ಬೆಂಗಳೂರು: ಕರ್ನಾಟಕ ಸರ್ಕಾರದ 2021-22ನೇ ಸಾಲಿನ ಮುಂಗಡಪತ್ರ ನಾನು ಮಂಡಿಸುತ್ತಿರುವ 8ನೆಯ ಮುಂಗಡಪತ್ರ. ಈ ಅವಕಾಶ ದೊರೆತಿದ್ದಕ್ಕೆ ರಾಜ್ಯದ ಜನತೆಗೆ ನಾನು ಋಣಿ. ಕರ್ನಾಟಕದ ಸಮಗ್ರ ಅಭಿವೃದ್ಧಿಯೇ ನಮ್ಮ ಆದ್ಯತೆ, ಸಾಮಾಜಿಕ ನ್ಯಾಯದ ಜೊತೆಗೆ ಸರ್ವರಿಗೂ ಸಮಬಾಳು, ಸಮಪಾಲು ನೀಡುವ ಧ್ಯೇಯ ನಮ್ಮದು ಎಂದು ಸಿಎಂ ಬಿ.ಎಸ್.ಯಡಿಯೂರಪ್ಪ ಬಜೆಟ್ ಮಂಡಿಸಲು ಅನುವಾದರು.
ಆದರೆ, ನೈತಿಕವಾಗಿ ಬಜೆಟ್ ಮಂಡಿಸುವ ಹಕ್ಕು ಬಿಜೆಪಿ ಸರ್ಕಾರಕ್ಕೆ ಇಲ್ಲ ಎಂದು ಮಾಜಿ ಸಿಎಂ ಮತ್ತು ವಿಪಕ್ಷ ನಾಯಕ ಸಿದ್ದರಾಮಯ್ಯ ನೇತೃತ್ವದಲ್ಲಿ ಕಾಂಗ್ರೆಸ್ ನಾಯಕರು ಸಭಾತ್ಯಾಗ ಮಾಡಿದರು. ಈವೇಳೆ ಬಜೆಟ್ ಮಂಡನೆಯನ್ನು ವಿರೋಧಿಸಿ ಸಭಾತ್ಯಾಗ ಮಾಡುವುದು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸರಿಯಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಆದರೆ, ಅವರ ಮಾತುಗಳಿಗೆ ಕಿವಿಗೊಡದ ಕಾಂಗ್ರೆಸ್ ನಾಯಕರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿ ಸಭಾತ್ಯಾಗ ಮಾಡಿದರು. ಇದಕ್ಕೆ ಪರ್ಯಾಯವಾಗಿ ಬಿಜೆಪಿ ಸಚಿವರು ಮತ್ತು ಶಾಸಕರು ಜೈಶ್ರೀರಾಂ ಘೋಷಣೆ ಕೂಗಿದರು.
ಗದ್ದಲ, ಗೊಂದಲದ ನಡುವೆ ಬಜೆಟ್ ಮಂಡನೆ ಮುಂದುವರೆಸಿದ ಯಡಿಯೂರಪ್ಪ, ಕೊರೋನಾ ಸೃಷ್ಟಿಸಿದ ತಲ್ಲಣಗಳನ್ನು ಮರೆಯುವಂತಿಲ್ಲ. ಪ್ರತಿಕೂಲ ಸನ್ನಿವೇಶದಲ್ಲಿ 10 ತಿಂಗಳ ಕಾಲ ಸೆಣೆಸಿ ಈ ಸಮರದಲ್ಲಿ ಮಾನವಕುಲ ಜಯಸಿದೆ. ಈ ಗೆಲುವಿನಲ್ಲಿ ಭಾರತದ ಕಾಣಿಕೆ ಜಾಗತಿಕ ಮನ್ನಣೆಗೆ ಪಾತ್ರವಾಗಿದ್ದು ಕರ್ನಾಟಕದ ಕೊಡುಗೆ ಕೂಡ ಗಮನಾರ್ಹವಾದುದು ಎಂದರು.
ಎಲ್ಲರನ್ನೂ ಒಳಗೊಂಡ ಅಭಿವೃದ್ಧಿ ಸಾಧಿಸಲು ಪರಿಶಿಷ್ಟ ಜಾತಿ, ಪಂಗಡದವರು, ಹಿಂದುಳಿದವರು, ಅಲ್ಪಸಂಖ್ಯಾತರು, ಮಹಿಳೆಯರು, ಮಕ್ಕಳು, ಹಿರಿಯ ನಾಗರಿಕರು ಹಾಗೂ ವಿಕಲಚೇತನರ ಅಭ್ಯುದಯಕ್ಕೆ ಮುಂಗಡ ಪತ್ರದಲ್ಲಿ ಒತ್ತು ನೀಡಲಾಗಿದೆ. ಅನ್ನದಾತ ರೈತ ಸದಾ ನೆಮ್ಮದಿ ಮತ್ತು ತೃಪ್ತಿಯಿಂದ ಬದುಕುವಂತಾಗಬೇಕು ಎಂಬುದು ನಮ್ಮ ಸರ್ಕಾರದ ಗುರಿಯಾಗಿದೆ. ಈ ಗುರಿ ತಲುಪಲು ಸಹಕಾರಿಯಾಗಬಲ್ಲ ಕಾರ್ಯಕ್ರಮಗಳನ್ನು ಪ್ರಸಕ್ತ ಮುಂಗಡ ಪತ್ರದಲ್ಲಿ ರೂಪಿಸಲಾಗಿದೆ. ಪ್ರಧಾನಿ @narendramodi ಜೀ ಅವರ ಆಶಯದಂತೆ ರೈತರ ಆದಾಯವನ್ನು ದುಪ್ಪಟ್ಟುಗೊಳಿಸುವ ದಿಶೆಯಲ್ಲಿ ನೂತನ ಕಾರ್ಯಕ್ರಮಗಳು ನೆರವಾಗಲಿವೆ. ಪ್ರಕೃತಿ ವಿಕೋಪ ಹಾಗೂ ಕೊರೋನಾ ಸಾಂಕ್ರಾಮಿಕದ ನಿರ್ವಹಣೆಯಲ್ಲಿ ಸರ್ಕಾರ ಸಮರ್ಥವಾಗಿ ಕಾರ್ಯನಿರ್ವಹಿಸಿದೆ ಎಂದರು.



