ಬೆಂಗಳೂರು: H D Kumaraswamy ಯವರೇ ಇದು ಅಚಾತುರ್ಯದಿಂದ ಆಗಿರುವ ವಿಷಯ ಅಲ್ಲ. ನಿಮ್ಮ JDS ಪಕ್ಷವೂ ಸೇರಿದಂತೆ Cong, BJP ಪಕ್ಷಗಳು ರಾಜ್ಯದಲ್ಲಿ ಆಡಳಿತ ನಡೆಸಿರುವ ಪರಿ ಇದು ಎಂದು ಕೆ.ಆರ್.ಎಸ್. ಪಾರ್ಟಿ ಆರೋಪಿಸಿದೆ.
ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿಯವರು ದೀಪಾವಳಿ ದಿನದಂದು ತಮ್ಮ ಮನೆಗೆ ಅಕ್ರಮವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿ ವಿಡಿಯೋ ಬಿಡುಗಡೆ ಮಾಡಿತ್ತು. ಈ ವಿಷಯದ ಕುರಿತು ಕುಮಾರಸ್ವಾಮಿ ಸ್ಪಷ್ಟೀಕರಣ ನೀಡಿದ್ದು, ಅಚಾತುರ್ಯದಿಂದ ಘಟನೆ ನಡೆದಿದೆ ಎಂದಿದ್ದು, ವಿದ್ಯುತ್ ಅಲಂಕಾರ ಮಾಡುವವರ ತಪ್ಪಿನಿಂದ ಹೀಗಾಗಿದೆ ಎಂದಿದ್ದರು. ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಪ್ರತಿಕ್ರಿಯೆ ನೀಡಿರುವ ಕೆ.ಆರ್.ಎಸ್., ಆ ಡೆಕೊರೇಟರ್ ಗೆ ತಪ್ಪು ಮಾಡಲು ಧೈರ್ಯ ಹೇಗೆ ಬಂತು? ಅದೂ ಮಾಜಿ ಮುಖ್ಯಮಂತ್ರಿಯ ಮನೆಗೆ ವಿದ್ಯುತ್ ನೀಡುವಾಗ ಇನ್ನೂ ಎಚ್ಚರ ಇರಬೇಕಿತ್ತು. ಈ ವ್ಯವಸ್ಥೆ ಏನೂ ಮಾಡುವುದಿಲ್ಲ ಅನ್ನುವ ಧೈರ್ಯದ ಮೇಲೆ ಅವನು ಈ ಕ್ರಿಮಿನಲ್ ಕೃತ್ಯ ಮಾಡಿದ್ದಾನೆ ಎಂದು ಕಿಡಿಕಾರಿದೆ.
ಅಲ್ಲದೇ DK Shivakumar ರವರೇ, ಇದು ಒಂದು ಕ್ರಿಮಿನಲ್ ಕೃತ್ಯ. ತಾವು ಒಬ್ಬ ಉಪಮುಖ್ಯಮಂತ್ರಿಯಾಗಿ ಈ ಕೂಡಲೇ ಕ್ರಿಮಿನಲ್ ಪ್ರಕರಣ ದಾಖಲಿಸಿ ಈ ವ್ಯವಸ್ಥೆಯ ಬಗ್ಗೆ ಎಲ್ಲರಿಗೂ ಸಂದೇಶ ಕಳುಹಿಸಿ. ಮಾಜಿಮುಖ್ಯಮಂತ್ರಿಯ ಮೇಲೆ ಕೂಡಾ ಪ್ರಕರಣ ದಾಖಲಾಗುತ್ತೆ ಅಂತ ತಿಳಿದಾಗ ಬೇರೆ ಕಳ್ಳರು ಎಚ್ಚೆತ್ತು ವಿದ್ಯುತ್ ಕಳವು ನಿಲ್ಲುತ್ತದೆ. ಕೇವಲ ಟೀಕಿಸುವುದು ಬಿಟ್ಟು ಕೆಲಸಮಾಡಿ Office of KJ George ಎಂದು ಒತ್ತಡ ಹೇರಿದೆ.



