಾಯಕರಾಗಿ ಸೋತು ಸುಣ್ಣವಾದರು.

ಭಾರತೀಯ ಸೈನಿಕರ ಹಿಂಸಾಚಾರದಲ್ಲಿ ದೆಹಲಿ, ಕಾನ್ಪುರ, ಲಕ್ನೋ ಮತ್ತು ಆಗ್ರಾ ನಗರದಗಳಲ್ಲಿ ಅನೇಕ ಬ್ರಿಟೀಷ್ ಅಧಿಕಾರಿಗಳು, ಅವರ ಪತ್ನಿಯರು ಮತ್ತು ಮಕ್ಕಳ ಕಗ್ಗೊಲೆಯಾಯಿತು. ಇದಕ್ಕೇ ಪ್ರತಿಯಾಗಿ ಬ್ರೀಟಿಷರು ಲಕ್ನೋ, ಕಾನ್ಪುರ, ಮತ್ತು ದೆಹಲಿಯಲ್ಲಿ ನಡೆಸಿದ ನರಹತ್ಯೆಯ ಪ್ರಕರಣವನ್ನು ಅಕ್ಷರಗಳಲ್ಲಿ ಹಿಡಿದಿಡಲು ಸಾಧ್ಯವಾಗದು. ಕೇವಲ ನರಹತ್ಯೆ ಮಾತ್ರವಲ್ಲದೆ, ಐತಿಹಾಸಿಕ ಕುರುಹುಗಳಿದ್ದ ದೆಹಲಿ, ಲಕ್ನೋ ಮತ್ತು ಕಾನ್ಪುರದ ಕಟ್ಟಡಗಳನ್ನು ಕೆಡವಿ ಹಾಕಿದ್ದರು. ಲಕ್ನೋದಿಂದ 94 ಕಿಲೊಮೀಟರ್ ದೂರವಿರುವ ಕಾನ್ಪುರಕ್ಕೆ ಬ್ರಿಟಿಷ್ ಸೇನೆ ಬರುವಾಗ ಮಾರ್ಗ ಮಧ್ಯೆ ಸಿಕ್ಕ ನೂರಾರು ಹಳ್ಳಿಗಳನ್ನು ಲೂಟಿ ಮಾಡಿ, ಜನರನ್ನು ಹತ್ಯೆಗೈಯಿತು. ಅದೇ ರೀತಿ ಕಾನ್ಪುರದಿಂದ ದೆಹಲಿಗೆ ಬರುವಾಗಲೂ ಮಾರಣ ಹೋಮ ನಡೆಸಿತು. ಈ ಕುರಿತಾಗಿ ಹಲವು ಸಂಪುಟಗಳ ರಕ್ತಸಿಕ್ತ ಚರಿತ್ರೆಯ ಸಂಪುಟಗಳನ್ನು ನಾವು  ಬರೆಯಬಹುದು.

ಆಶ್ಚರ್ಯಕರ ಸಂಗತಿಯೆಂದರೆ, 1857 ರ ಸಿಪಾಯಿ ದಂಗೆ ಯುದ್ಧದಲ್ಲಿ ಈಸ್ಟ್ ಇಂಡಿಯಾ ಕಂಪನಿಯಲ್ಲಿ ಇದ್ದ ಬ್ರಿಟಿಷ್ ಯೋಧರ ಸಂಖ್ಯೆ ಕೇವಲ ಮೂರು ಸಾವಿರ ಮಾತ್ರ. ದೆಹಲಿಯ ಮೇಲೆ ದಾಳಿ ನಡೆದಾಗ ಬ್ರಿಟಿಷ್ ಸೇನೆಯ ಹನ್ನೊಂದು ಸಾವಿರ ಸೈನಿಕರಲ್ಲಿ ಎಂಟು ಸಾವಿರ ಸೈನಿಕರು ಅಪ್ಪಟ ಭಾರತೀಯರಾಗಿದ್ದರು. ಅವರೆಲ್ಲರೂ ತಳವರ್ಗದ ದಲಿತ ಮತ್ತು ಮುಸ್ಲಿಂ ಸಮುದಾಯಕ್ಕೆ ಸೇರಿದವರಾಗಿದ್ದರು. ಹೊಟ್ಟೆಪಾಡಿಗಾಗಿ ಅನ್ನ, ಆಶ್ರಯ ನೀಡಿದ ದೊರೆಗಳಿಗೆ ನಿಷ್ಟೆಯಿಂದ ದುಡಿಯುವುದು ಅವರ ಕರ್ತವ್ಯವಾಗಿತ್ತು.

ಈ ಕಾರಣದಿಂದಾಗಿ ಕುದುರೆ ಮತ್ತು ಆನೆಗಳ ಮೇಲೆ ಕುಳಿತು  ಹಾಗೂ ಕಾಲಾಳುಗಳಾಗಿ ಇವರೆಲ್ಲರೂ ತಮ್ಮ ನೆಲದ ಭಾರತೀಯರ ವಿರುದ್ಧ ಹೋರಾಡಿದರು. ಬ್ರಿಟಿಷ್ ಅಧಿಕಾರಿಗಳ ಆದೇಶದಂತೆ,  ಸೆರೆ ಸಿಕ್ಕ  ಭಾರತದ ಸೈನಿಕರ ಕುತ್ತಿಗೆಗೆ ಹಗ್ಗ ಹಾಕಿ ನೇಣಿಗೇರಿಸಿದರು. ಫಿರಂಗಿ ಬಾಯಿಗೆ  ಭಾರತದ ಸೈನಿಕರನ್ನು ಕಟ್ಟಿ ಅಗ್ನಿ ಸ್ಪರ್ಶ ಮಾಡಿದರು. ಬ್ರಿಟೀಷ್ ಸೇನೆಗೆ ಆಹಾರ ಧಾನ್ಯಗಳನ್ನು ಎತ್ತಿನ ಬಂಡಿಗಳಲ್ಲಿ  ಸಾಗಿಸಿದರು. ಅಧಿಕಾರಿಗಳಿಗೆ ಗುಡಾರ ಹಾಕಿ ಅವರಿಗೆ ಚಾಮರ ಬೀಸಿದರು. ಅವರು ತಿಂದು ಉಳಿಸಿದ ಅನ್ನ ತಿಂದು ಹಾಗೂ  ನೀರು ಕುಡಿದು  ಅಪ್ಪಟ ಗುಲಾಮರಾಗಿ ಬದುಕಿದರು.

ಇವರನ್ನು ನಾವು ದೇಶ ದ್ರೋಹಿಗಳು ಎಂದು ಕರೆಯಲು ಸಾಧ್ಯವೆ? ಅಕ್ಷರ ಮತ್ತು ಅನ್ನದಿಂದ ವಂಚಿತರಾಗಿದ್ದ ಭಾರತದ ತಳ ಸಮುದಾಯವನ್ನು ಶತಶತಮಾನಗಳ ಕಾಲ ಪ್ರಾಣಿಯಂತೆ ನೋಡಿಕೊಂಡವರು ಯಾರು?  ವಿದ್ಯೆ ಮತ್ತು ಇತರೆ ಕಸುಬುಗಳ  ಸವಲತ್ತುಗಳನ್ನು ನಿರಾಕರಿಸಿದವರು ಯಾರು?  ಅಘೋಷಿತ ಸಾಮಾಜಿಕ ಯುದ್ಧದಲ್ಲಿ  ಕತ್ತಿ ಅಥವಾ ಗುರಾಣಿಗಳನ್ನು  ಹಿಡಿಯುವುದರ  ಬದಲಾಗಿ ವೇದ ಉಪನಿಷತ್ತುಗಳೆಂಬ ಬ್ರಾಹ್ಮಣ್ಯದ ಗ್ರಂಥಗಳನ್ನು ಹಿಡಿದವರು ಯಾರು? ಇದಕ್ಕೆ ಉತ್ತರವನ್ನು ನಾವು ಭಾರತದ ಇತಿಹಾಸದಲ್ಲಿ ನೋಡಬಹುದಾಗಿದೆ. ಆದರೆ, ಅದನ್ನು ನೋಡುವ ಮತ್ತು ಗ್ರಹಿಸುವ ಹೃದಯ ಮಾತ್ರ ಬೇಕಾಗಿದೆ ಅಷ್ಟೇ.

ಗಾಂಧೀಜಿಯವರಿಗೆ ಈ ಕಠೋರ ಸತ್ಯದ ಮತ್ತು ಇತಿಹಾಸದ ಅರಿವಿತ್ತು. ಈ ಕಾರಣದಿಂದಾಗಿ ಅವರಿಗೆ ಬ್ರಿಟಿಷರ ಕಪಿಮುಷ್ಟಿಯಿಂದ ಭಾರತವನ್ನು ಬಿಡುಗಡೆಗೊಳಿಸುವ ಛಲ ಹಾಗೂ  ಕನಸಿತ್ತು. ಗಾಂಧಿಯವರ ಕನಸಿನ ಭಾರತದಲ್ಲಿ ಎಲ್ಲಾ ವರ್ಗದ ಮತ್ತು ಎಲ್ಲಾ ಧರ್ಮಗಳ ಜನರಿದ್ದರು. ಮೊದಲು ದೇಶವು ಸ್ವತಂತ್ರವಾಗಲಿ ನಂತರ ನಮ್ಮ ಮನೆಯ ಈ ಸಮಸ್ಯೆಗಳನ್ನು ಅಣ್ಣ ತಮ್ಮಂದಿರಂತೆ ಕೂತು ಬಗೆ ಹರಿಸಿಕೊಳ್ಳೋಣ ಎಂದು ಅವರು  ಹೇಳುತ್ತಿದ್ದರು. ಬಾಪೂಜಿಯವರು ದಲಿತ ಸಮುದಾಯದಲ್ಲಿ ಅಥವಾ ಮುಸ್ಲಿಂ ಸಮುದಾಯದಲ್ಲಿ ಜನಿಸದಿದ್ದರೂ ಅವರ ನೋವು ಮತ್ತು ಅಪಮಾನಗಳನ್ನು ಬಲ್ಲವರಾಗಿದ್ದರು. ಅವುಗಳನ್ನು ತನ್ನ ವೈಯಕ್ತಿಕ ನೋವೆಂದು ಪರಿಭಾವಿಸಿದ್ದರು. ಜಾತಿ ವಿನಾಶಕ್ಕೆ ಅಂತರ್ಜಾತಿ ವಿವಾಹವೊಂದೇ ಮದ್ದು ಎಂದು ಬಲವಾಗಿ ನಂಬಿದ್ದರು. ದಕ್ಷಿಣ ಆಫ್ರಿಕಾದಿಂದ ಭಾರತಕ್ಕೆ ಆಗಮಿಸಿದ ನಂತರ ಅವರು  ಸ್ವಜಾತಿಯ ವಿವಾಹಗಳಿಗೆ ಹೋಗಲಿಲ್ಲ. ತಮ್ಮ ಆಶ್ರಮದಲ್ಲಿ ನೂರಾರು ಅಂತರ್ಜಾತಿಯ ವಿವಾಹ ನೆರವೇರಿಸಿದರು. 

ಗಾಂಧೀಜಿಯವರಿಗೆ ವಿದೇಶಿಯರ ದಾಸ್ಯದಿಂದ ಭಾರತವನ್ನ ಬಿಡುಗಡೆ ಮಾಡುವುದು ಎಷ್ಟು ಮುಖ್ಯವಾಗಿತ್ತೊ, ಸ್ವದೇಶಿಯರ ದಾಸ್ಯದಿಂದ ಭಾರತದ ಅನಕ್ಷರಸ್ಥರನ್ನು ಬಿಡುಗಡೆ ಮಾಡುವುದು ಸಹ ಮುಖ್ಯವಾಗಿತ್ತು. ಈ ಕಾರಣದಿಂದಾಗಿ ಅವರು ಭಾರತದ ವಿಭಜನೆಗೆ ಕಾಯಾ, ವಾಚಾ, ಮನಸ್ಸಾ ಒಪ್ಪಲಿಲ್ಲ. ಪ್ರಬಲವಾಗಿ ವಿರೋಧಿಸಿದರು. ಅಂತಿಮವಾಗಿ ಹಿಂದೂ ಧರ್ಮದ ಬ್ರಾಹ್ಮಣ ಯುವಕ  ಗೋಡ್ಸೆಯ ಗುಂಡುಗಳಿಗೆ ದೇಹವನ್ನು ಬಲಿಕೊಟ್ಟರು.

ಒಂದು ಇತಿಹಾಸದ  ಕಥನಕ್ಕೆ ಎಷ್ಟೊಂದು ಒಳನೋಟಗಳಿವೆ ಮತ್ತು ಆಯಾಮಗಳಿವೆ ಎಂಬುದಕ್ಕೆ ಇದು ಸಣ್ಣ ಉದಾಹರಣೆ ಅಷ್ಟೇ.

– ಜಗದೀಶ್ ಕೊಪ್ಪ, ಹಿರಿಯ ಪತ್ರಕರ್ತರು

Leave a Reply