ಬರ ಅಧ್ಯಯನಕ್ಕಾಗಿ ಕೇಂದ್ರದ ಮೂರು ತಂಡಗಳು ಆಗಮಿಸುತ್ತಿವೆ: ಎನ್.‌ಚೆಲುವರಾಯಸ್ವಾಮಿ

3 years ago

#teams #Center #arriving #drought #studies #NCheluvarayaswamy

ಕಲಬುರಗಿ: ರಾಜ್ಯದಲ್ಲಿ ಈ ಬಾರಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಬಹುತೇಕ ಎಲ್ಲಾ ಕಡೆ ಭೀಕರ ಬರಗಾಲ ಪರಿಸ್ಥಿತಿ ಉಂಟಾಗಿದೆ. ಈ ವಾಸ್ತವದ ಅಧ್ಯಯನಕ್ಕಾಗಿ ಕೇಂದ್ರದ ಉನ್ನತಾಧಿಕಾರಿಗಳಬ ಮೂರು ತಂಡಗಳು ಆಗಮಿಸುತ್ತಿವೆ ಎಂದು ಕೃಷಿ ಸಚಿವ ಎನ್.‌ ಚೆಲುವರಾಯಸ್ವಾಮಿ ತಿಳಿಸಿದ್ದಾರೆ

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಕೃಷಿ ಇಲಾಖೆಯ ವಿಭಾಗೀಯ ಮಟ್ಟದ ಇಲಾಖಾ ಪ್ರಗತಿ ಪರಿಶೀಲನಾ ಸಭೆ ನಡೆಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಂದಿನ ವಾರದಲ್ಲಿ ಈ ತಂಡಗಳು ಬರಲಿವೆ ಎಂದು ತಿಳಿಸಿದರು.

ಜಿಲ್ಲಾಧಿಕಾರಿಗಳ ವರದಿ ಆಧರಿಸಿ ಸರ್ಕಾರ ರಾಜ್ಯದ 195 ತಾಲೂಕುಗಳನ್ನು ಬರಗಾಲ ಪೀಡಿತ ಎಂದು ಘೋಷಿಸಿದೆ. ಇಲ್ಲಿ ಅಗತ್ಯ ಪರಿಹಾರ ಕೈಗೊಳ್ಳಲು ಅಗತ್ಯ ನೆರವು ನೀಡುವಂತೆ ಕೋರಿ ಕೇಂದ್ರ ಸರ್ಕಾರಕ್ಕೆ ವರದಿ ಕಳುಹಿಸಿದ ಹಿನ್ನೆಲೆಯಲ್ಲಿ  ಕೇಂದ್ರ ಸರ್ಕಾರ ಪರಿಸ್ಥಿತಿ ಅರಿಯಲು ಅಧ್ಯಯನ ತಂಡಗಳನ್ನು ಕಳುಹಿಸುವುದಾಗಿ ಮಾಹಿತಿ ಕಳುಹಿಸಿದೆ. ಇದೇ  ಅಕ್ಟೋಬರ್ 10 ರೊಳಗೆ ತಂಡಗಳು ಆಗಮಿಸಲಿವೆ ಎಂದು ತಿಳಿಸಿದರು.

ರಾಜ್ಯದಲ್ಲಿ ಒಂದೆಡೆ ಅತಿವೃಷ್ಟಿ ಮತ್ತೊಂದೆಡೆ ಅನಾವೃಷ್ಟಿಯ ಪರಿಸ್ಥಿತಿ ಇದೆ. ಹೆಚ್ಚಿನ ಪ್ರಮಾಣದಲ್ಲಿ ಬರಗಾಲವಿದೆ. ರಾಜ್ಯದ ಅಧಿಕಾರಿಗಳ ಮಟ್ಟದಲ್ಲಿ ಬೆಳೆ ಹಾನಿ ಸಮೀಕ್ಷೆ ನಡೆದಿದೆ ಎಂದು ತಿಳಿಸಿದರು.

ಈಗಾಗಲೇ ಶೇ. 80 ರಿಂದ 90 ರಷ್ಟು ಬೆಳೆ ಹಾನಿ ವರದಿಯಾಗಿದೆ. ತಂಡಗಳು ಆಗಮಿಸುವ ಹೊತ್ತಿಗೆ ಸಮೀಕ್ಷೆ ಅಂತಿಮಗೊಳ್ಳಲಿದೆ.‌ ಪ್ರಾಥಮಿಕ ವರದಿ ಪ್ರಕಾರ ಈಗಾಗಲೇ 40 ಲಕ್ಷ ಹೆಕ್ಟೇರ್ ದಲ್ಲಿ ಸುಮಾರು 28 ಸಾವಿರ ಕೋಟಿ ರೂ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ ಎಂದು ವಿವರಿಸಿದರು.

ಬೆಳೆವಿಮೆ ಮಾರ್ಪಾಡು: ಬೆಳೆವಿಮೆಯನ್ನು ಈಗ ಖಾಸಗಿ ಕಂಪನಿಯೇ ಉಸ್ತುವಾರಿಯಾಗಿದ್ದು, ಸಮರ್ಪಕವಾಗಿ ಬೆಳೆ ಹಾನಿಗೆ ತಕ್ಕ ಪರಿಹಾರ ದೊರಕುತ್ತಿಲ್ಲ ಎಂಬುದಾಗಿ ವ್ಯಾಪಕ ದೂರುಗಳು ಕೇಳಿ ಬರುತ್ತಿರುವ ಹಿನ್ನೆಲೆಯಲ್ಲಿ ಈ ಮೊದಲಿನಂತೆ ಮುಂದಿನ ವರ್ಷದಿಂದ ಸರ್ಕಾರದಿಂದಲೇ ಬೆಳೆವಿಮೆ ನಿರ್ವಹಿಸಲು ಚಿಂತನೆ ನಡೆದಿದೆ ಎಂದು ತಿಳಿಸಿದರು.

ಕೃಷಿ ಹೊಂಡ: ಕೃಷಿ ಇಲಾಖೆಯ ಯೋಜನೆಗಳನ್ನು ಪರಿಣಾಮಕಾರಿಯಾಗಿ ಜಾರಿ ಮಾಡಲು ಸೂಚಿಸಲಾಗಿದೆ. ಕೃಷಿ ಹೊಂಡ ನಿರ್ಮಾಣ ಯೋಜನೆ ಮತ್ತೆ ಜಾರಿಗೆ ತರಲಾಗಿದೆ.‌ ರೈತರ ಮಕ್ಕಳಿಗೆ ನೀಡಲಾಗುವ ವಿದ್ಯಾನಿಧಿ ಮುಂದುವರೆಸಲಾಗಿದೆ.‌ ಆದರೆ ಪ್ರಧಾನಮಂತ್ರಿ ಕಿಸಾನ ಸಮ್ಮಾನ ನಿಧಿ ಜತೆಗೆ ರಾಜ್ಯದಿಂದ ನೀಡಲಾಗುತ್ತಿದ್ದ 4000 ರೂ ನೀಡುವುದನ್ನು ನಿಲ್ಲಿಸಲಾಗಿದೆ ಎಂದು ತಿಳಿಸಿದರು.

Leave a Reply