ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ನಿರೀಕ್ಷೆಯಂತೆ ಕಾಂಗ್ರೆಸ್ಸಿನ ಮೂವರು ಮತ್ತು ಬಿಜೆಪಿಯ ಒಬ್ಬ ಅಭ್ಯರ್ಥಿ ಆಯ್ಕೆಯಾಗಿದ್ದಾರೆ. ಪವಾಡದ ನೀರಿಕ್ಷೆಯಲ್ಲಿದ್ದ ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ನಿರಾಸೆಯಾಗಿದೆ.
ವಿಧಾನಸೌಧದ ಸಮಿತಿ ಕೊಠಡಿಯಲ್ಲಿ ತೆರೆಯಲಾಗಿದ್ದ ಮತಗಟ್ಟೆಗೆ ಎಲ್ಲಾ ಶಾಸಕರು ಅತ್ಯಂತ ಉತ್ಸಾಹದಿಂದ ಆಗಮಿಸಿ ಮತ ಚಲಾಯಿಸಿದರೆ, ಬಿಜೆಪಿ ಶಾಸಕ ಎಸ್ ಟಿ ಸೋಮಶೇಖರ್ ಅಡ್ಡ ಮತದಾನ ಮಾಡುವ ಮೂಲಕ ಗಮನ ಸೆಳೆದರು. ಮತ್ತೋರ್ವ ಶಾಸಕ ಶಿವರಾಮ ಹೆಬ್ಬಾರ್ ಮತದಾನ ಚಟುವಟಿಕೆಯಿಂದ ದೂರ ಉಳಿಯುವ ಮೂಲಕ ಅಚ್ಚರಿ ಮೂಡಿಸಿದರು.
ಅಡ್ಡ ಮತದಾನದ ಭೀತಿ ಎದುರಿಸುತ್ತಿದ್ದ ಜೆಡಿಎಸ್ ನಲ್ಲಿ ಯಾವುದೇ ವಿದ್ಯಮಾನಗಳು ನಡೆಯಲಿಲ್ಲ. ಗುರುಮಿಠಕಲ್ ಶಾಸಕ ಶರಣ ಗೌಡ ಕುಂದಕೂರ ಸೇರಿದಂತೆ ಎಲ್ಲ ಶಾಸಕರು ನಿಗದಿತ ಸಮಯಕ್ಕೆ ಹಾಜರಾಗಿ ತಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಪರವಾಗಿ ಮತ ಚಲಾಯಿಸುವ ಮೂಲಕ ಎಲ್ಲರ ಲೆಕ್ಕಾಚಾರಗಳನ್ನು ತಲೆಕೆಳಗು ಮಾಡಿದರು.
ಬಿಜೆಪಿ ಶಾಸಕ ಸುರೇಶ್‌ಕುಮಾರ್ ಮೊದಲಿಗರಾಗಿ ಬಂದು ಮತ ಹಾಕಿದರು. ನಂತರ ಎಲ್ಲಾ ಶಾಸಕರು ಒಬ್ಬೊಬ್ಬರಾಗಿ ಮತ ಹಾಕಿದರು. ಸಿಎಂ ಸಿದ್ಧರಾಮಯ್ಯ, ಡಿಸಿಎಂ ಡಿ.ಕೆ. ಶಿವಕುಮಾರ್, ಮಾಜಿ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ, ಹೆಚ್.ಡಿ. ಕುಮಾರಸ್ವಾಮಿ, ವಿಪಕ್ಷ ನಾಯಕ ಆರ್. ಅಶೋಕ್, ಸಚಿವರಾದ ಸತೀಶ ಜಾರಕಿಹೊಳಿ, ಎಂ.ಬಿ. ಪಾಟೀಲ್, ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಬಹುತೇಕ ಶಾಸಕರು ಮಧ್ಯಾಹ್ನ 2 ರ ಹೊತ್ತಿಗೆ ಎಲ್ಲರೂ ಬಂದು ಮತ ಹಾಕಿದರು. ಹನೂರು ಕ್ಷೇತ್ರದ ಜೆಡಿಎಸ್ ಶಾಸಕ ಎಂ.ಆರ್. ಮಂಜುನಾಥ್ ಕೊನೆಯವರಾಗಿ ಮತ ಚಲಾಯಿಸಿದರು.
ಇದರ ನಡುವೆ ಮಾಜಿ ಸಚಿವ ಹಾಗೂ ಬಿಜೆಪಿ ಶಾಸಕ ಶಿವರಾಂ ಹೆಬ್ಬಾರ್ ಮತಗಟ್ಟೆಯ ಕಡೆ ಸುಳಿಯಲಿಲ್ಲ. ಇಂದು ಬೆಳಗಿನವರೆಗೆ ಬಿಜೆಪಿ ನಾಯಕರ ಜೊತೆ ಸಂಪರ್ಕದಲ್ಲಿದ್ದ ಹೆಬ್ಬಾರ್ ಮತದಾನ ಆರಂಭಕ್ಕೆ ಕೆಲವೇ ಗಂಟೆಗಳು ಮೊದಲು ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡು ನಾಪತ್ತೆಯಾದರು.
ಹೆಬ್ಬಾರ್ ಅವರು ಎಲ್ಲಿದ್ದಾರೆ ಎಂದು ಬಿಜೆಪಿ ನಾಯಕರು ಅವರನ್ನು ಹುಡುಕಲು ಮಾಡಿದ ಎಲ್ಲ ಪ್ರಯತ್ನ ವಿಫಲವಾದವು. ಕೊನೆಗೆ ಪಕ್ಷದ ಶಾಸಕಾಂಗ ಕಾರ್ಯದರ್ಶಿ ಹೆಬ್ಬಾರ್ ಅವರ ಶಾಸಕರ ಭವನದ ಕಚೇರಿಗೆ ತೆರಳಿ ಕಚೇರಿಯ ಬಾಗಿಲಿಗೆ ಪಕ್ಷದ ವಿಪ್ ಅಂಟಿಸಿದರು. ಆನಂತರ ಪಕ್ಷದ ಇತರೆ ಮುಖಂಡರು ಅವರ ನಿವಾಸಕ್ಕೂ ತೆರಳಿ ಮನೆಯ ಬಾಗಿಲಿಗೆ ವಿಪ್ ಅಂಟಿಸಿ ಬಂದರು.
ಮತ್ತೊಂದಡೆ ಪಕ್ಷದ ಸುನಿಲ್ ಕುಮಾರ್ ಸೇರಿದಂತೆ ಅನೇಕ ನಾಯಕರು ಹೆಬ್ಬಾರ್ ಅವರನ್ನು ಸಂಪರ್ಕಿಸಲು ಸತತ ಪ್ರಯತ್ನ ನಡೆಸಿದರು. ಯಾರ ಸಂಪರ್ಕಕ್ಕೂ ಅವರು ಸಿಗಲಿಲ್ಲ. ಆ ವೇಳೆಗಾಗಲೇ ಮತದಾನದ ಅವಧಿ ಪೂರ್ಣಗೊಂಡ ಪರಿಣಾಮ ಅವರು ಸಂಪರ್ಕಿಸುವ ಯತ್ನವನ್ನು ಕೈಬಿಡಲಾಯಿತು.
ಈ ಬೆಳವಣಿಗೆ ಕುರಿತು ತೀವ್ರ ಆಘಾತ ವ್ಯಕ್ತಪಡಿಸಿದ ವಿಪಕ್ಷ ನಾಯಕ ಆರ್ ಅಶೋಕ್, ಈ ಇಬ್ಬರು ನಾಯಕರು ರಾಜಕೀಯವಾಗಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹವರನ್ನು ಮತದಾರ ಎಂದಿಗೂ ಕ್ಷಮಿಸುವುದಿಲ್ಲ. ಮುಂಬರುವ ಚುನಾವಣೆಯಲ್ಲಿ ಅವರಿಗೆ ತಕ್ಕ ಪಾಠ ಕಲಿಸಲಿದ್ದಾನೆ ಎಂದರು.
ನಿನ್ನೆಯವರೆಗೆ ತಮ್ಮ ಸಂಪರ್ಕದಲ್ಲಿದ್ದ ಸೋಮಶೇಖರ್ ಮತ್ತು ಹೆಬ್ಬಾರ್ ಅವರು ಯಾವುದೇ ಕಾರಣಕ್ಕೂ ಅಡ್ಡ ಮತದಾನ ಮಾಡುವುದಿಲ್ಲ. ಬಿಜೆಪಿ ಅಭ್ಯರ್ಥಿಗೆ ಮತ ಹಾಕುತ್ತೇವೆ ಎಂದು ಹೇಳಿ ಇಂದು ವಿಶ್ವಾಸದ್ರೋಹ ಮಾಡಿದ್ದಾರೆ ಎಂದರು.
ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ಐವರು ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಓರ್ವ ಅಭ್ಯರ್ಥಿ ಗೆಲುವು ಸಾಧಿಸಲು 45 ಶಾಸಕರ ಮತಗಳ ಅಗತ್ಯವಿತ್ತು. ಅದರಂತೆ ಶಾಸನಸಭೆಯಲ್ಲಿ 135 ಶಾಸಕರ ಬೆಂಬಲ ಹೊಂದಿರುವ ಕಾಂಗ್ರೆಸ್, ನಾಲ್ವರು ಪಕ್ಷೇತರ ಶಾಸಕರ ನೆರವಿನೊಂದಿಗೆ ಮೂರು ಸ್ಥಾನ ಗಳಿಸಲು ಯಶಸ್ವಿಯಾಗಿದೆ. ಕಾಂಗ್ರೆಸ್ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದ ಅಜಯ್ ಮಾಕೇನ್ ನಾಸೀರ್ ಹುಸೇನ್ ತಲಾ 47 ಮತ್ತು ಜಿ ಸಿ ಚಂದ್ರಶೇಖರ್ 45 ಮತಗಳನ್ನು ಪಡೆದು ಆಯ್ಕೆಯಾದರು.
ಪಕ್ಷೇತರ ಶಾಸಕರಾದ ಲತಾ ಮಲ್ಲಿಕಾರ್ಜುನ, ವೆಂಕಟರಮಣ ಗೌಡ, ಜನಾರ್ಧನ ರೆಡ್ಡಿ ಮತ್ತು ದರ್ಶನ್ ಪುಟ್ಟಣ್ಣಯ್ಯ ಅವರು ಕಾಂಗ್ರೆಸ್ ಅಭ್ಯರ್ಥಿಗಳನ್ನು ಬೆಂಬಲಿಸಿದರು.
ಬಿಜೆಪಿಯ ನಾರಾಯಣಸಾ ಬಾಂಡಗೆ ಅವರು 47 ಮತಗಳನ್ನು ಪಡೆದು ಆಯ್ಕೆಯಾದರೆ, ಜೆಡಿಎಸ್ ನ ಕುಪೇಂದ್ರ ರೆಡ್ಡಿ ಅವರು ಕೇವಲ 35 ಮತಗಳನ್ನು ಪಡೆದರು. ಜೆಡಿಎಸ್ ನ ಎಲ್ಲ ಶಾಸಕರು ತಮ್ಮ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಗೆ ಮತ ಹಾಕಿದರು.




