ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ರೂವಾರಿ ಭಟ್ಕಳದಲ್ಲಿ ತಲೆ ಕರೆಸಿಕೊಂಡಿರುವ ಶಂಕೆ

2 years ago

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನ ವೈಟ್ ಫೀಲ್ಡ್ ಸಮೀಪದ ಕುಂದಲಹಳ್ಳಿಯ ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟದ ರೂವಾರಿ ಉತ್ತರ ಕನ್ನಡ ಜಿಲ್ಲೆಯ ಭಟ್ಕಳದಲ್ಲಿ ತಲೆ ಕರೆಸಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ರಾಮೇಶ್ವರಂ ಕೆಫೆಯ ವಾಶ್ ಬೇಸಿನ್ ಸಮೀಪ ಸ್ಫೋಟಕ ಇರಿಸಿದ ನಂತರ ಬಿಎಂಟಿಸಿ ಬಸ್ಸು ಹತ್ತಿ ಮೆಜೆಸ್ಟಿಕ್ ತಲುಪಿದ ಬಾಂಬರ್ ನಂತರ ಅಲ್ಲಿಂದ ಸುಜಾತ ಸರ್ಕಲ್‌ ಗೆ ಆಗಮಿಸಿದ್ದಾನೆ. ಅಲ್ಲಿ ಬಸ್ ಹತ್ತಿ ತುಮಕೂರಿನಲ್ಲಿ ಇಳಿದಿದ್ದಾನೆ. ತುಮಕೂರಿನಿಂದ ಬೇರೊಂದು ಬಸ್ಸಿನಲ್ಲಿ ಬಳ್ಳಾರಿಗೆ ಹೋಗಿ ಅಲ್ಲಿಂದ ಮಂತ್ರಾಲಯ – ಗೋಕರ್ಣ ಬಸ್‌ ಹತ್ತಿ ಭಟ್ಕಳಕ್ಕೆ ತೆರಳಿರುವ ಶಂಕೆ ವ್ಯಕ್ತವಾಗಿದೆ.

ಈ ಬಗ್ಗೆ ಖಚಿತ ಮಾಹಿತಿ ಪಡೆದಿರುವ ರಾಷ್ಟ್ರೀಯ ತನಿಖಾ ದಳ (ಎನ್ ಐಎ)ದ ಅಧಿಕಾರಿಗಳು ತುಮಕೂರು ಹಾಗೂ ಬಳ್ಳಾರಿ‌ ಬಸ್‌ ನಿಲ್ದಾಣಕ್ಕೆ ಧಾವಿಸಿ ಮಾಹಿತಿ ಕಲೆ ಹಾಕಿದ್ದಾರೆ.

ನಿನ್ನೆ ತಡರಾತ್ರಿಯಿಂದ ಬೆಳಗಿನ ಜಾವದವರೆಗೂ ಬಳ್ಳಾರಿ ಬಸ್ ನಿಲ್ದಾಣದಲ್ಲಿ ಎನ್‌ಐಎ ತಂಡ ಮಾಹಿತಿ ಪಡೆದಿದ್ದು, ಬಳ್ಳಾರಿ ಮತ್ತು ತುಮಕೂರು ಪೊಲೀಸರು ಸಹಕಾರ ನೀಡಿದ್ದಾರೆ. ಬೆಂಗಳೂರಿಂದ ಎರಡು ಕಾರುಗಳಲ್ಲಿ ಹತ್ತಕ್ಕೂ ಹೆಚ್ಚು ಅಧಿಕಾರಿಗಳು ಆಗಮಿಸಿ ಮಾಹಿತಿ ಕಲೆ ಹಾಕಿದ್ದಾರೆ.

ಮತ್ತೊಂದು ತಂಡ ಗೋಕರ್ಣ ಮತ್ತು ಭಟ್ಕಳಕ್ಕೆ ತೆರಳಿದ್ದು ಅಲ್ಲಿಯೂ ಮಾಹಿತಿ ಸಂಗ್ರಹಣೆ ಕಾರ್ಯದಲ್ಲಿ ನಿರತವಾಗಿದ್ದರೆ. ಇನ್ನೊಂದು ತಂಡ ಬಳ್ಳಾರಿ ಮಾರ್ಗವಾಗಿ ಆಂಧ್ರಪ್ರದೇಶದ ಗುಂಟೂರಿಗೆ ತೆರಳಿರುವ ಶಂಕೆ ಇದ್ದು, ಅಲ್ಲಿಯೂ ಕೂಡ ಪರಿಶೀಲನೆ ನಡೆಸಿದೆ. ಈ ಸಂಬಂಧ ಆಂಧ್ರ ಪೊಲೀಸರ ನೆರವಿನೊಂದಿಗೆ ಹಲವು ಸ್ಥಳಗಳಲ್ಲಿ ಶೋಧ ನಡೆಸಿದೆ ಎಂದು ಮೂಲಗಳು ತಿಳಿಸಿವೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತ ಉಗ್ರನ  ಸುಳಿವು ಕೊಟ್ಟವರಿಗೆ 10 ಲಕ್ಷ ಇನಾಮು ಘೋಷಣೆ ಮಾಡಿ, ಶಂಕಿತನ ಸುಳಿವು ನೀಡಿದವರ ಹೆಸರು ಗೌಪ್ಯವಾಗಿ ಇಡುವುದಾಗಿ ತಿಳಿಸಿದೆ. ಇಲ್ಲಿಯವರೆಗೆ ಆರೋಪಿ ಚಹರೆ ಕಾಣುವ ಫೋಟೋ ಇರಲಿಲ್ಲ. ಎನ್‌ಐಎ ಬಿಡುಗಡೆ ಮಾಡಿರುವ ಫೋಟೋದಲ್ಲಿ ಅಲ್ಪ ಸ್ವಲ್ಪ ಮುಖ ಕಾಣಿಸುತ್ತದೆ.

Leave a Reply