ಬಾಗಲಕೋಟೆ: ನವದೆಹಲಿಯಲ್ಲಿ ಮುಂಬೈನ ಯುವತಿ ಶ್ರದ್ಧಾಳನ್ನು ಆಕೆಯ ಪ್ರಿಯಕರ ಕೊಲೆಗೈದು ಮೃತ ದೇಹವನ್ನು ತುಂಡಾಗಿ ಕತ್ತರಿಸಿ ಎಸೆದಂತಹ ಭಯಾನಕ ಮಾದರಿಯ ಪ್ರಕರಣ ಕರ್ನಾಟಕದಲ್ಲೂ ನಡೆದಿದೆ.
ಇಲ್ಲಿ ಜನ್ಮ ಕೊಟ್ಟ ತಂದೆಯನ್ನೇ ಕೊಂದ ಮಗ ಮೃತದೇಹವನ್ನು ತುಂಡು ತುಂಡು ಮಾಡಿ ಕೊಳವೆಬಾವಿಗೆ ತುರುಕಿದ್ದಾನೆ. ಈ ಭಯಾನಕ ಪ್ರಕರಣ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರವನ್ನು ಬೆಚ್ಚುವಂತೆ ಮಾಡಿದೆ.
ನನ್ನ ಪತಿ ಒಂದು ವಾರದಿಂದ ಕಾಣಿಸುತ್ತಿಲ್ಲ. ನನಗೆ ನನ್ನ ಮಗನ ಮೇಲೆ ಅನುಮಾನ ಇದೆ. ದಯವಿಟ್ಟು ತನಿಖೆ ಮಾಡಿ ಹುಡುಕಿಕೊಡಿ ಸರ್… ಎಂದು ಮಹಿಳೆಯೊಬ್ಬರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಇದನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಆರೋಪಿ ಮಗನನ್ನ ವಶಕ್ಕೆ ಪಡೆದು ತನಿಖೆ ಶುರು ಮಾಡುತ್ತಿದ್ದಂತೆ ಘೋರ ರಹಸ್ಯ ಬಯಲಾಗಿದೆ.
ಜನ್ಮ ಕೊಟ್ಟ ತಂದೆಯನ್ನೇ ಕೊಂದು ಶವವನ್ನು ತುಂಡು ತುಂಡು ಮಾಡಿ ಕೊಳವೆಬಾವಿಗೆ ತುರುಕಿರುವುದಾಗಿ ಬಾಯ್ಬಿಟ್ಟಿದ್ದು, ಸ್ಥಳದಲ್ಲಿ ಮೃತದೇಹ ಪತ್ತೆ ಕಾರ್ಯಾಚರಣೆ ಇಂದು ಬೆಳಗ್ಗೆಯಿಂದ ನಡೆಯುತ್ತಿದ್ದು, ಶವದ ತುಂಡುಗಳು ಪತ್ತೆಯಾಗಿವೆ.
ಮುಧೋಳ ನಗರದ ಪರಶುರಾಮ ಕುಳಲಿ(54) ಕೊಲೆಯಾದ ತಂದೆ. ಮಗ ವಿಠ್ಠಲ ಕುಳಲಿ(20) ಕೊಲೆ ಆರೋಪಿ. ಕಳೆದ ಡಿ.6ರ ರಾತ್ರಿ 12 ಗಂಟೆಯಲ್ಲಿ ರಾಡ್ನಿಂದ ಹಲ್ಲೆ ಮಾಡಿ ತಂದೆಯನ್ನು ಕೊಂದ ಮಗ, ಬಳಿಕ ಯಾರಿಗೂ ಅನುಮಾನ ಬಾರದಿರಲೆಂದು ಮೃತದೇಹವನ್ನು ಮುಧೋಳ ಹೊರವಲಯದ ಮಂಟೂರ್ ಬೈಪಾಸ್ ಬಳಿ ಇರುವ ತನ್ನ ಹೊಲಕ್ಕೆ ತೆಗೆದುಕೊಂಡು ಹೋಗಿದ್ದಾನೆ. ಮುಚ್ಚಿದರೆ ಗೊತ್ತಾಗಬಹುದೆಂದು, ಕೊಳವೆಬಾವಿಗೆ ಹಾಕಲು ಯತ್ನಿಸಿದ್ದಾನೆ. ದೇಹ ಒಳಗೆ ತೂರುತ್ತಿಲ್ಲ ಎಂದು ಶವವನ್ನು ಕೊಡಲಿಯಿಂದ ತುಂಡು ತಂಡು ಮಾಡಿ ಕೊಳವೆಬಾವಿಗೆ ಹಾಕಿದ್ದಾನೆ.
ಬಳಿಕ ಒಂದು ವಾರ ಏನೂ ಅರಿಯದಂತೆ ಊರಲ್ಲಿ ಓಡಾಡಿಕೊಂಡಿದ್ದ. ಅನುಮಾನಗೊಂಡ ತಾಯಿ, ಮುಧೋಳ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಿಸಿದ್ದರು. ಪೊಲಿಸರು ಮಗನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ಸತ್ಯ ಬಾಯ್ಬಿಟ್ಟಿದ್ದಾನೆ.
ಕುಡಿದ ಮತ್ತಲ್ಲಿ ನನ್ನ ತಂದೆ ನಿತ್ಯ ನನಗೆ ಹೊಡೆಯುತ್ತಿದ್ದ. ಅವಾಚ್ಯವಾಗಿ ಬೈಯ್ಯುತ್ತಿದ್ದ. ಅದಕ್ಕೆ ಕೋಪದಲ್ಲಿ ರಾಡ್ನಿಂದ ಹಲ್ಲೆ ಮಾಡಿದೆ. ಗಂಭೀರ ಗಾಯಗೊಂಡು ಮೃತಪಟ್ಟರು. ಪ್ರಕರಣ ಮುಚ್ಚಿಹಾಕಲು ಶವವನ್ನು ಜಮೀನಿಗೆ ತೆಗೆದುಕೊಂಡು ಹೋಗಿ ನಮ್ಮದೇ ಕೊಳವೆಬಾವಿಗೆ ಶವವನ್ನು ಸಣ್ಣ ಸಣ್ಣ ತುಂಡು ಮಾಡಿ ಹಾಕಿದೆ ಎಂದು ವಿವರಿಸಿದ್ದಾನೆ.
ಜೆಸಿಬಿಯಿಂದ ಕೊಳವೆಬಾವಿ ಸುತ್ತ ಅಗೆಯುವ ಕಾರ್ಯಾಚರಣೆ ನಡೆಯುತ್ತಿದ್ದು, ಈಗಾಗಲೇ ಒಂದೆರಡು ತುಂಡುಗಳು ಪತ್ತೆಯಾಗಿವೆ. ಹಂತಕ ಮಗನನ್ನು ಪೊಲೀಸರು ಬಂಧಿಸಿದ್ದಾರೆ.




