ರಾಜ್ಯದ ಹಲವೆಡೆ ವಿಧ್ವಂಸಕ ಕೃತ್ಯ ನಡೆಸುವುದಾಗಿ ಹೇಳಿ ಬೆದರಿಕೆ ಸಂದೇಶ

2 years ago

ಬೆಂಗಳೂರು: ನಗರದ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣದ ತನಿಖೆ ತೀವ್ರ ಸ್ವರೂಪದಲ್ಲಿ ನಡೆಯುತ್ತಿರುವ ಬೆನ್ನಲ್ಲೇ ರಾಜ್ಯದ ಹಲವೆಡೆ ವಿಧ್ವಂಸಕ ಕೃತ್ಯ ನಡೆಸುವುದಾಗಿ ಹೇಳಿ ಬೆದರಿಕೆ ಸಂದೇಶ ಬಂದಿದೆ.

ಹಣ ಸೇರಿದಂತೆ ತಾವು ಕೇಳಿದ್ದನ್ನು ಪೂರೈಸಬೇಕು ಇಲ್ಲವಾದರೆ ಅಂಬಾರಿ ಉತ್ಸವ್ ಬಸ್ ಸೇರಿದಂತೆ  ಯಾವುದಾದರೂ ಜನ ನಿಬಿಡ ಪ್ರದೇಶದಲ್ಲಿ ಸ್ಪೋಟ ನಡೆಸಿ ಸ್ಯಾಂಪಲ್ ತೋರಿಸುತ್ತೇವೆ ಎಂದು ಬೆದರಿಕೆ ಹಾಕಲಾಗಿದೆ.

ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿ.ಕೆ.ಶಿವಕುಮಾರ್, ಗೃಹ ಸಚಿವ ಡಾ.ಜಿ.ಪರಮೇಶ್ವರ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಹಾಗೂ ನಗರ ಪೊಲೀಸ್ ಆಯುಕ್ತ ಬಿ.ದಯಾನಂದ ಸೇರಿದಂತೆ ಇತರರಿಗೆ ಬೆದರಿಕೆ ಈ ಮೇಲ್ ಸಂದೇಶ ಬಂದಿದೆ.

ಈ ಮೇಲ್ ಶಾಹಿರ್ ಖಾನ್10786 ಎಂಬ ಇ ಮೇಲ್ ಬಂದಿದ್ದು,ನಮಗೆ 5 ಮಿಲಿಯನ್ ಡಾಲರ್ ಹಣ ಹಾಕದಿದ್ದರೆ ಬಸ್, ರೈಲು, ದೇವಾಲಯ, ಹೋಟೆಲ್ ಸೇರಿದಂತೆ ಕರ್ನಾಟಕದಾದ್ಯಂತ ಸ್ಫೋಟ ನಡೆಸುತ್ತೇವೆ. ಅಂಬಾರಿ ಉತ್ಸವ್ ಬಸ್ ಸ್ಫೋಟಗೊಳಿಸಿ ಮತ್ತೊಂದು ಟ್ರೇಲರ್ ತೋರಿಸುತ್ತೇವೆ. ನಂತರ ನಮ್ಮ ಬೇಡಿಕೆಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸುತ್ತೇವೆ ಎಂದು ಎರಡು ಮೇಲ್ ಗಳಲ್ಲಿ ವಿವರಿಸಲಾಗಿದೆ.

ಈ ಬೆದರಿಕೆ ಈ ಮೇಲ್ ಕರೆಯ ಬೆನ್ನು ಹತ್ತಿರುವ ಬೆಂಗಳೂರು ನಗರ ಪೊಲೀಸರು ಈಮೇಲ್ ಮೂಲ ಶೋಧಿಸಲು ಮುಂದಾಗಿದ್ದಾರೆ. ಈ ಕುರಿತಂತೆ ಸ್ವಿಜರ್ಲ್ಯಾಂಡ್ನಲ್ಲಿರುವ ಸಂಸ್ಥೆಗೆ ಪತ್ರ ಬರೆದು ಮಾಹಿತಿ ಕೋರಿರುವ ಪೊಲೀಸರು ಅಲ್ಲಿನ ಉತ್ತರಕ್ಕಾಗಿ ಕಾಯುತ್ತಿದ್ದಾರೆ ಎಂದು ತಿಳಿದುಬಂದಿದೆ.

ಶಾಹಿದ್ ಖಾನ್ ಎಂಬ ಹೆಸರಿನಲ್ಲಿ ಬಂದಿರುವ ಈ ಮೇಲ್ ವಿಷಯದ ಮಾಹಿತಿ ಕೋರಿ ಸ್ಟಿಜರ್ಲ್ಯಾಂಡ್ ಮೂಲದ ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಸಂಸ್ಥೆಗೆ ಪೊಲೀಸರು ಪತ್ರ ಬರೆದಿದ್ದಾರೆ. ಈ ವ್ಯಕ್ತಿ ಪೊರೀಟೊಮೇಲ್.ಕಾಮ್ ಮೂಲಕ ಈಮೇಲ್ ಮಾಡಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಆ ಸಂಸ್ಥೆಗೆ ಪೊಲೀಸರು ಪತ್ರ ಬರೆದು ಸಂಸ್ಥೆಯ ಉತ್ತರಕ್ಕಾಗಿ ಕಾಯುತ್ತಿದ್ದಾರೆ.

ಎಂಡ್ ಟು ಎಂಡ್ ಎನ್ಕ್ರಿಪ್ಟೆಡ್ ಇ ಮೇಲ್ ಸರ್ವಿಸ್ ನೀಡುವ ಸ್ಟಿಜರ್ಲ್ಯಾಂಡ್ ಮೂಲದ ಕಂಪನಿಯಾಗಿದ್ದು ಈ ವ್ಯಕ್ತಿ ಕಳುಹಿಸಿರುವ ಜೀವ ಬೆದರಿಕೆ ಕರೆಯ ಬಗ್ಗೆ ಅಗತ್ಯ ಮಾಹಿತಿ ನೀಡುವಂತೆ ಕೇಳಿಕೊಳ್ಳಲಾಗಿದೆ.

ಜನನಿಬಿಡ ಸ್ಥಳಗಳಲ್ಲಿ ಬಾಂಬ್ ಸೋಟಿಸುವುದಾಗಿ ಇ-ಮೇಲ್ ಮೂಲಕ ಬೆದರಿಕೆ ಸಂದೇಶ ಬಂದ ಹಿನ್ನೆಲೆಯಲ್ಲಿ ರಾಜ್ಯಸರ್ಕಾರ ಕಟ್ಟೆಚ್ಚರ ವಹಿಸಿದ್ದು, ಬಸ್ ನಿಲ್ದಾಣ, ರೈಲ್ವೆ ನಿಲ್ದಾಣ ಸೇರಿದಂತೆ ಜನನಿಬಿಡ ಸ್ಥಳಗಳಲ್ಲಿ ತಪಾಸಣೆಯನ್ನು ಚುರುಕುಗೊಳಿಸಿದೆ. ಲಗೇಜ್ ಬ್ಯಾಗ್ಗಳನ್ನು ಪೊಲೀಸರು ಖುದ್ದು ಪರಿಶೀಲನೆಗೊಳಪಡಿಸುತ್ತಿದ್ದು, ಸೋಟಕ ಪತ್ತೆ ಯಂತ್ರಗಳ ಮೂಲಕ ತಪಾಸಣೆ ನಡೆಸುತ್ತಿದ್ದಾರೆ.

ಅನುಮಾನ ಬಂದ ಕಡೆ ಬ್ಯಾಗ್ಗಳನ್ನು ಇಂಚಿಂಚೂ ಪರಿಶೀಲನೆಗೊಳಪಡಿಸಲಾಗುತ್ತಿದೆ. ಅನುಮಾನಸ್ಪದ ವ್ಯಕ್ತಿಗಳ ಮೇಲೆ ನಿಗಾ ಇರಿಸಲಾಗಿದೆ. ಬಸ್ ಗಳಲ್ಲೂ ಕೂಡ ಅನಾಮಧೇಯ ಬ್ಯಾಗ್ ಗಳನ್ನು ಪರಿಶೀಲಿಸಲಾಗುತ್ತಿದೆ. ಬಸ್ ನಿಲ್ದಾಣ, ರೈಲ್ವೆ ನಿಲ್ದಾಣಗಳಲ್ಲಿ ಭದ್ರತೆಯನ್ನು ಹೆಚ್ಚಿಸಲಾಗಿದೆ. ಆಡಳಿತದ ಶಕ್ತಿ ಕೇಂದ್ರಗಳಾದ ವಿಧಾನಸೌಧ, ವಿಕಾಸಸೌಧದ ಭದ್ರತೆಯನ್ನು ತೀವ್ರಗೊಳಿಸಲಾಗಿದೆ.

ವಿಧಾನಸೌಧ, ವಿಕಾಸಸೌಧ ಪ್ರವೇಶಿಸುವ ದ್ವಾರಗಳಲ್ಲಿ ಅಧಿಕಾರಿ, ಸಿಬ್ಬಂದಿ ಹಾಗೂ ಸಾರ್ವಜನಿಕರನ್ನು ತೀವ್ರ ತಪಾಸಣೆಗೊಳಪಡಿಸಿ ಪೊಲೀಸರು ಒಳಪ್ರವೇಶಿಸಲು ಅವಕಾಶ ಮಾಡಿಕೊಡುತ್ತಿದ್ದಾರೆ. ಪ್ರವೇಶದ್ವಾರದಲ್ಲೇ ಬ್ಯಾಗ್ಗಳನ್ನು ಪರಿಶೀಲನೆ ಮಾಡಿದ ನಂತರ ಒಳಹೋಗಲು ಅವಕಾಶ ಮಾಡಿಕೊಡಲಾಗುತ್ತಿದೆ.

ಎರಡು ಸೌಧಗಳ ನಾಲ್ಕು ದಿಕ್ಕಿನಲ್ಲಿರುವ ಪ್ರವೇಶ ದ್ವಾರಗಳಲ್ಲಿ ಲೋಹ ಶೋಧದ ಮೂಲಕ ಪರಿಶೀಲನೆ ಮಾಡಲಾಗುತ್ತಿದೆ. ಬ್ಯಾಗ್ ಗಳನ್ನು ಕಡ್ಡಾಯವಾಗಿ ಸ್ಕ್ಯಾನ್ ಮಾಡಿದ ನಂತರ ಒಳಪ್ರವೇಶಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಪರಿಚಯಸ್ಥರು, ಅಧಿಕಾರಿ, ಸಿಬ್ಬಂದಿ ಎಂಬ ಯಾವ ಸಡಿಲಿಕೆಯೂ ಇಲ್ಲದೆ ಕಟ್ಟುನಿಟ್ಟಿನ ತಪಾಸಣೆ ಮಾಡಲಾಗುತ್ತಿದೆ.

Leave a Reply