ವಿಷಮ ವಾತಾವರಣದಲ್ಲಿ ಈ ಪುಸ್ತಕ ಹಿಂದೆಂದಿಗಿಂತಲೂ ಹೆಚ್ಚು ಅವಶ್ಯ

3 years ago

#nelsanmandela #book #more #necessary #harsh #climate #ramjandarga #bookpromotion

೧೯೮೫ರಿಂದ ನೆಲ್ಸನ್ ಮಂಡೇಲಾ ಕುರಿತು ಸುಧಾ ವಾರಪತ್ರಿಕೆ ಮತ್ತು ಪ್ರಜಾವಾಣಿಯಲ್ಲಿ ಲೇಖನಗಳನ್ನು ಬರೆದಾಗ ದಲಿತ ಸಂಘರ್ಷ ಸಮಿತಿ, ಬಂಡಾಯ, ಸಮುದಾಯ, ಜನೋತ್ಸವ, ಕಮ್ಯುನಿಸ್ಟ್ ಪಕ್ಷಗಳು ಮತ್ತು ಅವುಗಳ ಅಂಗಸಂಸ್ಥೆಗಳ ಕಾರ್ಯಕರ್ತರು ಬಹುವಾಗಿ ಸ್ಪಂದಿಸಿದರು. ಆ ಕಾಲದಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾದ ಬಿಳಿಯರ ವರ್ಣಭೇದ ನೀತಿಯ ಸರ್ಕಾರವನ್ನು ಭಾರತ ವಿರೋಧಿಸಿ, ಯಾವುದೇ ರಾಜತಾಂತ್ರಿಕ ಸಂಬಂಧಗಳನ್ನು ಇಟ್ಟುಕೊಂಡಿರಲಿಲ್ಲ.

ಆಫ್ರಿಕನ್ ನ್ಯಾಷನಲ್ ಕಾಂಗ್ರೆಸ್ (ಎ.ಎನ್.ಸಿ) ಮುಖವಾಣಿಯಾಗಿದ್ದ “ಸೆಚೆಬಾ” ಮ್ಯಾಗಜಿನ್ ಕರಿಯರ ಹೋರಾಟದ ಸುದ್ದಿಗಳನ್ನು ಪ್ರಕಟಿಸುತ್ತಿತ್ತು. ಅದರ ಪ್ರಕಟಣೆ ಆಗಿನ ಪೂರ್ವ ಜರ್ಮನಿ (ಜಿ.ಡಿ.ಆರ್)ನಲ್ಲಿ ಆಗುತ್ತಿತ್ತು. ಆ ಪ್ರತಿಗಳು ಭಾರತ ಕಮ್ಯುನಿಸ್ಟ್ ಪಕ್ಷದ ಕಚೇರಿ ತಲುಪಲು ತಿಂಗಳುಗಳೇ ಹಿಡಿಯುತ್ತಿದ್ದವು. ವಿಶ್ವ ಶಾಂತಿ ಸಮಿತಿ, ಇಸ್ಕಸ್, ಇಂಡೋ ಜಿಡಿಆರ್ ಸಮಿತಿ ಮುಂತಾದ ಕಡೆಗಳಿಂದ ವಿಷಯ ಸಂಗ್ರಹ ಮಾಡುವಲ್ಲಿ ಸಾಕುಬೇಕಾಗಿ ಹೋಗುತ್ತಿತ್ತು. ಪುವ್ಯಾಶ್ರೀ ನಿರಂತರವಾಗಿ ಎಲ್ಲೆಂದಿಲೋ ದಕ್ಷಿಣ ಆಫ್ರಿಕಾಕ್ಕೆ ಸಂಬಂಧಿಸಿದ ಪೇಪರ್ ಕಟಿಂಗ್ಸ್ ತಂದುಕೊಡುತ್ಥಿದ್ದರು. ಜಾನ್ ದೇವರಾಜ್, ರೀನಾ ಫರ್ನಾಂಡಿಸ್, ರಾಜಾ ಮುಂತಾದ ಗೆಳೆಯರು ದಕ್ಷಿಣ ಆಫ್ರಿಕಾದ ಹೋರಾಟದ ಹಾಡುಗಳನ್ನು ಹಾಡಿ ಹುರಿದುಂಬಿಸುತ್ತಿದ್ದರು. ದಕ್ಷಿಣ ಆಫ್ರಿಕಾದ ಹೋರಾಟಗಾರರು “ಮಾಯಿ ಬುಯೆಯಿ ಆಫ್ರಿಕಾ” (ಓ ನನ್ನ ಆಫ್ರಿಕಾ ಮರಳಿ ಬಾ) ಹಾಡು ನನ್ನ ಸ್ಫೂರ್ತಿಯ ಸೆಲೆಯಾಗಿತ್ತು.

ಚೌಡಯ್ಯ ಮೆಮೋರಿಯಲ್ ಹಾಲಲ್ಲಿ ವಿಶ್ವ ಶಾಂತಿ ಸಮ್ಮೇಳನಕ್ಕೆ ಜಗತ್ತಿನ ವಿವಿಧ ದೇಶಗಳ ನಾಯಕರು ಬಂದಿದ್ದರು. ವಿಶ್ವ ಶಾಂತಿ ಸಮಿತಿ ಮಹಾ ಕಾರ್ಯದರ್ಶಿ ರೋಮೇಶ್ ಚಂದ್ರ, ಮಂಡೇಲಾ ಜೊತೆಗಾರ ಇಗುನಾ ನಾಯ್ಡು ಮುಂತಾದವರ ಕಡೆಯಿಂದ ದಕ್ಷಿಣ ಆಫ್ರಿಕಾ ಸ್ಥಿತಿಗತಿ ಕುರಿತು ಚರ್ಚಿಸುವುದರ ಜೊತೆಗೆ  ಒಂದಿಷ್ಟು ಸಾಹಿತ್ಯವನ್ನೂ ಸಂಗ್ರಹಿಸಿದೆ.

ರಾಜ್ಯಾದ್ಯಂತ ತಿರುಗಾಡಿ ದಕ್ಷಿಣ ಆಫ್ರಿಕಾ ಹೋರಾಟದ ಕುರಿತು ಭಾಷಣ ಮಾಡಿದೆ. ಎ.ಎನ್.ಸಿ.ಯ “ಸ್ವಾತಂತ್ರ್ಯ ಘೋಷಣೆ”ಯನ್ನು ಕಲಾವಿದ ಜಾನ್ ದೇವರಾಜ್ ಅವರು ಸುಂದರವಾಗಿ ಬರೆದುಕೊಟ್ಟರು. ಅದರ ಸಹಸ್ರಾರು ಪ್ರತಿಗಳ ಮಾಡಿ ರಾಜ್ಯದ ವಿವಿಧ ಕಡೆ, ಮುಖ್ಯವಾಗಿ ದಲಿತ ಸಂಘರ್ಷ ಸಮಿತಿ ಕಾರ್ಯಕರ್ತರಿಗೆ ತಲುಪಿಸಲಾಯಿತು.

೨೭ ವರ್ಷಗಳಿಂದ ಜೈಲಿನಲ್ಲಿದ್ದ ನೆಲ್ಸನ್ ಮಂಡೇಲಾ ೧೯೯೦ರ ಫೆಬ್ರವರಿ ೧೧ರಂದು ಬಿಡುಗಡೆಗೊಂಡರು. ಅದಕ್ಕೂ ಐದಾರು ತಿಂಗಳ ಮುಂಚೆ ಮಿತ್ರ ಬಿ‌. ಗಂಗಾಧರಮೂರ್ತಿಯವರು ಒಂದು ಸಂಜೆ ಪ್ರಜಾವಾಣಿ ಆಫೀಸಿಗೆ ಬಂದು ನೆಲ್ಸನ್ ಮಂಡೇಲಾ ಜೀವನ ಚರಿತ್ರೆ ಬರೆಯಲು ಒತ್ತಾಯಿಸಿದರು. ಪತ್ರಿಕೆ ಕೆಲಸ ಬಹಳವಿದೆ, ಅಲ್ಲದೆ ಒಂದು ಪುಸ್ತಕ ಬರೆಯುವಷ್ಟು ವಿಷಯ ಸಂಗ್ರಹಣೆ ಮಾಡುವುದು ಇನ್ನೂ ಕಷ್ಟ ಎಂದು ಹಿಂಜರಿದೆ. ಬಹಳ ಒತ್ತಾಯ ಮಾಡಿದರು. ನನಗೆ ಸಾಧ್ಯವಾಗದ ಮಾತು ಎಂದು ಹೇಳಿಕಳಿಸಿದೆ.

೩೩ ವರ್ಷಗಳ ಹಿಂದೆ ಇಂಟರ್ನೆಟ್, ಮೊಬೈಲ್ ಮುಂತಾದ ವ್ಯವಸ್ಥೆಗಳು ಇರಲಿಲ್ಲ. ದಕ್ಷಿಣ ಆಫ್ರಿಕಾದ ಸುದ್ದಿ ಕರಿಯರ ಭಗೀರಥ ಪ್ರಯತ್ನದಿಂದ ಹೊರಗೆ ಬರಲು ಸಮಯ ಹಿಡಿಯುತ್ತಿತ್ತು. ಹೀಗಾಗಿ ಲೇಖನಗಳನ್ನು ಬರೆಯುವುದೇ ಕಷ್ಟವಾಗಿರುವಾಗ ಮಂಡೇಲಾ ಜೀವನ ಚರಿತ್ರೆ ಬರೆಯುವುದು ಕಠಿಣವಾಗಿತ್ತು. ಮಾತು ಕೊಟ್ಟು ಉಳಿಸಿಕೊಳ್ಳುವ ಸಾಧ್ಯತೆಗಳು ಬಹಳ ಕಡಿಮೆ ಇದ್ದವು. ಆದರೆ ಬಿ. ಗಂಗಾಧರ ಮೂರ್ತಿಯವರು ಬಿಡಲಿಲ್ಲ. ಮತ್ತೆ ಬಂದರು. ನೀವು ಬರೆಯಲೇ ಬೇಕು. ನಿಮ್ಮಿಂದ ದಲಿತ ಗೆಳೆಯರಿಗೆ ಅಂತರರಾಷ್ಟ್ರೀಯ ನಾಯಕನ ಜೀವನ ಚರಿತ್ರೆ ಸಿಗಬೇಕು. ಹೊರದೇಶದಲ್ಲಿ ತಮಗೂ ಒಬ್ಬ  ಜಾಗತಿಕ ನಾಯಕ ಇದ್ದಾರೆ ಎಂಬ ಭಾವ ಅವರಿಗೆ ಬರುವ ಹಾಗೆ ನೆಲ್ಸನ್ ಮಂಡೇಲಾ ಜೀವನ ಚರಿತ್ರೆ ಮೂಡಿಬರಬೇಕು ಎಂದು ದೃಢ ನಿರ್ಧಾರದಿಂದ ಹೇಳಿದರು. ನನ್ನ ದಲಿತ ಕಾಳಜಿ ಈ ರಿಸ್ಕ್ ತೆಗೆದುಕೊಳ್ಳಲು ಒತ್ತಾಯಿಸಿತು.

ಮತ್ತೆ ಅದೇ ವಿಷಯ ಸಂಗ್ರಹಣೆಯ ಗೋಳು. ಅದೇ ಒದ್ದಾಟ. ಈ ಜೀವನ ಚರಿತ್ರೆಯನ್ನು ದಕ್ಷಿಣ ಆಫ್ರಿಕಾದ ಭಾರತೀಯ ಹೋರಾಟಗಾರರು ಮತ್ತು ಅಲ್ಲಿ ಗಾಂಧೀಜಿಯವರು ಮಾಡಿದ ಸತ್ಯಾಗ್ರಹದ ಹಿನ್ನಲೆ ಇಟ್ಟುಕೊಂಡು, ದಲಿತ ದೃಷ್ಟಿಕೋನದಿಂದ ಬರೆಯಲು ನಿರ್ಧರಿಸಿದೆ. ಬರೆಯತೊಡಗಿದೆ.

೧೯೯೦ರ ಫೆಬ್ರವರಿ ೧೧ರಂದು ಮಂಡೇಲಾ ಬಿಡುಗಡೆಯಾದ ಕೂಡಲೆ ಗಂಗಾಧರಮೂರ್ತಿ ಮತ್ತೆ ಬಂದರು. ೧೦ ದಿನಗಳಲ್ಲಿ ಪುಸ್ತಕ ಸಿದ್ಧವಾಗುವುದು ಎಂದು ತಿಳಿಸಿದೆ. ಅವರು ಖುಷಿಪಟ್ಟರು. ಮಾರ್ಚ್ ೧೧ರಂದು ಪುಸ್ತಕ ಬಿಡುಗಡೆಯಾಗಲೇ ಬೇಕು. ಗೌರೀಬಿದನೂರು ದಲಿತ ಸಂಘರ್ಷ ಸಮಿತಿ ವತಿಯಿಂದ ಪ್ರಕಟಿಸುವೆವು ಎಂದು ತಿಳಿಸಿದರು.

ರಾತ್ರಿ ಹಗಲು ಸಮಯ ಸಿಕ್ಕಾಗಲೆಲ್ಲ ಶುದ್ಧಪ್ರತಿ ಸಿದ್ಧಪಡಿಸಿದೆ. ಎಲ್ಲ ಮುಗಿದ ಕೂಡಲೆ ಬಿಕ್ಕಿ ಬಿಕ್ಕಿ ಅತ್ತೆ. ಪುಸ್ತಕ ಬರೆಯುವ ಹಿಂಸೆಗೆ ಹೋಗಬಾರದೆಂದು ನಿರ್ಧರಿಸಿದೆ. (ಆದರೆ ಆ ನಿರ್ಧಾರವನ್ನು ಪಾಲಿಸಲಿಕ್ಕಾಗಲಿಲ್ಲ.)

೧೯೯೦ನೇ ಮಾರ್ಚ್ ೧೧ ರಂದು, ಅಂದರೆ ಮಂಡೇಲಾ ಬಿಡುಗಡೆಯಾದ ಸರಿಯಾಗಿ ಒಂದು ತಿಂಗಳ ನಂತರ ಗಂಗಾಧರಮೂರ್ತಿಯವರು ಅಂದುಕೊಂಡಂತೆ ಬೆಂಗಳೂರು ಯೂನಿವರ್ಸಿಟಿಯ ಸೆಂಟ್ರಲ್ ಕಾಲೇಜ್ ಸೆನೆಟ್ ಹಾಲಲ್ಲಿ ಕಿಕ್ಕಿರಿದು ತುಂಬಿದ ಸಭೆಯಲ್ಲಿ ಪುಸ್ತಕ ಬಿಡುಗಡೆಯಾಯಿತು. ನಂತರ ಬೆಂಗಳೂರು ವಿಶ್ವವಿದ್ಯಾಲಯದ ಪ್ರಸಾರಾಂಗದ ನಿರ್ದೇಶಕರಾಗಿದ್ದ ಪ್ರೊಫೆಸರ್ ಸಿ. ವೀರಣ್ಣ ಅವರು ವಿಶ್ವವಿದ್ಯಾಲಯದ ಬೆಳ್ಳಿಹಬ್ಬದ ನೆನಪಿಗಾಗಿ ಈ ಪುಸ್ತಕದ ಮರುಮುದ್ರಣ ಮಾಡಿದರು. ಬೆಳ್ಳಿಹಬ್ಬದ ಮುಖ್ಯ ಅತಿಥಿಯಾಗಿದ್ದ ಅಂದಿನ ಪ್ರಧಾನಿ ಚಂದಶೇಖರ ಅವರು ಪುಸ್ತಕದ ಬಿಡುಗಡೆ ಮಾಡಿದರು.

ಕರ್ನಾಟಕ ವಿಶ್ವವಿದ್ಯಾಲಯದ ಕನ್ನಡ ವಿಭಾಗದ ಮುಖ್ಯಸ್ಥರಾಗಿದ್ದ ಹಿಂಗಮಿರೆಯವರು ಈ ಪುಸ್ತಕವನ್ನು ಬಿಎಸ್ಸಿ- 1ಗೆ ಪಠ್ಯ ಮಾಡಿದಾಗ ಬೆಂಗಳೂರು ವಿ.ವಿ. ಹೆಚ್ಚಿನ ಪ್ರಮಾಣದಲ್ಲಿ ಮರುಮುದ್ರಣ ಮಾಡಿತು. ಏತನ್ಮಧ್ಯೆ  ಕೋಲ್ಕತ್ತಾದಲ್ಲಿರುವ ದೇಶದ ಕೇಂದ್ರ ಗ್ರಂಥಾಲಯಲ್ಲಿದ್ದ ಕರ್ನಾಟಕದ ಅಧಿಕಾರಿ ಕುಮಾರಪ್ಪ ಅವರು ತಮ್ಮ ಮಿತ್ರ ಗುಡಿಹಳ್ಳಿ ನಾಗರಾಜ ಅವರಿಗೆ “ರಂಜಾನ್ ದರ್ಗಾ ಅವರ ನೆಲ್ಸನ್ ಮಂಡೇಲಾ ಭಾರತೀಯ ಭಾಷೆಗಳಲ್ಲಿ ಮೊದಲನೆಯದು” ಎಂದು ತಿಳಿಸಿದರು!

ನೆಲ್ಸನ್ ಮಂಡೇಲಾ ಅವರ ಭಾಷಣಗಳಿಗೆ ಸಂಬಂಧಿಸಿದಂತೆ ಒಂದು ಘಟನೆಯಾದರೂ ತಮಗೆ ತಿಳಿಸಬೇಕು. ಕೋಲಾರ ಜಿಲ್ಲೆಯ ಸ್ಥಳೀಯ ಡಿ.ಎಸ್.ಎಸ್ ನಾಯಕರು ಹಳ್ಳಿಯೊಂದರ ಹಾಳುದೇಗುಲದಲ್ಲಿ ದಕ್ಷಿಣ ಆಫ್ರಿಕಾ ಹೋರಾಟ ಕುರಿತು ಸಭೆ ಏರ್ಪಡಿಸಿದ್ದರು. ಅದು ದೂರದ ಅಡವಿಯಲ್ಲಿತ್ತು. ಜಿಟಿ ಜಿಟಿ ಮಳೆಯಲ್ಲಿ ಹಳ್ಳವೊಂದನ್ನು ದಾಟುತ್ತ, ಕೆಸರುಗಾಲಲ್ಲಿ ನಡೆಯುತ್ತ ಆ ಹಾಳುಗುಡಿಗೆ ಹೋಗುವುದರಲ್ಲಿ ಸಾಯಂಕಾಲವಾಗಿತ್ತು. ಅಲ್ಲಿ ಒಬ್ಬ ವ್ಯಕ್ತಿ ಬಿಟ್ಟರೆ ಇನ್ನಾರು ಕಾಣುತ್ತಿರಲಿಲ್ಲ. ಆಶ್ಚರ್ಯವೆನಿಸಿತು. ನನ್ನನ್ನು ಒಳಗೆ ಕರೆದುಕೊಂಡು ಹೋದರು. ಗಾಢಾಂಧಕಾರ! ಒಂದೇ ಮೋಂಬತ್ತಿ ಇದ್ದ ಕಾರಣ ಹಚ್ಚಿರಲಿಲ್ಲ ಎಂದು ಹಚ್ಚಿದರು. ಒಳಗೆ ನೂರಾರು ಯುವಕರು ಮಂಡೇಲಾ ಬಗ್ಗೆ ತಿಳಿದುಕೊಳ್ಳಲು ತದೇಕಚಿತ್ತದಿಂದ ಕುಳಿತಿದ್ದರು. ಮೋಂಬತ್ತಿ ಬೆಳಕಲ್ಲಿ ಅವರ ಕಣ್ಣುಗಳು ಹೊಳೆಯುತ್ತಿದ್ದವು.  ಜೀವನ ಸಾರ್ಥಕ ಎನಿಸಿತು.

ಮಂಡೇಲಾ ಬಿಡುಗಡೆಯ ಬೆಳ್ಳಿಹಬ್ಬದ ದಿನ, ಅಂದರೆ ೧೧.೦೨.೨೦೧೫ರಂದು ಅಣ್ಣ ಸಿ. ಚನ್ನಬಸವಣ್ಣನವರು ತಮ್ಮ ಲೋಹಿಯಾ ಪ್ರಕಾಶನದಿಂದ ಮರುಮುದ್ರಣ ಮಾಡಿದರು. ಈ ಪುಸ್ತಕದ ಒಟ್ಟು ೪೪ ಸಾವಿರ ಪ್ರತಿಗಳು ಮಾರಾಟವಾಗಿವೆ. ಇಂದಿನ ವಿಷಮ ವಾತಾವರಣದಲ್ಲಿ ಈ ಪುಸ್ತಕ ಹಿಂದೆಂದಿಗಿಂತಲೂ ಹೆಚ್ಚು ಅವಶ್ಯವಾಗಿದೆ.

– ರಂಜಾನ್ ದರ್ಗಾ, ಹಿರಿಯ ಸಾಹಿತಿ

೧೨೦ ಪುಟಗಳ ಈ ಪುಸ್ತಕದ ಬೆಲೆ ಕೇವಲ ೬೦ ರೂಪಾಯಿ‌
ಸಿ. ಚನ್ನಬಸವಣ್ಣನವರ
ದೂರವಾಣಿ: 08392 257412
ಮೊಬೈಲ್: 9900750549

Leave a Reply