ಬೆಳಗಾವಿಯಲ್ಲಿ ಟಿಕೆಟ್ ವಂಚಿತರಿಂದ ಬಿಗಿಪಟ್ಟು: ಕಾಂಗ್ರೆಸ್ ಇಕ್ಕಟ್ಟು

3 years ago

ಬೆಂಗಳೂರು: ರಾಜಧಾನಿ ಬೆಂಗಳೂರು ಹೊರತುಪಡಿಸಿದರೆ ರಾಜ್ಯದಲ್ಲಿ ಅತಿಹೆಚ್ಚು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಬೆಳಗಾವಿ ಜಿಲ್ಲೆಯಲ್ಲಿ ಕಾಂಗ್ರೆಸ್ ಈ ಬಾರಿ ಪ್ರಾಬಲ್ಯ ಸಾಧಿಸಲು ಸಾಕಷ್ಟು ಕಸರತ್ತು ನಡೆಸಿದೆ. ಆದರೆ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗುತ್ತಿದ್ದಂತೆ ಟಿಕೆಟ್ ವಂಚಿತರ ಆಕ್ರೋಶ ದೊಡ್ಡ ಸವಾಲಾಗಿ ಪರಿಣಮಿಸಿದೆ.

ಬಿಕ್ಕಟ್ಟು ಶ್ರಮನಗೊಳಿಸುವ ದೃಷ್ಟಿಯಿಂದ ಟಿಕೆಟ್ ವಂಚಿತರ ಜೊತೆ ನಡೆದ ಸಂಧಾನ ಸಭೆ ವಿಫಲವಾಗಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ, ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್, ವಿಧಾನಸಭೆ ಪಕ್ಷ ನಾಯಕ ಸಿದ್ದರಾಮಯ್ಯ, ಪ್ರಚಾರ ಸಮಿತಿ ಅಧ್ಯಕ್ಷ ಎಂಬಿ ಪಾಟೀಲ್ ಟಿಕೆಟ್ ವಂಚಿತರೊಂದಿಗೆ ಸಭೆ ನಡೆಸಿ ಅವರನ್ನು ಸಮಾಧಾನ ಪಡಿಸುವ ಪ್ರಯತ್ನ ಆರಂಭಿಸಿದ್ದಾರೆ.

ಕಳೆದ ಬಾರಿ ಈ ಜಿಲ್ಲೆಯಲ್ಲಿ ಕಾಂಗ್ರೆಸ್ ತೀವ್ರ ಹಿನ್ನಡೆ ಅನುಭವಿಸಿತು. ಈ ಬಾರಿ ಬಿಜೆಪಿ ಒಡೆದ ಮನೆಯಾಗಿದ್ದು ಅದರ ಲಾಭ ಪಡೆಯಲು ಕಾಂಗ್ರೆಸ್ ಪ್ರಯತ್ನ ನಡೆಸಿದೆ. ಆದರೆ ಟಿಕೆಟ್ ವಂಚಿತರ ಬಂಡಾಯ ಇದಕ್ಕೆ ಅಡ್ಡಿಯಾಗುವ ಸಾಧ್ಯತೆ ಇದೆ.

ಕಿತ್ತೂರಿನಲ್ಲಿ ಮಾಜಿ ಸಚಿವ ಡಿ.ಬಿ. ಇನಾಮ್ ದಾರ್ ಬೆಂಬಲಿಗರು ರಸ್ತೆಗಿಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಇನಾಮ್ ದಾರ್ ಅವರ ಕುಟುಂಬದ ಯಾರಿಗಾದರೂ ಟಿಕೆಟ್ ನೀಡಿ, ಇಲ್ಲವಾದರೆ ಚುನಾವಣೆಯಲ್ಲಿ ತಾವು ಕಾಂಗ್ರೆಸ್ ವಿರುದ್ಧವಾಗಿ ಕೆಲಸ ಮಾಡಬೇಕಾಗುತ್ತದೆ ಎಂಬ ಎಚ್ಚರಿಕೆಯನ್ನು ಮಾಜಿ ಮಂತ್ರಿಗಳ ಬೆಂಬಲಿಗರು ನೀಡಿದ್ದಾರೆ.

ಅವರ ಸೊಸೆ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಅಚ್ಚರಿ ಎಂಬಂತೆ ಬಾಬಾಸಾಹೇಬ್ ಪಾಟೀಲ್‍ಗೆ ಟಿಕೆಟ್ ನೀಡಲಾಗಿದೆ. ಕಳೆದ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪಧಿಸಿ ಒಂದು ಕಾಲದಲ್ಲಿ ತಮ್ಮ ನಾಯಕರಾಗಿದ್ದ ಡಿ.ಬಿ.ಇನಾಮ್ ದಾರ್  ಅವರನ್ನು ಸೋಲಿಸಿದ್ದ ಬಾಬಾಸಾಹೇಬ್ ಪಾಟೀಲ್‍ಗೆ ಟಿಕೆಟ್ ನೀಡಿರುವುದು ಅಚ್ಚರಿಗೆ ಕಾರಣವಾಗಿದೆ.

ಇನ್ನೂ ಬಿಜೆಪಿ-ಕಾಂಗ್ರೆಸ್ ಎರಡರಲ್ಲೂ ಅಡ್ಡಾಡಿ ನಿಪ್ಪಾಣಿಯಿಂದ ಆಕಾಂಕ್ಷಿಯಾಗಿದ್ದ ಉತ್ತಮ್ ಪಾಟೀಲ್ ಕೂಡ ಪಕ್ಷೇತರರಾಗುವ ಸಾಧ್ಯತೆ ಇದೆ. ಸವದತ್ತಿ ಕ್ಷೇತ್ರದಲ್ಲಿ ಪ್ರಬಲ ಆಕಾಂಕ್ಷಿಗಳಾಗಿದ್ದ ಸೌರಬ್ ಚೋಪ್ರಾ ಮತ್ತು ಪಂಚನಗೌಡ ದ್ಯಾಮನಗೌಡ ಬಂಡಾಯದ ಕಹಳೆ ಊದಿದ್ದಾರೆ. ಏಪ್ರಿಲ್ 23ರ ಒಳಗೆ ಹೈಕಮಾಂಡ್ ತಮ್ಮ ನಿರ್ಧಾರ ಬದಲಾವಣೆ ಮಾಡದಿದ್ದರೆ ಪಕ್ಷ ತೊರೆಯುವುದಾಗಿ ಬೆದರಿಕೆ ಹಾಕಿದ್ದಾರೆ.

ಕಳೆದ ಬಾರಿ ಸವದತ್ತಿ ಕ್ಷೇತ್ರದಲ್ಲಿ ಪಕ್ಷೇತರರಾಗಿ ಸ್ಪಧಿಸಿ ಎರಡನೇ ಸ್ಥಾನ ಗಳಿಸಿದ್ದ ಆನಂದ್ ಛೋಪ್ರಾ ಕಾಂಗ್ರೆಸ್ ಪಕ್ಷವನ್ನು ಮೂರನೇ ಸ್ಥಾನಕ್ಕೆ ತಳ್ಳಿದ್ದರು. ಆನಂದ್ ಮಾಮನಿ ಅವರ ಅಗಲುವಿಕೆಯ ಬಳಿಕ ಸೌರಭ್ ಛೋಪ್ರಾ ಕ್ಷೇತ್ರದಲ್ಲಿ ಸಕ್ರಿಯರಾಗಿದ್ದರು. ಟಿಕೆಟ್‍ಗಾಗಿ ಭಾರೀ ಲಾಬಿ ನಡೆಸಿದ್ದರು.

ಆದರೆ ಸತೀಶ್ ಜಾರಕಿಹೊಳಿ ತಮ್ಮ ಆಪ್ತರಾದ ವಿಶ್ವಾಸ ವೈದ್ಯರಿಗೆ ಟಿಕೆಟ್ ಕೊಡಿಸಿದ್ದಾರೆ ಎಂಬ ಆಕ್ರೋಶಗಳು ಕೇಳಿ ಬಂದಿವೆ. ಇನ್ನೂ ರಮೇಶ್ ಜಾರಕಿಹೊಳಿ ಅವರೊಂದಿಗೆ ರಾಜಕೀಯ ಹಗೆತನಕ್ಕೆ ಇಳಿದಿರುವ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಚುನಾವಣೆ ಹೊಂದಾಣಿಕೆ ಮಾಡಿಕೊಳ್ಳುತ್ತಿದ್ದ ಆರೋಪಕ್ಕೆ ಗುರಿಯಾಗಿರುವ ಹಿಂದಿನ ಅಭ್ಯರ್ಥಿ ಅಶೋಕ್ ಪೂಜಾರಿ ಅವರನ್ನು ಬದಲಾವಣೆ ಮಾಡಿದ್ದಾರೆ. ಕ್ಷೇತ್ರದಲ್ಲಿ ಹೆಚ್ಚಿರುವ ಪಂಚಮಸಾಲಿ ಸಮುದಾಯವನ್ನು ಗಮನದಲ್ಲಿಟ್ಟುಕೊಂಡು ಮಹಂತೇಶ್ ಕಡಾಡಿಗೆ ಟಿಕೆಟ್ ನೀಡಿದ್ದಾರೆ. ಕಡಾಡಿ ಬಿಜೆಪಿಯ ರಾಜ್ಯಸಭಾ ಸದಸ್ಯ ಈರಣ್ಣ ಕಡಾಡಿ ಅವರ ಸಂಬಂಧಿಯಾಗಿದ್ದು, ರಮೇಶ್ ಜಾರಕಿಹೊಳಿಯವರ ನಡವಳಿಕೆ ಬಗ್ಗೆ ಈರಣ್ಣ ಕಡಾಡಿ ಹಲವು ಬಾರಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಎಲ್ಲಾ ಲೆಕ್ಕಾಚಾರಗಳೊಂದಿಗೆ ಈ ಬಾರಿ ಗೋಕಾಕಕ್ಕೆ ಅಭ್ಯರ್ಥಿಯನ್ನು ಕಣಕ್ಕಿಳಿಸಲಾಗಿದೆ.

Leave a Reply