ಬೆಂಗಳೂರು: ತೈಲ ದರ ಏರಿಕೆ ವಿರುದ್ಧ ಜನರ ಆಕ್ರೋಶವನ್ನೇ ಬಳಸಿಕೊಂಡು, ದರ ಇಳಿಸುವ ನೆಪದಲ್ಲಿ ಪೆಟ್ರೋಲಿಯಂ ಉತ್ಪನ್ನಗಳನ್ನು GSTಗೆ ಸೇರಿಸುವ ಹುನ್ನಾರವನ್ನು ಕೇಂದ್ರ ಸರ್ಕಾರ ವ್ಯವಸ್ಥಿತವಾಗಿ ನಡೆಸುತ್ತಿದೆ. ಈ ಬಗೆಗಿನ ಚರ್ಚೆಗಳನ್ನು ಹುಟ್ಟುಹಾಕುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳೇನಾದರೂ GSTಗೆ ಒಳಪಟ್ಟರೆ ಅದು ರಾಜ್ಯಗಳ ಪಾಲಿಗೆ ಮರಣಶಾಸನವಾಗಲಿದೆ ಎಂದು ಮಾಜಿ ಸಿಎಂ ಎಚ್.ಡಿಕುಮಾರಸ್ವಾಮಿ ಹೇಳಿದ್ದಾರೆ.
ಕಳೆದ ಕೆಲವು ತಿಂಗಳಿಂದ ನಿರಂತರವಾಗಿ ದೇಶದಲ್ಲಿ ಇಂಧನ ಬೆಲೆಯಲ್ಲಿ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅಗತ್ಯವಸ್ತುಗಳ ಬೆಲೆಗಳು ಕೂಡ ಏರಿಕಯಾಗಿವೆ. ಈ ಹಿನ್ನೆಲೆಯಲ್ಲಿ ಇಂಧನವನ್ನು ಜಿ.ಎಸ್.ಟಿ ವ್ಯಾಪ್ತಿಗೆ ತರಬೇಕು ಎಂಬ ಕೂಗು ಕೇಳಿಬಂದಿದೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಪೆಟ್ರೋಲಿಯಂ ಉತ್ಪನ್ನಗಳ ಮೇಲಿನ ಸೆಸ್ ರಾಜ್ಯಗಳ ಪ್ರಮುಖ ಆದಾಯದ ಮೂಲಗಳಲ್ಲೊಂದು. ಕೇಂದ್ರ ಸರ್ಕಾರ ಮಿತಿ ಮೀರಿದ ತೆರಿಗೆ ವಿಧಿಸುತ್ತದೆ ಮತ್ತು ರಾಜ್ಯಗಳಿಗಿಂತಲೂ ಅಧಿಕ ಆದಾಯವನ್ನು ಸಂಗ್ರಹಿಸುತ್ತದೆ. ಈಗ ಅದೂ ಸಾಲದು ಎಂಬಂತೆ ಪೆಟ್ರೋಲಿಯಂ ಅನ್ನು GSTಗೆ ತಂದು ರಾಜ್ಯಗಳು ಪಡೆಯುತ್ತಿರುವ ಆದಾಯವನ್ನೂ ಲಪಟಾಯಿಸುವ ತಂತ್ರವನ್ನು ಮಾಡಿದೆ ಎಂದಿದ್ದಾರೆ.
ರಾಜ್ಯಗಳು GST ವ್ಯವಸ್ಥೆಗೆ ಒಪ್ಪಿಗೆ ನೀಡಿದ ನಂತರ ನೀಡಬೇಕಿದ್ದ ಪಾಲು, ಪರಿಹಾರವನ್ನು ಕೇಂದ್ರ ಈ ವರೆಗೆ ಸರಿಯಾಗಿ ಕೊಟ್ಟೇ ಇಲ್ಲ. ಸಾವಿರಾರು ಕೋಟಿ ಬಾಕಿಯನ್ನು ಇನ್ನೂ ಉಳಿಸಿಕೊಂಡಿದೆ. ಬಾಕಿಗಾಗಿ ರಾಜ್ಯಗಳು ಕೇಂದ್ರವನ್ನು ಬೇಡಾಡಿ ಬಸವಳಿದಿವೆ. ಈಗ ಪೆಟ್ರೋಲಿಯಂ ಆದಾಯವನ್ನು ಕೇಂದ್ರಕ್ಕೆ ಒಪ್ಪಿಸಿದರೆ ರಾಜ್ಯಗಳ ಪಾಡು ಶೋಚನೀಯವಾಗಲಿದೆ ಎಂದು ಎಚ್ಚರಿಕೆ ನೀಡಿದ್ದಾರೆ.
ರಾಜ್ಯಗಳು ಆದಾಯವಿಲ್ಲದೇ, ಅಭಿವೃದ್ಧಿ ಕಾರ್ಯಗಳಿಗೆ ಅನುದಾನವಿಲ್ಲದೇ ಸಂಕಷ್ಟ ಅನುಭವಿಸಬೇಕಾಗುತ್ತದೆ. ಕೊನೆಗೆ ಕೊರತೆ ಬಜೆಟ್ ಮಂಡಿಸಬೇಕಾಗುತ್ತದೆ. ಅಥವಾ, ಬಜೆಟ್ ಗಾತ್ರವನ್ನೇ ಇಳಿಸಬೇಕಾದ ಸಂದರ್ಭ ಬರಲಿದೆ. ಇದು ಅಭಿವೃದ್ಧಿ ವಿಚಾರದಲ್ಲಿ ಹಿಂದಕ್ಕೆ ಓಡಿದಂತೆ. ಪ್ರತಿಯೊಬ್ಬ ಪ್ರಜೆಯೂ ಇದರ ದುಷ್ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದಿದ್ದಾರೆ.
ತೈಲ ಬೆಲೆ ಇಳಿಸುವ ಕಾಳಜಿ ಕೇಂದ್ರಕ್ಕೆ ಇದ್ದಲ್ಲಿ ತಾನು ವಿಧಿಸುತ್ತಿರುವ ತೆರಿಗೆಯನ್ನು ಈ ಕೂಡಲೇ ತಗ್ಗಿಸಲಿ. ನಂತರ ರಾಜ್ಯಗಳಿಗೂ ತೆರಿಗೆ ತಗ್ಗಿಸಲು ಹೇಳಲಿ. ಅದು ಬಿಟ್ಟು ರಾಜ್ಯಗಳ ಪಾಲಿನ ಹಣಕ್ಕೂ ಕೇಂದ್ರ ಸರ್ಕಾರ ಕೈ ಇಡಬಾರದು. ರಾಜ್ಯಗಳು ಚೆನ್ನಾಗಿದ್ದರೆ, ದೇಶವೂ ಚೆನ್ನಾಗಿರುತ್ತದೆ. ರಾಜ್ಯಗಳನ್ನು ಶೋಷಿಸಿ ದೇಶ ಕಟ್ಟಲಾಗುತ್ತದೆಯೇ? ಎಂದು ಪ್ರಶ್ನಿಸಿದ್ದಾರೆ.
ಪೆಟ್ರೋಲಿಯಂ ಉತ್ಪನ್ನಗಳನ್ನು ಜಿಎಸ್‌ಟಿ ವ್ಯಾಪ್ತಿಗೆ ತರುವುದಕ್ಕೆ ಹಲವು ರಾಜ್ಯಗಳು ಈಗಾಗಲೇ ವಿರೋಧ ವ್ಯಕ್ತಪಡಿಸಿವೆ. ರಾಜ್ಯದ ಮುಖ್ಯಮಂತ್ರಿಗಳೂ ಈ ವಿಚಾರದಲ್ಲಿ ಆಕ್ಷೇಪಣಾ ಮನೋಭಾವ ತಳೆಯಬೇಕು. ರಾಜ್ಯದ ಪ್ರಮುಖ ನಾಯಕರೂ ಈ ವಿಚಾರವಾಗಿ ಈಗಿನಿಂದಲೇ ಪ್ರತಿರೋಧ ವ್ಯಕ್ತಪಡಿಸಬೇಕು. ಇಲ್ಲವಾದರೆ, ಜಿಎಸ್‌ಟಿ ಕುಣಿಕೆ ನಮ್ಮನ್ನು ಕಾಡಲಿದೆ ಎಂದಿದ್ದಾರೆ.



