ಎಟಿಎಂ ಅನ್ನೇ ಕದ್ದೊಯ್ದ ಖದೀಮ ಕಳ್ಳರು

3 years ago

ಬೆಂಗಳೂರು: ದರೋಡೆ ಮಾಡಲು ಎಟಿಎಂ ಕೇಂದ್ರಕ್ಕೆ ನುಗ್ಗಿರುವ ದುಷ್ಕರ್ಮಿಗಳು ಹಣ ಕದಿಯಲಾಗದೆ ಎಟಿಎಂ ಯಂತ್ರವನ್ನೇ ಕಿತ್ತುಕೊಂಡು ಕಂಟೇನರ್ನಲ್ಲಿ ತುಂಬಿಕೊಂಡು ಪರಾರಿಯಾಗಿರುವ ಅಪರೂಪದ ಘಟನೆ ಬೆಳ್ಳಂದೂರಿನ ಹರಳೂರು ರಸ್ತೆಯಲ್ಲಿ ನಡೆದಿದೆ.

ಹರಳೂರು ರಸ್ತೆಯಲ್ಲಿರುವ ಬ್ಯಾಂಕ್ ಆಫ್ ಬರೋಡಾದ ಎಟಿಎಂ ಕೇಂದ್ರಕ್ಕೆ ನುಗ್ಗಿರುವ ದುಷ್ಕರ್ಮಿಗಳು ಎಟಿಎಂ ಅನ್ನು ಒಡೆಯುವ ಪ್ರಯತ್ನ ನಡೆಸಿದ್ದಾರೆ. ಆದರೆ ಅದು ಸಾಧ್ಯವಾಗಿಲ್ಲ ಹೀಗಾಗಿ ಕೊನೆಗೆ ಅವರು ಎಟಿಎಂ ಯಂತ್ರವನ್ನು ಕಿತ್ತು ಕಂಟೇನರ್ನಲ್ಲಿ ತುಂಬಿಸಿಕೊಂಡು ಕದ್ದೊಯ್ದಿದ್ದಾರೆ.

ಡಿಸೆಂಬರ್ 10ರ ಮಧ್ಯ ರಾತ್ರಿ 2.30ರ ಸುಮಾರಿಗೆ ಈ ಘಟನೆ ನಡೆದಿದೆ.ಈ ವೇಳೆ ಎಟಿಎಂ ಕೇಂದ್ರದ ಬಳಿ ಯಾವುದೇ ಭದ್ರತಾ ಸಿಬ್ಬಂದಿ ಕರ್ತವ್ಯದಲ್ಲಿರಲಿಲ್ಲ. ಹೀಗಾಗಿ ಯಂತ್ರ ಕಳವು ನಡೆದಿರುವುದು ಮರುದಿನ ಬೆಳಿಗ್ಗೆ ‌ಕಂಡು ಬಂದಿದ್ದು ಬ್ಯಾಂಕ್ ನ ಅಧಿಕಾರಿಗಳು ಕೇಂದ್ರಕ್ಕೆ ಧಾವಿಸಿ  ಬೆಳ್ಳಂದೂರು ಪೊಲೀಸರಿಗೆ ಮಾಹಿತಿ ‌ನೀಡಿ ದೂರು ದಾಖಲಿಸಿದ್ದಾರೆ.

ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಆರೋಪಿಗಳ ಪತ್ತೆಗೆ ವಿಶೇಷ ಪೊಲೀಸ್ ತಂಡಗಳನ್ನು ‌ರಚಿಸಿ ಶೋಧಕಾರ್ಯ ನಡೆಸಲಾಗಿದೆ ಎಂದು ಡಿಸಿಪಿ ಗಿರೀಶ್ ತಿಳಿಸಿದ್ದಾರೆ.

ಟ್ರಕ್ನೊಂದಿಗೆ ಬಂದ ಕತರ್ನಾಕ್ ಕಳ್ಳರು, ಎಟಿಎಂ ಕೇಂದ್ರಕ್ಕೆ ನುಗ್ಗಿ ಇದ್ದ ಸಿಸಿಕ್ಯಾಮರಾಕ್ಕೆ ಸ್ಪ್ರೇ ಮಾಡಿದ್ದಾರೆ. ನಂತರ ಎಟಿಎಂ ಯಂತ್ರವನ್ನು ಕಂಟೇನರ್ನಲ್ಲಿ ತುಂಬಿಸಿಕೊಂಡು ಪರಾರಿಯಾಗಿರುವುದು ಹತ್ತಿರದ ಸಿಸಿ ಟಿವಿ ಕ್ಯಾಮಾರದಲ್ಲಿ ಸೆರೆಯಾಗಿದ್ದು ಅದನ್ನು ‌ಪರಿಶೀಲನೆ ನಡೆಸಲಾಗಿದೆ.

Leave a Reply