ಕರ್ನಾಟಕ ಸರ್ಕಾರ, ಶಿಕ್ಷಣ ಇಲಾಖೆಗೆ ಪರಿಚಯದವರು ಅವರಿಗೆ ಕಿವಿಮಾತು ಹೇಳಿ

2 years ago

ಪಬ್ಲಿಕ್ ಪರೀಕ್ಷೆ ರದ್ದುಗೊಳಿಸಿದ ಹೈಕೋರ್ಟ್ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸದಂತೆ ಕರ್ನಾಟಕ ಸರ್ಕಾರ, ಶಿಕ್ಷಣ ಇಲಾಖೆಗೆ ಪರಿಚಯದವರು ಅವರಿಗೆ ಕಿವಿಮಾತು ಹೇಳಿ. ವಿವರಿಸಿ.

ತಾತ್ವಿಕವಾಗಿ, ಸೈದ್ಧಾಂತಿಕವಾಗಿ ಮಕ್ಕಳನ್ನು ಈ ರೀತಿ ಪರೀಕ್ಷೆಗಳಿಗೆ ಗುರಿ ಪಡಿಸುವುದು ಮಕ್ಕಳ ಹಕ್ಕುಗಳ ವಿರೋಧ ಎನಿಸಿಕೊಳ್ಳುತ್ತದೆ. ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರಿಲ್ಲ, ಮೂಲಭೂತ ಸೌಕರ್ಯಗಳಿಲ್ಲ, ಸಮರ್ಪಕವಾಗಿ ಪಠ್ಯ ಪುಸ್ತಕಗಳ ವಿತರಣೆಯಾಗಿಲ್ಲ. ಈ ಕೊರತೆಗಳ ಕಾರಣದಿಂದ ಅಲ್ಲಿ ಓದುತ್ತಿರುವ ಗ್ರಾಮೀಣ ಭಾಗದ, ವಂಚಿತ ಸಮುದಾಯದ ಮಕ್ಕಳು ರಾಜ್ಯ ಮಟ್ಟದ ಪ್ರಶ್ನೆ ಪತ್ರಿಕೆಗಳಿಗೆ ಉತ್ತರಿಸಲು ತರಬೇತಿ ಪಡೆದಿರುವುದಿಲ್ಲ. ಪ್ರತಿಭೆ ಇದ್ದರೂ ಇಂತಹ ನಿರ್ಧಾರಗಳ ಕಾರಣದಿಂದ ಶಿಕ್ಷಣದಿಂದ ವಂಚಿತರಾಗುತ್ತಾರೆ. ಸರ್ಕಾರ ಮೊದಲು ಸರ್ಕಾರಿ ಶಾಲೆಗಳನ್ನು ಬಲಪಡಿಸಲಿ. ನಂತರ ಮುಂದಿನ ವಿಚಾರ.

ಎರಡನೆಯದಾಗಿ 5, 8, 9ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸುವುದು ಶಿಕ್ಷಣ ಹಕ್ಕುಗಳ ಕಾಯ್ದೆ (ಆರ್ ಟಿಇ) 2009ರ ಸೆಕ್ಷನ್ 16ರ ಉಲ್ಲಂಘನೆಯಾಗುತ್ತದೆ. ಅದರ ಪ್ರಕಾರ ಪ್ರಾಥಮಿಕ ಶಿಕ್ಷಣ ಮುಗಿಯುವವರೆಗೂ ಮಕ್ಕಳನ್ನು ಫೇಲು ಮಾಡುವಂತಿಲ್ಲ. (No detention policy)

ಆದರೆ 2019ರಲ್ಲಿ ಬಿಜೆಪಿ ತನ್ನ ಅನೀತಿಗೆ ಅನುಗುಣವಾಗುವಂತೆ ನಿಯಮಿತವಾಗಿ ಪರೀಕ್ಷೆಗಳನ್ನು ನಡೆಸಬೇಕೆಂದು ಸೆಕ್ಷನ್ 16ನ್ನು ತಿದ್ದುಪಡಿ ಮಾಡಿದೆ. ಸಾರ್ವಜನಿಕ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸದೆ ಸತತವಾಗಿ ಪರೀಕ್ಷೆಗಳ ಮೂಲಕ ಮಕ್ಕಳ ಮೌಲ್ಯಮಾಪನ ಮಾಡುವುದು ಅಮಾನವೀಯವಲ್ಲವೇ? ಇದು ವಂಚಿತ ಸಮುದಾಯದ ಮಕ್ಕಳನ್ನು ಶಿಕ್ಷಣದಿಂದ ಹೊರದೂಡುತ್ತದೆ.

2023ರಲ್ಲಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಹಿಂದಿನ ಬಿಜೆಪಿ ಸರ್ಕಾರ ಮಾಡಿದ ಈ ತಿದ್ದುಪಡಿಯನ್ನು ರದ್ದುಗೊಳಿಸಿ ಮೂಲದಲ್ಲಿದ್ದ ಸೆಕ್ಷನ್ 16ನ್ನು ಮರಳಿ ತರಬೇಕಿತ್ತು. ಆದರೆ ಇದನ್ನು ಮಾಡದೆ ಹಿಂದಿನ ಸರ್ಕಾರದ ಪಬ್ಲಿಕ್ ಪರೀಕ್ಷೆ ಎನ್ನುವ ಅನೀತಿಯನ್ನು ಮುಂದುವರಿಸಿದೆ.

ಮೂರನೆಯದಾಗಿ 5, 8, 9ನೇ ತರಗತಿಗಳಿಗೆ ಪಬ್ಲಿಕ್ ಪರೀಕ್ಷೆ ನಡೆಸಲು ವಿಧಾನಮಂಡಲದಲ್ಲಿ ಚರ್ಚೆ ನಡೆಸಲಿಲ್ಲ. ಶಿಕ್ಷಣದ ಭಾಗೀದಾರರೊಂದಿಗೆ ಸಮಾಲೋಚನೆ ಮಾಡಲಿಲ್ಲ. ಏಕಪಕ್ಷೀಯವಾಗಿ ಕೇವಲ ಅಧಿಸೂಚನೆ ಮೂಲಕ ತಿದ್ದುಪಡಿ ಮಾಡುವುದು ಸಂವಿಧಾನ ವಿರೋಧಿ ನೀತಿಯಲ್ಲವೇ?

ಮುಖ್ಯವಾಗಿ ಎನ್ ಇ ಪಿ 2020ಯನ್ನು ವಿರೋಧಿಸಿದ ಕಾಂಗ್ರೆಸ್ ‘ಕೇಂದ್ರ ಬಿಜೆಪಿ ಸರ್ಕಾರವು ಸಂಸತ್ತಿನಲ್ಲಿ ಚರ್ಚೆ ಮಾಡಲಿಲ್ಲ, ರಾಜ್ಯ ಬಿಜೆಪಿ ಸರ್ಕಾರವು ವಿಧಾನ ಮಂಡಲದಲ್ಲಿ ಚರ್ಚೆ ಮಾಡಲಿಲ್ಲ’ ಎಂದು ಸಕಾರಣವಾಗಿ ಪ್ರತಿಭಟಿಸಿದ್ದರು. ಈಗ ಅಧಿಕಾರಕ್ಕೆ ಬಂದ ನಂತರ ಸ್ವತಃ ತಾವೇ ಆ ರೀತಿ ನಡೆದುಕೊಳ್ಳುವುದು ಸರಿಯೇ? ಮತ್ತು ಎನ್ ಇಪಿಯನ್ನು ವಿರೋಧಿಸುವ ಕಾಂಗ್ರೆಸ್ ಸರ್ಕಾರ  ಪಬ್ಲಿಕ್ ಪರೀಕ್ಷೆ ನಡೆಸಬೇಕೆಂದು ಹೇಳಿದ ಅದರ ಶಿಫಾರಸ್ಸನ್ನು  ಜಾರಿಗೊಳಿಸುತ್ತಿರುವುದು ಎಂತಹಾ ವ್ಯಂಗ್ಯ ಮತ್ತು ವೈರುಧ್ಯ? ವಿರೋಧಾಭಾಸ?

– ಬಿ.ಶ್ರೀಪಾದ್ ಭಟ್, ಸಾಮಾಜಿಕ ಹೋರಾಟಗಾರರು

Leave a Reply