‘ಬಿ. ರಾಚಯ್ಯ ದತ್ತಿನಿಧಿ ವಾರ್ಷಿಕ ಪ್ರಶಸ್ತಿ’ಗೆ ನನ್ನನ್ನು ಆಯ್ಕೆ ಮಾಡಿರುವ ಕರ್ನಾಟಕ ಎಸ್ ಸಿ/ಎಸ್ ಟಿ ಪತ್ರಿಕಾ ಸಂಪಾದಕರ ಸಂಘದ ಎಲ್ಲ ಗೆಳೆಯರಿಗೆ ಧನ್ಯವಾದಗಳು. ಈ ಸುದ್ದಿ ತಿಳಿದು ನೂರಾರು ಆತ್ಮೀಯರು ನನ್ನನ್ನು ಅಭಿನಂದಿಸುತ್ತಿದ್ದಾರೆ. ಅವರಿಗೂ ಕೃತಜ್ಞನಾಗಿದ್ದೇನೆ.
ಕರ್ನಾಟಕದ ದಲಿತ ರಾಜಕಾರಣಿಗಳಲ್ಲಿ ಬಸವಣ್ಣ ರಾಚಯ್ಯನವರು ಒಂದು ರೀತಿ ಎಲೆಮರೆಯ ಕಾಯಿಯಂತೆ ಇಲ್ಲವೆ ಹಿತ್ತಲ ಗಿಡದಂತೆ ಬಾಳಿದವರು. ಬಿ.ಬಸವಲಿಂಗಪ್ಪ, ಕೆ.ಎಚ್.ರಂಗನಾಥ್ ಮೊದಲಾದವರಷ್ಟು ಪ್ರಖ್ಯಾತಿ ಪಡೆದವರಲ್ಲ. ಇವರನ್ನು ಪರಿಚಯಿಸುವ ಬಹಳಷ್ಟು ಪುಸ್ತಕಗಳೂ ಬಂದಿಲ್ಲ.
ಚಾಮರಾಜ ನಗರದ ಆಲೂರಿನಲ್ಲಿ ದಲಿತ ರೈತ ಕುಟುಂಬದಲ್ಲಿ ಹುಟ್ಟಿದ್ದ ರಾಚಯ್ಯನವರು ಬದುಕಿದ್ದರೆ ನೂರು ದಾಟಿ ನೂರಾ ಒಂದಕ್ಕೆ ಕಾಲಿಡುತ್ತಿದ್ದರು. ಆ ಕಾಲದಲ್ಲಿಯೇ ಕಾನೂನು ಪದವಿಯೊಂದಿಗೆ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ರಾಚಯ್ಯನವರು ಸಮಾಜವಾದಿ ಚಿಂತನೆಗಳಿಂದ ಪ್ರಭಾವಿತರಾಗಿ ರಾಜಕೀಯ ಪ್ರವೇಶಿಸಿದವರು.
ದೇಶದ ಮೊದಲ ಚುನಾವಣೆಯಲ್ಲಿ ಪ್ರಜಾ ಸೋಷಲಿಸ್ಟ್ ಪಕ್ಷದಿಂದ ಯಳಂದೂರು ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದ ಬಿ.ರಾಚಯ್ಯನವರು ನಂತರದ ದಿನಗಳಲ್ಲಿ ಆರು ಬಾರಿ ಶಾಸಕರಾಗಿದ್ದರು. ಒಂದು ಅವಧಿಗೆ ವಿಧಾನ ಪರಿಷತ್ ಸದಸ್ಯರೂ ಆಗಿದ್ದರು. ತಲಾ ಒಂದು ಅವಧಿಗೆ ಲೋಕಸಭೆ ಮತ್ತು ರಾಜ್ಯಸಭೆಗೆ ಆಯ್ಕೆಯಾಗಿದ್ದರು. ಹಿಮಾಚಲ ಪ್ರದೇಶ ಮತ್ತು ಕೇರಳದ ರಾಜ್ಯಪಾಲರಾಗಿಯೂ ಕಾರ್ಯನಿರ್ವಹಿಸಿದ್ದರು.
ಕಂಠಿ, ಕೆಂಗಲ್ ಹನುಮಂತಯ್ಯ, ನಿಜಲಿಂಗಪ್ಪ, ದೇವರಾಜ ಅರಸು ಮತ್ತು ರಾಮಕೃಷ್ಣ ಹೆಗಡೆ ಸಂಪುಟದಲ್ಲಿ ಅರಣ್ಯ, ಕೃಷಿ, ಸಹಕಾರ ಮತ್ತು ಶಿಕ್ಷಣ ಇಲಾಖೆಗಳಿಗೆ ಸಚಿವರಾಗಿದ್ದ ರಾಚಯ್ಯನವರು ಚರಣ್ ಸಿಂಗ್ ಸಂಪುಟದಲ್ಲಿ ಕೈಗಾರಿಕಾ ಸಚಿವರಾಗಿಯೂ ಕೆಲಸ ಮಾಡಿದ್ದರು. ಕಾಂಗ್ರೆಸ್ ಇಬ್ಭಾಗವಾದಾಗ ಸಂಸ್ಥಾ ಕಾಂಗ್ರೆಸ್ ಜೊತೆಯೇ ಉಳಿದುಕೊಂಡು ನಂತರದ ಕೆಲವು ದಿನಗಳಲ್ಲಿ ರಾಜಕಾರಣದಿಂಧ ದೂರವಾಗಿ ಕೃಷಿಕರಾಗಿದ್ದರಂತೆ. ದೇವರಾಜ ಅರಸು ಅವರ ಆಹ್ವಾನದ ಮೇರೆಗೆ ಮತ್ತೆ ಕಾಂಗ್ರೆಸ್ ಸೇರಿ ಸಚಿವರಾಗಿದ್ದರು.
ಅರಸು ಅವರು ಕಾಂಗ್ರೆಸ್ ಪಕ್ಷದಿಂದ ಹೊರ ಬಂದಾಗ ಅವರ ಜೊತೆಯಲ್ಲಿಯೇ ಉಳಿದಿದ್ದ ಬೆರಳೆಣಿಕೆಯ ರಾಜಕಾರಣಿಗಳಲ್ಲಿ ರಾಚಯ್ಯನವರು ಒಬ್ಬರು. ಅರಸು ನಂತರ ರಾಚಯ್ಯನವರು ಕ್ರಾಂತಿರಂಗದ ಅಧ್ಯಕ್ಷರೂ ಆಗಿದ್ದರು.
ರಾಜ್ಯದಲ್ಲಿ ಶಿಕ್ಷಣ ಸಚಿವರಾಗಿದ್ದಾಗ ಐತಿಹಾಸಿಕ ಕರ್ನಾಟಕ ಶಿಕ್ಷಣ ಸಂಸ್ಥೆಗಳ ಕ್ಯಾಫಿಟೇಷನ್ ಶುಲ್ಕ ವಸೂಲಾತಿ ತಡೆ ನಿಷೇಧ ಮಸೂದೆಯನ್ನು ಜಾರಿಗೊಳಿಸಿದ್ದ ರಾಚಯ್ಯನವರು ಸಿಇಟಿಯ ರೂವಾರಿಗಳು ಎನ್ನುವುದು ಬಹಳ ಮಂದಿಗೆ ತಿಳಿದಿರಲಾರದು. ಕೊಳ್ಳೇಗಾಲ ಶಾಸಕ ಎ.ಆರ್.ಕೃಷ್ಣಮೂರ್ತಿಯವರು ರಾಚಯ್ಯನವರ ಮಗ ಮತ್ತು ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅಳಿಯ.
ಸುಳ್ಳು ಹೇಳಲಾರೆ, ಇಂತಹ ಪ್ರಶಸ್ತಿಗಳನ್ನು ಆಶಿಸುತ್ತಿದ್ದ ದಿನಗಳೂ ಇದ್ದವು. ಈಗ ಅಂತಹ ನಿರೀಕ್ಷೆ, ಕನಸುಗಳು ಇಲ್ಲವಾದರೂ ನಾವು ಮೆಚ್ಚುತ್ತಾ ಬಂದ ಮತ್ತು ಅಭಿಮಾನದಿಂದ ಕಾಣುವ ಮಹನೀಯರ ಹೆಸರಲ್ಲಿ ನೀಡುವ ಪ್ರಶಸ್ತಿಗಳು ಒಂದು ರೀತಿಯ ಧನ್ಯತಾ ಭಾವವನ್ನು ಮೂಡಿಸುವುದು ನಿಜ.
ಬುದ್ಧ, ಬಸವ, ಅಂಬೇಡ್ಕರ್ ಹೆಸರಲ್ಲಿ ಪತ್ರಕರ್ತರಿಗೆ ನೀಡುವ ಪ್ರಶಸ್ತಿಗಳು ವಿಶೇಷವಾಗಿ ನನ್ನನ್ನು ಅರಸಿ ಬರುತ್ತಿರುವುದು ನನ್ನ ಬದುಕಿನ ಭಾಗ್ಯ.
ಇಂತಹ ಗುರುತಿಸುವಿಕೆಯೇ ನನ್ನನ್ನು ಪತ್ರಿಕಾ ವೃತ್ತಿ ಸಹಜವಾದ ಸಿನಿಕತನದಿಂದ ಪಾರು ಮಾಡಿ ಸದಾ ಕ್ರಿಯಾಶೀಲವಾಗಿ ಇರಿಸಿದೆ. ಇದಕ್ಕಾಗಿ ನಾನು ಆಭಾರಿಯಾಗಿದ್ದೇನೆ.
– ದಿನೇಶ್ ಅಮೀನ್ ಮಟ್ಟು, ಹಿರಿಯ ಪತ್ರಕರ್ತರು



