ಇಂದು ನನ್ನಪ್ಪ ನಮ್ಮನ್ನ ಅಗಲಿದ ದಿನ….
ಕಳೆದ ಒಂಭತ್ತು ವರುಷಗಳಿಂದ ನಾವು ಪಟ್ಟ ಪಾಡು ನಮಗೇ ಗೊತ್ತು.
ನನ್ನಪ್ಪ ಕುಡಿಯುತ್ತಿರಲಿಲ್ಲ, ಸಿಗರೇಟು ಗುಟ್ಕಾ ಚಟ ಯಾವುದೂ ಆತನಿಗಿರಲಿಲ್ಲ. ಡಾಕ್ಟರ್ ಹೇಳಿದ್ದು “ನಿನ್ನಪ್ಪನ ಲಿವರ್ ಕಿಡ್ನಿ ಹೃದಯ ಎಲ್ಲವೂ ಆರೋಗ್ಯಕರವಾಗಿವೆ, ಇನ್ನೂ ಮೂವತ್ತು ವರುಷ ನಿಮ್ಮ ತಂದೆ ಆರೋಗ್ಯಯುತವಾಗಿ ಬದುಕಬಲ್ಲರು, ಆದರೆ ಆಗಬಾರದ್ದೇ ಆಗಿದೆ. ಅಪಘಾತದಲ್ಲಿ ಅವರ ನರ್ವ್ ಸಿಸ್ಟಮ್ ಪೂರಾ ಹಾಳಾಗಿದೆ. ಅದನ್ನ ಸರಿಪಡಿಸೋಕೆ ಆಗಲ್ಲ” ಅಂತ.
- ವರ್ಷದ ಬಳಿಕ ಸೆರೆಮನೆಯಿಂದ ಹೊರಬಂದ ನಟಿ ರನ್ಯಾ ರಾವ್!
- ಪ್ರೊ. ಎಸ್. ಬಿಳಿಗಿರಿ ವಾಸನ್ ಅವರಿಗೆ ಅಭಿನಂದನಾ ಸಮಾರಂಭ
- ಬಸವಣ್ಣನವರ ವಚನಗಳು ವಿಶ್ವವಿದ್ಯಾಲಯಗಳು ಹೇಳಿಕೊಡುವ ಪಾಠಕ್ಕಿಂತ ಕಡಿಮೆಯಲ್ಲ: ಸಾಜೀದ್ ಮುಲ್ಲಾ
- ಮಹಿಳೆಯರಿಗೆ ಶೇ.33ರಷ್ಟು ಮೀಸಲಾತಿ ಮಸೂದೆ ಅಂಗೀಕಾರವಾಗಿದೆ
- ಮಹಿಳಾ ಮೀಸಲಾತಿ ವಿಷಯದಲ್ಲಿ ಮೋದಿ ಸರ್ಕಾರದಿಂದ ಮಹಿಳೆಯರಿಗೆ ದ್ರೋಹ: ಸಿದ್ದರಾಮಯ್ಯ
ಅಪ್ಪನ ನರ್ವಸ್ ಸಿಸ್ಟಮ್ ಮಾತ್ರವಲ್ಲ ಆತನಿಗೆ ಹಚ್ಚಿಕೊಂಡ ನನ್ನ ತಮ್ಮನ ತಂಗಿಯ ಅವ್ವನ ಬಾಂಧವ್ಯದ ಕೊಂಡಿಗಳೂ ಕಡಿತಗೊಂಡವು. ನಾವು ಆಘಾತಕ್ಕೀಡಾದೆವು.
ನನ್ನಪ್ಪ ಓದಿರಲಿಲ್ಲ. ಯಾರದೋ ಮನೆಯಲ್ಲಿ ಜೀತಕ್ಕಿದ್ದು ಬೆಳೆದ ಅಪ್ಪ ನಮ್ಮನ್ನ ಓದಿಸಿದ. ನಾನು ಅಕ್ಷರ ಕಲಿತು ಅಪ್ಪನಿಗೆ ಸಹಿ ಮಾಡಲು ಕಲಿಸಿದೆ. ಅನಕ್ಷರಸ್ತನಾದರೂ ಆತನ ನೆನಪಿನ ಶಕ್ತಿ ಅದ್ಭುತವಾಗಿತ್ತು.
ನಮ್ಮೂರಲ್ಲಿನ ನೂರಾರು ಜನರ ಫೋನ್ ನಂಬರ್ ಆತನ ನಾಲಿಗೆ ತುದಿಯಲ್ಲಿತ್ತು. ಯಾರಿಗಾದರೂ ಯಾರದಾದರೂ ಫೋನ್ ಬೇಕಿದ್ದರೆ ” ತಿಪ್ಪಣ್ಣನ್ನ ಕೇಳ್ರಿ, ಆತನಿಗೆ ಗೊತ್ತಿರುತ್ತ” ಎನ್ನುತ್ತಿದ್ದರು. ಆತನ ಕೆಜಿಐಡಿ ನಂಬರ್, ಎಲ್ ಐ ಸಿ ಪಾಲಿಸಿಗಳ ನಂಬರ್ ಗಳು, ಅವುಗಳ ಪ್ರಾರಂಭದ ದಿನಾಂಕ, ಮೆಚ್ಯುರಿಟಿ ದಿನಾಂಕ ಇನ್ನಿತರ ಅನೇಕ ಅಂಗತಿಗಳು ಆತನಿಗೆ ಕರತಲಾಮಲಕವಾಗಿದ್ದವು.
ನನ್ನ ಓದಿಗೆ ಖರ್ಚು ಮಾಡಿದ್ದ ಐದು ವರುಷಗಳ ಹಣದ ಲೆಕ್ಕ ನಾಲಿಗೆಯಲ್ಲಿಟ್ಟುಕೊಂಡು ಅಪ್ಪ ವಾದಿಸುತ್ತಿದ್ದ. ನಾನು ನೌಕರಿಗೆ ಸೇರಿದ ಮೇಲೆ ಲೋನ್ ತೆಗೆದುಕೊಟ್ಟು ಅಪ್ಪನ ಸಾಲ ತೀರಿಸಿದೆ. ಆದರೆ ಆತ ಕೊಟ್ಟ ಈ ಬದುಕಿನ ಋಣ ಹಾಗೆಯೇ ಉಳಿಯಿತು.
ಅಪ್ಪ ತುಂಬಾ ಕಠಿಣವಾಗಿದ್ದ ಮತ್ತು ಅದನ್ನ ಮರೆಸುವಷ್ಟು ಹೃದಯವಂತನಾಗಿದ್ದ.
ತುಂಬು ಜೀವಂತಿಕೆಯಿಂದ ಬದುಕುವುದನ್ನ ಆತನನ್ನ ನೋಡಿಯೇ ಕಲಿಯಬೇಕು. ಹಾಗಿದ್ದ.
ನಮಗೊಂದು ಮನೆ ಕಟ್ಟಿಸಲೆಂದು ಕಲ್ಲುಗಳನ್ನ ಸಂಗ್ರಹಿಸಿದ್ದ. ಲಾರಿಗಟ್ಟಲೆ ಪಾಟಿಗಲ್ಲುಗಳನ್ನ ಕೂಡಿಸಿಟ್ಟಿದ್ದ. ಇಂದಿಗೂ ಆ ಕಲ್ಲುಗಳು ಹಾಗೆಯೇ ಇವೆ.
ಅಪ್ಪನೊಳಗೆ ಅದ್ಭುತ ಕಲಾವಿದನಿದ್ದ. ಸಿಡಿದೆದ್ದ ಶಿವಶಕ್ತಿ ನಾಟಕದಲ್ಲಿ ಅಪ್ಪ ಭಗತ್ ಸಿಂಗ್ ಪಾತ್ರ ಮಾಡಿದ್ದ. ಎಲ್ಲರ ಮೆಚ್ಚುಗೆ ಗಳಿಸಿದ್ದ.
ಅಪ್ಪನ ಬದುಕಿನ ಪಯಣವೇ ಸೊಗಸಾಗಿತ್ತು. ಚಿಕ್ಕ ವಯಸ್ಸಿನಲ್ಲಿಯೇ ತನ್ನ ತಂದೆಯನ್ನ ಕಳೆದುಕೊಂಡಿದ್ದ ಅಪ್ಪ, ತನ್ನ ತಾಯಿಯ ಪ್ರೀತಿಯಿಂದಲೂ ವಂಚಿತನಾಗಿದ್ದ. ನಮಗೆ ಮಾತ್ರ ಯಾವುದರ ಕೊರತೆಯೂ ಆಗದಂತೆ ನೋಡಿಕೊಂಡಿದ್ದ. ತಾನೂ ಅನಾಥನಾಗಿ ಬೆಳೆದ ಅಪ್ಪ, ನಮಗೂ ತುಂಬು ಪ್ರೀತಿಯನ್ನೂ ನೀಡಿ ಅನಾಥತೆಯ ಕೂಪಕ್ಕೂ ನಮ್ಮನ್ನ ತಳ್ಳಿ ನಡುದಾರಿಯಲ್ಲಿ ಪಯಣ ಮುಗಿಸಿದ.
ಅಪ್ಪನನ್ನ ನೆನದರೆ ಕಡುಸಂಕಟ ಭುಗಿಲೇಳುತ್ತದೆ. ತಿಂಗಳಾನುಗಟ್ಟಲೆ ರೋಧಿಸಿದ್ದೇನೆ. ಈಗಲೂ ಅದೇ ಯಾತನೆ.
ನ್ಯಾಯ ಎಂಬುದು ಬಡವರಿಗೆ ಮರೀಚಿಗೆ. ನನ್ನಪ್ಪನನ್ನ ಅಪಘಾತ ಮಾಡಿ ಕೊಂದವರು ದೊಡ್ಡ ಕುಳದವರು. ಅವರ ಪ್ರಭಾವದಿಂದ ಯಾರೂ ನಮ್ಮ ತಂದೆಯ ಅಪಘಾತದ ಕೇಸನ್ನ ತೆಗೆದುಕೊಳ್ಳಲಿಲ್ಲ. ನಮಗೆ ನ್ಯಾಯ ಕೊಡಿಸುತ್ತೇವೆಂದು ಹೇಳಿ ಪೊಲೀಸರು ಅಪಘಾತ ಮಾಡಿದವರ ಹೆಸರು ಬದಲಿಸಿದ ಬೇರೆ ಹೇಳಿಕೆ ಪಡೆದು ನಮಗೆ ಅನ್ಯಾಯ ಮಾಡಿದರು.
ಅಪ್ಪನ ಅಪಘಾತದ ಎಫ್ ಐ ಆರ್ ಮಾಡಿರಲಿಲ್ಲ. ಮುಖ್ಯಮಂತ್ರಿಗಳ ಕಛೇರಿಯಿಂದ ಕರೆ ಬಂದ ಮೇಲೆ ಎಫ್ ಐ ಆರ್ ಆಗಿದ್ದು.
ಬಡವರ ಸಿಟ್ಟು ದವಡೆಗೆ ಮೂಲ. ನಮ್ಮದು ದೊಡ್ಡ ಸಮುದಾಯದ ಜಾತಿಯಲ್ಲ. ನಮ್ಮಲ್ಲಿ ಹಣವಿಲ್ಲ. ನಮ್ಮ ನ್ಯಾಯ ಅನ್ಯಾಯಕ್ಕೆ ಬೆಲೆಯಿಲ್ಲ.
ಬಡವರ ಬಾಳೇ ಇಷ್ಟು, ಬದುಕಿದರೆ ಬದುಕಬೇಕು, ಇಲ್ಲ ಇನ್ನಿಲ್ಲದ ಪಾಡು ಪಡಬೇಕು.
ಒಂಭತ್ತು ವರುಷಗಳಾದರೂ ನನ್ನಪ್ಪನನ್ನ ಕೊಂದವರಿಗೆ ಶಿಕ್ಷೆ ಆಗಲಿಲ್ಲ, ಜೀವನಪೂರ್ತಿ ನಾವು ಮಾತ್ರ ನನ್ನಪ್ಪನ ಅಗಲಿಕೆಯ ಶಿಕ್ಷೆ ಅನುಭವಿಸುತ್ತಿದ್ದೇವೆ.
ಎಲ್ಲ ಬಡಬಾನಲಗಳನ್ನ ಒಡಲಲ್ಲಿಟ್ಟುಕೊಂಡು ಬದುಕುವುದೇ ಬದುಕಾಗಿದೆ.
ಈ ಕಳೆದ ನಾಲ್ಕು ತಿಂಗಳು ನನ್ನ ಬದುಕು ಬಹಳ ಕಲಿಸಿದೆ. ದೊಡ್ಡ ದೊಡ್ಡವರ ಆದರ್ಶದ ಪ್ರತಿರೋಧದ ಮಾತುಗಳನ್ನ ನಂಬಬೇಡಿ. ದೊಡ್ಡ ದೊಡ್ಡ ಭಾಷಣಕಾರರಿಂದ ಪ್ರೇರಿತರಾಗಿ ದುರಂತಗಳಿಗೆ ಎದೆಗೊಡಬೇಡಿ. ಸಾಕ್ಷಿಪ್ರಜ್ಞೆಗಳು, ನಾಡುಕಟ್ಟುವವರು ಎಲ್ಲ ಸುಳ್ಳು. ದಿನ ಹಗಲೂ ರಾತ್ರಿ ನಾನು ಪಟ್ಟ ಪಾಡು ಮೆಸೇಜ್ ಮಾಡಿ ಕರೆ ಮಾಡಿ ಬೇಡಿಕೊಂಡರೂ ನನ್ನ ಬಗ್ಗೆ ಚೂರು ಕರುಣೆ ತೋರದ ‘ಸಾಕ್ಷಿಪ್ರಜ್ಞೆ’ಗಳ ಬಗ್ಗೆ ಕನಿಕರವೆನಿಸಿತು.
ನನ್ನ ಸುತ್ತಲೂ ಅನ್ಯಾಯ ಅಕ್ರಮಗಳ ಕೂಪವೇ ಇದೆ. ನಾನಿರುವ ಪರಿಸರದಲ್ಲೇ ಅದೆಂಥ ಅನ್ಯಾಯ ಭ್ರಷ್ಟತೆ ಮತ್ತು ಅಕ್ರಮಗಳಿವೆಯೆಂದರೆ ಅವುಗಳ ಕುರಿತು ನಾವು ಮಾತನಾಡುವಂತಿಲ್ಲ. ಯಾಕೆಂದರೆ ನಾವು ಅಬಲರು. ನಮಗೆ ದನಿಯೂ ಇಲ್ಲ ಶಕ್ತಿಯೂ ಇಲ್ಲ.
ನಾವು ಏನೇ ಮಾಡಿದರೂ ಅದಕ್ಕೆ ನಾವು ಮಾತ್ರ ಜವಾಬ್ದಾರರು. ಯಾರೋ ಬಂದು ಜೊತೆ ನಿಲ್ಲುವ ಮಾತು ತುಂಬಾ ದೂರದ್ದು. ಮೂರು ಜೀವಗಳು ನನ್ನನ್ನ ಈ ಕಡುಕಷ್ಟದ ಸಮಯದಲ್ಲಿ ಪೊರೆದವು. ಅವರಿಗೆ ನಾನು ಆಭಾರಿಯಾಗಿರುತ್ತೇನೆ.
ಅಪ್ಪನ ನೆನಪು ಮತ್ತು ಪ್ರೀತಿ ನಮ್ಮ ಕೊನೆಯುಸಿರಿರುವವರೆಗೂ ಪೊರೆಯುತ್ತದೆ ಎಂಬ ನಂಬಿಕೆಯಲ್ಲೇ ಬದುಕುತ್ತೇವೆ…
– ವೀರಣ್ಣ ಮಡಿವಾಳರ, ಕವಿಗಳು



