ಬೆಂಗಳೂರು: ಪರಿಶಿಷ್ಟ ಜಾತಿ ಮತ್ತು ಪಂಗಡದವರು ಪಕ್ಷಾತೀತವಾಗಿ ರಾಜಕೀಯ ಪಕ್ಷಗಳ ದಾಳಗಳಾಗುತ್ತಿದ್ದಾರೆಯೇ ವಿನಃ ಅವರಿಗೆ ಸಲ್ಲಬೇಕಾದ ಸ್ಥಾನಗಳು ದೊರೆಯುತ್ತಿಲ್ಲ. ಇದಕ್ಕೆ ನಮ್ಮಲ್ಲಿರುವ ಒಗ್ಗಟ್ಟಿಲ್ಲದ ಪರಿಸ್ಥಿತಿಯೇ ಕಾರಣ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್.ಸಿ.ಮಹದೇವಪ್ಪ ಹೇಳಿದರು.
ಬೆಂಗಳೂರಿನ ವಸಂತನಗರದಲ್ಲಿರುವ ಅಂಬೇಡ್ಕರ್ ಭವನದಲ್ಲಿ ಜರುಗಿದ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ರಾಜ್ಯ ಮಟ್ಟದ ಸಮಾವೇಶದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಸಂವಿಧಾನಿಕ ಹಿತಾಸಕ್ತಿಯನ್ನು ಕಾಪಾಡುವಲ್ಲಿ ನಾವು ಎಂದಿಗೂ ಹಿಂದೆ ಬಿದ್ದಿಲ್ಲ ಎಂದರು.
ಕಳೆದ ಬಾರಿಯೇ ನಾವು ಜಾರಿಗೆ ತಂದಿದ್ದ SCSP -TSP ಕಾಯ್ದೆಯು ಇದಕ್ಕೆ ಉದಾಹರಣೆ ಆಗಿದ್ದು ಸುಪ್ರೀಂ ಕೋರ್ಟ್ ನವರೇ ಇದನ್ನು ” ನೆಲದ ಕಾನೂನು” ಎಂದು ಎತ್ತಿ ಹಿಡಿದಿದೆ. ಇದೇ ರೀತಿಯಾಗಿ PTCL ಕಾಯ್ದೆಗೆ ಇದ್ದ 7 ಡಿ ಅನ್ನೂ ಸಹ ತೆಗೆದು ಹಾಕಿದ್ದೇವೆ ಎಂದರು.
ದಲಿತರು ಮತ್ತು ಅದರೊಳಗೆ ಇರುವ ಅಸ್ಪೃಶ್ಯ ಸಮುದಾಯಗಳು ಒಗ್ಗಟ್ಟಾಗದೇ ಇದ್ದರೆ ಅವರ ಆಶೋತ್ತರಗಳನ್ನು ಕೇಳುವವರು ಯಾರೂ ಇರುವುದಿಲ್ಲ. ಆದರೆ ಪರಿಶಿಷ್ಟ ಸಮುದಾಯಗಳ ದನಿಯನ್ನು ಯಾರಾದರೂ ಕೇಳಿಸಿಕೊಂಡರೆ ಅದು ಬಾಬಾ ಸಾಹೇಬರು ನೀಡಿದ ಈ ದೇಶದ ಸಂವಿಧಾನ ಮಾತ್ರ. ಅದು ಇರುವ ಕಾರಣದಿಂದಲೇ ಈ ದಿನ ನಾವು ನೀವು ಎಲ್ಲರೂ ಇದ್ದೇವೆ ಎಂದರು.
ಜನರನ್ನು ಕಾಪಾಡುವಂತಹ ಸಂವಿಧಾನವೇ ಈ ದಿನ ತೊಂದರೆಯನ್ನು ಎದುರಿಸುವ ಕಾರಣದಿಂದ ಈ ದಿನ ನಾವು ರಾಜ್ಯದ 6000 ಪಂಚಾಯ್ತಿಗಳಲ್ಲಿ ಸಂವಿಧಾನ ಜಾಗೃತಿ ಅಭಿಯಾನವನ್ನು ನಡೆಸುವ ನಿರ್ಧಾರ ಕೈಗೊಂಡು ಅದನ್ನು ಪೂರ್ಣಗೊಳಿಸಿದ್ದೇವೆ ಎಂದು ಹೇಳಿದರು.
ಭಾರತದ ಇತಿಹಾಸದಲ್ಲಿ ರಾಜಕೀಯ ಅಧಿಕಾರಕ್ಕಾಗಿ ಸ್ವಾತಂತ್ರ್ಯ ಚಳುವಳಿ ಜರುಗಿದೆಯೇ ಹೊರತು ಸಾಮಾಜಿಕ ಅಸಮಾನತೆಗಳು ಮತ್ತು ಅವಮಾನಗಳ ವಿರುದ್ಧ ಅಲ್ಲ. ಹೀಗಾಗಿ ಸಾಮಾಜಿಕ ಅವಮಾನಗಳ ಎದುರು ಚಳುವಳಿಗಳನ್ನು ರೂಪಿಸುವ ಪರಿಸ್ಥಿತಿ ಈಗಲೂ ಇದೆ ಎಂದು ಅಭಿಪ್ರಾಯಪಟ್ಟರು.
ಇನ್ನು ನೂರಕ್ಕೆ ನೂರರಷ್ಟು ಓಟು ಕೊಟ್ಟರೂ ಕೂಡಾ ಪರಿಶಿಷ್ಟ ಸಮುದಾಯಗಳು ಅಧಿಕಾರ ಕೇಂದ್ರವನ್ನು ಪಡೆಯಲು ಇನ್ನೊಬ್ಬರ ಬಳಿ ಬೇಡುವ ಸ್ಥಿತಿ ಇದ್ದು ಇದು ಈ ದೇಶದ ರಾಜಕೀಯ ಸ್ಥಿತಿಯಾಗಿದೆ. ಹೀಗಾಗಿಯೇ ಬಾಬಾ ಸಾಹೇಬರು ಮತ್ತು ಬಾಬು ಜಗಜೀವನ್ ರಾಂ ಅವರ ಬಳಿಕ ದೇಶವೇ ಒಪ್ಪುವಂತಹ ಒಬ್ಬ ದಲಿತ ನಾಯಕರು ಹುಟ್ಟಲಿಲ್ಲ ಎಂದರು.
ಹಿಂದೆಯೂ ಬಿ ರಾಚಯ್ಯನವರು ಮುಖ್ಯಮಂತ್ರಿ ಆಗಬೇಕೇ ಎಂಬ ಅಭಿಪ್ರಾಯ ವ್ಯಕ್ತವಾದಾಗ, ನನ್ನನ್ನು ಬಿಟ್ಟು ಉಳಿದ 24 ಮಂದಿ ದಲಿತ ನಾಯಕರು ತಲೆಯ ಮೇಲೆ ಕೈಹೊತ್ತು ಸುಮ್ಮನೇ ಕೂತಿದ್ದರು. ಒಂದು ವೇಳೆ ಅವರೆಲ್ಲರೂ ರಾಚಯ್ಯನಚರ ಪರವಾಗಿ ಇದ್ದಿದ್ದರೆ ಅವರ ನಾಯಕತ್ವವು ಆ ಕಾಲಕ್ಕೆ ಉಳಿಯುತ್ತಿತ್ತು ಎಂದರು.
ಇನ್ನು ಪ್ರಸ್ತುತ ಸಂದರ್ಭದಲ್ಲಿ ದಲಿತರ ಜನಸಂಖ್ಯೆಗೆ ಆಧಾರವಾಗಿ ರೂಪಿಸಲಾದ SCSP – TSP ಕಾಯ್ದೆಯಡಿ ಕಲ್ಪಿಸಲಾದ ಅನುದಾನವು ಎಲ್ಲಾ 31 ಇಲಾಖೆಗಳಿಗೆ ಹಂಚಿಕೆ ಆಗಿದ್ದು ಅದನ್ನು ಸಿಂಗಲ್ ವಿಂಡೋ ಮೂಲಕ ನೀಡುವಂತಾಗಬೇಕು. ಆಗ ಮಾತ್ರ 5 ವರ್ಷದ ಅವಧಿಯಲ್ಲಿ ನಾವು ನಿರೀಕ್ಷಿಸಿದ ಬದಲಾವಣೆ ಕಾಣಲು ಸಾಧ್ಯ. ಈ ಬಗ್ಗೆ ನಾನು ಈಗಾಗಲೇ ಮುಖ್ಯಮಂತ್ರಿಗಳು ಹಾಗೂ ಹಣಕಾಸು ಇಲಾಖೆಯ ಜೊತೆಗೆ ಮಾತನಾಡಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್, ಮಳವಳ್ಳಿ ಶಾಸಕ ನರೇಂದ್ರಸ್ವಾಮಿ ಹಾಗೂ ಪರಿಶಿಷ್ಟ ಜಾತಿ ಮತ್ತು ಪಂಗಡದ ನೌಕರರ ಸಂಘದ ಪದಾಧಿಕಾರಿಗಳು ಇದ್ದರು.




