ಬೆಂಗಳೂರು: ಮೇ 10 ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯಲ್ಲಿ ಗೆಲ್ಲುವ ಮೂಲಕ ರಾಜ್ಯದಲ್ಲಿ ಮತ್ತೆ ಅಧಿಕಾರ ಚುಕ್ಕಾಣಿ ಹಿಡಿಯಬೇಕೆಂದು ರಣತಂತ್ರ ರೂಪಿಸುತ್ತಿರುವ ಬಿಜೆಪಿಗೆ ಅಭ್ಯರ್ಥಿಗಳ ಆಯ್ಕೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಸುಮಾರು 40 ಕ್ಷೇತ್ರಗಳಲ್ಲಿ ನಾಲ್ಕರಿಂದ ಐವರು ಅಭ್ಯರ್ಥಿಗಳು ಕಣಕ್ಕಿಳಿಯಲು ಪಟ್ಟು ಹಿಡಿದಿದ್ದು ಬಹುಮತದ ಆಯ್ಕೆ ಹೈಕಮಾಂಡ್ ಗೆ ತಲೆ ನೋವಾಗಿ ಪರಿಣಮಿಸಿದೆ. ಬೆಳಗಾವಿ ರಾಜಕಾರಣಕ್ಕೆ ಸಂಬಂಧಿಸಿದಂತೆ ಮಹತ್ವದ ನಿರ್ಧಾರ ಹೊರ ಬಿದ್ದಿದ್ದು ರಮೇಶ್ ಜಾರಕಿಹೊಳಿ ಅವರ ಕೈ ಮೇಲಾಗಿದೆ.
ಅಭ್ಯರ್ಥಿಗಳ ಆಯ್ಕೆ ಕುರಿತಂತೆ ನವದೆಹಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ದಾ ಅವರು ಸಂಸದೀಯ ಮಂಡಳಿ ಸಭೆ ನಡೆಸಿದರು. ಇದರಲ್ಲಿ ಮುಖ್ಯಮಂತ್ರಿ ಬೊಮ್ಮಾಯಿ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಪಕ್ಷದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಸಂಘಟನಾ ಕಾರ್ಯದರ್ಶಿ ಸಂತೋಷ್ ಸೇರಿದಂತೆ ಹಲವರು ಭಾಗವಹಿಸಿದ್ದರು.
ಕೋರ್ ಕಮಿಟಿ ಸಲ್ಲಿಸಿರುವ ಸಂಭಾವ್ಯರ ಪಟ್ಟಿಯನ್ನು ಈ ಸಭೆ ಕೂಲಂಕುಶವಾಗಿ ಪರಿಶೀಲನೆ ನಡೆಸಿತು ಈ ವೇಳೆ ಸಭೆಯಲ್ಲಿ ಹಲವಾರು ವಿಷಯಗಳು ಪ್ರಮುಖವಾಗಿ ಚರ್ಚೆಗೆ ಬಂದವು ಎನ್ನಲಾಗಿದೆ. 18 ವಿಧಾನಸಭಾ ಕ್ಷೇತ್ರವಿರುವ ಬೆಳಗಾವಿ ಜಿಲ್ಲೆಯಲ್ಲಿ ನಾಯಕರ ನಡುವಿನ ಮುಸುಕಿನ ಗುದ್ದಾಟ ತೀವ್ರವಾಗಿರುವ ಬೆನ್ನೆಲ್ಲೇ ಮಹಾರಾಷ್ಟ್ರದ ಹಿರಿಯ ನಾಯಕ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಮಧ್ಯಪ್ರವೇಶಿಸಿದ್ದಾರೆ.
ರಮೇಶ್ ಜಾರಕಿಹೊಳಿ ಪರ ಬ್ಯಾಟಿಂಗ್ ಆರಂಭಿಸಿರುವ ದೇವೇಂದ್ರ ಫಡ್ನವಿಸ್ ಕರ್ನಾಟಕ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ತರಲು ರಮೇಶ್ ಜಾರಕಿಹೊಳಿಯವರ ಪ್ರಯತ್ನ ಗಮನಾರ್ಹವಾಗಿದೆ. ಜಿಲ್ಲೆಯಲ್ಲಿ ಸಾಕಷ್ಟು ಪ್ರಭಾವ ಹೊಂದಿರುವ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವುದು ಸೂಕ್ತ ಎಂದು ಹೇಳಿರುವ ಹಿನ್ನೆಲೆಯಲ್ಲಿ ಇದೀಗ ಇದೀಗ ಹೈಕಮಾಂಡ್ ರಮೇಶ್ ಜಾರಕಿಹೊಳಿ ಅವರ ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದೆ ಎನ್ನಲಾಗುತ್ತದೆ.
ಲಕ್ಷ್ಮಣ ಸವದಿ ವಿಧಾನ ಪರಿಷತ್ ಸದಸ್ಯರಾಗಿರುವ ಹಿನ್ನೆಲೆಯಲ್ಲಿ ಅವರಿಗೆ ವಿಧಾನಸಭೆಗೆ ಸ್ಪರ್ಧಿಸಲು ಟಿಕೆಟ್ ನೀಡುವ ಸಾಧ್ಯತೆ ಇಲ್ಲ ಎನ್ನಲಾಗಿದೆ. ಅವರ ಬದಲಿಗೆ ಅಥಣಿ ಕ್ಷೇತ್ರದಲ್ಲಿ ರಮೇಶ್ ಜಾರಕಿಹೊಳಿ ಅವರ ಆಪ್ತ ಮಹೇಶ್ ಕುಮಟಳ್ಳಿ ಅವರಿಗೆ ಟಿಕೆಟ್ ನೀಡುವ ಸಾಧ್ಯತೆ ಇದೆ ಅದೇ ರೀತಿ ಕಾಗವಾಡ ಕ್ಷೇತ್ರದಿಂದ ಜಾರಕಿಹೊಳಿ ಅವರ ಆಪ್ತ ಶ್ರೀಮಂತ ಪಾಟೀಲ್ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ. ಆದರೆ ಜಾರಕಿಹೊಳಿ ಅವರ ಮತ್ತೊಂದು ಬೇಡಿಕೆಯಾದ ಬೆಳಗಾವಿ ಗ್ರಾಮೀಣ ಕ್ಷೇತ್ರದ ಅಭ್ಯರ್ಥಿ ಕುರಿತಂತೆ ತನ್ನ ತೀರ್ಮಾನವೇ ಅಂತಿಮ ಎಂದು ಹೇಳಿದೆ.
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಕ್ಷೇತ್ರದಿಂದ ವಿಧಾನಪರಿಷತ್ ಸದಸ್ಯ ಆರ್ ಶಂಕರ್ ಟಿಕೆಟ್ ಬಯಸಿದ್ದು ತಮಗೆ ಟಿಕೆಟ್ ನೀಡದೇ ಹೋದರೆ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿಯುವ ಬೆದರಿಕೆ ಹಾಕಿರುವುದು ಸಭೆಯಲ್ಲಿ ಪ್ರಮುಖವಾಗಿ ಚರ್ಚೆಗೆ ಬಂದಿದೆ ಇದರೊಂದಿಗೆ ಹಲವು ಕ್ಷೇತ್ರಗಳಲ್ಲಿ ಹಾಲಿ ಶಾಸಕರ ಬದಲಿಗೆ ಅವರ ಕುಟುಂಬ ಸದಸ್ಯರು ಕಣಕ್ಕಿಳಿಯುವ ಒಲವು ವ್ಯಕ್ತಪಡಿಸಿರುವುದು ಹೈಕಮಾಂಡ್ ಗೆ ತಲೆ ನೋವಾಗಿ ಪರಿಣಮಿಸಿದೆ.
ಬಾಗಲಕೋಟೆ ಕ್ಷೇತ್ರದಿಂದ ಹಾಲಿ ಶಾಸಕ ವೀರಣ್ಣ ಚರಂತಿಮಠ ಅವರ ಬದಲಿಗೆ ಅವರ ಸೋದರ ಮಲ್ಲಿಕಾರ್ಜುನ ಚರಂತಿಮಠ, ರೋಣ ಕ್ಷೇತ್ರದಲ್ಲಿ ಹಾಲಿ ಶಾಸಕ ಕಳಕಪ್ಪ ಬಂಡಿ ಅವರ ಬದಲಿಗೆ ಅವರ ಸಹೋದರ ಸಿದ್ದಪ್ಪ ಬಂಡಿ ಅಫಜಲ್ ಪುರ ಕ್ಷೇತ್ರದಲ್ಲಿ ಮಾಲೀಕಯ್ಯ ಗುತ್ತೇದಾರ್ ಬದಲಿಗೆ ಅವರ ಸೋದರ ನಿತಿನ್ ಗುತ್ತೇದಾರ್ ಕಣಕ್ಕಿಳಿಯಲು ಪಟ್ಟು ಹಿಡಿದಿದ್ದರೆ, ತೇರದಾಳ ಕ್ಷೇತ್ರದಲ್ಲಿ ಹಾಲಿ ಶಾಸಕ ಸಿದ್ದು ಸವದಿ ಅವರ ಬದಲಿಗೆ ಮುರುಗೇಶ್ ನಿರಾಣಿ ಅವರ ಸೋದರ ಸಂಗಮೇಶ ನಿರಾಣಿ ಅವರಿಗೆ ಟಿಕೆಟ್ ನೀಡುವಂತೆ ಪ್ರಬಲ ಒತ್ತಡ ಕೇಳಿಬಂದಿದ್ದು, ಸಂಸದೀಯ ಮಂಡಳಿ ಸಭೆಯಲ್ಲಿ ಜ್ಞಾಪಕ ಚರ್ಚೆಗೆ ಗ್ರಾಸವಾಗಿದೆ.
ಇವಷ್ಟೇ ಅಲ್ಲದೆ ಶಿರಹಟ್ಟಿ ಕ್ಷೇತ್ರದಲ್ಲಿ ಹಾಲಿ ಶಾಸಕ ಶಾಸಕ ರಾಮಪ್ಪ ಲಮಾಣಿ ಅವರಿಗೆ ಟಿಕೆಟ್ ನೀಡಬಾರದು, ಕನಕಗಿರಿಯಲ್ಲಿ ಬಸವರಾಜ ದಡೇಸಗೂರು, ಹೊಸದುರ್ಗದಲ್ಲಿ ಗೂಳಿಹಟ್ಟಿ ಶೇಖರ್, ಮೂಡಿಗೆರೆಯಲ್ಲಿ ಕುಮಾರಸ್ವಾಮಿ, ಸೊರಬದಲ್ಲಿ ಕುಮಾರ್ ಬಂಗಾರಪ್ಪ, ತುಮಕೂರಿನಲ್ಲಿ ಜ್ಯೋತಿ ಗಣೇಶ್, ಬೆಂಗಳೂರಿನ ಚಿಕ್ಕಪೇಟೆಯಲ್ಲಿ ಉದಯ ಗರುಡಾಚಾರ್, ಬಸವನಗುಡಿಯಲ್ಲಿ ರವಿ ಸುಬ್ರಮಣ್ಯ ಅವರಿಗೆ ಟಿಕೆಟ್ ನೀಡದಂತೆ ಒತ್ತಡ ಕೇಳಿಬಂದಿದೆ. ಈ ಕುರಿತು ಸಂಸದೀಯ ಮಂಡಳಿ ಸಭೆ ಸುದೀರ್ಘ ಚರ್ಚೆ ನಡೆಸಿದೆ ಯಾವುದೇ ಗೊಂದಲವಿಲ್ಲದ ಸುಮಾರು ಐವತ್ತಕ್ಕೂ ಹೆಚ್ಚು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಆಯ್ಕೆಯನ್ನು ಪೂರ್ಣಗೊಳಿಸಿದೆ. ನಾಳೆ ಮತ್ತೊಮ್ಮೆ ಸೇರುತ್ತಿದ್ದು ನಾಳೆ ತಡರಾತ್ರಿ ಪ್ರಥಮ ಪಟ್ಟಿ ಬಿಡುಗಡೆಯಾಗುವ ಸಾಧ್ಯತೆ ಇದೆ ಎಂದು ಬಿಜೆಪಿಯ ಉನ್ನತ ಮೂಲಗಳು ತಿಳಿಸಿವೆ.



